Advertisement
ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಕರೆ ನೀಡಿರುವ ಸಾರ್ವತ್ರಿಕ ಮುಷ್ಕರ-ಹರತಾಳ ಬೆಂಬಲಿಸಿ ದಾವಣಗೆರೆ ವಿಶ್ವವಿದ್ಯಾಲಯದ ಸಿ ಮತ್ತು ಡಿ ಗ್ರೂಪ್ ಹೊರ ಗುತ್ತಿಗೆ ನೌಕರರ ಸಂಘದವರು ಜಯದೇವ ವೃತ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತಿಕೃತಿ ದಹಿಸಿ, ಆಕ್ರೋಶ ವ್ಯಕ್ತಪಡಿಸಿದರು. ಗೌರವ ಧನದ ಹೆಸರಲ್ಲಿ ಆಧುನಿಕ ಜೀತ ಪದ್ಧತಿಗೆ ನೌಕರರನ್ನು ದೂಡುವುದನ್ನ ನಿಲ್ಲಿಸಿ, ಕಾಯಂಗೊಳಿಸುವ ಮೂಲಕ ಹೊರ ಗುತ್ತಿಗೆ ನೌಕರರ ಜೀವನದಲ್ಲಿ ಅಚ್ಛೇ ದಿನ್… ತರುವಂತಾಗಬೇಕು ಎಂದು ಒತ್ತಾಯಿಸಿದರು.
Related Articles
Advertisement
ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರ-ಹರತಾಳಕ್ಕೆ ವಿವಿಧ ಬ್ಯಾಂಕ್ ನೌಕರರು ಬೆಂಬಲ ನೀಡಿದ್ದರಿಂದ ಬುಧವಾರವೂ ಬ್ಯಾಂಕ್ ತೆರೆದರಲಿಲ್ಲ. ಹಾಗಾಗಿ ಜನರು ಬ್ಯಾಂಕಿಂಗ್ ಕೆಲಸ-ಕಾರ್ಯಕ್ಕೆ ಪರದಾಡುವಂತೆ ಆಯಿತು.
ಬಿಜೆಪಿಗೆ ಮುಂದಿದೆ ತಕ್ಕ ಪಾಠ: ಗಡಿಯಾರ ಕಂಬದ ಬಳಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಸಿಐಟಿಯು ಮುಖಂಡ ಕೆ.ಎಲ್. ಭಟ್, ಲೋಕಸಭಾ ಚುನಾವಣಾ ಪೂರ್ವದಲ್ಲಿ ನರೇಂದ್ರ ಮೋದಿ ಬಿಜೆಪಿ ಅಧಿಕಾರಕ್ಕೆ ಬಂದ 100 ದಿನದಲ್ಲಿ ವಿದೇಶಿ ಬ್ಯಾಂಕ್‌ನಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ವಾಪಸ್ ತಂದು ಎಲ್ಲರ ಖಾತೆಗೆ 15 ಲಕ್ಷ ಜಮೆ ಮಾಡುವುದಾಗಿ ಹೇಳಿದ್ದರು. ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷ ಕಳೆದರೂ ಒಬ್ಬರ ಖಾತೆಗೆ ನಯಾ ಪೈಸೆ ಬಂದಿಲ್ಲ. ಈಗ 2022 ತೋರಿಸುತ್ತಿದ್ದಾರೆ. ಜನರಿಗೆ ಸುಳ್ಳು ಹೇಳುತ್ತಿರುವ ಮೋದಿಯವರನ್ನ ಜನರು ಇನ್ನು ನಂಬುವುದಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವರು ಎಂದು ಎಚ್ಚರಿಸಿದರು.
ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಜನರಗಿಂತಲೂ ದನ, ಗೋವುಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಬಿಜೆಪಿಯವರಿಗೆ ಜನರಗಿಂತಲೂ ದನಗಳೇ ಹೆಚ್ಚು ಬೇಕಾಗಿವೆ. ಜನರು ಬದುಕಿದರೆ ದನಗಳು ಇರಲಿವೆ ಎಂಬುದನ್ನು ಅವರು ಅರಿಯಬೇಕಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೋವುಗಳ ಬಗ್ಗೆ ಮಾತನಾಡುತ್ತಾರೆ. ದೇಶದಲ್ಲಿ ಅತಿ ಹೆಚ್ಚು ಗೋಮಾಂಸ ರಫ್ತು ಮಾಡುವರು ಗುಜರಾತ್‌ನ ಬಿಜೆಪಿ ಮುಖಂಡರು, ಪ್ರಧಾನಿಯವರ ಆತ್ಮೀಯರು ಎಂಬುದನ್ನ ಮರೆತಿದ್ದಾರೆ. ಪ್ರಧಾನಿ ಜಾರಿಗೆ ತಂದಿರುವ ಅನೇಕ ಯೋಜನೆಗಳ ಪ್ರಯೋಜನ ಸತ್ತ ಮೇಲೆ ಸಿಗುತ್ತವೆಯೇ ಹೊರತು ಬದುಕಿದ್ದಾಗ ಅಲ್ಲ. ಜನಪರ ಆಡಳಿತ ನೀಡದೇ ಇರುವ ಯಾರೇ ಆಗಲಿ ಕುರ್ಚಿಯಲ್ಲಿ ಮುಂದುವರೆಯಲಿಕ್ಕೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಎಐಯುಟಿಯುಸಿ ಮುಖಂಡ ಮಂಜುನಾಥ್ ಕೈದಾಳೆ ಮಾತನಾಡಿ, ಅಧಿಕಾರಕ್ಕೆ ಬಂದ ನಂತರ ಪ್ರತಿ ವರ್ಷ 2 ಕೋಟಿ ಉದ್ಯೋಗ, ಲೋಕಪಾಲ್ ಜಾರಿ, ವಿದೇಶಿ ನೇರ ಬಂಡವಾಳ ಹೂಡಿಕೆ ರದ್ದತಿ ಬಗ್ಗೆ ಮಾತನಾಡುತ್ತಿದ್ದ ಮೋದಿ ಅಧಿಕಾರಕ್ಕೆ ಬಂದ ನಂತರ ಒಂದೇ ಒಂದು ಭರವಸೆ ಈಡೇರಿಸಿಲ್ಲ. ತಮ್ಮ ಪರಮಾಪ್ತರಿಗೆ ಅನುಕೂಲ ಆಗುವಂತೆ ಕಾರ್ಪೋರೇಟ್ ಪರ ನೀತಿ ಜಾರಿಗೆ ತರುತ್ತಿದ್ದಾರೆ. ಕಾರ್ಮಿಕ ಕಾನೂನುಗಳ ಕಿತ್ತು ಹಾಕುತ್ತಿದ್ದಾರೆ. ಬಂಡವಾಳಶಾಹಿಪರ ಅಧಿಕಾರ ಕಿತ್ತು ಹಾಕಿ ಜನಪರ ಆಡಳಿತ ಮತ್ತು ಸಮ ಸಮಾಜಕ್ಕಾಗಿ ಎಲ್ಲರೂ ಸಂಘಟಿತರಾಗಬೇಕು ಎಂದು ಮನವಿ ಮಾಡಿದರು.
ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜೆಸಿಟಿಯು) ಮುಖಂಡರಾದ ಆವರಗೆರೆ ಚಂದ್ರು, ಆನಂದರಾಜ್, ಕೆ.ಎಚ್. ಆನಂದರಾಜ್, ಆವರಗೆರೆ ವಾಸು, ಬ್ಯಾಂಕ್ ನೌಕರರ ಸಂಘದ ಆಂಜನೇಯ, ಪ್ರಗತಿ ಕೃಷ್ಣಾ ಬ್ಯಾಂಕ್ ನೌಕರರ ಸಂಘದ ನಾಗರಾಜ್, ಬಿಎಸ್ಸೆನ್ನೆಲ್‌ನ ಷಣ್ಮುಖಪ್ಪ, ಕೆಎಸ್ಸಾರ್ಟಿಸಿ ನೌಕರರ ಸಂಘದ ಪ್ರಕಾಶ್, ಎಂ.ಬಿ. ಶಾರದಮ್ಮ, ಸರೋಜಾ, ಬಿ.ಆರ್. ಅಪರ್ಣಾ, ಸಂತೋಷ್, ಮಧು ತೊಗಲೇರಿ, ಪರಶುರಾಮ್, ಸೌಮ್ಯ, ಸೈಯದ್ ಖಾಜಾಪೀರ್, ಐರಣಿ ಚಂದ್ರು, ಆವರಗೆರೆ ಕೆ. ಬಾನಪ್ಪ, ಪಾಲವನಹಳ್ಳಿ ಪ್ರಸನ್ನಕುಮಾರ್, ಗಿರೀಶ್ ಇತರರು ಇದ್ದರು.