Advertisement

ಪ್ರಧಾನಿ ಮೋದಿ ಪ್ರಗತಿ ಪಥ: ಮೋದಿ ಸರಕಾರದ 9 ವರ್ಷಗಳು…

12:18 AM May 26, 2023 | Team Udayavani |

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಆಡಳಿತ ಚುಕ್ಕಾಣಿ ಹಿಡಿದು 2023ರ ಮೇ 26ಕ್ಕೆ 9 ವರ್ಷಗಳನ್ನು ಪೂರೈಸಲಿದ್ದಾರೆ. 2014 ಹಾಗೂ 2019ರ ಚುನಾವಣೆಯಲ್ಲಿ ಅತ್ಯದ್ಭುತ ಗೆಲುವು ಸಾಧಿಸಿರುವ ಪ್ರಧಾನಿ ಮೋದಿ ಹಲವು ಮೈಲುಗಲ್ಲುಗಳನ್ನು ದಾಟಿದ್ದಾರೆ. ಕೊರೊನಾ ಮಹಾಮಾರಿ ಅವಧಿಯಲ್ಲಿ ದೇಶದ ಜನತೆಯಲ್ಲಿ ಧೈರ್ಯ ತುಂಬುವಲ್ಲಿ ಹಾಗೂ ಸ್ವತಃ ವ್ಯಾಕ್ಸಿನ್‌ ಉತ್ಪಾದಿಸಿ ದೇಶಕ್ಕಲ್ಲದೇ ಇತರ ದೇಶಗಳಿಗೂ ನೆರವು ನೀಡಿದ್ದು ಮಹತ್ತರ ಸಾಧನೆಯೇ ಸರಿ. ಹಾಗೆಯೇ ಯೋಗಕ್ಕೆ ಅಂತಾರಾಷ್ಟ್ರೀಯ ಗರಿ, ಸರ್ದಾರ್‌ ವಲ್ಲಭಬಾಯ್‌ ಪಟೇಲ್‌ ಅವರ ಏಕತಾ ಪ್ರತಿಮೆ ಸ್ಥಾಪನೆ, ಪಾಕಿಸ್ಥಾನದ ವಿರುದ್ಧ ನಡೆಸಿದ ಸರ್ಜಿಕಲ್‌ ಸ್ಟ್ರೈಕ್‌, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ವಿದೇಶಗಳಿಂದ ಆಮದು ಮಾಡಿಕೊಂಡಿದ್ದು, ಬಸವಳಿದಿದ್ದ ನೆರೆ ರಾಷ್ಟ್ರ ಶ್ರೀಲಂಕಾಕ್ಕೆ ನೆರವು ನೀಡಿದ್ದು, ಸ್ವಾತಂತ್ರ್ಯದ 70 ವರ್ಷಗಳ ಅನಂತರವೂ ಸುಮಾರು 18 ಸಾವಿರ ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕವನ್ನು ಕಲ್ಪಿಸಿದ್ದು, ರಾಷ್ಟ್ರೀಯ ಹೆದ್ದಾರಿ, ರೈಲ್ವೇ, ಜಲಮಾರ್ಗಗಳ ಅಭಿವೃದ್ಧಿ ಸಹಿತ ವಿಶ್ವಸಂಸ್ಥೆ, ಬ್ರಿಕ್ಸ್‌, ಸಾರ್ಕ್‌, 2ಜಿ ಶೃಂಗ ಸಭೆಯ ಆಯೋಜನೆ ಮಾಡುವ ಮೂಲಕ ದೇಶವನ್ನು ಹೊಸ ಪಥದಲ್ಲಿ ಕೊಂಡೊಯ್ದಿದ್ದಾರೆ. ಜತೆಗೆ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.

Advertisement

ಮೋದಿ ಸರಕಾರದ 9 ಹೆಜ್ಜೆಗಳು

1ಆಯುಷ್ಮಾನ್‌ ಭಾರತ್‌
ಈ ಯೋಜನೆಯಡಿ ಎಲರೂ 5 ಲಕ್ಷ ರೂ.ಗಳವರೆಗೆ ಸರಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. 5 ಲಕ್ಷ ರೂ. ವಿಮಾ ಭದ್ರತೆಯಾಗಿದ್ದು ದೇಶದಲ್ಲಿನ ಸುಮಾರು 17.9 ಕೋಟಿ ಬಡವರಿಗೆ ಪ್ರಯೋಜನವಾಗಿದೆ. ಕೇಂದ್ರ- ರಾಜ್ಯ ಸರಕಾರಗಳೆರಡು ಈ ಯೋಜನೆಗೆ ಮೊತ್ತವನ್ನು ಭರಿಸಲಿದ್ದು ಡಿಜಿಟಲ್‌ ಕಾರ್ಡ್‌ ಕೂಡ ಲಭ್ಯವಾಗಲಿದೆ.

2ಜನ್‌ಧನ್‌
ಪ್ರಮುಖವಾಗಿ ಸರಕಾರದ ಯೋಜನೆಯ ಸಬ್ಸಿಡಿಗಳು ನೇರವಾಗಿ ಫ‌ಲಾನುಭವಿಗೇ ತಲುಪಲು ಜನ್‌ಧನ್‌ ಯೋಜನೆ ಸಹಕಾರಿ. ವಿದ್ಯಾರ್ಥಿ ವೇತನ, ಪಿಂಚಣಿ, ಸರಕಾರದ ಸಬ್ಸಿಡಿ ಫ‌ಲಾನುಭವಿಯ ಖಾತೆಗೆ ರವಾನೆಯಾಗುತ್ತದೆ. ಅಲ್ಲದೇ ಇದರ ವಹಿವಾಟು ಸುಮಾರು ಒಂದೂವರೆ ಲಕ್ಷ ಕೋಟಿಗೂ. ಹೆಚ್ಚು ದಾಟಿದೆ. 45.21 ಕೋಟಿಗೂ ಹೆಚ್ಚು ಖಾತೆಗಳಿದ್ದು ಇವೆಲ್ಲವೂ ಶೂನ್ಯ ಬ್ಯಾಲೆನ್ಸ್‌ ಹೊಂದಿರುವ ಖಾತೆಗಳಾಗಿವೆ.

Advertisement

3 ಕಿಸಾನ್‌ ಸಮ್ಮಾನ್‌
2019ರ ಫೆಬ್ರವರಿ ಬಜೆಟ್‌ನಲ್ಲಿ ಈ ಯೋಜನೆಯನ್ನು ಘೋಷಿಸಲಾಯಿತು. ಈ ಯೋಜನೆಯಡಿ ಕೇಂದ್ರ ಸರಕಾರ ಅರ್ಹ ರೈತರಿಗೆ 6 ಸಾವಿರ ರೂ.ಗಳನ್ನು ರೈತರ ಖಾತೆಗೆ ಜಮೆ ಮಾಡುತ್ತಿದೆ. ಅಲ್ಲದೇ ಈ ಹಿಂದೆ ರಾಜ್ಯದಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಸರಕಾರವೂ 4 ಸಾವಿರ ಸೇರಿಸುತ್ತಿತ್ತು. ಒಟ್ಟಾರೆಯಾಗಿ 10 ಸಾವಿರ ರೂ. ರೈತರಿಗೆ ಸಿಗುತ್ತಿತ್ತು. ಇದರಿಂದಾಗಿ ಕೃಷಿ ಚಟುವಟಿಕೆಗೆ ಉತ್ತೇಜನ ಹಾಗೂ ರೈತರ ಆರ್ಥಿಕ ಸಶಕ್ತತೆಗೆ ಈ ಯೋಜನೆಯು ಸಹಕಾರಿ ಆಗಿದೆ. ಈವರೆಗೂ ರೈತರ ಖಾತೆಗಳಿಗೆ 1.8 ಲಕ್ಷ ಕೋಟಿ ರೂ. ಗೂ ಹೆಚ್ಚು ಹಣವನ್ನು ಜಮೆ ಮಾಡಲಾಗಿದೆ.

4ಉಜ್ವಲಾ
2016ರಲ್ಲಿ ಈ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಜಾರಿಗೊಳಿಸಿದರು. ಯಾವುದೇ ಭದ್ರತಾ ಠೇವಣಿ ಇಲ್ಲದೇ ಈ ಯೋಜನೆಯಡಿ ಉಚಿತ ಎಲ್‌ಪಿಜಿ ಸಿಲಿಂಡರ್‌ ಅನ್ನು ಒಮ್ಮೆಗೆ ಪಡೆಯಬಹುದು. ಈವರೆಗೂ 9.1 ಕೋಟಿ ಮನೆಗಳಿಗೆ ಉಚಿತವಾಗಿ ಎಲ್‌ಪಿಜಿ ಸಿಲಿಂಡರ್‌ ತಲುಪಿದೆ. 2018ರಲ್ಲಿ ಈ ಯೋಜನೆಯನ್ನು ವಿಸ್ತರಿಸಲಾಗಿದ್ದು ಎಸ್ಸಿ, ಎಸ್ಟಿ ಹಾಗೂ ಅರಣ್ಯವಾಸಿಗಳಿಗೂ ಈ ಯೋಜನೆ ತಲುಪಿದೆ. ಸೌದೆ ಒಲೆಯಿಂದ ಮಹಿಳೆಯರನ್ನು ಕಾಡುವ ಅನಾರೋಗ್ಯ ತಪ್ಪಿಸಲು ಈ ಯೋಜನೆ ಸಹಕಾರಿ ಆಗಿದೆ.

5ವಿಮಾ ಯೋಜನೆ
ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯನ್ನು 2015ರಲ್ಲಿ ಜಾರಿಗೆ ತರಲಾಯಿತು. ಈ ಯೋಜನೆಯಡಿ ಬಡವರು ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಕನಿಷ್ಠ 2 ಲಕ್ಷ ರೂ. ಜೀವವಿಮೆ ಒದಗಿಸಲಿದೆ. ಈಗಾಗಲೇ ಸುಮಾರು 12.76 ಕೋಟಿ ಜನತೆ ಈ ಯೋಜನೆಗೆ ಒಳಪಟ್ಟಿದ್ದಾರೆ. ಇನ್ನು ಪ್ರಧಾನಮಂತ್ರಿ ಸುರûಾ ಬಿಮಾ ಯೋಜನೆಯಡಿ 28.37 ಕೋಟಿ ಮಂದಿ ಈ ಯೋಜನೆಗೆ ಒಳಪಟ್ಟಿದ್ದು ಅಪಘಾತ ವಿಮಾ ಸೌಲಭ್ಯವನ್ನು ಕಲ್ಪಿಸಲಿದೆ. ಅಂಗವೈಕಲ್ಯವಾದರೆ 1 ಲಕ್ಷ ರೂ., ಶಾಶ್ವತ ಅಂಗವೈಕಲ್ಯ ಹಾಗೂ ಸಾವು ಸಂಭವಿಸಿದರೆ 2 ಲಕ್ಷ ರೂ. ಸಿಗಲಿದೆ. ಹಾಗೆಯೇ ಅಟಲ್‌ ಪಿಂಚಣಿ ಯೋಜನೆಯೂ ಇದ್ದು 60 ವರ್ಷಕ್ಕಿಂತ ಮೇಲ್ಪಟ್ಟವರು 1-5 ಸಾವಿರ ರೂ.ವರೆಗೆ ಪಿಂಚಣಿ ಪಡೆಯಬಹುದಾಗಿದೆ.

6 ಮುದ್ರಾ ಯೋಜನೆ
ಸಣ್ಣ ಕೈಗಾರಿಕೆ ಹಾಗೂ ಉದ್ಯಮಗಳನ್ನು ಪ್ರೋತ್ಸಾಹಿಸಲು ಮುದ್ರಾ ಯೋಜನೆಯನ್ನು ಜಾರಿಗೆ ತರಲಾಗಿದ್ದು ಬ್ಯಾಂಕ್‌ಗಳ ಮೂಲಕ ಸಾಲ ಸೌಲಭ್ಯ ಸಿಗಲಿದೆ. ಈ ಯೋಜನೆಯಡಿ ಈವರೆಗೂ ಸುಮಾರು 10 ಲಕ್ಷ ಸಣ್ಣ ಕೈಗಾರಿಕೆ ಹಾಗೂ ಉದ್ಯಮಗಳಿಗೆ ದೇಶಾದ್ಯಂತ 18. 60 ಲಕ್ಷ ಕೋಟಿ ರೂ.ವನ್ನು ಸಾಲ ನೀಡಲಾಗಿದೆ.

7ಎಲ್ಲರಿಗೂ ಮನೆ
ಈ ಯೋಜನೆಗೆ 2015ರಲ್ಲಿ 48 ಸಾವಿರ ಕೋಟಿ ರೂ.ವನ್ನು ಮೀಸಲಿಡಲಾಗಿತ್ತು. 2022ರ ವರೆಗೆ ದೇಶದ ಎಲ್ಲರಿಗೂ ಸೂರು ಕಲ್ಪಿಸುವುದು ಪ್ರಧಾನಮಂತ್ರಿ ಆವಾಸ್‌ ಯೋಜನೆಯ ಉದ್ದೇಶವಾಗಿತ್ತು. ಈಗಾಗಲೇ ಈ ಯೋಜನೆಗೆ 2.3 ಕೋಟಿ ಮಂದಿ ಒಳಪಟ್ಟಿದ್ದಾರೆ.

8ಸ್ವತ್ಛ ಭಾರತ್‌
ದೇಶಾದ್ಯಂತ ಶೌಚಾಲಯ ನಿರ್ಮಾಣ, ತ್ಯಾಜ್ಯ ನಿರ್ಮೂಲನೆಗೆ 2014ರಲ್ಲಿ ಸ್ವತ್ಛ ಭಾರತ್‌ ಯೋಜನೆ ಕಾರ್ಯಗತಕ್ಕೆ ತರಲಾಯಿತು. ಈ ಯೋಜನೆಯಡಿ ದೇಶದಲ್ಲಿ ಶೌಚಾಲಯವಿಲ್ಲದ ಕುಟುಂಬಗಳಿಗೆ ಸುಮಾರು 11.5 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿದೆ. 2022-23ರಲ್ಲೂ 7,192 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. 2021ರಿಂದ 2026ರ ವರೆಗೆ 1,41,678 ಕೋಟಿ ರೂ. ವೆಚ್ಚ ಮಾಡಲು ನಿರ್ಧರಿಸಲಾ ಗಿದೆ. ಅಲ್ಲದೇ ಕಸ ವಿಂಗಡಣೆ, ತ್ಯಾಜ್ಯ ವಿಲೇವಾರಿ, ಪುನರ್‌ ಬಳಕೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ.

9ಅಮೃತ ಕಾಲ ಯೋಜನೆಗಳು
ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಳೆದ ಬಜೆಟ್‌ ಅನ್ನು “ಅಮೃತ ಕಾಲದ ಬಜೆಟ್‌’ ಎಂದು ಕರೆಯಲಾಗಿದೆ. ಇದರಲ್ಲಿ ಮುಂದಿನ 25 ವರ್ಷಗಳ ಅಭಿವೃದ್ಧಿ ಗುರಿ ಇರಿಸಿಕೊಂಡು, ಅಮೃತ ಮಹೋತ್ಸವದಿಂದ ಶತಮಾ ನೋತ್ಸವದ ವರೆಗೆ ಎಂಬ ಥೀಮ್‌ನಲ್ಲಿ ಬಜೆಟ್‌ ರೂಪಿಸಲಾಗಿತ್ತು. ಇದರಲ್ಲಿ ಹಲವಾರು ಯೋಜನೆಗಳನ್ನು ಘೋಷಿಸಲಾಗಿದೆ.

ಮಹಿಳೆಯರ ಆರ್ಥಿಕ ಸಶಕ್ತೀಕರಣ: ದೇಶದಲ್ಲಿರುವ 81 ಲಕ್ಷ ಸ್ವಸಹಾಯ ಸಂಘಗಳನ್ನು ಬೃಹತ್‌ ಉತ್ಪಾದಕ ಸಂಸ್ಥೆಗಳನ್ನಾಗಿ ಪರಿವರ್ತಿಸುವುದು. ಈ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸಶಕ್ತೀಕರಣಗೊಳಿಸುವುದು. ಅಲ್ಲದೆ ಇವುಗಳನ್ನು ಸ್ಟಾರ್ಟ್‌ಅಪ್‌ಗಳ ರೀತಿ ರೂಪಿಸುವುದಾಗಿದೆ.
ಪಿಎಂ ವಿಶ್ವಕರ್ಮ ಕೌಶಲ್‌ ಸಮ್ಮಾನ್‌: ಸಾಂಪ್ರದಾಯಿಕ ಕಲಾಕಾರರಿಗೆ ಆರ್ಥಿಕ ಸಹಾಯ, ಕೌಶಲ ತರಬೇತಿ ಮತ್ತು ಜ್ಞಾನವನ್ನು ನೀಡುವುದಾಗಿದೆ. ಇದರ ಜತೆಗೆ ಇವರು ತಯಾರಿಸುವ ಉತ್ಪನ್ನಗಳ ಗುಣಮಟ್ಟ, ಪ್ರಮಾಣ ಮತ್ತು ಎಲ್ಲರನ್ನು ತಲುಪುವ ಬಗೆಯನ್ನು ಹೇಳಿಕೊಡಲಾಗುತ್ತದೆ.

ಸರಕಾರದ ಮಹಾ ಸಾಧನೆಗಳು…

5ನೇ ದೊಡ್ಡ ಆರ್ಥಿಕ ಶಕ್ತಿ
ಕೊರೊನಾದಂಥ ಕಾಲದಲ್ಲೂ ದೇಶದ ಆರ್ಥಿಕತೆಯನ್ನು ಬೀಳಲು ಬಿಡದೆ ಮುನ್ನಡೆಸಿದ್ದು ಮೋದಿ ಅವರ ಹೆಗ್ಗಳಿಕೆ. ಹೀಗಾಗಿ ಸದ್ಯ ಭಾರತ ಜಗತ್ತಿನ 5ನೇ ದೊಡ್ಡ ಆರ್ಥಿಕ ಶಕ್ತಿಯಾಗಿದೆ. ಮೋದಿ ಅವರು ಅಧಿಕಾರ ವಹಿಸಿಕೊಂಡಾಗ ಭಾರತದ ಸ್ಥಾನ 10ರಲ್ಲಿತ್ತು. ಭಾರತದ ಜಿಡಿಪಿ ದರವೂ ಜಗತ್ತಿನಲ್ಲೇ
ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಆರ್‌ಬಿಐನ ಸದ್ಯದ ಲೆಕ್ಕಾಚಾರದ ಪ್ರಕಾರ ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಶೇ.7ರಷ್ಟಿರಬಹುದು
ಎಂದು ಅಂದಾಜಿಸಲಾಗಿದೆ.

ಸಂವಿಧಾನದ 370 ವಿಧಿ ರದ್ದು
ಜಮ್ಮು-ಕಾಶ್ಮೀರದಲ್ಲಿ 1950, ಜ.26ರಂದು ಅಸ್ತಿತ್ವಕ್ಕೆ ಬಂದ ಆರ್ಟಿಕಲ್‌ 370 ಆ ರಾಜ್ಯಕ್ಕೆ ಪ್ರತ್ಯೇಕ ವಿಶೇಷ ಸ್ಥಾನಮಾನವನ್ನು ಕಲ್ಪಿಸಿತ್ತು. ಪ್ರಧಾನಿ ಮೋದಿ ಸರಕಾರ 2019ರ ಆ.5ರಂದು ಆರ್ಟಿಕಲ್‌ 370 ರದ್ದುಗೊಳಿಸಿ ಜಮ್ಮು-ಕಾಶ್ಮೀರ ಮತ್ತು ಲಡಾಖ್‌ ಅನ್ನು ಮುಖ್ಯವಾಹಿನಿಗೆ ತರಲು ವಿಪಕ್ಷಗಳ ವಿರೋಧದ ನಡುವೆಯೂ ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸಿ ಜಾರಿಗೊಳಿಸಿತು. ಈ ಮೂಲಕ ಜಮ್ಮು-ಕಾಶ್ಮೀರದಲ್ಲಿ ಯಾರು ಬೇಕಾದರೂ ಆಸ್ತಿಯ ಹಕ್ಕನ್ನು ಹೊಂದಬಹುದಾಗಿದೆ. ಆ ರಾಜ್ಯಗಳಿಗೆ ಪ್ರತ್ಯೇಕ ಧ್ವಜ ಅಥವಾ ಸಂವಿಧಾನವಿಲ್ಲ, ಮಹಿಳೆಯರಿಗೆ ನಿವಾಸ ಸಮಾನತೆ, ಕಲ್ಲು ತೂರಾಟಗಾರರಿಗೆ ಪಾಸ್‌ಪೋರ್ಟ್‌ ನೀಡಲು ನಿಷೇಧ ಹೇರಲಾಯಿತು.

ಮೂಲಸೌಕರ್ಯ
ದೇಶ ಹಿಂದೆಂದೂ ಕಾಣದ ರೀತಿಯಲ್ಲಿ ಮೂಲಸೌಕರ್ಯದ ವಿಚಾರದಲ್ಲಿ ಅಭಿವೃದ್ಧಿಯಾಗುತ್ತಿದೆ. ಹೆದ್ದಾರಿ ಮತ್ತು ರೈಲ್ವೇ ಕಾಮಗಾರಿಗಳು ತ್ವರಿತಗತಿಯಲ್ಲಿ ಮುಗಿಯುತ್ತಿವೆ. ಹೊಸ ಹೊಸ ರೈಲುಗಳನ್ನು ಪರಿಚಯಿಸಲಾಗುತ್ತಿದೆ. ಈಗಾಗಲೇ ದೇಶಿ ನಿರ್ಮಿತ ವಂದೇ ಭಾರತ್‌ ಎಕ್ಸ್‌ಪ್ರಸ್‌ ಬಹಳಷ್ಟು ಪ್ರಸಿದ್ಧಿಯಾಗಿದೆ. ಜನರ ಪ್ರಯಾಣದ ಸಮಯವನ್ನು ಈ ರೈಲುಗಳು ಕಡಿಮೆ ಮಾಡಿವೆ. ಹಾಗೆಯೇ ಹೆದ್ದಾರಿ ವಿಚಾರದಲ್ಲೂ ಬಹುದೂರ ಸಾಗಲಾಗಿದೆ. ಇವುಗಳನ್ನು ಪ್ರಯಾಣಿಕ ಸ್ನೇಹಿ ಹೆದ್ದಾರಿಗಳಾಗಿ ಪರಿವರ್ತಿಸಲಾಗಿದೆ.

ಈಶಾನ್ಯ ರಾಜ್ಯಗಳ ಅಭಿವೃದ್ಧಿ
ಮೋದಿ ಸರಕಾರದ ಈ 9 ವರ್ಷಗಳಲ್ಲಿ ಈಶಾನ್ಯ ಭಾರತವೂ ಸಾಕಷ್ಟು ಅಭಿವೃದ್ಧಿಗೊಂಡಿದೆ. ಧೋಲಾ-ಸಾದಿಯಾ ಸೇತುವೆ ದೇಶದಲ್ಲೇ ಅತ್ಯಂತ ಉದ್ದನೆಯದಾಗಿದೆ. ಜಿರಿಬಮ್‌-ತುಪುಲ್‌-ಇಂಫಾಲ್‌ ರೈಲ್ವೇ ಸೇತುವೆ 141 ಮೀ. ಎತ್ತರವಿದ್ದು, ದೇಶದಲ್ಲೇ ಅತ್ಯಂತ ಎತ್ತರದ್ದಾಗಿದೆ. ಬಂಬೂವಿಗೆ ಹುಲ್ಲಿನ ಸ್ಥಾನಮಾನ ನೀಡಿ ಮರದ ಸ್ಥಾನಮಾನ ಕಿತ್ತುಹಾಕಲಾಗಿದೆ.

ಮೋದಿ ವಿದೇಶಾಂಗ ನೀತಿ
ಹಿಂದಿನ ಎಲ್ಲ ಸರಕಾರಗಳಿಗೆ ಹೋಲಿಕೆ ಮಾಡಿದರೆ ಮೋದಿ ಸರಕಾರದ ವಿದೇಶಾಂಗ ನೀತಿ ಬೇರೊಂದು ಮಜಲಿಗೆ ಕೊಂಡೊಯ್ದಿದೆ. ಅಮೆರಿಕ, ಇಂಗ್ಲೆಂಡ್‌, ಜಪಾನ್‌, ರಷ್ಯಾ, ಫ್ರಾನ್ಸ್‌ , ಜರ್ಮನಿ, ದಕ್ಷಿಣ ಕೊರಿಯಾ ಸಹಿತ ಜಗತ್ತಿನ ಬಹುತೇಕ ಅಭಿವೃದ್ಧಿ ಹೊಂದಿದ ದೇಶಗಳ ಜತೆಗೆ ಮತ್ತು ಆಫ್ರಿಕಾ ದೇಶಗಳ ಜತೆಗೆ ಭಾರತ ಉತ್ತಮ ಸಂಬಂಧವಿರಿಸಿಕೊಂಡಿದೆ.

ಸರಕಾರ ಎದುರಿಸಿದ ಒಂಬತ್ತು ಸವಾಲುಗಳು

1 ಕೇಂದ್ರ ಸರಕಾರದ ಬಗ್ಗೆ ವಿಪಕ್ಷಗಳು ಪ್ರಶ್ನೆ ಕೇಳುವಾಗ ಮೊದಲು ಬರುವ ಪ್ರಶ್ನೆಯೇ- ನಿರುದ್ಯೋಗ ನಿವಾರಣೆಯದ್ದು. ಅಧಿಕಾರಕ್ಕೆ ಬರುವಾಗ ಪ್ರತೀ ವರ್ಷ 1.5 ಕೋಟಿ ಉದ್ಯೋಗ ಸೃಷ್ಟಿಸಲಾಗುವುದು ಎಂದು ಹೇಳಿದ್ದೀರಿ. ಈಗ ಎಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತಿವೆ ಎಂದು ವಿಪಕ್ಷಗಳು ಆಗಾಗ ಕೇಳುತ್ತಿವೆ.

2ನೋಟು ಅಮಾನ್ಯಿàಕರಣ ಪರಿಣಾಮಗಳು ನಿಜಕ್ಕೂ ಮೋದಿ ಎದುರಿಸಿರುವ ಮತ್ತೂಂದು ಸವಾಲು. ಇದರಿಂದ ಭ್ರಷ್ಟಾಚಾರ, ನಕಲಿ ನೋಟು ದಂಧೆಗೆ ಕಡಿವಾಣ ಬಿದ್ದಿದೆಯೇ? ನೋಟು ಅಮಾನ್ಯದಿಂದ ಯಾರಿಗೆ ಉಪಯೋಗವಾಗಿದೆ? ಇದರಿಂದ ಭಾರತದ ಆರ್ಥಿಕತೆ ಮೇಲೆ ಉಂಟಾದ ಪರಿಣಾಮವೇನು ಎಂಬ ಪ್ರಶ್ನೆಗಳನ್ನು ವಿಪಕ್ಷಗಳು ಸದಾ ಕೇಳುತ್ತಿವೆ.

3 ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸಿರುವ ಬೃಹತ್‌ ಪ್ರತಿಭಟನೆ ನಿಜಕ್ಕೂ ಮೋದಿ ಅವರಿಗೆ ದುಃಸ್ವಪ್ನವಾಗಿ ಕಾಡಿತು. ರೈತ ಸಂಘಟನೆಗಳ ಆಕ್ರೋಶ ತಡೆಯಲಾಗದೆ ಕೊನೆಗೂ ಅದನ್ನು ಹಿಂದೆಗೆದುಕೊಳ್ಳಲಾಯಿತು.

4ರಿಲಯನ್ಸ್‌ ಗ್ರೂಪ್‌ನ ಮುಕೇಶ್‌ ಅಂಬಾನಿ ಮತ್ತು ಅದಾನಿ ಗ್ರೂಪ್‌ನ ಮುಖ್ಯಸ್ಥ ಗೌತಮ್‌ ಅದಾನಿಗೆ ಹೆಚ್ಚಿನ ಅವಕಾಶಗಳನ್ನು ನೀಡಲಾಗುತ್ತಿದೇಕೆ ಎನ್ನುವುದು ವಿಪಕ್ಷಗಳು ಮೇಲಿಂದ ಮೇಲೆ ಕೇಳುತ್ತಿರುವ ಪ್ರಶ್ನೆ. ಈ ಕುರಿತು ಕಾಂಗ್ರೆಸಿನ ರಾಹುಲ್‌ ಗಾಂಧಿ ಅತ್ಯಂತ ಕಟುವಾಗಿ ಪ್ರಶ್ನಿಸುತ್ತಿದ್ದಾರೆ.

5 ಭಾರತದ ಬ್ಯಾಂಕ್‌ಗಳಿಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಪ್ರಮುಖ ಉದ್ಯಮಿಗಳನ್ನು ದೇಶಕ್ಕೆ ವಾಪಸು ತರಲು ಏನೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಪ್ರಶ್ನೆ ಕೇಂದ್ರ ಸರಕಾರದತ್ತ ನಿರಂತರವಾಗಿ ತೂರಿ ಬರುತ್ತಿದೆ.

6 ಸಿಬಿಐ, ಜಾರಿ ನಿರ್ದೇಶನಾಲಯ(ಇ.ಡಿ.)ದಂತಹ ಸ್ವತಂತ್ರ ತನಿಖಾ ಸಂಸ್ಥೆಗಳನ್ನು ದುರ್ಬಲಗೊಳಿಸಲಾಗಿದೆ ಹಾಗೂ ಇವುಗಳನ್ನು ವಿರೋಧಿಗಳನ್ನು ಹಣಿಯಲು ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪವನ್ನು ವಿಪಕ್ಷಗಳು ಮಾಡಿಕೊಂಡು ಬರುತ್ತಲೇ ಇವೆ.

7 ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ 370 ವಿಧಿಯ ವಿಶೇಷ ಸ್ಥಾನಮಾನವನ್ನು ಹಿಂಪಡೆದಿದ್ದರ ಬಗ್ಗೆ ತಕ ರಾರು ಇಲ್ಲವಾದರೂ ಅಲ್ಲಿ ಚುನಾವಣೆ ಯಾವಾಗ ನಡೆಸ ಲಾಗುತ್ತದೆ. ರಾಜ್ಯ ಸ್ಥಾನಮಾನವನ್ನು ಯಾವಾಗ ನೀಡಲಾ ಗುತ್ತದೆ? ಎಂಬ ಪ್ರಶ್ನೆಗಳನ್ನು ವಿಪಕ್ಷಗಳು ಕೇಳುತ್ತಿವೆ.

8 ಸ್ವಿಸ್‌ ಬ್ಯಾಂಕ್‌ನಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ತಂದು, ಪ್ರತೀ ನಾಗರಿಕರ ಖಾತೆಗೆ 15 ಲಕ್ಷ ರೂ. ಹಾಕಲಾಗುವುದು ಎಂದು ಚುನಾವಣೆ ಸಮಯದಲ್ಲಿ ನೀಡಿದ ಭರವಸೆ ಈಗಲೂ ಪ್ರಸ್ತಾವವಾಗುತ್ತಿದೆ. ಈಚೆಗೆ ಕರ್ನಾಟಕ ಚುನಾವಣೆಯಲ್ಲೂ ಇದು ಚರ್ಚೆಗೆ ಬಂದಿತ್ತು.

9ಬೆಲೆ ಏರಿಕೆಯನ್ನು ನಿಯಂತ್ರಿಸುವ ಕುರಿತು ಕೇಂದ್ರ ಸರಕಾರ ಪ್ರಶ್ನೆಗಳನ್ನು ಎದುರಿಸುತ್ತಲೇ ಇದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾಗಿದ್ದರೂ ಪೆಟ್ರೋಲ್‌, ಡೀಸೆಲ್‌ ಬೆಲೆಗಳನ್ನು ತಗ್ಗಿಸುತ್ತಿಲ್ಲ ಏಕೆ ಎನ್ನುವ ಪ್ರಶ್ನೆ ಸಾಮಾನ್ಯ.

ಬಡವರಿಗಾಗಿ ಹಮ್ಮಿಕೊಂಡ ಯೋಜನೆಗಳು

ಪಿಎಂ ಗರೀಬ್‌ ಕಲ್ಯಾಣ ಯೋಜನೆ; ಈ ಯೋಜನೆಯಡಿ 80 ಕೋಟಿ ಜನತೆಗೆ ಆಹಾರ ಧಾನ್ಯದ ವಿತರಣೆ
ಜಲ್‌ ಜೀವನ್‌ ಮಿಶನ್‌: 6.29 ಕೋಟಿ ನೀರಿನ ಸಂಪರ್ಕ
ಪಿಎಂ ಸ್ವನಿಧಿ: ಈ ಯೋಜನೆಯಡಿ 31.9 ಲಕ್ಷ ಬೀದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ
ಸ್ವತ್ಛ ಭಾರತ್‌: ಈ ಯೋಜನೆಯಡಿ 11.5 ಕೋಟಿ ಶೌಚಾಲಯಗಳ ನಿರ್ಮಾಣ
ಪಿಎಂ ಸ್ವನಿಧಿ: 3.19 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ
ಮುದ್ರಾ: ಸಣ್ಣ ಕೈಗಾರಿಕೆಗಳಿಗೆ 35 ಕೋಟಿ ರೂ.ಸಾಲ ಸೌಲಭ್ಯ
ಕೋವಿಡ್‌ ಸಂದರ್ಭದಲ್ಲಿ ಮಹಿಳೆಯರ ಖಾತೆಗೆ 20 ಕೋಟಿ ರೂ. ಜಮೆ
ಸ್ಟಾಂಡ್‌ ಅಪ್‌ ಇಂಡಿಯಾ: ಎಸ್ಸಿ, ಎಸ್ಟಿ ಸಮುದಾಯದ ಅಭಿವೃದ್ಧಿಗೆ 5,300 ಕೋಟಿ ರೂ. ಸಾಲ ಸೌಲಭ್ಯ
ರೈತರ ಸಶಕ್ತೀಕರಣದ ಭರವಸೆ
2007-14ರಿಂದೀಚೆಗೆ ಕೃಷಿ ಬಜೆಟ್‌ ಅನ್ನು 4 ಪಟ್ಟು ಹೆಚ್ಚಳ ಮಾಡಿದ್ದು
1 ಲಕ್ಷ ರೂ.ಗಳನ್ನು ಕೃಷಿ ಚಟುವಟಿಕೆಗೆ ಮೀಸಲಿಟ್ಟ ಅನುದಾನ
23 ಕೋಟಿ ಮಣ್ಣು ಆರೋಗ್ಯ ಕಾರ್ಡ್‌ ವಿತರಣೆ
ಜಾಗತಿಕ ಬೆಲೆ ಹೆಚ್ಚಳದಿಂದ ರೈತರನ್ನು ರಕ್ಷಿಸಲು ರಸಗೊಬ್ಬರ ಸಬ್ಸಿಡಿ ಶೇ.140 ಹೆಚ್ಚಳ

ಸರ್ದಾರ್‌ ವಲ್ಲಭಬಾಯ್‌ ಪಟೇಲ್‌ ಅವರ ಏಕತಾ ಪ್ರತಿಮೆ
ಗುಜರಾತಿನ ವಡೋದರಾ ನಗರದ 100 ಕಿ.ಮೀ.ದೂರದ ಆಗ್ನೇಯ ಭಾಗದ ರಾಜ್ಜಿಪ್ಲಾ ಬಳಿ ಭಾರತದ ಮೊದಲ ಉಪ ಪ್ರಧಾನಮಂತ್ರಿ ಸರ್ದಾರ್‌ ವಲ್ಲಭಬಾಯ್‌ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಸುಮಾರು 4.9 ಎಕ್ರೆ ಪ್ರದೇಶದಲ್ಲಿ 182 ಮೀಟರ್‌ ಎತ್ತರದ ಪ್ರತಿಮೆಯನ್ನು ನಿರ್ಮಿಸಲಾಗಿದ್ದು ವಿಶ್ವದ ಅತೀ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2014 ಅ.31ರಂದು ನಿರ್ಮಾಣ ಕಾರ್ಯವನ್ನು ಆರಂಭಿಸಲಾಯಿತು. ಅ.31 2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ
ರಾಮಾಯಣದ ನಾಯಕನಾದ ಶ್ರೀರಾಮನ ಜನ್ಮಸ್ಥಳ ಉತ್ತರ ಪ್ರದೇಶದಲ್ಲಿರುವ ಅಯೋಧ್ಯೆಯಲ್ಲಿ ಶ್ರೀರಾಮನ ದೇಗುಲ ನಿರ್ಮಿಸಲು ಮೋದಿ ಸರಕಾರ ಅಡಿಗಲ್ಲು ಹಾಕಿತು. ಹಲವಾರು ವರ್ಷಗಳಿಂದ ವಿವಾದವಾಗಿ ಉಳಿದಿದ್ದ ಅಯೋಧ್ಯ ರಾಮ ಮಂದಿರ ಕುರಿತು ಅಲಹಾಬಾದ್‌ ಹೈಕೋರ್ಟ್‌ ನಿಂದ ಅಂತಿಮ ತೀರ್ಪು 2019ರ ನ.9ರಂದು ಪ್ರಕಟವಾಯಿತು. 2020ರಿಂದ ಅಯೋಧ್ಯ ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾಗಿದ್ದು 2023ರ ಅಂತ್ಯಕ್ಕೆ ಮುಗಿಯುವ ಸಾಧ್ಯತೆ ಇದ್ದು ಮಕರ ಸಂಕ್ರಾಂತಿಯ ದಿನ ಗರ್ಭಗುಡಿಯಲ್ಲಿ ಶ್ರೀರಾಮನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ ಎಂದು ರಾಮಮಂದಿರ ನಿರ್ಮಾಣ ಟ್ರಸ್ಟ್‌ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next