ಚಿಕ್ಕಬಳ್ಳಾಪುರ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಂಟಿಯಾಗಿ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ ಪರ ಮಂಗಳವಾರ ಪ್ರಚಾರ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಇಬ್ಬರೂ ನಾಯಕರು ಪ್ರಧಾನಿ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಗೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ, ರೈತರಿಗೆ ಯಾವುದೇ ಜಾತಿ ಇಲ್ಲ. ಆದರೆ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಜಾತಿ ಹೆಸರು ಹೇಳಿಕೊಂಡು ಮತ ಕೇಳಲು ಬಂದರೆ ರೈತರು ತಕ್ಕಪಾಠ ಕಲಿಸಬೇಕು.
ಬಿಜೆಪಿ ಹೇಳುವ ಬಣ್ಣದ ಮಾತುಗಳಿಗೆ ಯಾರೂ ಮರುಳು ಆಗಬಾರದು. ಕಾಂಗ್ರೆಸ್, ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಗೆ ಪ್ರತಿಯೊಬ್ಬರೂ ಮತ ಹಾಕಬೇಕು. ಏನೇ ಭಿನ್ನಾಭಿಪ್ರಾಯಗಳಿದ್ದರೂ ಬದಿಗೊತ್ತಿ ವೀರಪ್ಪ ಮೊಯ್ಲಿ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಕರೆ ನೀಡಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಾತನಾಡಿ, ಪ್ರಧಾನಿ ಮೋದಿ ದೇಶದಲ್ಲಿ ಏಕಚಕ್ರಾಧಿಪತ್ಯ ಸ್ಥಾಪನೆಗೆ ಮುಂದಾಗಿದ್ದಾರೆ. ಇದನ್ನು ತಡೆಯಬೇಕಾದರೆ ಜಾತ್ಯತೀತ ಶಕ್ತಿಗಳು ಒಗ್ಗೂಡುವ ಅಗತ್ಯವಿದೆ ಎಂದರು. ಬಿಜೆಪಿಯಲ್ಲಿ ಮೋದಿ, ಅಮಿತ್ ಶಾ ಮುಂದೆ ನಿಲ್ಲುವ ನಾಯಕರು ಯಾರೂ ಇಲ್ಲ. ಮೋದಿ 5 ವರ್ಷದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಘೋಷಿಸಿದರೂ ಯಾವುವೂ ಫಲಪ್ರದವಾಗಲಿಲ್ಲ ಎಂದರು.
ಮಾಧ್ಯಮಗಳ ವಿರುದ್ಧ ಗೌಡರ ಕಿಡಿ: ಸಮಾವೇಶದಲ್ಲಿ ಎಚ್.ಡಿ.ದೇವೇಗೌಡ ಅವರು ಮಾಧ್ಯಮಗಳ ವಿರುದ್ಧ ಕಿಡಿಕಾರಿದರು. ಒಂದರೆಡು ದೃಶ್ಯ ಮಾಧ್ಯಮಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ಮಾಧ್ಯಮಗಳು ದೇಶಕ್ಕೆ ಮೋದಿ ಮಾತ್ರ ಸಮರ್ಥ ನಾಯಕ ಎಂದು ಬಿಂಬಿಸಲು ಹೊರಟಿವೆ.
ಬಿಜೆಪಿ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ಬಳಸಿ ಪ್ರಚಾರ ಪಡೆಯುತ್ತಿದೆ. ರಾಹುಲ್‌ಗಾಂಧಿಯವರು ಚಿಕ್ಕ ವಯಸ್ಸಿನವರು. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಆದರೆ ರಾಹುಲ್‌ಗಾಂಧಿ ಶಕ್ತಿ ಬಗ್ಗೆ ಮಾಧ್ಯಮಗಳು ಬಿಂಬಿಸುತ್ತಿಲ್ಲ ಎಂದು ಹೇಳಿದರು.