Advertisement

ಪ್ರಧಾನಿ ನರೇಂದ್ರ ಮೋದಿ ಒಬ್ಬ ದೊಡ್ಡ ನಾಟಕಕಾರ: ಸಿದ್ದರಾಮಯ್ಯ ವಾಗ್ದಾಳಿ

01:21 PM Aug 09, 2022 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಒಬ್ಬ ದೊಡ್ಡ ನಾಟಕಕಾರ. ನಕಲಿ ದೇಶ ಭಕ್ತರು ಇವತ್ತು ನಮ್ಮ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

Advertisement

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬರುವುದಕ್ಕೆ ಮೊದಲು ಹುಟ್ಟಿಲ್ಲದವರು (ಮೋದಿ) ನಮಗೆ ದೇಶಭಕ್ತಿ ಪಾಠ ಹೇಳುತ್ತಾರೆ. ಇವರು ಈ ಹಿಂದೆ ಎಂದಾದರೂ ಆರ್ ಎಸ್ಎಸ್ ಕಚೇರಿ ಮೇಲೆ ರಾಷ್ಟ್ರ ಧ್ವಜ ಹಾರಿಸಿದ್ದಾರಾ? ಎಂದು ಪ್ರಶ್ನಿಸಿದರು.

ಬಿಜೆಪಿ, ಆರ್‌ಎಸ್‌ಎಸ್ ನವರು ಬಿಟ್ರಿಷರ ಗುಲಾಮರು. ಆರ್‌ಎಸ್‌ಎಸ್ 1925ರಲ್ಲೇ ಇತ್ತು. ಜನಸಂಘ 1969ರಲ್ಲಿ ಅಸ್ತಿತ್ವಕ್ಕೆ ಬಂದಿತು. ಇದೇ ಗೋಲ್ವಾಲ್ಕರ್, ಸಾರ್ವರ್ಕರ್ ಧ್ವಜ ವಿರೋಧಿಸಿದ್ದರು. ಇಂತಹವರನ್ನು ಹೊತ್ತು ಮೆರೆಯುವವರು ಇವತ್ತು ಹರ್ ಘರ್ ತಿರಂಗಾ ಅಂತ ಆಚರಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಇವರು ತ್ರಿವರ್ಣ ಧ್ವಜ ಹಾರಿಸಿರಲಿಲ್ಲ. ನಾಗಪುರದ ಆರ್‌ಎಸ್‌ಎಸ್ ಕಚೇರಿ ಮೇಲೆ ಹಾರಿಸಿರಲಿಲ್ಲ. ಇದೀಗ ಹರ್ ಘರ್ ತಿರಂಗಾದ ಬಗ್ಗೆ ಮಾತನಾಡುತ್ತಾರೆ. ಸಾವರ್ಕರ್ ಬಿಟ್ರಿಷರಿಗೆ ಕ್ಷಮಾಪಣೆ ಬರೆದು ಕೊಟ್ಟ ಹೇಡಿ ಎಂದು ದೂರಿದರು.

ಇದನ್ನೂ ಓದಿ:ಕಾಂಗ್ರೆಸ್ ಕೋಳಿ ಕೂಗಿದರೆ ಬೆಳಕು ಹರಿಯುತ್ತದೆಂಬ ಕಾಲ ಹೋಯಿತು: ಕುಮಾರಸ್ವಾಮಿ

Advertisement

ಧ್ವಜ ಮಾರಾಟ ಮಾಡುತ್ತಿದೆ: ಅಮೃತ ಮಹೋತ್ಸವದ ಶುಭ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರ ಧ್ವಜ ಮಾರಾಟ ಮಾಡಿ ದೇಶದ ಸ್ವಾತಂತ್ರ್ಯ ಹೋರಾಟಗಾರಿಗೆ ಅಪಮಾನ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೂರಿದರು.

ಅಮೃತ ಮಹೋತ್ಸವದ ಸಂಭ್ರಮದ ವೇಳೆ ಸರ್ಕಾರ ಉಚಿತವಾಗಿ ರಾಷ್ಟ್ರ ಧ್ವಜ ಜನರಿಗೆ ನೀಡಬೇಕಾಗಿತ್ತು. ಆದರೆ ರಾಜ್ಯದಲ್ಲಿ 40 ಪರ್ಸೆಂಟ್ ಪಡೆಯುವ ಸರ್ಕಾರ ಇದೀಗ ರಾಷ್ಟ್ರದ್ವಜ ಮಾರಾಟ ಮಾಡಿ ದೇಶಕ್ಕೆ ಅಪಮಾನ ಮಾಡುತ್ತಿದೆ ಎಂದು ತಿಳಿಸಿದರು.

ಕಾಂಗ್ರಸ್ ಪಕ್ಷ 1.5 ಲಕ್ಷ ಧ್ವಜವನ್ನು ಸಾರ್ವಜನಿಕರಿಗೆ ವಿತರಿಸಲಿದೆ. ನಮಗೆ ರಾಷ್ಟ್ರ ಧ್ವಜ ಸ್ವಾಭಿಮಾನದ ಸಂಕೇತ. ರಾಷ್ಟ್ರ ಧ್ವಜ ಮಾರಾಟ ಮಾಡಿ ಬಿಜೆಪಿ ಇಡೀ ದೇಶವನ್ನು ಅಪಮಾನಿಸಿದೆ ಎಂದರು.

ಬ್ರಿಟಿಷರೇ ಭಾರತವನ್ನು ಬಿಟ್ಟು ತೊಲಗಿ ಎಂದು ಹೇಳಿದಂತೆ ನಾವೀಗ ಬಿಜೆಪಿಗರೇ ಅಧಿಕಾರ ಬಿಟ್ಟು ತೊಲಗಿ ಎಂದು ಕರೆ ನೀಡುತ್ತಿರುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next