Advertisement

ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ವಿವಿಧ ಸೇವಾ ಕಾರ್ಯ

06:35 AM Sep 18, 2017 | |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ 67ನೇ ಹುಟ್ಟುಹಬ್ಬ ನಿಮಿತ್ತ ರಾಜ್ಯದ ವಿವಿಧೆಡೆ ಸಮಾಜಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ  ಶುಭ ಕೋರಲಾಯಿತು. ಬೆಂಗಳೂರಿನಲ್ಲಿ  ಬಿಜೆಪಿ ವತಿಯಿಂದ ಸ್ವತ್ಛತಾ ಆಂದೋಲನ, ಪ್ರತಿಮೆಗಳ ಸ್ವತ್ಛತೆ, ಇತ್ತೀಚೆಗೆ ಬಿದ್ದ ಮಳೆಯಿಂದ ಸಂತ್ರಸ್ತರಾದ ಬಡ ಕುಟುಂಬಗಳಿಗೆ ಅಕ್ಕಿ ವಿತರಣೆ ಸೇರಿದಂತೆ ವಿವಿಧ ಸೇವಾ ಕಾರ್ಯಗಳು ನಡೆದವು.

Advertisement

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಅನಂತಕುಮಾರ್‌ ಸೇರಿದಂತೆ ಪಕ್ಷದ ಶಾಸಕರು, ವಿವಿಧ ಮೋರ್ಚಾ ಪದಾಧಿಕಾರಿಗಳು, ಮುಖಂಡರು ಸೇರಿದಂತೆ ಸಾವಿರಾರು ಕಾರ್ಯಕರ್ತರು  ಪಾಲ್ಗೊಂಡಿದ್ದರು. ಆಯಾ ಜಿಲ್ಲೆಗಳಲ್ಲಿ ಪಕ್ಷದ ಅಧ್ಯಕ್ಷರು, ಪದಾಧಿಕಾರಿಗಳು ನೇತೃತ್ವ ವಹಿಸಿದ್ದರು.
ಕೋಲಾರ ಜಿಲ್ಲೆ ಶ್ರೀನಿವಾಸಪುರ, ಬಾಗೇಪಲ್ಲಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಯಲಹಂಕ,  ತಿ.ನರಸೀಪುರ, ಹೊಳೆನರಸೀಪುರಗಳಲ್ಲಿ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೋಲಾರ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.

ತುಮಕೂರು ಜಿಲ್ಲೆ  ಕೊರಟಗೆರೆ, ಹಾಸನದ ಹೊಳೆನರಸೀಪುರ, ದೇವನಹಳ್ಳಿ, ಬಂಗಾರಪೇಟೆಗಳಲ್ಲಿನ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಬ್ರೆಡ್‌ ಮತ್ತು ಹಣ್ಣನ್ನು ವಿತರಿಸಲಾಯಿತು.

ಚಾಮರಾಜನಗರದ ಮಹದೇಶ್ವರ ಬಡಾವಣೆಯ ಮಕ್ಕಳಿಗೆ ಉಚಿತವಾಗಿ ಶಾಲಾ ಬ್ಯಾಗ್‌ಗಳನ್ನು ವಿತರಿಸಲಾಯಿತು. ತಿ.ನರಸೀಪುರ ಖಾಸಗಿ ಬಸ್‌ ನಿಲ್ದಾಣ ವೃತ್ತದಲ್ಲಿ ಮೋದಿಗೆ ಯುವಮೋರ್ಚಾದಿಂದ ಶುಭ ಕೋರುವ ಸಹಿ ಅಭಿಯಾನ ನಡೆಸಲಾಯಿತು. ರಾಮನಗರದ ಅಂಬೇಡ್ಕರ್‌ ಕಾಲೋನಿಯಲ್ಲಿ 15ಕ್ಕೂ ಹೆಚ್ಚು ಪೌರ ಕಾರ್ಮಿಕ ಕುಟುಂಬಗಳಿಗೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಕುಕ್ಕರ್‌ಗಳನ್ನು ವಿತರಿಸಿದರು.

ವ್ಯಾಪಾರಸ್ಥರಿಗೆ ಕೊಡೆ ವಿತರಣೆ:
ಮೋದಿ ಅವರ 67ನೇ ಜನ್ಮದಿನವನ್ನು ಕುಷ್ಟಗಿಯ ನರೇಂದ್ರ ಮೋದಿ ಅಭಿಮಾನಿ ಬಳಗದವರು ಬೀದಿ ಬದಿ ವ್ಯಾಪಾರಸ್ಥರಿಗೆ ಕೊಡೆಗಳನ್ನು ಕೊಡುಗೆಯಾಗಿ ನೀಡುವುದರ ಮೂಲಕ ಆಚರಿಸಿದರು. ಬೀದಿ ಬದಿ ವ್ಯಾಪಾರಸ್ಥರು, ಬಿಸಿಲು-ಮಳೆಯೆನ್ನದೆ ವ್ಯಾಪಾರದಲ್ಲಿ ನಿರತರಾಗಿರುತ್ತಾರೆ. ಹೀಗಾಗಿ, ಅವರಿಗೆ ಕೊಡೆಗಳನ್ನು ನೀಡುತ್ತಿರುವುದಾಗಿ ನರೇಂದ್ರ ಮೋ ದಿ ಅಭಿಮಾನಿ ಬಳಗದ ದೊಡ್ಡಪ್ಪ ಸುಂಕದ ಹೇಳಿದರು.

Advertisement

ನಿವೃತ್ತ ಯೋಧರಿಗೆ ಸನ್ಮಾನ
ಗಂಗಾವತಿ
: ಬಿಜೆಪಿ ಯುವ ಮುಖಂಡ ಎಚ್‌.ಆರ್‌.ಚನ್ನಕೇಶವ ಅಭಿಮಾನಿಗಳ ಸಂಘದ ಆಶ್ರಯದಲ್ಲಿ ಮೋದಿಯವರ 67ನೇ ಜನ್ಮದಿನವನ್ನು ನಿವೃತ್ತ ಸೈನಿಕರನ್ನು ಸನ್ಮಾನಿಸುವ ಮೂಲಕ ಆಚರಿಸಲಾಯಿತು ನಿವೃತ್ತ ಸೈನಿಕರಾದ ಹುಸೇನಸಾಬ, ವೆಂಕಟೇಶ, ಕಿಶನ್‌, ರವಿ, ಫಕೀರಪ್ಪ ಹಾಗೂ ಪ್ರಗತಿಪರ ರೈತ ಶೇಷರಾವ್‌ ಗೂಗಿ ಬಂಡಿಕ್ಯಾಂಪ್‌ ಇವರನ್ನು ಸನ್ಮಾನಿಸಲಾಯಿತು. ಬಳಿಕ, ಸರಕಾರಿ ಆಸ್ಪತೆಯಲ್ಲಿ ರೋಗಿಗಳಿಗೆ ಹಾಲು, ಹಣ್ಣು, ಬ್ರೇಡ್‌ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next