Advertisement

ಅಗ್ಗದ ದರದ ಔಷಧ ಪೂರೈಕೆಗೆ ಬದ್ಧ

08:20 AM Jun 08, 2018 | Team Udayavani |

ಹೊಸದಿಲ್ಲಿ: “ದೇಶದ ಪ್ರತಿಯೊಬ್ಬ ಪ್ರಜೆಗೂ ಅಗ್ಗದ ದರದಲ್ಲಿ ಔಷಧಗಳು ಸಿಗುವಂತೆ ಮಾಡಲು ಸರಕಾರ ಬದ್ಧವಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ (ಪಿಎಂಬಿಜೆಪಿ), ಅಗ್ಗದ ದರದ ಕಾರ್ಡಿಯಾಕ್‌ ಸ್ಟೆಂಟ್ಸ್‌ ಮತ್ತು ಕೃತಕ ಮೊಣಕಾಲು ಕಸಿ ಶಸ್ತ್ರಚಿಕಿತ್ಸೆಗಳಿಗೆ ಸಂಬಂಧಿಸಿದ ಫ‌ಲಾನುಭವಿಗಳೊಂದಿಗೆ ಪ್ರಧಾನಿ ಮೋದಿ ಅವರು ಗುರುವಾರ ನಮೋ ಆ್ಯಪ್‌ ಮೂಲಕ ವಿಡಿಯೋ ಕಾನ್ಫರೆನ್ಸ್‌ ನಲ್ಲಿ ಮಾತುಕತೆ ನಡೆಸಿದರು. ಇದೇ ವೇಳೆ, “ಅನಾರೋಗ್ಯದಲ್ಲಿರುವವರ ನೆರವಿಗಾಗಿ ಸರಕಾರ ನಿರಂತರ ಪ್ರಯತ್ನದಲ್ಲಿದೆ. ಅಗ್ಗದ ಬೆಲೆಗೆ ಔಷಧಗಳು ಲಭ್ಯವಾಗಬೇಕೆನ್ನುವ ಉದ್ದೇಶದಿಂದ ಜನೌಷಧ ಯೋಜನೆ ಜಾರಿಗೊಳಿಸಲಾಗಿದೆ. ಹೆಚ್ಚೆಚ್ಚು ಹಾಸಿಗೆಗಳನ್ನು ಒದಗಿಸಲು, ಆಸ್ಪತ್ರೆಗಳ ಸೌಲಭ್ಯ ಹಾಗೂ ವೈದ್ಯರು ಸಕಾಲದಲ್ಲಿ ಸೇವೆಗೆ ಲಭ್ಯವಾಗುವಂತೆ ಮಾಡಲು ಸರಕಾರ ಹೆಚ್ಚಿನ ಗಮನ ಹರಿಸುತ್ತಿದೆ. ಬಡ ರೋಗಿಗಳು ಸುಲಭವಾಗಿ ವೈದ್ಯ ಸೇವೆ ಪಡೆದುಕೊಳ್ಳಬೇಕೆನ್ನುವುದೇ ನಮ್ಮ ಉದ್ದೇಶ” ಎಂದು ಹೇಳಿದರು.

Advertisement

400 ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ ಸೇವೆ: ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆಯ ಡಿಜಿಟಲ್‌ ಇಂಡಿಯಾ ಯೋಜನೆಯ ಭಾಗವಾದ ‘ಉಚಿತ ವೈಫೈ ಸೇವಾ’ ಯೋಜನೆ ಇದೀಗ ಯಶಸ್ವಿಯಾಗಿ ಪೂರ್ಣಗೊಂಡಿದೆ! ಹೀಗೆಂದು ವಿಶ್ವದ ಅತಿದೊಡ್ಡ ಸರ್ಚ್‌ ಎಂಜಿನ್‌ “ಗೂಗಲ್‌’ ಹೇಳಿದೆ. ದೇಶದ 400 ರೈಲು ನಿಲ್ದಾಣಗಳಲ್ಲಿ ಈಗಾಗಲೇ ಉಚಿತ ವೈಫೈ ಸೇವೆ ಆರಂಭಗೊಂಡಿರುವುದಾಗಿ ಹೇಳಿದೆ. 2016, ಜನವರಿಯಲ್ಲಿ ಮುಂಬಯಿಯ ಸೆಂಟ್ರಲ್‌ ರೈಲ್ವೆ ನಿಲ್ದಾಣದಲ್ಲಿ ವೈಫೈ ಸೇವೆ ಆರಂಭಿಸುವುದರೊಂದಿಗೆ ಯೋಜನೆಗೆ ಚಾಲನೆ ನೀಡಲಾಗಿತ್ತು. ಬುಧವಾರ ಅಸ್ಸಾಂನ ದಿಬ್ರುಗಢ ರೈಲ್ವೆ ನಿಲ್ದಾಣದಲ್ಲಿ ವೈಫೈ ಅಳವಡಿಸಿ, 400ರ ಗಡಿ ತಲುಪಲಾಗಿದೆ ಎಂದು ಹೇಳಿದೆ.

3 ವರ್ಷಗಳಲ್ಲೇ ಸ್ಮಾರ್ಟ್‌ ಮೀಟರ್‌ ವ್ಯವಸ್ಥೆ
ಇನ್ನು ಕೇವಲ ಮೂರೇ ವರ್ಷ. ದೇಶಾದ್ಯಂತ ವಿದ್ಯುತ್‌ ಬಿಲ್‌ ವ್ಯವಸ್ಥೆಯೇ ಬದಲಾಗಲಿದೆ. ಸ್ಮಾರ್ಟ್‌ ಮೀಟರ್‌ ಗಳನ್ನು ಅಳವಡಿಸುವ ಮೂಲಕ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಕ್ರಾಂತಿಕಾರಕ ಹೆಜ್ಜೆಗಳನ್ನು ಇರಿಸಲಿದೆ. ಹೀಗಾಗಿ ಸದ್ಯ ಪ್ರತಿ ತಿಂಗಳೂ ವಿತರಣಾ ಸಂಸ್ಥೆಗಳ ಮೂಲಕ ಮನೆ ಮನೆಗೆ ಬಿಲ್‌ ನೀಡುವ ವ್ಯವಸ್ಥೆ ತಪ್ಪಲಿದೆ. ಮೊಬೈಲ್‌ ಪ್ರಿ ಪೈಡ್‌ ವ್ಯವಸ್ಥೆಯಂತೆ ವಿದ್ಯುತ್‌ ಪಡೆಯುವ ವ್ಯವಸ್ಥೆ ಕೂಡ ಪೂರ್ವ ಪಾವತಿಯದ್ದೇ ಆಗಿರಲಿದೆ. ಅದಕ್ಕಾಗಿ ಸ್ಮಾರ್ಟ್‌ ಮೀಟರ್‌ಗಳ ಉತ್ಪಾದನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಬೇಕಾಗಿದೆ ಎಂದು ಕೇಂದ್ರ ವಿದ್ಯುತ್‌, ಹೊಸ ಮತ್ತು ಪುನರ್‌ ನವೀಕರಣ ಇಂಧನ ಖಾತೆ ಸಹಾಯಕ ಸಚಿವ ಆರ್‌.ಕೆ.ಸಿಂಗ್‌ ಹೇಳಿದ್ದಾರೆ. ಇದರ ಜತೆಗೆ ಸ್ಮಾರ್ಟ್‌ ಮೀಟರ್‌ ಗಳ ಅಳವಡಿಕೆ ಕೂಡ ಕಡ್ಡಾಯ ಮಾಡಬೇಕು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next