ಹೊಸದಿಲ್ಲಿ: ಬಜೆಟ್ ಅಧಿವೇಶನದ ಎರಡನೇ ಅವಧಿಯ ಬಹುತೇಕ ಸಮಯ ಯಾವುದೇ ಗಂಭೀರ ಚರ್ಚೆ ನಡೆಯದೇ ಕಳೆದಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ತ್ರಿವಳಿ ತಲಾಖ್‌ನಂತಹ ಐತಿಹಾಸಿಕ ಕಾನೂನುಗಳ ಬಗ್ಗೆ ಚರ್ಚೆ ನಡೆಸಲು ನಿವೃತ್ತರಾಗುತ್ತಿರುವ ಸಂಸದರಿಗೆ ಅವಕಾಶವಾಗಲಿಲ್ಲ. ಮುಂದಿನ ಕೆಲವು ವಾರಗಳಲ್ಲಿ ನಿವೃತ್ತರಾಗುತ್ತಿರುವ 60 ಸದಸ್ಯರು ಕೊನೆಯದಾಗಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಗದ್ದಲದಿಂದಾಗಿ ಸಾಧ್ಯವಾಗಲಿಲ್ಲ. ಲೋಕಸಭೆಯಲ್ಲಿ ನಡೆದ ಗದ್ದಲವು ರಾಜ್ಯಸಭೆಯಲ್ಲೂ ನಡೆಯಬೇಕೆಂದಿಲ್ಲ ಎಂದು ಮೋದಿ ಹೇಳಿದ್ದಾರೆ.
ರಾಜ್ಯಸಭೆ ನೀತಿ ಬದಲಾವಣೆ?: ರಾಜ್ಯಸಭೆಯಲ್ಲಿ ಪದೇ ಪದೇ ಕಲಾಪಕ್ಕೆ ಅಡ್ಡಿ ಉಂಟಾಗುತ್ತಿರುವುದರಿಂದ ರಾಜ್ಯಸಭೆಯ ನೀತಿಗಳನ್ನು ಮರುಪರಿಶೀಲಿಸಬೇಕಿದೆ. ಈಗಾಗಲೇ ಈ ಬಗ್ಗೆ ನಿರ್ಧರಿಸಿದ್ದೇನೆ ಎಂದಿದ್ದಾರೆ ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು. ನೀತಿ ಸಮಿತಿಯಲ್ಲಿ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಗುಣಮಟ್ಟ ಕುಸಿದಿದೆ!: ರಾಜ್ಯಸಭೆ ಕಲಾಪಕ್ಕೆ ಅಡ್ಡಿಯುಂಟಾಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ ನಾಯ್ಡು, ರಾಜಕಾರಣದ ಗುಣಮಟ್ಟವನ್ನು ಇನ್ನಷ್ಟು ಕುಸಿಯದಂತೆ ನೋಡಿಕೊಳ್ಳಿ. ಘನತೆಯಿಂದ ಇನ್ನಾದರೂ ನಡೆದುಕೊಳ್ಳಲು ಆರಂಭಿಸಿ ಎಂದು ಸಂಸದರಿಗೆ ಸೂಚಿಸಿದ್ದಾರೆ. ಅಲ್ಲದೆ 2010ರಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಹೊರಡಿಸಿದ ಮೇಲೂ ಮಹಿಳೆಯರ ಪ್ರಾತಿನಿಧ್ಯ ಅತ್ಯಂತ ಕಡಿಮೆಯಿದೆ. ಎಲ್ಲ ಪಕ್ಷಗಳೂ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಹೇಳಿದ್ದಾರೆ.
ರೇಣುಕಾ ತೂಕದ ಮಾತು!
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಮಾತನಾಡುವಾಗ ದೊಡ್ಡ ಧ್ವನಿಯಲ್ಲಿ ನಕ್ಕಿದ್ದಕ್ಕೆ ಭಾರಿ ವಿವಾದಕ್ಕೀಡಾಗಿದ್ದ ಕಾಂಗ್ರೆಸ್ ಸದಸ್ಯೆ ರೇಣುಕಾ ಚೌಧರಿ, ಬುಧವಾರ ಬೀಳ್ಕೊಡುಗೆ ವೇಳೆ ಮಾತನಾಡುವಾಗಲೂ ಹಾಸ್ಯ ಹೊಮ್ಮಿತು. ನಾನು ಕೆಲವೇ ಕಿಲೋ ತೂಕದವಳಿ ದ್ದಾಗಿನಿಂದಲೂ ವೆಂಕಯ್ಯ ನಾಯ್ಡು ನನಗೆ ಪರಿಚಿತರು. ಹಲವರು ನನ್ನ ತೂಕದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾರೆ. ಆದರೆ ಈ ಹುದ್ದೆಯಲ್ಲಿ ನಾವು ತೂಕದವರಾಗಿರಲೇ ಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನಾಯ್ಡು, ನಿಮ್ಮ ತೂಕವನ್ನು ಕಡಿಮೆ ಮಾಡಿಕೊಂಡು, ನಿಮ್ಮ ಪಕ್ಷದ ತೂಕ ಹೆಚ್ಚಿಸಲು ಪ್ರಯತ್ನಿಸಿ ಎಂದರು.