Advertisement

50 ಮೀಟರ್ ನಷ್ಟು ರಸ್ತೆಯಲ್ಲಿ ಓಡಾಡಿ ಎಕ್ಸ್ ಪ್ರೆಸ್ ಹೈವೇ ಉದ್ಘಾಟನೆ ಮಾಡಲಿರುವ ಪ್ರಧಾನಿ

02:18 PM Mar 10, 2023 | Team Udayavani |

ಮೈಸೂರು: ಮಾರ್ಚ್ 12 ರಂದು ನರೇಂದ್ರಮೋದಿ ಅವರು ಮೈಸೂರು ಬೆಂಗಳೂರು ಎಕ್ಸ್ ಪ್ರೆಸ್ ಹೈವೇ ಉದ್ಘಾಟನೆ ನಡೆಸಲಿದ್ದು, ಕಾರ್ಯಕ್ರಮಕ್ಕೆ ಸುಮಾರು ಒಂದೂವರೆ ಲಕ್ಷ ಜನ ಸೇರಲಿದ್ದಾರೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಶುಕ್ರವಾರ ಹೇಳಿಕೆ ನೀಡಿದ್ದಾರೆ.

Advertisement

ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮೈಸೂರು ಬೆಂಗಳೂರು ಎಕ್ಸ್ ಪ್ರೆಸ್ ಹೈವೇ ಉದ್ಘಾಟನೆಗೆ ನರೇಂದ್ರ ಮೋದಿಯವರು ಮೈಸೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಾರೆ. ಬಳಿಕ ಅಲ್ಲಿಂದ ಮಂಡ್ಯದತ್ತ ಹೇಳಿಕಾಪ್ಟರ್ ನಲ್ಲಿ ತೆರಳುತ್ತಾರೆ. ಮಂಡ್ಯದ ಪಿಇಎಸ್ ಕಾಲೇಜು ಮೈದಾನದಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಆಗಲಿದೆ. ಈ ವೇಳೆ ರೋಡ್ ಶೋದಲ್ಲಿ ಭಾಗಿಯಾಗಲಿದ್ದಾರೆ. ಮೋದಿ 50 ಮೀಟರ್ ನಷ್ಟು ರಸ್ತೆಯಲ್ಲಿ ಓಡಾಡಿ ರಸ್ತೆ ಉದ್ಘಾಟನೆ ಮಾಡಲಿದ್ದಾರೆ‌ ಎಂದು ತಿಳಿಸಿದರು.

ಕೇಂದ್ರ, ರಾಜ್ಯ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳು ಮಂಡ್ಯದಲ್ಲೇ 2.60 ಲಕ್ಷ ಮಂದಿ ಇದ್ದಾರೆ. ಜೊತೆಗೆ ಅಮೃತ್, ಜಲ ಜೀವನ್, ಆಯುಷ್ಮಾನ್ ಭಾರತ್ ಸೇರಿದಂತೆ ಹಲವು ಯೋಜನೆಗಳ ಫಲಾನುಭವಿಗಳು ಇದ್ದಾರೆ. ಅವರನ್ನು ಸೇರಿಸಿ 1.50 ಲಕ್ಷ ಜನ ಸೇರುತ್ತಾರೆ.12 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗುತ್ತದೆ ಎಂದರು.

ಶ್ರೀರಂಗಪಟ್ಟಣದಿಂದ ಮಂಡ್ಯವರೆಗೆ 135 ಕೋಟಿ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರು ಪೂರೈಸುವ ಯೋಜನೆ, 1500 ಕೋಟಿ ರೂಪಾಯಿ ವೆಚ್ಚದ ಜಲ ಜೀವನ್ ಮಿಷನ್, ಮೈಸೂರು- ಕುಶಾಲನಗರ ಚತುಷ್ಪಥ ಯೋಜನೆಗೂ ಭೂಮಿಪೂಜೆ ಮಾಡಲಿದ್ದಾರೆ ಎಂದರು.

ಹಳೇ ಮೈಸೂರು ಭಾಗ ಬಿಜೆಪಿ ಮಯ
ಮಂಡ್ಯ ಬಿಜೆಪಿ ಪಾಲಿಗೆ ಗಗನ ಕುಸುಮ ಆಗಿತ್ತು.ಈಗಲೂ ನಮ್ಮ ಶಾಸಕರು ಇಲ್ಲ.ಆದರೂ ಮೋದಿ ಸಬ್ ಕಾ ಸಾಥ್ ಸಬ್ ಕ ವಿಕಾಸ್ ದೃಷ್ಟಿಯಿಂದ ಮಂಡ್ಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ.ಪ್ರಧಾನಿ ನರೇಂದ್ರ ಮೋದಿಯವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ಧ್ಯೇಯ ವಾಕ್ಯದೊಂದಿಗೆ ಎಲ್ಲಾ ವರ್ಗದ ಜನರಿಗೂ ನ್ಯಾಯ ಒದಗಿಸುತ್ತಿದ್ದಾರೆ. ಕಳೆದ ವಿಧಾನಾಭೆ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಮತದಾರರು ಬಿಜೆಪಿಗೆ ಹೆಚ್ಚಿನ ಪ್ರಮಾಣದಲ್ಲಿ ಮತ ನೀಡದಿದ್ಧರೂ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಸರಕಾರ ಅಗತ್ಯ ನೆರವು ನೀಡಿದೆ. ಹಾಗಾಗಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಪ್ರತಾಪ್ ಸಿಂಹ ಹೇಳಿದರು.

Advertisement

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ನಿರೀಕ್ಷೆಗೂ ಮೀರಿ ಸ್ಥಾನಗಳನ್ನು ಗಳಿಸಲಿದೆ. ಯಾರು ಏನೇ ಹೇಳಿದರೂ ಜನರು ಬಿಜೆಪಿಗೆ ಮತ ನೀಡಲಿದ್ದಾರೆ. ಹಾಗಾಗಿ ಈ ಬಾರಿ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಲಿದೆ. ಮುಂದೊಂದು ದಿ‌ನ ಇಡೀ ಹಳೇ ಮೈಸೂರು ಭಾಗ ಬಿಜೆಪಿ ಮಯವಾಗಲಿದೆ ಎಂದರು.

ಮೈಸೂರು-ಬೆಂಗಳೂರು ಹೈವೆ ಕಾಮಗಾರಿಯ ಸಂಪೂರ್ಣ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿಗೇ ಸಲ್ಲಬೇಕು.ಮೋದಿಯನ್ನು ಪ್ರಧಾನಿ ಮಾಡಲು ಶ್ರಮಿಸಿದ ಬಿಜೆಪಿ ಕಾರ್ಯಕರ್ತರಿಗೇ ಇದರ ಶ್ರೇಯಸ್ಸು ಸಲ್ಲಬೇಕು. ಈ ಕುರಿತು ಮಾಜಿ ಸಚಿವ ಮಹದೇವಪ್ಪ ಜೊತೆ ನಾನು ಚರ್ಚಿಸಲು ಸಿದ್ದ ಎಂದು ಪ್ರತಾಪ್ ಸಿಂಹ ಸವಾಲು ಹಾಕಿದರು.

ಚಾಲಕರ ನಿರ್ಲಕ್ಷ್ಯದಿಂದ ಮೈಸೂರು ಬೆಂಗಳೂರು ಹೈವೇಯಲ್ಲಿ ಅಪಘಾತಗಳು ಸಂಭವಿಸುತ್ತಿವೆ. ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿಲ್ಲ. ರಸ್ತೆಯನ್ನು ಸಮರ್ಪಕವಾಗಿ ನಿರ್ಮಾಣ ಮಾಡಲಾಗಿದೆ. ವಾಹನ ಸವಾರರು ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು ಎಂದು ಸಲಹೆ ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next