Advertisement

ಪ್ರಾಧಿಕಾರದಿಂದ ಮುದ್ರಣ ಸೊಗಸು ಪ್ರಶಸ್ತಿ

11:56 AM Aug 06, 2018 | |

ಬೆಂಗಳೂರು: ಮುದ್ರಣಕಾರರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರತಿ ವರ್ಷ “ಮುದ್ರಣ ಸೊಗಸು’ ಪ್ರಶಸ್ತಿ ನೀಡಲಾಗುವುದು ಎಂದು ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ತಿಳಿಸಿದರು.

Advertisement

ಕನ್ನಡ ಪುಸ್ತಕ ಪ್ರಾಧಿಕಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ “ಮುದ್ರಣ ತಂತ್ರಜ್ಞಾನ ಒಂದು ಅವಲೋಕನ’ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡ ಪುಸ್ತಕ ಪ್ರಾಧಿಕಾರದ ಬೆಳ್ಳಿ ಹಬ್ಬ ಸಂಭ್ರಮವನ್ನು ಆ.29ರಂದು ಹಮ್ಮಿಕೊಳ್ಳಲಾಗಿದೆ.

ಈ ವರ್ಷದ ವಿಶೇಷವೆಂಬಂತೆ ಮುದ್ರಣಕಾರರಿಗೆ ಮುದ್ರಣ ಸೊಗಸು ಪ್ರಶಸ್ತಿ ನೀಡಲಾಗುವುದು. ಒಂದು ಪುಸ್ತಕ ಅಚ್ಚುಕಟ್ಟಾಗಿ ಸಿದ್ಧವಾಗಲು ಲೇಖಕರು, ಪ್ರಕಾಶರಷ್ಟೇ ಮುದ್ರಣಕಾರರ ಪಾತ್ರವೂ ಇದೆ. ಮುದ್ರಣಕಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದು ತಿಳಿಸಿದರು.

ಈ ವರ್ಷದಿಂದ ಪ್ರಾಧಿಕಾರದಿಂದ ಶಾಲೆಗಳಿಗೆ ನೀಡುವ ಪುಸ್ತಕಗಳ ಸಂಖ್ಯೆಯನ್ನು 100 ರಿಂದ 150ಕ್ಕೆ ಹಾಗೂ ಅರ್ಹ ಪ್ರಕಾಶರಿಗೆ ನೀಡುವ ಪ್ರೋತ್ಸಾಹ ಧನವನ್ನು ಒಂದು ಲಕ್ಷ ರೂ. ನಿಂದ ಒಂದೂವರೆ ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಶೀಘ್ರವೇ ಮುದ್ರಣಕಾರರ ಸಮಾವೇಶ ಆಯೋಜನೆ ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು. 

ಸಾಹಿತಿ ಡಾ.ಹಂಪ ನಾಗರಾಜಯ್ಯ ಅವರು ಮಾತನಾಡಿ, ಕಳೆದ ಎರಡು ಮೂರು ದಶಕಗಳಲ್ಲಿ ಮುದ್ರಣ ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಮುಗ್ರಣ ಪ್ರಕ್ರಿಯೆ ಇಂದು ಸುಲಭ ಹಾಗೂ ವೇಗವಾಗಿ ಆಗುತ್ತಿದೆ ಎಂದು ತಿಳಿಸಿದರು.

Advertisement

ಮುದ್ರಣಕಾರರು ನೂತನ ತಂತ್ರಜ್ಞಾನದ ಉಪಯೋಗ ಪಡೆದುಕೊಳ್ಳಬೇಕು. ಪುಸ್ತಕ ಮಾತ್ರವಲ್ಲದೇ ಇತ್ತೀಚಿಗೆ ಆಡಿಯೋ ಪುಸ್ತಕ, ಇ-ಪುಸ್ತಕಗಳೂ ಬರುತ್ತಿವೆ. ಪ್ರಕಾಶಕರು ಹಾಗೂ ಲೇಖಕರು ಪುಸ್ತಕ ಪ್ರಚಾರ ಕಾರ್ಯದಲ್ಲಿ ಸಾಮಾಜಿಕ ಜಾಲತಾಣಗಳನ್ನು ಪ್ರಬಲವಾಗಿ ಬಳಸಿಕೊಳ್ಳಬೇಕು ಎಂದು ಛಂದ ಪುಸ್ತಕ ಪ್ರಕಾಶಕ ವಸುಧೇಂದ್ರ ಸಲಹೆ ನೀಡಿದರು. 

“ಮುದ್ರಣ ತಂತ್ರಜ್ಞಾನ ಬೆಳೆದು ಬಂದ ಹಾದಿ’ ಕುರಿತು ಕನ್ನಡ ವಿವಿ ಪ್ರಸಾರಾಂಗದ ಕೆ.ಎಲ್‌.ರಾಜಶೇಖರ್‌ ಹಾಗೂ “ಪುಸ್ತಕ ಸೊಗಸು ಮತ್ತು ನವ ತಂತ್ರಜ್ಞಾನ’ ಕುರಿತು ವಸುಧೇಂದ್ರ ಉಪನ್ಯಾಸ ನೀಡಿದರು. ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷ ಪ್ರಕಾಶ್‌ ಕಂಬತ್ತಳ್ಳಿ, ಕರ್ನಾಟಕ ರಾಜ್ಯ ಮುದ್ರಣಕಾರರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎನ್‌.ಮೋಹನ್‌ಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next