ನವದೆಹಲಿ: ಭಾರತ ಪ್ರವಾಸದಲ್ಲಿರುವ ಇಟಲಿ ಪ್ರಧಾನಿ ಜಾರ್ಜಿಯ ಮೆಲೋನಿಯೊಂದಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಈ ಭೇಟಿ ನಂತರ ಮಾಧ್ಯಮಕ್ಕೆ ಮಾಹಿತಿ ನೀಡಿದ ಮೋದಿ, ಭಾರತ-ಇಟಲಿ ಸಂಬಂಧಕ್ಕೆ 75 ವರ್ಷಗಳಾಗಿವೆ. ಈ ಹೊತ್ತಿನಲ್ಲಿ ಎರಡೂ ದೇಶಗಳ ಸಂಬಂಧವನ್ನು ವ್ಯೂಹಾತ್ಮಕ ಜೊತೆಗಾರಿಕೆಯಾಗಿ ವಿಸ್ತರಿಸಲು ನಿರ್ಧರಿಸಿದ್ದೇವೆ. ಭಾರತದಲ್ಲಿ ಈಗ ಸಹ ಉತ್ಪಾದನೆ, ಸಹ ಅಭಿವೃದ್ಧಿಗೆ ಬೇಕಾದಷ್ಟು ಅವಕಾಶವಿದೆ. ಇದು ಎರಡೂ ರಾಷ್ಟ್ರಗಳಿಗೂ ಬಹಳ ಲಾಭದಾಯಕ ಎಂದರು.
ಎರಡೂ ದೇಶಗಳು ಜಂಟಿ ಸೇನಾ ಕಾರ್ಯಾಚರಣೆ, ಜಂಟಿ ಸೇನಾ ತರಬೇತಿ ನಡೆಸಲು ನಿರ್ಧರಿಸಿವೆ. ಭಯೋತ್ಪಾದನೆ, ಪ್ರತ್ಯೇಕವಾದ ನಿಗ್ರಹಿಸಲು ಎರಡೂ ದೇಶಗಳು ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲಿವೆ. ನವೀಕರಣ ಮಾಡಬಹುದಾದ ಇಂಧನ, ಹಸಿರು ಹೈಡ್ರೊಜನ್, ಐಟಿ, ಸೆಮಿ ಕಂಡಕ್ಟರ್, ದೂರಸಂಪರ್ಕ, ಬಾಹ್ಯಾಕಾಶಗಳಲ್ಲಿ ಪರಸ್ಪರ ಸಹಕರಿಸಲು ನಿರ್ಧರಿಸಲಾಗಿದೆ ಎಂದು ಮೋದಿ ಹೇಳಿದರು.
ರೈಸಿನಾ ಮಾತುಕತೆಯಲ್ಲಿ ಪಾಲ್ಗೊಳ್ಳುವ ಮುನ್ನ ಪ್ರತಿಕ್ರಿಯಿಸಿದ ಮೆಲೋನಿ, “ಪ್ರಧಾನಿ ಮೋದಿ ಅವರು ಜಗತ್ತಿನಲ್ಲೇ ಅತಿ ಹೆಚ್ಚು ಪ್ರೀತಿಪಾತ್ರರಾದ ನಾಯಕರಲ್ಲಿ ಒಬ್ಬರು’ ಎಂದು ಬಣ್ಣಿಸಿದರು.