ಅಹ್ಮದಾಬಾದ್: ಪಂಚ ರಾಜ್ಯ ಚುನಾವಣೆಯಲ್ಲಿ ಜನರು ಅಭಿವೃದ್ಧಿಗೆ ಮತ ಹಾಕಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಶುಕ್ರವಾರದಂದು ನಡೆದ ಪಂಚಾಯತ್ ಮಹಾಸಮ್ಮೇಳನದಲ್ಲಿ ಭಾಗವಹಿಸಿದ ಅವರು, “ಸತತ ಎರಡು ಬಾರಿ ಒಂದೇ ಪಕ್ಷದ ಸರಕಾರ ರಚನೆಯಾಗುವುದು ಕಷ್ಟ ಎನ್ನುವಂತಹ ರಾಜ್ಯಗಳಲ್ಲಿ ಸಂವಿಧಾನದ ಶಕ್ತಿಯಿಂದಾಗಿ ಬಿಜೆಪಿ ಗೆದ್ದಿದೆ. ಜನರು ಅಭಿವೃದ್ಧಿಗೆ ಮತ ಹಾಕಿದ್ದರಿಂದಲೇ ಇದು ಸಾಧ್ಯವಾಗಿದೆ’ ಎಂದು ನುಡಿದಿದ್ದಾರೆ. ಈ ಕಾರ್ಯಕ್ರಮದ ಮೂಲಕ ವರ್ಷಾಂತ್ಯದಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಗೆ ಪರೋಕ್ಷವಾಗಿ ಪ್ರಚಾರವನ್ನೂ ಶುರು ಮಾಡಿದ್ದಾರೆ.
ಮಹಾತ್ಮಾ ಗಾಂಧಿಯವರ ಬಗ್ಗೆ ಮಾತನಾಡಿದ ಮೋದಿ, “ಗಾಂಧಿಯವರು ಗ್ರಾಮಗಳ ಅಭಿವೃದ್ಧಿ ಬಗ್ಗೆ ಕನಸು ಕಂಡಿದ್ದರು. ಅದನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಮಯದಲ್ಲಿ ನಾವು ನನಸು ಮಾಡಬೇಕಿದೆ. ಪ್ರತೀ ಹಳ್ಳಿಯನ್ನು ಸ್ವಾವಲಂಬಿ ಯಾಗಿಸುವ ಗುರಿಯನ್ನು ಗ್ರಾಮಗಳ ಮುಖ್ಯಸ್ಥರು ಹೊಂದ ಬೇಕು. ಗ್ರಾಮ ಸ್ವರಾಜ್ ಕನಸ ನನಸಾಗಿಸಲು ದೃಢ ಪಂಚಾಯತ್ ರಾಜ್ ಮೂಲಸೌಕರ್ಯ ಪ್ರಮುಖವಾಗಿದೆ. ಆ ನಿಟ್ಟಿನಲ್ಲಿ ಎಲ್ಲ ಪಂಚಾಯತ್‌ಗಳ ಸದಸ್ಯರು ಕೆಲಸ ಮಾಡುತ್ತಿದ್ದಾರೆ’ ಎಂದಿದ್ದಾರೆ.
ಇದನ್ನೂ ಓದಿ:ಮನೋವಿಜ್ಞಾನ ವಿಭಾಗದ 19 ಸಹಾಯಕ ಪ್ರಾಧ್ಯಾಪಕ ಹುದ್ದೆ ನೇಮಕಾತಿಗೆ ಹೈಕೋರ್ಟ್ ತಡೆ
ಪಂಚ ರಾಜ್ಯಗಳ ಚುನಾವಣೆ ಮುಗಿದ ಬೆನ್ನಲ್ಲೇ ಗುಜರಾತ್ ಚುನಾವಣ ಅಖಾಡವನ್ನು ಬಿಜೆಪಿ ಸಿದ್ಧ ಮಾಡುತ್ತಿದೆ. ರಾಜ್ಯದಲ್ಲಿ 2023ರಲ್ಲಿ ನಡೆಯಲಿರುವ ವಿಧಾನಸಭೆಯ ಹಿನ್ನೆಲೆಯಲ್ಲಿ ಪಕ್ಷ ಈಗಾಗಲೇ ಪ್ರಚಾರ ಆರಂಭಿಸಿದೆ.