ಒಸಾಕ: ವಿಪತ್ತು ನಿರ್ವಹಣೆಗೆ ತಕ್ಷಣ ಸ್ಪಂದಿಸುವ ಅಗತ್ಯವಿರುವುದರಿಂದ ಈ ನಿಟ್ಟಿನಲ್ಲಿ ಜಿ20ಯ ಎಲ್ಲ ರಾಷ್ಟ್ರಗಳೂ ಕೈಜೋಡಿಸಬೇಕಿದೆ ಎಂದು ಜಿ20 ಶೃಂಗದಲ್ಲಿ ಪ್ರಧಾನಿ ನರೆಂದ್ರ ಮೋದಿ ಹೇಳಿದ್ದಾರೆ.
ಪ್ಯಾರಿಸ್ ಒಪ್ಪಂದ ಮುಂದುವರಿಕೆ: ಅಮೆರಿಕ ಹಿಂದೆ ಸರಿದ ನಂತರ ಪ್ಯಾರಿಸ್ ಒಪ್ಪಂದದ ಬಗ್ಗೆ ಉಂಟಾದ ಗೊಂದಲ ನಿವಾರಣೆ ನಿಟ್ಟಿನಲ್ಲಿ ಜಿ20 ರಾಷ್ಟ್ರಗಳು ಸಹಮತ ವ್ಯಕ್ತಪಡಿಸಿದ್ದು, ಪ್ಯಾರಿಸ್ ಒಪ್ಪಂದಕ್ಕೆ ಬದ್ಧವಾಗಿರಲು ನಿರ್ಧರಿಸಿವೆ. ಆದರೆ ಅಮೆರಿಕ ಈ ನಿಲುವಿಗೆ ಸಹಮತ ವ್ಯಕ್ತಪಡಿಸಿಲ್ಲ. ಹೀಗಾಗಿ ಅಮೆರಿಕವನ್ನು ಹೊರತುಪಡಿಸಿ ಇತರ ಎಲ್ಲ 19 ರಾಷ್ಟ್ರಗಳೂ ಈ ಒಪ್ಪಂದವನ್ನು ಅನುಸರಿಸಲಿವೆ. 2016ರಲ್ಲಿ ನಡೆದ ಒಪ್ಪಂದದಿಂದಾಗಿ ಅಮೆರಿಕದ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷ ಹುದ್ದೆಗೇರುತ್ತಿದ್ದಂತೆಯೇ ಒಪ್ಪಂದವನ್ನು ರದ್ದುಗೊಳಿಸಿದ್ದರು.
ಜಾಗತಿಕ ತಾಪಮಾನವನ್ನು 2 ಡಿಗ್ರಿ ಸೆಲಿÏಯಸ್ ಇಳಿಸುವ ಬಗ್ಗೆ ಈ ಒಪ್ಪಂದದಲ್ಲಿ ನಿರ್ಧಾರ ಮಾಡಲಾಗಿತ್ತು. 195 ದೇಶಗಳು ಈ ಒಪ್ಪಂದಕ್ಕೆ ಸಹಿ ಹಾಕಿದ್ದವು. ಆದರೆ ನಮ್ಮ ದೇಶವು ಶುದ್ಧ ನೀರು, ಶುದ್ಧ ಗಾಳಿಯನ್ನು ಹೊಂದಿದೆ. ಈ ಒಪ್ಪಂದದಿಂದಾಗಿ ನಮಗೆ ಹಾನಿಯಾಗುತ್ತಿದೆ. ಹೀಗಾಗಿ ಇದನ್ನು ರದ್ದುಗೊಳಿಸುತ್ತಿದ್ದೇವೆ ಎಂದು ಟ್ರಂಪ್ 2017ರಲ್ಲಿ ಘೋಷಿಸಿದ್ದರು.
ಮೋದಿ ಪ್ರಸ್ತಾವನೆಗೆ ನಿಲುವಳಿ ಗೌರವ: ಇಂಟರ್ನೆಟ್ ಬಳಸಿ ಉಗ್ರರು ಹಣಕಾಸು ವಹಿವಾಟು ನಡೆಸುವುದು ಹಾಗೂ ಉಗ್ರ ಚಟುವಟಿಕೆಗಳನ್ನು ನಡೆಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಜಿ20 ಶೃಂಗದಲ್ಲಿ ಪ್ರಸ್ತಾಪಿಸಿದ್ದರು. ಈ ವಿಚಾರವನ್ನು ಜಿ20 ಶೃಂಗದ ನಿಲುವಳಿಯಲ್ಲೂ ಪ್ರಸ್ತಾಪಿಸಲಾಗಿದ್ದು, ಉಗ್ರರು ಹಣಕಾಸು ವಹಿವಾಟು ನಡೆಸುವುದು ಮತ್ತು ಉಗ್ರ ಚಟುವಟಿಕೆಗಳಿಗೆ ಯುವಕರನ್ನು ಸೆಳೆಯುವುದನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ನಿರ್ಧರಿಸಿವೆ. ಇಂಟರ್ನೆಟ್ ಮುಕ್ತ, ಉಚಿತ ಹಾಗೂ ಸುರಕ್ಷಿತವನ್ನಾಗಿಸುವುದರ ಜೊತೆಗೇ, ಉಗ್ರ ಚಟುವಟಿಕೆಗಳನ್ನು ದಮನಿಸುವ ಪ್ರಮಾಣವನ್ನೂ ದೇಶಗಳು ಮಾಡಿವೆ. ಅಲ್ಲದೆ, ಜಾಗತಿಕ ಆರ್ಥಿಕತೆ ಕುಸಿಯುವ ಅಪಾಯದಲ್ಲಿದೆ. ಮುಕ್ತ ಹಾಗೂ ಸುಸ್ಥಿರ ವ್ಯಾಪಾರ ವಹಿವಾಟು ವಾತಾವರಣವನ್ನು ನಿರ್ಮಾಣ ಮಾಡಬೇಕು ಮತ್ತು ವಿಶ್ವ ವ್ಯಾಪಾರ ಒಕ್ಕೂಟವನ್ನು ಸುಧಾರಿಸಬೇಕು ಎಂದು ಜಿ20 ನಾಯಕರು ನಿಲುವಳಿ ಮಂಡಿಸಿದ್ದಾರೆ. ಭ್ರಷ್ಟಾಚಾರದಲ್ಲಿ ಸಿಲುಕಿದ ವ್ಯಕ್ತಿಗಳಿಗೆ ನೆರವು ನೀಡದೇ ಇರುವ ಮೂಲಕ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತೇವೆ ಮತ್ತು ಸ್ವತ್ತು ಜಪ್ತಿ ಮಾಡುವಲ್ಲಿ ಪರಸ್ಪರ ಸಹಕಾರ ನೀಡುತ್ತೇವೆ ಎಂದೂ ನಿಲುವಳಿಯಲ್ಲಿ ಪ್ರಸ್ತಾಪಿಸಲಾಗಿದೆ.
Advertisement
ನೈಸರ್ಗಿಕ ಪ್ರಕೋಪಗಳು ಬಡವರಿಗೇ ಹೆಚ್ಚಾಗಿ ಬಾಧಿಸುತ್ತವೆ. ವಿಪತ್ತಿನ ಬಾಧೆಗೆ ಒಳಗಾಗದಂತೆ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು ಇಂದಿನ ಅಗತ್ಯವೂ ಆಗಿದೆ. ಈ ನಿಟ್ಟಿನಲ್ಲಿ ಜಿ20ಯಲ್ಲಿನ ಅಂತಾರಾಷ್ಟ್ರೀಯ ಸಮುದಾಯ ಒಂದಾಗಬೇಕಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
Related Articles
Advertisement
ಅಲ್ಲದೆ, ಡೇಟಾ ಮತ್ತು ಮಾಹಿತಿ ವಿನಿಮಯ ಕುರಿತಂತೆಯೂ ನಿಲುವಳಿ ಮಂಡಿಸಲಾಗಿದ್ದು, ದೇಶದ ಹಾಗೂ ಅಂತಾರಾಷ್ಟ್ರೀಯ ಕಾನೂನು ಚೌಕಟ್ಟುಗಳನ್ನು ಗೌರವಿಸುತ್ತಲೇ ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲು ನಿರ್ಧರಿಸಲಾಗಿದೆ.
50 ಶತಕೋಟಿ ಡಾಲರ್ ವಹಿವಾಟು ಗುರಿ: ಜಿ20 ಶೃಂಗದ ಸಂದರ್ಭದಲ್ಲಿ ಇಂಡೋನೇಷ್ಯಾ ಅಧ್ಯಕ್ಷ ಜೋಕೋ ವಿಡೊಡೊ ಅವರೊಂದಿಗೂ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಎರಡೂ ದೇಶಗಳು ಮುಂದಿನ 6 ವರ್ಷಗಳಲ್ಲಿ 50 ಶತಕೋಟಿ ಡಾಲರ್ ಮೊತ್ತದ ವ್ಯಾಪಾರ ವಹಿವಾಟು ನಡೆಸುವ ಗುರಿ ಹಾಕಿಕೊಂಡಿದ್ದಾರೆ. ಆರ್ಥಿಕತೆ, ರಕ್ಷಣೆ, ನೌಕಾ ಭದ್ರತೆ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸುವ ಕುರಿತೂ ಚರ್ಚಿಸಿದ್ದಾರೆ. 2017ರಲ್ಲಿ ಭಾರತ-ಇಂಡೋನೇಷ್ಯಾ ನಡುವೆ 12.9 ಶತಕೋಟಿ ಡಾಲರ್ ಮೊತ್ತದ ವಹಿವಾಟು ನಡೆದಿದೆ. 2025ರ ವೇಳೆಗೆ ಇದನ್ನು 50 ಶತಕೋಟಿ ಡಾಲರ್‌ಗೆ ಏರಿಸುವ ಇರಾದೆಯನ್ನು ಉಭಯ ನಾಯಕರು ವ್ಯಕ್ತಪಡಿಸಿದ್ದಾರೆ.
ಎಷ್ಟು ಚೆನ್ನಾಗಿದ್ದೀರಿ ಮೋದಿ!
ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಸೆಲ್ಫಿ ಭಾರಿ ಜನಪ್ರಿಯವಾಗಿದ್ದು, ಸ್ಕಾಟ್ ಟ್ವೀಟ್ ಮಾಡಿದ ಸೆಲ್ಫಿಗೆ ‘ಎಷ್ಟು ಚೆನ್ನಾಗಿದ್ದೀರಿ ಮೋದಿ'(ಕಿತ್‌ನಾ ಅಚ್ಛಾ ಹೇ ಮೋದಿ) ಎಂದು ಶೀರ್ಷಿಕೆ ನೀಡಿದ್ದಾರೆ. ಜಪಾನ್‌ನಲ್ಲಿ ನಡೆಯುತ್ತಿರುವ ಜಿ20 ಶೃಂಗದಲ್ಲಿ ಎರಡನೇ ದಿನ ಇಬ್ಬರೂ ಮುಖಂಡರು ಈ ರೀತಿ ಸೆಲ್ಫಿ ತೆಗೆದುಕೊಂಡಿದ್ದಾರೆ. ಅಲ್ಲದೆ, ಅದನ್ನು ಸ್ಕಾಟ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ‘ಗೆಳೆಯರೇ, ನಮ್ಮ ದ್ವಿಪಕ್ಷೀಯ ಸಂಬಂಧದಲ್ಲಿನ ಶಕ್ತಿ ನನಗೆ ಹುಮ್ಮಸ್ಸು ನೀಡಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ಕೊನೆಯ ದಿನ ಆರು ದೇಶದ ಮುಖಂಡರ ಜೊತೆ ಚರ್ಚೆ
ಎರಡು ದಿನಗಳ ಜಿ20 ಶೃಂಗದಲ್ಲಿ ಕೊನೆಯ ದಿನ ಅಂದರೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಆರು ದೇಶಗಳ ಮುಖಂಡರ ಜತೆ ಪ್ರತ್ಯೇಕ ಸಭೆ ನಡೆಸಿದ್ದಾರೆ. ಇಂಡೋನೇಷ್ಯಾ, ಬ್ರೆಜಿಲ್, ಟರ್ಕಿ, ಆಸ್ಟ್ರೇಲಿಯಾ, ಸಿಂಗಾಪುರ ಮತ್ತು ಚಿಲಿ ನಾಯಕರ ಜೊತೆಗೆ ಮೋದಿ ಮಾತುಕತೆ ನಡೆಸಿದ್ದಾರೆ. ವ್ಯಾಪಾರ, ಭಯೋತ್ಪಾದನೆ ನಿಗ್ರಹ, ರಕ್ಷಣೆ, ಕರಾವಳಿ ಸುರಕ್ಷತೆ ಹಾಗೂ ಕ್ರೀಡೆ ಸೇರಿದಂತೆ ಹಲವು ವಿಷಯಗಳ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆ.
ಯೋಗ ಹಾಗೂ ಆಯುಷ್ಮಾನ್ ಪ್ರಸ್ತಾಪ
ಭಾರತದ ಯೋಗವನ್ನು ಜಿ20 ಶೃಂಗದಲ್ಲೂ ಮೋದಿ ಪ್ರಸ್ತಾಪಿಸಿದ್ದಾರೆ. ಅಷ್ಟೇ ಅಲ್ಲ, ಪ್ರಧಾನಿ ಮೋದಿಯ ಮಹತ್ವಾಕಾಂಕ್ಷೆ ಯೋಜನೆ ಆಯುಷ್ಮಾನ್ ಭಾರತದ ಬಗ್ಗೆಯೂ ಅವರು ಮಾತನಾಡಿದ್ದಾರೆ. ಭಾರತದ ಸಾಂಪ್ರದಾಯಿಕ ಔಷಧ ಹಾಗೂ ಚಿಕಿತ್ಸಾ ವಿಧಾನಗಳನ್ನು ಪ್ರಚುರಪಡಿಸಲು ನಮ್ಮ ಸರ್ಕಾರ ಆಯುಷ್ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಇದಕ್ಕಾಗಿ ಪ್ರತ್ಯೇಕ ಆಯುಷ್ ಸಚಿವಾಲಯವೂ ಇದೆ ಎಂದು ಅವರು ಹೇಳಿದ್ದಾರೆ. ಯೋಗವನ್ನು ಇನ್ನಷ್ಟು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಈ ಮೂಲಕ ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಮೂಡಿಸಲಾಗುತ್ತಿದೆ ಎಂದರು.