ಬೆಂಗಳೂರು: ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಒಡಿಶಾ ರಾಜ್ಯದ ಸಂಭಲ್ಪುರ ಜಿಲ್ಲೆಯಲ್ಲಿ ಚುನಾವಣ ಕರ್ತವ್ಯದಲ್ಲಿದ್ದ ಕರ್ನಾಟಕದ ಹಿರಿಯ ಐಎಎಸ್ ಅಧಿಕಾರಿ ಮೊಹಮ್ಮದ್ ಮೊಹ್ಸಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ತಪಾಸಣೆ ನಡೆಸಿದ ಪ್ರಕರಣ ಈಗ ರಾಜ್ಯದ ಹೈಕೋರ್ಟ್ ಅಂಗಳಕ್ಕೆ ಬಂದಿದೆ.
ಮೋದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಪಾಸಣೆ ನಡೆಸಿದ್ದ ಮೊಹಮ್ಮದ್ ಮೊಹ್ಸಿನ್ ವಿರುದ್ಧ ಶಿಸ್ತು ಕ್ರಮ ಜರಗಿಸುವ ಸಂಬಂಧ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ನೀಡಿದ್ದ ಆದೇಶ ಪ್ರಶ್ನಿಸಿ ಕೇಂದ್ರ ಚುನಾವಣ ಆಯೋಗ ಹೈಕೋರ್ಟ್ ಮೆಟ್ಟಿಲೇರಿದೆ.
ಗುರುವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾ| ಜಾನ್ ಮೈಕೆಲ್ ಕುನ್ಹಾ ಮತ್ತು ನ್ಯಾ| ಎಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ರಜಾ ಕಾಲದ ವಿಭಾಗೀಯ ನ್ಯಾಯಪೀಠ, ಮೊಹಮ್ಮದ್ ಮೊಹ್ಸಿನ್, ಕೇಂದ್ರ ಮತ್ತು ರಾಜ್ಯ ಸರಕಾರ ಸಹಿತ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ಅರ್ಜಿ ವಿಚಾರಣೆ ಮುಂದೂಡಿತು.
ಪ್ರಕರಣವೇನು?
ಎ.16ರಂದು ಮೋದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅನ್ನು ಆಯೋಗದ ಸೂಚನೆಗೆ ವಿರುದ್ಧವಾಗಿ ಮೊಹ್ಸಿನ್ ತಪಾಸಣೆ ನಡೆಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.