ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ಜ. 19) ನಗರಕ್ಕೆ ಬಂದು ಹೋಗಲಿದ್ದಾರೆ.
ಅಂದು ನವದೆಹಲಿಯಿಂದ ವಿಶೇಷ ವಿಮಾನ ಮೂಲಕ ನಗರದ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆ 9.30ಕ್ಕೆ ಆಗಮಿಸುವ ಅವರು, ಬಳಿಕ ಹೆಲಿಕಾಪ್ಟರ್ ಮೂಲಕ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ತೆರಳುವರು.
ಅಲ್ಲಿ ಸಹಸ್ರಾರು ಮನೆಗಳ ಹಕ್ಕುಪತ್ರ ವಿತರಣೆ ನೆರವೇರಿಸಿ ಮರಳಿ ಕಲಬುರಗಿಗೆ ಮಧ್ಯಾಹ್ನ 12.30ಕ್ಕೆ ಮರಳುವರು. ಮೋದಿ ಅವರು ಈ ಹಿಂದೆಯೂ ಮನೆಗಳ ನಿರ್ಮಾಣದ ಭೂಮಿಪೂಜೆ ನೆರವೇರಿಸುವ ಸಂದರ್ಭದಲ್ಲೂ ಕಲಬುರಗಿ ಮೂಲಕವೇ ಬಂದು ಹೋಗಿದ್ದರು.
ಸೊಲ್ಲಾಪುರದಿಂದ ಮರಳಿದ ಬಳಿಕ ವಿಶೇಷ ವಿಮಾನ ಮೂಲಕ ಮೈಸೂರಿಗೆ ತೆರಳಲಿದ್ದಾರೆ ಎಂದು ಗೊತ್ತಾಗಿದೆ. ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ಹಾಗೂ ಸುತ್ತಮುತ್ತ ಬಂದೋಬಸ್ತ್ ಕಲ್ಪಿಸುವ ನಿಟ್ಟಿನಲ್ಲಿ ಕಲಬುರಗಿ ಪೊಲೀಸ್ ಆಯುಕ್ತರು ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
ಈ ಮಧ್ಯೆ ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಬುಧವಾರ ಬೆಳಿಗ್ಗೆ 11ಕ್ಕೆ ವಿಮಾನ ನಿಲ್ದಾಣದಲ್ಲೇ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಅಲ್ಲದೇ ವಿಶೇಷ ಭದ್ರತಾ ಪಡೆ ಸಹ ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದೆ.
ಇನ್ನೊಂದೆಡೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಆದೇಶ ಪತ್ರ ವಿತರಣೆ ಸಮಾರಂಭವನ್ನು ಕಲ್ಯಾಣ ಕರ್ನಾಟಕದ ಕಲಬುರಗಿ ಇಲ್ಲವೇ ಬೀದರ್ ಜಿಲ್ಲೆಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದು, ಪ್ರಧಾನ ಮೋದಿ ಆಗಮಿಸಲಿದ್ದಾರೆ. ಈ ಕುರಿತು ಈಗಾಗಲೇ ಬಿಜೆಪಿ ಎರಡು ಸುತ್ತಿನ ಸಭೆ ನಡೆಸಿದೆ.