Advertisement

ಬಿಜೆಪಿ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ, ಯೋಗಿ

11:07 PM Apr 03, 2023 | Team Udayavani |

ಬೆಂಗಳೂರು: ಮುಂದಿನ ದಿನಗಳಲ್ಲಿ ಬಿಜೆಪಿಯ ಚುನಾವಣ ಪ್ರಚಾರದಲ್ಲಿ ಪ್ರಧಾನಿ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರದ ಗೃಹ ಸಚಿವ ಅಮಿತ್‌ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಕ್ರಿಯ ವಾಗಿ ಪಾಲ್ಗೊಳ್ಳಲಿದ್ದಾರೆ ಎಂದು ರಾಜ್ಯ ಬಿಜೆಪಿ ಚುನಾವಣ ಉಸ್ತುವಾರಿ ಧರ್ಮೆಂದ್ರ ಪ್ರಧಾನ್‌ ಹೇಳಿದ್ದಾರೆ.

Advertisement

ಅರಮನೆ ಮೈದಾನದ ಗಾಯತ್ರಿ ವಿಹಾರ್‌ನಲ್ಲಿ ನಡೆದ ಬಿಜೆಪಿ ರಾಜ್ಯ ಚುನಾವಣ ನಿರ್ವಹಣ ಸಮಿತಿ ರಾಜ್ಯಮಟ್ಟದ ಕಾರ್ಯಾಗಾರದ ಉದ್ಘಾಟನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈಗ ಸೋಶಿಯಲ್‌ ಮೀಡಿಯಾದ ಮೂಲಕ ಜನರನ್ನು ತಲುಪಬಹುದು. ಸೋಶಿಯಲ್‌ ಮೀಡಿಯಾ ಸೇರಿ ಆಧುನಿಕ ತಂತ್ರಜ್ಞಾನವನ್ನು ಬಳಸಿ ಅತ್ಯಂತ ಯಶಸ್ವಿಯಾಗಿ ಜನರನ್ನು ಸಂಪರ್ಕಿಸಬಹುದೆಂದು ಧರ್ಮೆಂದ್ರ ಪ್ರಧಾನ್‌ ಕಿವಿಮಾತು ಹೇಳಿದರು.

ಈಶಾನ್ಯ ಭಾರತದ ತ್ರಿಪುರಾದಂತಹ ರಾಜ್ಯದಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬಂದಿದ್ದೇವೆ. ಕ್ರೈಸ್ತರು ಹೆಚ್ಚಿರುವ ಮೇಘಾಲಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ. ಹೀಗಿರುವಾಗ ಪ್ರಧಾನಿ ಮೋದಿ ಬಗ್ಗೆ ಅತೀವ ಅಭಿಮಾನ ಹೊಂದಿರುವ ಕರ್ನಾಟಕ ದಲ್ಲಿ ನಾವು ಬಹುಮತ ಪಡೆಯು ವುದು ನಿಶ್ಚಿತ ಎಂದರು.

ಬಿಜೆಪಿಯ ರಾಜ್ಯ ಚುನಾವಣ ಸಮಿತಿಯ ಸಂಚಾಲಕಿ ಶೋಭಾ ಕರಂದ್ಲಾಜೆ ಮಾತನಾಡಿ, ಚುನಾವಣೆಗೆ ನಾವು ಎಲ್ಲ ರೀತಿಯಲ್ಲಿ ಸಿದ್ಧಗೊಳ್ಳಬೇಕು. ಯಾವುದೇ ರೀತಿಯ ಋಣಾತ್ಮಕ ಅಂಶ ವಿಪಕ್ಷಗಳಿಗೆ ಆಹಾರ ಆಗಬಾರದು. ಹಾಗೆಯೇ ವಿಪಕ್ಷಗಳ ಯಾವುದೇ ತಪ್ಪು ನಮಗೆ ಚುನಾವಣೆಯಲ್ಲಿ ಗೆಲ್ಲುವ ಅಸ್ತ್ರ ಆಗಲಿದೆ. ವಿಪಕ್ಷಗಳ ತಪ್ಪುಗಳನ್ನು ಎತ್ತಿ ಹಿಡಿಯಿರಿ ಎಂದು ಸಲಹೆ ನೀಡಿದರು.

Advertisement

ಸಮೀಕ್ಷೆಗಳಿಗೆ ಸೊಪ್ಪು ಹಾಕಬೇಡಿ
ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ರಾಜ್ಯದ ಚುನಾವಣ ಫ‌ಲಿತಾಂಶದ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರುವ ಸಮೀಕ್ಷಾ ವರದಿಗಳಿಗೆ ಸೊಪ್ಪು ಹಾಕ ಬೇಡಿ. ಪ್ರತಿದಿನ ರಾಜ್ಯ ಸಂಚಾರ ಮಾಡುತ್ತಿರುವ ನನಗೆ ರಾಜ್ಯದಲ್ಲಿ ಬಿಜೆಪಿ ಪೂರ್ಣ ಪ್ರಮಾಣದ ಬಹುಮತ ದೊಂದಿಗೆ ಸರಕಾರ ರಚನೆ ಮಾಡಲಿದೆ ಎಂಬುದು ಖಚಿತವಾಗಿದೆ ಎಂದರು. ಎರಡು ದಿನಗಳ ಕಾಲ ರಾಜ್ಯ ಕೋರ್‌ ಕಮಿಟಿ ಸಭೆ ನಡೆದಿದ್ದು, ಒಂದೇ ಒಂದು ಕ್ಷೇತ್ರದಲ್ಲೂ ಅಸಮಾಧಾನವಿಲ್ಲ. 224 ಕ್ಷೇತ್ರದಲ್ಲೂ ಶಕ್ತಿ ಕೇಂದ್ರಕ್ಕೆ ಮೇಲ್ಪಟ್ಟ ಕಾರ್ಯಕರ್ತರ ಅಭಿಪ್ರಾಯ ಆಲಿಸಿದ್ದೇವೆ ಎಂದು ತಿಳಿಸಿದರು.

ಪಕ್ಷದ ಎಲ್ಲ ಯಾತ್ರೆಗಳಲ್ಲಿಯೂ ಜನರು ಸಾಗರದಂತೆ ಸೇರಿದ್ದರು. 3 ತಿಂಗಳಿನಿಂದ ಚುನಾವಣ ತಯಾರಿ ನಡೆಸುತ್ತಿದ್ದೇವೆ. ಬೂತ್‌ ಸಂಕಲ್ಪ, ವಿಜಯ ಸಂಕಲ್ಪ ಅಭಿಯಾನ ಮಾಡ ಲಾಗಿದೆ. ಬೂತ್‌ ಸಂಕಲ್ಪದ ಮೂಲಕ 4 ಕೋಟಿ ಜನರ ಸಂಪರ್ಕ ಮಾಡಲಾಗಿದೆ. ಎಲ್ಲೆಡೆ ಬಿಜೆಪಿ ಪರ ವಾತಾ ವರಣ ನಿರ್ಮಾಣ ಆಗಿದೆ ಎಂದರು.
ಸಮಾರಂಭದಲ್ಲಿ ಜೆಡಿಎಸ್‌ ತೊರೆದು ಬಿಜೆಪಿ ಸೇರಿದ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಅವರನ್ನು ಜಿ. ವಿ. ರಾಜೇಶ್‌ ಪಕ್ಷಕ್ಕೆ ಬರಮಾಡಿಕೊಂಡರು.

“ಆಯನೂರು ಜತೆ ಮಾತನಾಡುವೆ’
ಉದ್ಘಾಟನೆಯ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ನಳಿನ್‌ ಕುಮಾರ್‌ ಕಟೀಲು, ಆಯನೂರು ಮಂಜುನಾಥ್‌ ಬಂಡಾಯ ಎದ್ದಿಲ್ಲ. ಅವರನ್ನು ಕರೆದು ನಾನು ಮಾತನಾಡುತ್ತೇನೆ. ಯಾವುದೇ ಅಸಮಾಧಾನ, ಬಂಡಾಯ ಇಲ್ಲದೇ ಪಟ್ಟಿ ಪ್ರಕಟ ಮಾಡುತ್ತೇವೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next