Advertisement

ಗರಿಗೆದರಿದ ಲೋಕ ಸಿದ್ಧತೆ ಮೋದಿ, ಶಾ ಸರಣಿ ಪ್ರವಾಸ

12:30 AM Feb 01, 2019 | |

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಲೋಕಸಭಾ ಚುನಾವಣೆ ಸಿದ್ಧತೆ ಜೋರಾಗಿದ್ದು, ಇದೇ ತಿಂಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ರಾಜ್ಯಕ್ಕೆ ಬರಲಿದ್ದಾರೆ. ಇಬ್ಬರೂ ನಾಯಕರು ಪ್ರತ್ಯೇಕವಾಗಿ ಸಾರ್ವಜನಿಕ ಸಮಾವೇಶ ಮತ್ತು ಕಾರ್ಯಕರ್ತರ ಸಭೆ ನಡೆಸಲಿದ್ದಾರೆ.

Advertisement

ಫೆ. 10ರಂದು ಹುಬ್ಬಳ್ಳಿಗೆ ಆಗಮಿಸಲಿರುವ ಪ್ರಧಾನಿ ಮೋದಿ, ಮೂರ್‍ನಾಲ್ಕು ಜಿಲ್ಲೆಗಳ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಫೆಬ್ರವರಿಯಲ್ಲೇ ಒಟ್ಟು ಮೂರು ಸಮಾವೇಶ ನಡೆಯಲಿದ್ದು, ಫೆ.19 ರಂದು ಕಲಬುರಗಿಗೆ ಬರಲಿದ್ದಾರೆ. ಆದರೆ, ಫೆ.27ರ ಸಮಾವೇಶದ ಸ್ಥಳ ಇನ್ನಷ್ಟೇ ನಿಗದಿಯಾಗಬೇಕಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಫೆ. 14ರಂದು ರಾಯಚೂರು ಹಾಗೂ ಫೆ. 21ರಂದು ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಲಿದ್ದು, ಶಕ್ತಿ ಕೇಂದ್ರದ ಪದಾಧಿಕಾರಿಗಳು ಹಾಗೂ ಬೂತ್‌ ಮಟ್ಟದ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ.

ಸರಣಿ ಸಭೆ: ಲೋಕಸಭಾ ಚುನಾವಣೆ ಸಿದ್ಧತೆಗೆ ಸಂಬಂಧಪಟ್ಟಂತೆ ರಾಜ್ಯ ಬಿಜೆಪಿ ಕಚೇರಿಯಲ್ಲಿ ಗುರುವಾರ ಮಧ್ಯಾಹ್ನದಿಂದ ಸರಣಿ ಸಭೆ ನಡೆಯಿತು. ರಾಜ್ಯ ಬಿಜೆಪಿ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ಮೋರ್ಚಾ ಅಧ್ಯಕ್ಷರು ಇತರರಿಗೆ ಚುನಾವಣಾ ಸಿದ್ಧತೆ ಬಗ್ಗೆ ಹಿರಿಯ ನಾಯಕರು ಮಾಹಿತಿ ನೀಡಿದರು. ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರು ಸಭೆಯಲ್ಲಿ ಪಾಲ್ಗೊಂಡು ಮಾರ್ಗದರ್ಶನ ನೀಡಿದರು. ಎರಡನೇ ಸಭೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಹಾಗೂ ಚುನಾವಣಾ ಪ್ರಭಾರಿ ಮುರಳೀಧರ ರಾವ್‌ ಸಿದ್ಧತಾ ಕಾರ್ಯಗಳ ಬಗ್ಗೆ ಸಲಹೆ, ಸೂಚನೆ ನೀಡಿದರು.

ಸಂಜೆ ಲೋಕಸಭಾ ಚುನಾವಣಾ ಸಿದ್ಧತಾ ಸಭೆ ಉದ್ಘಾಟಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಸಿದ್ಧತಾ ಕಾರ್ಯ ಆರಂಭವಾಗಿದ್ದು, ಲೋಕಸಭಾ ಕ್ಷೇತ್ರ ಪ್ರಭಾರಿಗಳು, ಸಹ ಪ್ರಭಾರಿಗಳು, ಇತರೆ ಪ್ರಮುಖರ ಸಭೆಗೆ ಚಾಲನೆ ನೀಡಲಾಗಿದೆ. ಚುನಾವಣೆಯಲ್ಲಿ ರಾಜ್ಯದಲ್ಲಿ 22 ಸ್ಥಾನ ಗೆಲ್ಲುವ ಮೂಲಕ ಪ್ರಧಾನಿ ಮೋದಿಯವರು ಎರಡನೇ ಬಾರಿ ಪ್ರಧಾನಿಯಾಗಲು ರಾಜ್ಯದ ಕೊಡುಗೆ ನೀಡಬೇಕಿದೆ. ಆ ನಿಟ್ಟಿನಲ್ಲಿ ಸಿದ್ಧತಾ ಕಾರ್ಯಗಳ ಬಗ್ಗೆ ಸಭೆ ನಡೆಸಲಾಗುತ್ತಿದೆ. ಇಂದಿನಿಂದ ಚುನಾವಣೆ ಮುಗಿಯುವವರೆಗೆ ರಾಜ್ಯಾದ್ಯಂತ ಪ್ರವಾಸ ನಡೆಸಿ ಪಕ್ಷ ಸಂಘಟನೆ ಬಲಪಡಿಸಬೇಕು ಎಂದು ಸೂಚಿಸಲಾಗಿದೆ ಎಂದು ಹೇಳಿದರು.

Advertisement

ಏಪ್ರಿಲ್‌ನೊಳಗೆ ಚುನಾವಣೆ ಪೂರ್ಣ?: ಏಪ್ರಿಲ್‌ ಮೊದಲ ವಾರದಲ್ಲೇ ಚುನಾವಣೆ ಘೋಷಣೆಯಾಗುವ ನಿರೀಕ್ಷೆ ಇದೆ. ಏಪ್ರಿಲ್‌ ಅಂತ್ಯದೊಳಗೆ ರಾಜ್ಯದಲ್ಲಿ ಚುನಾವಣೆಯೇ ಮುಗಿಯುವ ಸಾಧ್ಯತೆ ಇದೆ. ಆ ಹಿನ್ನೆಲೆಯಲ್ಲಿ ಏಪ್ರಿಲ್‌ವರೆಗೆ ಅನ್ಯ ಕಾರ್ಯಗಳನ್ನು ಬದಿಗಿಟ್ಟು, ಪಕ್ಷ ಸಂಘಟನೆಗೆ ತೊಡಗಿಸಿಕೊಳ್ಳಬೇಕು. ಎಲ್ಲ ಮೋರ್ಚಾಗಳು ನಿರಂತರವಾಗಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.

ಒಳ್ಳೆಯ ಅಭ್ಯರ್ಥಿಗಳ ಹುಡುಕಾಟ: ರಾಜ್ಯದಲ್ಲಿ ಸಂಘಟನೆ ಸದೃಢವಾಗಿದ್ದು, ಯಾವುದೇ ಪಕ್ಷಕ್ಕಿಂತಲೂ ಬಿಜೆಪಿ ಹಿಂದೆ ಬಿದ್ದಿಲ್ಲ. ಲೋಕಸಭಾ ಚುನಾವಣೆ ಸಿದ್ಧತೆಗೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದು ಬಿಎಸ್‌ವೈ ತಿಳಿಸಿದರು. ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಮೂರ್‍ನಾಲ್ಕು ಮಂದಿ ಆಕಾಂಕ್ಷಿಗಳಿದ್ದು, ಅವಕಾಶಕ್ಕಾಗಿ ಪೈಪೋಟಿ ನಡೆಸಿದ್ದಾರೆ. ಹಾಲಿ ಸಂಸದರಿರುವ ಕ್ಷೇತ್ರ ಹಾಗೂ ಉಳಿದ ಕ್ಷೇತ್ರಗಳಿಗೆ ಒಳ್ಳೆಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಹುಡುಕಾಟ ನಡೆಯುತ್ತಿದೆ. ಕೆಲವರೊಂದಿಗೆ ಮಾತುಕತೆ ನಡೆಸಲಾಗಿದ್ದು, ಅವರು ಉತ್ಸಾಹದಿಂದ ಸಮಯ ಕೊಟ್ಟು ಕೆಲಸ ಮಾಡಲು ಸಿದ್ಧರಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರ ಸಮಮತ ಪಡೆದು 22- 24 ಕ್ಷೇತ್ರಗಳ ಅಭ್ಯರ್ಥಿಗಳಿಗೆ ಜವಾಬ್ದಾರಿ ವಹಿಸಲು ಚಿಂತಿಸಲಾಗಿದೆ. ಈ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಚರ್ಚಿಸಲಾಗುವುದು ಎಂದರು.

22 ಸ್ಥಾನ ಗೆಲ್ಲುವ ವಿಶ್ವಾಸ
ರಾಜ್ಯದ ಎಲ್ಲ 28 ಲೋಕಸಭಾ ಕ್ಷೇತ್ರಗಳಿಗೆ ಯೋಗ್ಯ, ಪ್ರಾಮಾಣಿಕ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಬದಲಾವಣೆ ತರುವ ಸಂಕಲ್ಪ ಮಾಡಲಾಗಿದೆ. ಕಾಂಗ್ರೆಸ್‌, ಜೆಡಿಎಸ್‌ ಹೊಂದಾಣಿಕೆ ಮಾಡಿಕೊಳ್ಳುವುದಾಗಿ ಹೇಳಿದರೂ ಬಿಜೆಪಿ 14 ಸ್ಥಾನ ಹಾಗೂ ಕಾಂಗ್ರೆಸ್‌ -ಜೆಡಿಎಸ್‌ ಒಟ್ಟು 14 ಸ್ಥಾನ ಪಡೆಯುವುದಾಗಿ ಸಮೀಕ್ಷಾ ವರದಿಗಳು ಹೇಳಿವೆ. ಯಾವುದೇ ಸಮೀಕ್ಷೆ ಏನೇ ವರದಿ ನೀಡಿದರೂ ರಾಜ್ಯ ಪ್ರವಾಸದ ವೇಳೆ ಬಿಜೆಪಿಗೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು, 22 ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದು ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು.

ಕಾರ್ಯಕ್ರಮಗಳು
– ಕೇಂದ್ರ ಸರ್ಕಾರದ ಸಾಧನೆಗಳ ಮಾಹಿತಿಯನ್ನು ಮನೆ ಮನೆಗಳಿಗೆ ತಲುಪಿಸಲು ಅಭಿಯಾನ
– ಫೆ. 26ರಂದು ಬಿಜೆಪಿ ಬೆಂಬಲಿಗರ ಮನೆಗಳಲ್ಲಿ ‘ಕಮಲ ಜ್ಯೋತಿ’ ಬೆಳಗಿ ಸುವ ಬೂತ್‌ ಮಟ್ಟದ ಕಾರ್ಯಕ್ರಮ
– ಫೆ. 28ರಂದು ‘ಮೇರಾ ಬೂತ್‌ ಸಬ್‌ ಸೇ ಮಜ್‌ಬೂತ್‌’ ಅಭಿಯಾನ
– ಮಾ. 8ರಂದು ಕಮಲ ಸಂಪರ್ಕ ರ್ಯಾಲಿ ಕಾರ್ಯಕ್ರಮದಡಿ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾಲ್ಲೂಕು ಕೇಂದ್ರದಲ್ಲಿ 10,000ಕ್ಕೂ ಹೆಚ್ಚು ಬೈಕ್‌ ರ‍್ಯಾಲಿ

Advertisement

Udayavani is now on Telegram. Click here to join our channel and stay updated with the latest news.

Next