ಚಾಮರಾಜನಗರ: ಭಾರತದ ಏಕತೆ ಮತ್ತು ಸಾರ್ವಭೌಮತೆಗಾಗಿ ಒಂದೇ ಸಂವಿಧಾನ ಎಂಬ ಧ್ಯೇಯ ವಾಕ್ಯದಡಿಯಲ್ಲಿ 370 ಕಲಂ ರದ್ದುಪಡಿಸಿರುವುದು ಉತ್ತಮ ನಡೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ದೇಶದ ಜನರ ಆಶಯವನ್ನು ಈಡೇರಿಸಿದ್ದಾರೆ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಹೇಳಿದರು. ನಗರದ ಶಿವಕುಮಾರಸ್ವಾಮಿ ಭವನದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ಏಕತಾ ಅಭಿಯಾನ, 370ನೇ ವಿಧಿ ರದ್ದತಿ ಬಗ್ಗೆ ನಡೆದ ಜನ ಜಾಗೃತಿ ಸಭೆ ಉದ್ಘಾಟಿಸಿ ಮಾತನಾಡಿದರು.
ಕಳೆದ 70 ವರ್ಷಗಳಿಂದ ಜಾರಿಯಲ್ಲಿದ್ದ ತಾತ್ಕಾಲಿಕ ಕಾಯ್ದೆಯನ್ನು ರದ್ದುಪಡಿಸುವ ಧೈರ್ಯವನ್ನು ಯಾರೂ ಮಾಡಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವಂತೆ ಅಧಿಕಾರಕ್ಕೆ ಬಂದ ಕೇವಲ 70 ದಿನದಲ್ಲೇ 370ನೇ ವಿಧಿ ರದ್ದು ಪಡಿಸಿ, ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಸಾರಿತ್ತು. ಈ ಅವಧಿಯಲ್ಲಿ ನಾನು ಸಂಸತ್ ಸದಸ್ಯನಾಗಿ ವಿಧಿ ರದ್ದತಿ ಪರವಾಗಿ ಮತ ಚಲಾಯಿಸಲು ಅವಕಾಶ ದೊರೆತಿರುವುದು ನನ್ನ ಪುಣ್ಯ ಎಂದು ಕೊಳ್ಳುತ್ತೇನೆ ಎಂದರು.
ಅಂಬೇಡ್ಕರ್ ಆಶಯವು ಸಹ ಈಡೇರಿದೆ: ಬಾಬಾ ಸಾಹೇಬ್ ಅಂಬೇಡ್ಕರ್ ಸಹ 370ನೇ ವಿಧಿಯ ವಿಶೇಷ ಸ್ಥಾನಮಾನ ನೀಡುವ ಕಾಯ್ದೆ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದರು. ಅವರು ಕಾನೂನು ಮಂತ್ರಿಯಾಗಿ ಇದನ್ನು ವಿರೋಧಿಸುವ ಜೊತೆಗೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಎರಡು ಸಂವಿಧಾನ, ಎರಡು ಧ್ವಜ ಬೇಡ ಎಂದು ವಾದಿಸಿದ್ದರು. ಪ್ರಧಾನಿಯಾಗಿದ್ದ ನೆಹರು ಅವರು ಅಂದಿನ ಸನ್ನಿವೇಶವನ್ನು ಎದುರಿಸುವ ಸಲುವಾಗಿ ತಾತ್ಕಾಲಿಕವಾಗಿ ಈ ಕಾಯ್ದೆಯನ್ನು ಅನುಷ್ಠಾನ ಮಾಡಿದ್ದರು. ಒಲ್ಲದ ಮನಸ್ಸಿನಿಂದ ತಾತ್ಕಾಲಿಕ ಕಾಯ್ದೆ ಎಂದು ಅಂಬೇಡ್ಕರ್ ಅನುಮೋದನೆ ಮಾಡಿದ್ದರು. ಹೀಗಾಗಿ ಇಂದು ಈ ಕಾಯ್ದೆಯನ್ನು ಸಂಸತ್‌ನಲ್ಲಿಟ್ಟು ಸಲೀಸಾಗಿ ರದ್ದುಪಡಿಸಲು ಸಾಧ್ಯವಾಯಿತು. ಹೀಗಾಗಿ ಅಂಬೇಡ್ಕರ್ ಅವರ ಆಶಯವು ಸಹ ಈಡೇರಿದಂತಾಗಿದೆ ಎಂದರು.
ಜಮ್ಮು ಕಾಶ್ಮೀರದ ಅಭಿವೃದ್ಧಿಗೆ ವಿಶೇಷ ಒತ್ತು: ಆ. 5 ರಂದು ಕಾಯ್ದೆಯನ್ನು ರದ್ದುಪಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರೋತ್ಸವದ ಭಾಷಣದಲ್ಲಿ ಜಮ್ಮು ಕಾಶ್ಮೀರದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದಾರೆ. ಸಾವಿರಾರು ಕೋಟಿ ರೂ.ಗಳ ಯೋಜನೆಗಳನ್ನು ಪ್ರಕಟಿಸುವ ಮೂಲಕ ಬದ್ಧತೆಯನ್ನು ಪ್ರದರ್ಶನ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರ, ಲಡಾಖ್ ಪ್ರದೇಶಗಳ ಜನರ ಆರ್ಥಿಕ ಮಟ್ಟ ಸುಧಾರಣೆ ಮತ್ತು ಪ್ರವಾಸೋದ್ಯಮ ಬೆಳವಣಿಗೆ ಹೆಚ್ಚಿನ ಒತ್ತು ನೀಡಿರುವುದು ಹೆಮ್ಮೆ ತಂದಿದೆ. ಇನ್ನು ಐದು ವರ್ಷಗಳು ದೇಶ ಸಮಗ್ರ ಅಭಿವೃದ್ಧಿಯಾಗಲಿದೆ. ಅಮೆರಿಕಾ ದೇಶವೇ ನಮ್ಮ ದೇಶದ ಪ್ರಧಾನಿ ಮೋದಿ ಅವರನ್ನು ಅಪ್ಪಿ ಬರ ಕೊಂಡಿದ್ದಾರೆ ಎಂದು ತಿಳಿಸಿದರು.
ದೇಶಕ್ಕೆ ಒಳ್ಳೆಯದಾಗಿದೆ: ರಾಜ್ಯ ಬಿಜೆಪಿ ವಕ್ತಾರೆ ತೇಜಸ್ವಿನಿಗೌಡ ಮಾತನಾಡಿ, ಕಳೆದ 70 ವರ್ಷಗಳಿಂದ ಕಾಂಗ್ರೆಸ್ ಮಾಡಿಕೊಂಡು ಬಂದಿದ್ದ ತಪ್ಪು ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ 7 ನಿಮಿಷದಲ್ಲಿ ತೆಗೆದು ಹಾಕಿದ್ದಾರೆ. ಇಂಥ ಕಠಿಣ ನಿರ್ಧಾರವನ್ನು ಅವರು ತೆಗೆದುಕೊಳ್ಳಲು ನೀವು ನೀಡಿದ ಒಂದು ಮತ ಕಾರಣ. ಯಾರು ಏನೇ ಹೇಳಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನ ಕಾಯಿದೆಯನ್ನು ರದ್ದು ಮಾಡುವ ಮೂಲಕ ದೇಶಕ್ಕೆ ಒಳ್ಳೆಯದಾಗಿದೆ ಎಂಬುದನ್ನು ಎಲ್ಲರು ಅರ್ಥ ಮಾಡಿಕೊಳ್ಳೋಣ ಎಂದರು.
ಮೋದಿ ನಿರ್ಧಾರ ಸ್ವಾಗತಿಸಿದ ನಾಗರಿಕರು: ಅಂದಿನ ಪ್ರಧಾನಿ ನೆಹರು ಅವರು ಆಡಳಿತದಲ್ಲಿ ಮೃದು ಧೋರಣೆಯಿಂದಾಗಿ ಇಂದು ದೇಶ ಈ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ. ಗಡಿಯಲ್ಲಿ ಭಯೋತ್ಪಾದನೆ ಚಟುವಟಿಕೆಗಳು ಹೆಚ್ಚಾಗಿದ್ದವು. ಸೈನಿಕರು, ನಾಗರಿಕರ ಪ್ರಾಣ ಹಾನಿಯಾದವು. ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರಿತ್ತು. ಶತ್ರು ರಾಷ್ಟ್ರಗಳು ಇನ್ನೂ ಹೆಚ್ಚಿನ ಪ್ರಬಲವಾಗಲು ದೇಶವನ್ನು ಹೆಚ್ಚು ವರ್ಷಗಳ ಕಾಲ ಆಳಿದ ಕಾಂಗ್ರೆಸ್ ಪಕ್ಷ ಕಾರಣವಾಗಿದೆ. ಪ್ರತಿಯೊಬ್ಬ ನಾಗರಿಕನು ಸಹ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರವನ್ನು ಸ್ವಾಗತಿಸಿದ್ದಾನೆ. ಕಣಿವೆಯಲ್ಲಿ ಕಾಂಗ್ರೆಸ್ ಹಾಗೂ ಇತರೇ ಪಕ್ಷಗಳು ಹೇಳಿದಂತೆ ಯಾವುದೇ ರೀತಿಯ ರಕ್ತಪಾತವಾಗಲಿಲ್ಲ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಪೊ›. ಕೆ.ಆರ್. ಮಲ್ಲಿಕಾರ್ಜುನಪ್ಪ, ಶಾಸಕ ಸಿ.ಎಸ್. ನಿರಂಜನ್‌ಕುಮಾರ್, ಅಭಿಯಾನದ ಸಂಚಾಲಕ ವೆಂಕಟರಮಣಸ್ವಾಮಿ, ಸಹ ಸಂಚಾಲಕ ಮಾಂಬಳ್ಳಿ ನಂಜುಂಡಸ್ವಾಮಿ, ಮಾಜಿ ಶಾಸಕರಾದ ಸಿ. ಗುರುಸ್ವಾಮಿ, ಜಿ.ಎನ್. ನಂಜುಂಡಸ್ವಾಮಿ, ಪರಿಮಳಾನಾಗಪ್ಪ, ಮುಖಂಡರಾದ ನಿಜಗುಣರಾಜು, ಡಾ.ಎ.ಆರ್.ಬಾಬು, ಕೂಡೂರು ಹನುಮಂತಶೆಟ್ಟಿ, ನಾರಾಯಣಪ್ರಸಾದ್ ಇತರರು ಇದ್ದರು.