Advertisement

44 ವರ್ಷಗಳ ಬಳಿಕ ಮಂಡ್ಯಕ್ಕೆ ಪ್ರಧಾನಿ ಭೇಟಿ ಭಾಗ್ಯ

12:54 AM Mar 12, 2023 | Team Udayavani |

ಮಂಡ್ಯ: ಸುಮಾರು 44 ವರ್ಷಗಳ ಬಳಿಕ ಜಿಲ್ಲೆಗೆ ದೇಶದ ಪ್ರಧಾನಿ ಭೇಟಿ ನೀಡುತ್ತಿದ್ದು, ನರೇಂದ್ರ ಮೋದಿ ಅವರು ಜಿಲ್ಲೆಗೆ ಆಗಮಿಸುತ್ತಿರುವ ಮೂರನೇ ಪ್ರಧಾನಿಯಾಗಿದ್ದಾರೆ. ಅವರನ್ನು ಸ್ವಾಗತಿಸಲು ಇಡೀ ಮಂಡ್ಯ ನಗರ ಸಿಂಗಾರಗೊಂಡಿದೆ.

Advertisement

ಮಂಡ್ಯ ನಗರದಲ್ಲಿ ರೋಡ್‌ ಶೋ ನಡೆಸುವ 1.5 ಕಿ.ಮೀ ದೂರ ಸಹಿತ ಮದ್ದೂರಿನ ಗೆಜ್ಜಲಗೆರೆ ಕಾಲನಿ ವೇದಿಕೆವರೆಗೂ ಬಿಜೆಪಿ ಬಾವುಟ, ಕೇಸರಿ ಬಾವುಟ, ಫ್ಲೆಕ್ಸ್‌, ಕಟೌಟ್ಸ್‌, ಬ್ಯಾನರ್‌ಗಳು ಕಂಗೊಳಿಸುತ್ತಿವೆ. ಈ ಮೂಲಕ ನರೇಂದ್ರ ಮೋದಿಗೆ ಭರ್ಜರಿ ಸ್ವಾಗತ ಕೋರಲಾಗಿದೆ.

ನೆಹರೂ, ಚರಣ್‌ ಸಿಂಗ್‌ ಭೇಟಿ
1962ರಲ್ಲಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ಮಂಡ್ಯಕ್ಕೆ ಬಂದಿದ್ದರು. ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಎಂ.ಕೆ.ಶಿವನಂಜಪ್ಪ ಅವರ ಪರ ಪ್ರಚಾರ ಮಾಡಲು ನಗರದ ಸರ್‌ಎಂವಿ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ್ದರು. ಅನಂತರ 1979ರಲ್ಲಿ ಸಿಎಂ ಆಗಿದ್ದ ದೇವರಾಜ ಅರಸು ಅವರಿಗೆ ಜಿಲ್ಲೆ ವತಿಯಿಂದ ಅಭಿನಂದನೆ ಸಲ್ಲಿಸುವ ಕಾರ್ಯ ಕ್ರಮವನ್ನು ಕ್ರೀಡಾಂಗಣದಲ್ಲೇ ಹಮ್ಮಿಕೊಳ್ಳ ಲಾಗಿತ್ತು. ಆಗ ಪ್ರಧಾನಿಯಾಗಿದ್ದ ಚರಣ್‌ ಸಿಂಗ್‌ ಸಮಾರಂಭದಲ್ಲಿ ಭಾಗವಹಿಸಿದ್ದರು. ಈಗ ದಶಪಥ ಹೆದ್ದಾರಿ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದು, ಜಿಲ್ಲೆಗೆ ಭೇಟಿ ನೀಡುವ ಮೂರನೇ ಪ್ರಧಾನಿಯಾಗಿದ್ದಾರೆ.

ಮದ್ದೂರಿಗೆ ಆಗಮಿಸಿದ್ದ ಮೋದಿ 2004ರ ವಿಧಾನಸಭಾ ಚುನಾವಣೆ ವೇಳೆ ನರೇಂದ್ರ ಮೋದಿ ಮೊದಲ ಬಾರಿಗೆ ಮದ್ದೂರಿಗೆ ಆಗಮಿಸಿದ್ದರು. ಆಗ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದರು. ಮದ್ದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಾ| ಎಂ. ಮಹೇಶ್‌ಚಂದ್‌ ಪರ ಮತಯಾಚಿಸಿದ್ದರು. ಈಗ 2ನೇ ಬಾರಿಗೆ ಮದ್ದೂರು ತಾಲೂಕಿಗೆ ಆಗಮಿಸುತ್ತಿದ್ದಾರೆ. ಮದ್ದೂರು ತಾಲೂಕು ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ನರೇಂದ್ರ ಮೋದಿ ಭಾಷಣ ಮಾಡಿದ್ದರು. ಆಗ ಮಾಜಿ ಸಿಎಂ ಬಂಗಾರಪ್ಪ ಹಾಗೂ ಅನಂತಕುಮಾರ್‌ ಸಮಾರಂಭದಲ್ಲಿದ್ದರು.

ಇಂದಿರಾ, ರಾಜೀವ್‌ ಭೇಟಿ
ಮಂಡ್ಯಕ್ಕೆ ಇಂದಿರಾ ಗಾಂಧಿ ಹಾಗೂ ರಾಜೀವ್‌ ಗಾಂಧಿ ಅವರು ಆಗಮಿಸಿದ್ದರು. ಆದರೆ ಆಗ ಅವರು ಪ್ರಧಾನಿಯಾಗಿರಲಿಲ್ಲ. 2015ರಲ್ಲಿ ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಎಐಸಿಸಿ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಕೂಡ ಬಂದಿದ್ದರು.

Advertisement

ನೆಹರೂ, ಚರಣ್‌ ಸಿಂಗ್‌ ಕಂಡಿದ್ದೆ: ಆತ್ಮಾನಂದ
ತಂದೆಯವರ ಜತೆ ನಾನು ಚಿಕ್ಕವನಾಗಿದ್ದಾಗ ನಗರದ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿಯಾಗಿದ್ದ ಜವಾಹರಲಾಲ್‌ ನೆಹರೂ ಅವರ ಭಾಷಣ ಕೇಳಿದ್ದೆ. ಅಲ್ಲದೆ, 1979ರಲ್ಲಿ ನಾನು ಮೊದಲ ಬಾರಿಗೆ ಶಾಸಕನಾಗಿದ್ದಾಗ ಡಿ.ದೇವರಾಜು ಅರಸು ಅವರನ್ನು ಅಭಿನಂದಿಸಲು ಇದೇ ಕ್ರೀಡಾಂಗಣದಲ್ಲಿ ಸಮಾರಂಭ ಮಾಡಲಾಗಿತ್ತು. ಆಗ ಪ್ರಧಾನಿಯಾಗಿದ್ದ ಚರಣ್‌ ಸಿಂಗ್‌ ಬಂದಿದ್ದರು. ಅವರ ಬಳಿಕ ಬಹುತೇಕ ಜಿಲ್ಲೆಗೆ ಬೇರೆ ಯಾರೂ ಪ್ರಧಾನಿಯಾಗಿ ಬಂದಿಲ್ಲ ಎಂದು “ಉದಯವಾಣಿ’ಗೆ ಮಾಜಿ ಸಚಿವ ಎಂ.ಎಸ್‌.ಆತ್ಮಾನಂದ ತಿಳಿಸಿದರು.

– ಎಚ್‌.ಶಿವರಾಜು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next