ಮಂಗಳೂರು: ಸಮುದ್ರದಲ್ಲಿ ಮತ್ತೆ ಪ್ರತಿಕೂಲ ಹವಾಮಾನ ಪರಿಸ್ಥಿತಿ ತಲೆತೋರಿರುವ ಹಿನ್ನೆಲೆಯಲ್ಲಿ ಉಳ್ಳಾಲ ಬಟ್ಟಪ್ಪಾಡಿ ಸಮುದ್ರದಲ್ಲಿರುವ ಪ್ರಿನ್ಸೆಸ್ ಮಿರಾಲ್ ಹಡಗಿನಿಂದ ತೈಲ ಹೊರತೆಗೆಯುವ ಕಾರ್ಯ ಸದ್ಯಕ್ಕೆ ಸ್ಥಗಿತಗೊಂಡಿದೆ.
ಆದರೂ ಅಂಡರ್‌ವಾಟರ್ ಡೈವರ್‌ಗಳನ್ನು ಬಳಸಿಕೊಂಡು ಫರ್ನೆಸ್ ತೈಲವನ್ನು ಹೊರತೆಗೆಯುವ ಪೂರ್ವ ಸಿದ್ಧತೆ ಮುಂದುವರಿಸಲಾಗಿದೆ.
ಜ. 17ರಂದು ಹಡಗಿನಿಂದ ಡೀಸೆಲ್ ತೆರವು ಪ್ರಾರಂಭಗೊಂಡಿತ್ತು. ಮೊದಲ ದಿನ 30 ಟನ್ ಡೀಸೆಲ್ ಹೊರತೆಗೆಯಲಾಗಿದೆ. ಇದುವರೆಗೆ ಒಟ್ಟು 58 ಟನ್ ಡೀಸೆಲ್ ಅನ್ನು ಅಲ್ಲಿ ನಿಲ್ಲಿಸಲಾಗಿರುವ ಬಾರ್ಜ್ ನೌಕೆಗೆ ವರ್ಗಾಯಿಸಲಾಗಿದೆ. ಇನ್ನು ಉಳಿದಿರುವ 160 ಟನ್‌ನಷ್ಟು ಫರ್ನೆಸ್ ತೈಲ ತೆರವು ಬಾಕಿ ಇದೆ. ಆದರೆ ಕಳೆದ ಮೂರು ದಿನಗಳಿಂದ ಸಮುದ್ರ ಪ್ರಕ್ಷುಬ್ದಗೊಂಡಿದ್ದು ಕಾರ್ಯಾಚರಣೆ ನಡೆಸುವುದು ಕಷ್ಟವಾಗಿದೆ. ಜ. 28ರ ವರೆಗೂ ಇದೇ ಪರಿಸ್ಥಿತಿ ಇರುವ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ತೈಲ ವರ್ಗಾವಣೆ ಕಾರ್ಯ ಸದ್ಯ ನಿಲ್ಲಿಸಿರುವುದಾಗಿ ತಿಳಿದುಬಂದಿದೆ.