ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಗಣ್ಯರ ಸಭೆಯೊಂದರಲ್ಲಿ ಕರ್ನಾಟಕದ ಐಎಎಸ್ ಮಹಿಳಾ ಅಧಿಕಾರಿಯೊಬ್ಬರನ್ನು ಹಾಡಿ ಹೊಗಳಿದ್ದು, ಇವರು ಎಲ್ಲಾ ಅಧಿಕಾರಿಗಳಿಗೂ ಮಾದರಿ ಎಂದು ಹೇಳಿದ್ದಾರೆ. ಹಾಗಾದ್ರೆ ಪ್ರಧಾನಿ ಮೋದಿ ಅವರು ಮೆಚ್ಚಿದ ಆ ಕನ್ನಡತಿ ಯಾರು ಗೊತ್ತಾ? ಕರ್ನಾಟಕದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ!
ಪ್ರಧಾನಿ ಮೋದಿವರೆಗೂ ತಲುಪಿದ ರತ್ನಪ್ರಭಾ ಟ್ವೀಟ್!
ಸುಮಾರು 25 ವರ್ಷಗಳ ಹಿಂದೆ ರತ್ನಪ್ರಭಾ ಅವರು ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಒಂದು ದಿನ ಕಾರಿನಲ್ಲಿ ಹೋಗುತ್ತಿದ್ದಾಗ ಒಬ್ಬ ಹುಡುಗ ಕುರಿ ಮೇಯಿಸುತ್ತಿದ್ದನಂತೆ. ಅದನ್ನು ಕಂಡು ರತ್ನಪ್ರಭಾ ಅವರು ಕಾರನ್ನು ನಿಲ್ಲಿಸಿ, ಸಮೀಪದಲ್ಲೇ ಇದ್ದ ಶಾಲೆಯ ಶಿಕ್ಷಕರನ್ನು ಕರೆದು ಈ ಹುಡುಗನನ್ನು ಶಾಲೆಗೆ ಸೇರಿಸಿಕೊಳ್ಳಿ ಎಂದು ಹೇಳಿದ್ದೆ.
ಇದ್ದಕ್ಕಿದ್ದಂತೆ ಇತ್ತೀಚೆಗೆ ಒಂದು ದಿನ ನರಸಪ್ಪ(27ವರ್ಷ) ಎಂಬ ಪೊಲೀಸ್ ಕಾನ್ಸ್ ಟೇಬಲ್ ವಿಧಾನಸೌಧದಲ್ಲಿರುವ ನನ್ನ ಕಚೇರಿಗೆ ಬಂದು ಸೆಲ್ಯೂಟ್ ಹೊಡೆದು, ಅಮ್ಮ ನೀವು ಅಂದು ಕುರಿಗಾಹಿಯಾಗಿದ್ದ ನನ್ನ ಶಾಲೆಗೆ ಸೇರಿಸಿದ್ದರಿಂದಲೇ ಇಂದು ನಾನು ಕಾನ್ಸ್ ಟೇಬಲ್ ಆಗಿದ್ದೇನೆ ಎಂದು ಕಥೆ ಹೇಳಿದ್ದ. ನನಗೆ ನಿಜಕ್ಕೂ ನಂಬಲಿಕ್ಕೆ ಆಗಿಲ್ಲ, ಸಣ್ಣ ಉಪಕಾರವೂ ಹೇಗೆ ಉತ್ತಮ ಪರಿಣಾಮ ಬೀರುತ್ತೆ ಎಂಬುದಕ್ಕೆ ಇದು ಸಾಕ್ಷಿ ಎಂದು ಟ್ವೀಟ್ ಮಾಡಿದ್ದರು.
ಇದೇ ವಿಷಯವನ್ನು ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರು ಟ್ವೀಟ್ ಮಾಡಿದ್ದರು, ಈ ಟ್ವೀಟ್ ಪ್ರಧಾನಿ ಮೋದಿವರೆಗೂ ತಲುಪಿತ್ತು!
ರತ್ನಪ್ರಭಾಗೆ ಮೋದಿ ಹೊಗಳಿಗೆ:
ಗಣ್ಯರ ಸಭೆಯಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ ಅವರು, ನಾನು ಇತ್ತೀಚೆಗೆ ಕರ್ನಾಟಕದ ಐಎಎಸ್ ಅಧಿಕಾರಿಯೊಬ್ಬರ ಟ್ವೀಟ್ ಓದಿದೆ, ನಾನು ಅವರ ಹೆಸರನ್ನು ಮರೆತುಬಿಟ್ಟಿದ್ದೇನೆ.ಈ ವಿಷಯ ಓದಿ ನನಗೆ ತುಂಬಾ ಸಂತೋಷವಾಯಿತು ಎಂದು ಈ ಘಟನೆಯನ್ನು ಮೆಲುಕು ಹಾಕಿದರು.
ದೇಶದಲ್ಲಿ ಎಂಥಾ ಒಳ್ಳೆಯ ಅಧಿಕಾರಿಗಳು ಇದ್ದಾರೆ ನೋಡಿ, ಸಣ್ಣ, ಸಣ್ಣ ಕೆಲಸಗಳೂ ಹೇಗೆ ಪರಿಣಾಮಕಾರಿಯಾಗಿ ಪ್ರಭಾವ ಬೀರುತ್ತೆ ನೋಡಿ. ಇವರು ಎಲ್ಲಾ ಅಧಿಕಾರಿಗಳಿಗೂ ಮಾದರಿ ಎಂದು ಶ್ಲಾಘಿಸಿದರು.