Advertisement

2020ರ ಮೊದಲ ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು?

10:07 AM Jan 27, 2020 | Team Udayavani |

ನವದೆಹಲಿ: ಈ ವರ್ಷದ ತಮ್ಮ ಮೊದಲ ಮನ್ ಕಿ ಬಾತ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹಲವಾರು ಪ್ರಚಲಿತ ವಿಚಾರಗಳಿಗೆ ಒತ್ತು ನೀಡಿ ಮಾತನಾಡಿದ್ದಾರೆ. ಇದು ಮೋದಿ ಅವರ 61ನೇ ಮನ್ ಕಿ ಬಾತ್ ಕಾರ್ಯಕ್ರಮವಾಗಿದೆ. ಇವತ್ತು ಮೋದಿ ಅವರು ಪ್ರಮುಖವಾಗಿ ಮೊನ್ನೆ ತಾನೆ ಅಸ್ಸಾಂನಲ್ಲಿ ಮುಕ್ತಾಯಗೊಂಡ ಖೇಲೋ ಇಂಡಿಯಾ ಕುರಿತಾಗಿ ಮತ್ತು ಜಲ ಸಂರಕ್ಷಣೆಗೆ ಸರಕಾರ ಕೈಗೊಂಡಿರುವ ಕ್ರಮಗಳ ಕುರಿತಾಗಿ ವಿಸ್ತೃತವಾಗಿ ಮಾತನಾಡಿದರು.

Advertisement

‘ನಿಮಗೆಲ್ಲರಿಗೂ ಗಣರಾಜ್ಯೋತ್ಸವ ದಿನದ ಶುಭಕಾಮನೆಗಳು’ ಎಂದು ತಮ್ಮ ಮಾತನ್ನು ಪ್ರಾರಂಭಿಸಿದ ಪ್ರಧಾನಿಯವರು, ಇಂದಿನ ಮನ್ ಕಿ ಬಾತ್ ನಲ್ಲಿ ನಮ್ಮ ದೇಶವಾಸಿಗಳು ಮಾಡಿರುವ ಸಾಧನೆಯ ಕುರಿತಾಗಿ ನಿಮ್ಮಲ್ಲಿ ಹೇಳಿಕೊಳ್ಳಲಿದ್ದೇನೆ ಮತ್ತಿದು ನಾವೆಲ್ಲರೂ ಸಂಭ್ರಮಿಸಬೇಕಾದ ವಿಚಾರವಾಗಿದೆ ಎಂದು ಹೇಳಿ ಮಾತನ್ನು ಪ್ರಾರಂಭಿಸಿದರು.

ಇನ್ನು ಜಲಸಂರಕ್ಷಣೆ ಅಭಿಯಾನದ ಕುರಿತಾಗಿ ಮೊದಲಿಗೆ ಪ್ರಸ್ತಾಪಿಸಿದ ಮೋದಿ ಅವರು, ಕಳೆದ ಮಳೆಗಾಲದ ಸಂದರ್ಭದಲ್ಲಿ ನಾವು ಪ್ರಾರಂಭಿಸಿ ಜಲ ಸಂರಕ್ಷಣಾ ಅಭಿಯಾನ ಜನ ಭಾಗೀದಾರಿಕೆಯ ಮೂಲಕ ಇವತ್ತು ಸಾಕಷ್ಟು ಫಲಪ್ರದವಾಗಿ ಬೆಳೆದು ನಿಂತಿದೆ ಇದು ನಮಗೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಹೇಳಿದರು. ಈ ಅಭಿಯಾನದಡಿಯಲ್ಲಿ ಅಸಂಖ್ಯ ಕೆರೆಗಳು ಮತ್ತು ಕೊಳಗಳನ್ನು ನವೀಕರಿಸಲಾಗಿದೆ ಮತ್ತು ಕಟ್ಟಲಾಗಿದೆ ಎಂದು ಪ್ರಧಾನಿ ಅವರು ಹೇಳಿದರು.

ಜಲಸಂರಕ್ಷಣೆ ಅಭಿಯಾನದಲ್ಲಿ ಜನ ಭಾಗೀದಾರಿಕೆಯ ಕುರಿತಾಗಿ ಮೋದಿ ಅವರು ಉತ್ತರಾಖಂಡದ ಸುನಿಯಾಕೋಟ್ ಎಂಬ ಗ್ರಾಮದ ಉದಾಹರಣೆಯನ್ನು ನೀಡಿದರು. ಇನ್ನು ತಮಿಳುನಾಡಿನಲ್ಲಿ ಬೋರ್ ವೆಲ್ ಗೆ ಮಳೆನೀರು ಮರುಪೂರಣದ ಆವಿಷ್ಕಾರಿ ಯೊಚನೆ ಫಲನೀಡಿರುವ ಪ್ರಸ್ತಾಪವನ್ನೂ ಸಹ ಮೋದಿ ಅವರು ಇದೇ ಸಂದರ್ಭದಲ್ಲಿ ಮಾಡಿದರು.

ಬಳಿಕ ‘ಖೇಲೋ ಇಂಡಿಯಾ’ ಮೂರನೇ ಆವೃತ್ತಿ ಕುರಿತಾಗಿ ಪ್ರಧಾನಿಯವರು ತಮ್ಮ ಮಾತಿನಲ್ಲಿ ಪ್ರಸ್ತಾಪಿಸಿದರು. ಈ ವಿನೂತನ ಪ್ರಯತ್ನ ವರ್ಷದಿಂದ ವರ್ಷಕ್ಕೆ ಉತ್ತಮ ಬೆಂಬಲವನ್ನು ಪಡೆದುಕೊಳ್ಳುತ್ತಿದೆ ಮತ್ತು ದೇಶದಲ್ಲಿ ಕ್ರೀಡೆಯ ಕಡೆಗೆ ಯುವಜನತೆಯ ಒಲವು ಹೆಚ್ಚುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಪ್ರಧಾನಿಯವರು ಅಭಿಪ್ರಾಯಪಟ್ಟರು.

Advertisement

ಡೇವಿಡ್ ಬೆಕ್ ಹ್ಯಾಂ ಹೆಸರನ್ನು ಕೇಳಿದರೆ ನಿಮಗೆ ಇಂಗ್ಲೆಂಡಿನ ಖ್ಯಾತ ಫುಟ್ಬಾಲ್ ಆಟಗಾರನ ನೆನಪಾಗುತ್ತದೆ. ಆದರೆ ಆಶ್ಚರ್ಯದ ವಿಷಯವೆಂದರೆ ಮೊನ್ನೆ ನಡೆದ ಖೇಲೋ ಇಂಡಿಯಾದಲ್ಲೂ ಒನ್ನ ಡೇವಿಡ್ ಬೆಕ್ ಹ್ಯಾಂ ಭಾಗವಹಿಸಿದ್ದ ಮತ್ತು 200 ಮೀಟರ್ ಓಟದಲ್ಲಿ ಚಿನ್ನದ ಪದಗ ಗೆದ್ದಿದ್ದ ಎಂದು ಪ್ರಧಾನಿ ಮೋದಿ ಅವರು ಒಂದು ಉದಾಹರಣೆ ನೀಡಿದರು.

2020ರ ತನ್ನ ಮೊದಲ ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಅವರು ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ ನಡೆಸುವ ಕುರಿತಾದ ಮೊದಲ ಪ್ರಕಟನೆಯನ್ನು ಮಾಡಿದ್ದು ವಿಶೇಷವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next