ಮುಂದಿನ ತಿಂಗಳ 1 ಮತ್ತು 5ನೇ ತಾರೀಕಿನಂದು ಗುಜರಾತ್ ವಿಧಾನಸಭೆ ಚುನಾವಣೆ ನಡೆಯಲಿದೆ. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ರವಿವಾರ ವೇರಾವಲ್, ಧರೋಜಿ, ಅಮ್ರೇಲಿ, ಸೌರಾಷ್ಟ್ರದ ಬೋಟದ್ ಎಂಬಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಈ ಚುನಾವಣೆ ಮುಂದಿನ 25 ವರ್ಷಗಳ ಅವಧಿಯಲ್ಲಿ ಗುಜರಾತ್ ಹೇಗೆ ಇರಬೇಕು ಎಂಬ ಅಂಶವನ್ನು ನಿರ್ಧರಿಸಲಿದೆ ಎಂಬ ಅಂಶವನ್ನು ಪ್ರಧಾನವಾಗಿ ಪ್ರಸ್ತಾವಿಸಿದ್ದಾರೆ.
ಮತ ಕೇಳಲು ಬಂದ ಕಾಂಗ್ರೆಸನ್ನು ಪ್ರಶ್ನಿಸಿ
ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ ಕೇಳಲು ಯಾವ ಹಕ್ಕು ಇದೆ ಎಂದು ಪ್ರಧಾನಿ ಪ್ರಶ್ನೆ ಮಾಡಿದ್ದಾರೆ. ರಾಜ್‌ಕೋಟ್ ಜಿಲ್ಲೆಯ ಧರೋಜಿಯಲ್ಲಿ ಮಾತನಾಡಿದ ಅವರು ಭಾರತ್ ಜೋಡೋ ಯಾತ್ರೆಯಲ್ಲಿ ಮೇಧಾ ಪಾಟ್ಕರ್ ಜತೆಗೆ ಹೆಜ್ಜೆ ಹಾಕಿದ ಸಂಸದ ರಾಹುಲ್ ಗಾಂಧಿಯವರನ್ನು ಪ್ರಶ್ನಿಸಿದ ಪ್ರಧಾನಿ, “ಕಛ… ಮತ್ತು ಸೌರಾಷ್ಟ್ರದ ಕಥಿಯಾಡ್ ಪ್ರದೇಶಕ್ಕೆ ನೀರಿನ ಅಗತ್ಯದ ನರ್ಮದಾ ಯೋಜನೆ ಸರ್ದಾರ್ ಸರೋವರ್ ನಿರ್ಮಾಣವನ್ನು ಮೂರು ದಶಕಗಳ ಕಾಲ ಆ ಮಹಿಳೆ (ಮೇಧಾ ಪಾಟ್ಕರ್) ಮತ್ತು ಇತರರು ತಡೆ ಹಿಡಿದಿದ್ದರು. ಅದಕ್ಕಾಗಿ ಅವರು ವಿನಾಕಾರಣ ಕಾನೂನು ಸಮರ ನಡೆಸಿದ್ದರು. ಅವರು ನಡೆಸಿದ ಅಪಪ್ರಚಾರದಿಂದ ವಿಶ್ವಬ್ಯಾಂಕ್ ಕೂಡ ಯೋಜನೆಗೆ ನೆರವು ತಡೆಹಿಡಿದಿತ್ತು. ಅಂಥವರ ಜತೆಗೆ ನೀವು ಹೆಜ್ಜೆ ಹಾಕಿದ್ದೀರಿ’ ಎಂದು ಆಕ್ಷೇಪಿಸಿದ್ದಾರೆ.
ಕಾಂಗ್ರೆಸ್ ಮುಖಂಡರು ನಿಮ್ಮ ಮನೆಗೆ ಬಂದಾಗ ಯಾವ ನೈತಿಕ ಹೊಣೆ ಹೊತ್ತುಕೊಂಡು ಮತ ಕೇಳಲು ಬಂದಿದ್ದೀರಿ ಎಂದು ಆ ಪಕ್ಷದವರನ್ನು ಪ್ರಶ್ನೆ ಮಾಡಬೇಕು. ಈಗ ಕಛ… ಮತ್ತು ಕಥಿಯಾವಾಡ್ ಪ್ರದೇಶಕ್ಕೆ ನೀರು ಪೂರೈಕೆಯಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪ್ರತಿ ಬೂತ್‌ನಲ್ಲೂ ಬಿಜೆಪಿ ಗೆಲ್ಲಿಸಿ
ಗಿರ್ ಸೋಮನಾಥ ಜಿಲ್ಲೆಯಲ್ಲಿ ಇರುವ ಸೋಮನಾಥ ದೇಗುಲಕ್ಕೆ ತೆರಳಿ ಪ್ರಧಾನಿ ಮೋದಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ವೇರಾವಲ್ ಪಟ್ಟಣ ದಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ “ರಾಜ್ಯದ ಪ್ರತಿಯೊಂದು ಬೂತ್‌ನಲ್ಲಿಯೂ ಕೂಡ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಮತಗಳ ಅಂತರದಿಂದ ಜಯಗಳಿಸಬೇಕು. ಅದಕ್ಕಾಗಿ ಡಿ.1 ಮತ್ತು ಡಿ.5ರಂದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹಕ್ಕು ಚಲಾಯಿಸಬೇಕು. ಹೀಗೆ ಮಾಡುವ ಮೂಲಕ ಹಿಂದಿನ ದಾಖಲೆಗಳನ್ನು ಮುರಿಯಿರಿ’ ಎಂದು ಮನವಿ ಮಾಡಿದ್ದಾರೆ.
ರಾಜ್ಯ ಸರಕಾರ ಮೀನುಗಾರರ ಸಮುದಾಯಕ್ಕೆ ವಿವಿಧ ಯೋಜನೆಗಳ ಮೂಲಕ ಅವರ ಆದಾಯ ಹೆಚ್ಚುವಂತೆ ಮಾಡಿದೆ. ನಮ್ಮ ರಾಜ್ಯದ ಬಂದರುಗಳ ಮೂಲಕ ಉತ್ತರ ಭಾರತದಾದ್ಯಂತ ವಿವಿಧ ಸರಕುಗಳು ಪೂರೈಕೆಯಾಗುತ್ತಿವೆ. ಈ ಬಂದರುಗಳು ದೇಶದ ಭಾಗ್ಯವನ್ನು ತೆರೆಯುವಂತೆ ಮಾಡಿವೆ ಎಂದರು ಪ್ರಧಾನಿ ಮೋದಿ. ಹಲವು ಅಪಪ್ರಚಾರಗಳ ಹೊರತಾಗಿಯೂ 2 ದಶಕಗಳಲ್ಲಿ ರಾಜ್ಯ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಿದೆ ಎಂದರು.
Related Articles
ಕಾಂಗ್ರೆಸ್‌ಗೆ ಅಭಿವೃದ್ಧಿ ಅಜೆಂಡಾವೇ ಇಲ್ಲ
ಕಾಂಗ್ರೆಸ್‌ಗೆ ಅಭಿವೃದ್ಧಿ ಮಾಡಬೇಕು ಅಜೆಂಡಾವೇ ಇಲ್ಲ. ಅಂಥ ಪಕ್ಷಕ್ಕೆ ಬೆಂಬಲ ನೀಡುವ ಮೂಲಕ ಮತಗಳನ್ನು ವ್ಯರ್ಥ ಮಾಡಬೇಡಿ ಎಂದು ಪ್ರಧಾನಿ ಮನವಿ ಮಾಡಿದ್ದಾರೆ. ಅಮ್ರೇಲಿಯಲ್ಲಿ ಮಾತನಾಡಿದ ಅವರು, ವಿಪಕ್ಷ ಈ ಪ್ರದೇಶಕ್ಕೆ ಯಾವುದೇ ರೀತಿ ಯಲ್ಲಿ ಅಭಿವೃದ್ಧಿ ಮಾಡಿಲ್ಲ ಎಂದು ದೂರಿದ್ದಾರೆ. ಕಾಂಗ್ರೆಸ್‌ನ ಯಾವುದೇ ಮುಖಂಡರ ಬಳಿ ಅಭಿವೃದ್ಧಿ ಯೋಜನೆಯ ಬಗ್ಗೆ ಕೇಳಿದರೆ ಮಾಹಿತಿಯೇ ಇರುವುದಿಲ್ಲ. ಆದರೆ, ಬಿಜೆಪಿ ನೇತೃತ್ವದ ಸರಕಾರ ಹಲವು ರೀತಿಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದೆ. ಮುಂದಿನ ದಿನಗಳನ್ನು ಗುರಿಯಾಗಿ ಇರಿಸಿಕೊಂಡು ದೊಡ್ಡ ಹೆಜ್ಜೆಗಳನ್ನು ಹಾಕುವ ಅಗತ್ಯಲಿದೆ ಎಂದು ಪ್ರಧಾನಿ ಭಾಷಣದಲ್ಲಿ ಪ್ರಸ್ತಾವ ಮಾಡಿದರು. ಹಿಂದಿನ ಚುನಾವಣೆಯಲ್ಲಿ ಅಮ್ರೇಲಿಯ ಮತದಾರರು ಎಲ್ಲ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಕ್ಷೇತ್ರಗಳಿಗೆ ಅವರ ಕೊಡುಗೆ ಏನು ಎಂಬುದನ್ನು ಮತದಾರರು ಪ್ರಶ್ನಿಸಬೇಕು ಎಂದರು.