ಟೋಕಿಯೋ: ಇಂಡೋ-ಪೆಸಿಫಿಕ್ ವಲಯದ ದೇಶಗಳ ಜತೆಗೆ ಎಲ್ಲರನ್ನೂ ಒಳಗೊಂಡ ಮತ್ತು ಹೊಂದಾಣಿಕೆಯಾಗುವ ಆರ್ಥಿಕ ವ್ಯವಸ್ಥೆಯನ್ನು ಸೃಷ್ಟಿಸಲು ಭಾರತ ಕೆಲಸ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಜಪಾನ್ ರಾಜಧಾನಿ ಟೋಕಿಯೋದಲ್ಲಿ ಸೋಮವಾರ ಅಮೆರಿಕ ನೇತೃತ್ವದ ಇಂಡೋ- ಪೆಸಿಫಿಕ್ ಎಕಾನಮಿಕ್ ಫ್ರೆàಮ್ವರ್ಕ್ಗೆ (ಐಪಿಇಎಫ್) ಸೇರ್ಪಡೆಯಾದ ಸಂದರ್ಭದಲ್ಲಿ ಪ್ರಧಾನಿ ಈ ಮಾತುಗಳನ್ನಾಡಿದ್ದಾರೆ. ಮಂಗಳ ವಾರ ನಡೆಯಲಿರುವ ಕ್ವಾಡ್ ರಾಷ್ಟ್ರಗಳ ಸಮ್ಮೇಳನದ ಮುನ್ನಾದಿನ 13 ರಾಷ್ಟ್ರಗಳು ಇರುವ ಒಕ್ಕೂಟದ ಸಮ್ಮೇಳನವೂ ನಡೆದಿದೆ. ವಿಶೇಷವಾಗಿ ಇಂಡೋ-ಪೆಸಿಫಿಕ್ ವಲಯದಲ್ಲಿ ಚೀನದ ಪ್ರಾಬಲ್ಯವನ್ನು ತಡೆಯಲು ಮತ್ತೊಂದು ವೇದಿಕೆ ಸೃಷ್ಟಿಯಾದಂತಾಗಿದೆ.
ಇಂಡೋ-ಪೆಸಿಫಿಕ್ ವಲಯದಲ್ಲಿ ಇರುವ ರಾಷ್ಟ್ರಗಳ ಆರ್ಥಿಕ ಪ್ರಗತಿ ಮತ್ತು ಅವುಗಳು ಜಗತ್ತಿನ ಅರ್ಥ ವ್ಯವಸ್ಥೆಯ ಅಭಿವೃದ್ಧಿಯ ಕೇಂದ್ರವನ್ನಾಗಿ ಮಾಡುವುದೇ ಹೊಸ ಒಕ್ಕೂಟದ ಆದ್ಯತೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂಥ ಒಂದು ವಿಶೇಷ ಅವಕಾಶ ನೀಡಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಧನ್ಯವಾದಗಳು.
ಭಾರತ ಸರಕಾರ ಎಲ್ಲರನ್ನೂ ಒಳಗೊಂಡ ಮತ್ತು ಹೊಂದಾಣಿಕೆಯಾಗುವ ಅರ್ಥ ವ್ಯವಸ್ಥೆ ಹೊಂದುವ ನಿಟ್ಟಿನಲ್ಲಿ ಕೆಲಸ ಮಾಡಲಿದೆ. ಐತಿಹಾಸಿಕ ದಿನಗಳಿಂದಲೂ ಭಾರತ ಇಂಡೋ-ಪೆಸಿಪಿಕ್ ವಲಯದಲ್ಲಿ ವ್ಯಾಪಾರ ಕ್ಷೇತ್ರದಲ್ಲಿ ಮಹತ್ವದ ಭಾಗೀ ದಾರಿಕೆ ಹೊಂದಿತ್ತು ಎಂದಿದ್ದಾರೆ ಪ್ರಧಾನಿ ಹೊಸ ಒಕ್ಕೂಟಕ್ಕೆ ಆಸ್ಟ್ರೇಲಿಯ, ಬ್ರೂನೈ, ದರಾರಸ್ಸಲಾಂ, ಭಾರತ, ಇಂಡೋನೇಷ್ಯಾ, ಜಪಾನ್, ಕೊರಿಯಾ, ಮಲೇಷ್ಯಾ, ನ್ಯೂಜಿಲೆಂಡ್, ಫಿಲಿಪ್ಪೀನ್ಸ್, ಸಿಂಗಾಪುರ, ಥಾಯ್ಲೆಂಡ್ ಮತ್ತು ವಿಯೆಟ್ನಾಂ ಸದಸ್ಯ ರಾಷ್ಟ್ರಗಳಾಗಿವೆ ಎಂದು ಅಧ್ಯಕ್ಷ ಜೋ ಬೈಡೆನ್ ಇದೇ ಸಂದರ್ಭದಲ್ಲಿ ಪ್ರಕಟಿಸಿದ್ದಾರೆ.
Related Articles
ಜಪಾನ್ ವಾರ
ಜಪಾನ್ನ ಉದ್ಯಮಿಗಳ ಜತೆಗೆ ನಡೆದ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಭಾರತದಲ್ಲಿ ಜಪಾನ್ನ ಹೂಡಿಕೆ ಪ್ರಧಾನವಾದದ್ದು. ಅದನ್ನು ಪ್ರತಿನಿಧಿಸುವ ನಿಟ್ಟಿನಲ್ಲಿ “ಜಪಾನ್ ವಾರ’ ಆಚರಿಸುವ ಬಗ್ಗೆ ಸಲಹೆ ನೀಡಿದ್ದಾರೆ. ಸಾಫ್ಟ್ ಬ್ಯಾಂಕ್ನ ಮಯಸೋಚಿ, ಸುಜುಕಿ ಮೋಟರ್ ಕಾರ್ಪೊರೇಷನ್ನ ಒಸುಮು ಸುಜುಕಿ ಸಹಿತ 34 ಮಂದಿ ಪ್ರಮುಖ ಕಂಪೆನಿಗಳ ಸಿಇಒಗಳು ಮತ್ತು ಉದ್ಯಮಪತಿಗಳ ಜತೆಗೆ ಮೋದಿ ಸಭೆ ನಡೆಸಿದ್ದಾರೆ.
ಇಂದು ಏನು?
ಬಹುನಿರೀಕ್ಷಿತ ಕ್ವಾಡ್ ರಾಷ್ಟ್ರಗಳ ಸಮ್ಮೇಳನ ಮಂಗಳವಾರ ನಡೆಯಲಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಆಸ್ಟ್ರೇಲಿಯದ ನಿಯೋಜಿತ ಪ್ರಧಾನಿ ಆ್ಯಂಟನಿ ಆಲ್ಬನೀಸ್ ಜತೆಗೆ ದ್ವಿಪಕ್ಷೀಯ ಮಾತುಕತೆಯನ್ನೂ ಪ್ರಧಾನಿ ನಡೆಸಲಿದ್ದಾರೆ.