Advertisement

ಪ್ರಧಾನಿ ಮೋದಿ ಮೇಲಿಂದ ಮೇಲೆ ರಾಜ್ಯಕ್ಕೆ ಸೈಕಲ್ ತುಳಿಯುತ್ತಿದ್ದಾರೆ : ಸಿದ್ದರಾಮಯ್ಯ

04:23 PM Jan 18, 2023 | Team Udayavani |

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬಂದಿರುವ ಕಾರಣದಿಂದ ಪ್ರಧಾನಿ ಮೋದಿಯವರಿಗೆ ಸಂಪ್ರದಾಯದಂತೆ ಕರ್ನಾಟಕ ನೆನಪಾಗಿದೆ. ಹೀಗಾಗಿ ಮೇಲಿಂದ ಮೇಲೆ ರಾಜ್ಯಕ್ಕೆ ಸೈಕಲ್ ತುಳಿಯುತ್ತಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ.

Advertisement

ಮೋದಿಯವರು ರಾಜ್ಯದ ಕಡೆ ಮುಖ ಮಾಡುವ ವೇಳೆಗೆ ಬಿಜೆಪಿಯ ಸುಳ್ಳಿನ ಕಾರ್ಖಾನೆಯ ಕಾರ್ಮಿಕರು ಸುಳ್ಳುಗಳ ಉತ್ಪಾದನೆಯಲ್ಲಿ ಬಿರುಸಾಗಿದ್ದಾರೆ‌ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.

ದೇಶದ ಆರ್ಥಿಕತೆ ಕುಸಿದಿರುವುದು, ಹಣದುಬ್ಬರ ಸೇರಿದಂತೆ ಪ್ರಧಾನಿ ಮೋದಿ ಅವರು ಆಡಳಿತಾತ್ಮಕವಾಗಿ ದೇಶವನ್ನು ಸೋಲಿಸಿದ್ದಾರೆ. ದೇಶದ ಜನ ಎರಡು ಬಾರಿ ಕೊಟ್ಟ ಬಹುಮತಕ್ಕೆ ಅನ್ಯಾಯ, ಅವಮಾನ ಮಾಡಿರುವ ಕೇಂದ್ರ ಸರ್ಕಾರ ತಮಗೆ ಮತ ಹಾಕಿದವರ ಬದುಕನ್ನೂ ಹೈರಾಣ ಮಾಡಿಟ್ಟು ಕೇವಲ ಸುಳ್ಳಿನ ಕಾರ್ಖಾನೆಯಲ್ಲಿ ಉತ್ಪಾದಿಸುವ ಸುಳ್ಳಿನ ಆಧಾರದಲ್ಲಿ ತನ್ನ ಸಂಪ್ರದಾಯದಂತೆ ಜನರನ್ನು ಬಕ್ರಾ ಮಾಡಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ.

ದೇಶದ ವಿದೇಶಿ ಸಾಲ 2013-14ರಲ್ಲಿ 409.4 ಬಿಲಿಯನ್ ಡಾಲರುಗಳಷ್ಟಿತ್ತು. 2014ರ ಮೇನಲ್ಲಿ ರೂಪಾಯಿ ಮೌಲ್ಯ ಡಾಲರ್ ಎದುರು 58 ರೂಪಾಯಿಗಳಷ್ಟಿತ್ತು. ಹಾಗಾಗಿ ಅಂದು 23.74 ಲಕ್ಷ ಕೋಟಿಗಳಷ್ಟು ವಿದೇಶಿ ಸಾಲ ಇತ್ತು.2022ರ ಜೂನ್‌ನಲ್ಲಿ ಆರ್‌ಬಿಐ ಪ್ರಕಟಿಸಿರುವಂತೆ ಭಾರತದ ವಿದೇಶಿ ಸಾಲ 619 ಬಿಲಿಯನ್ ಡಾಲರುಗೆ ಏರಿದೆ. ಈಗ ರೂಪಾಯಿಯ ಬೆಲೆ 82 ರೂ. ಆಗಿದೆ. ಆದ್ದರಿಂದ ಈಗ ವಿದೇಶಿ ಸಾಲ 50.76 ಲಕ್ಷ ಕೋಟಿಗೆ ಏರಿಕೆಯಾಗಿದೆ. ಕಳೆದ 8 ವರ್ಷಗಳಲ್ಲಿ ಮೋದಿ ಸರ್ಕಾರ ಹೊರ ದೇಶಗಳಲ್ಲಿ ಮಾಡಿದ ಸಾಲ 27 ಲಕ್ಷ ಕೋಟಿ ರೂಪಾಯಿಗಳು. ಆದರೆ, ಸುಳ್ಳಿನ ಕಾರ್ಖಾನೆಯಲ್ಲಿ, “ಮೋದಿಯವರು ದೇಶದ ಸಾಲ ತೀರಿಸಿದ್ದಾರೆ” ಎಂದು ಭಜನೆ ಮಾಡುತ್ತಿದ್ದಾರೆ. ಸತ್ಯ ಏನೆಂದರೆ ಮೋದಿಯವರು ಸಾಲ ತೀರಿಸಿಲ್ಲ ಬದಲಾಗಿ ಹಿಮಾಲಯದಂತೆ ಬೆಳೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮೋದಿ ಸರ್ಕಾರ ರಾಜ್ಯಗಳನ್ನೂ ಸಾಲಕ್ಕೆ ಸಿಕ್ಕಿಸಿದೆ. 2014ರಲ್ಲಿ ದೇಶದ ಎಲ್ಲ ರಾಜ್ಯಗಳ ಸಾಲ 24.71 ಲಕ್ಷ ಕೋಟಿಗಳಷ್ಟಿತ್ತು. ಈಗ 80 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ.ದೇಶದ 18500 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕೊಡುವುದಕ್ಕಾಗಿ ಮೋದಿಯವರು ಪೆಟ್ರೋಲ್, ಡೀಸೆಲ್ ಮೇಲೆ ತೆರಿಗೆ ಹಾಕಿದರು ಎನ್ನುವ ಭಯಾನಕ ಸುಳ್ಳನ್ನು ಮತ್ತೆ ಹೇಳುತ್ತಿದ್ದಾರೆ. ಸತ್ಯ ಏನೆಂದರೆ ದೇಶದ 6.69 ಲಕ್ಷ ಹಳ್ಳಿಗಳಲ್ಲಿ ಮೋದಿಯವರು 2014 ರಲ್ಲಿ ಅಧಿಕಾರ ವಹಿಸಿಕೊಳ್ಳುವ ವೇಳೆಗಾಗಲೇ 650548 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿತ್ತು. ಉಳಿದಿದ್ದ ಗ್ರಾಮಗಳ ಸಂಖ್ಯೆ ಮೋದಿ ಸರ್ಕಾರವೆ ಹೇಳಿರುವ ಹಾಗೆ 18452 ಮಾತ್ರ. ಮನಮೋಹನಸಿಂಗರ ಯುಪಿಎ ಸರ್ಕಾರ ಸುಮಾರು 1.8 ಲಕ್ಷ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿತ್ತು ಎಂದು ಹೇಳಿಕೊಂಡಿದ್ದಾರೆ.

Advertisement

ಭಾರತದ ಚರಿತ್ರೆಯಲ್ಲೇ ಮೊಸರು, ಮಜ್ಜಿಗೆ, ಹಾಲು, ಲಸ್ಸಿ, ಗೋಧಿ, ಬಾರ್ಲಿ, ಬೆಲ್ಲ, ಜೇನು ತುಪ್ಪ, ಮಕ್ಕಳ ಪೆನ್ನು, ಪುಸ್ತಕ, ಪೆನ್ಸಿಲ್ಲುಗಳಿಗೆ ತೆರಿಗೆ ಹಾಕಿದ ಉದಾಹರಣೆಗಳಿಲ್ಲ. ಆದರೆ ಮೋದಿ ಸರ್ಕಾರ ಇವಕ್ಕೆಲ್ಲಾ 5% ರಿಂದ 18% ತೆರಿಗೆ ಹಾಕಿದೆ. ಮತ್ತೊಂದು ಕಡೆ ಅಂಬಾನಿ ಅದಾನಿ ಮುಂತಾದ ಕಾರ್ಪೊರೇಟ್ ಬಂಡವಾಳಿಗರ ಮೇಲಿನ ತೆರಿಗೆಯನ್ನು ಮೋದಿ ಇಳಿಸಿದ್ದಾರೆ. ಮನಮೋಹನಸಿಂಗರು ಶೇ.30 ರಷ್ಟು ತೆರಿಗೆಯನ್ನು ದೊಡ್ಡ ದೊಡ್ಡ ಬಂಡವಾಳಿಗರ ಮೇಲೆ ಹಾಕುತ್ತಿದ್ದರು. ಮೋದಿಯವರು ಅದನ್ನು ಶೇ.22 ಕ್ಕೆ ಇಳಿಸಿದರು. ಆರ್‌ಬಿಐ ಮುಖ್ಯಸ್ಥರಾಗಿದ್ದ ವಿ.ರಂಗನಾಥನ್ ಅವರು ಹೇಳಿದಂತೆೆ ನಮ್ಮ ಒಟ್ಟು ಜಿಡಿಪಿಯಲ್ಲಿ ಮನಮೋಹನಸಿಂಗರ ಕಾಲದಲ್ಲಿ 3.34%ರಷ್ಟು ಕಾರ್ಪೊರೇಟ್ ತೆರಿಗೆ ವಸೂಲಾಗುತ್ತಿತ್ತು. ಮೋದಿಯವರ ಕಾಲದಲ್ಲಿ ಈ ಪ್ರಮಾಣ 2.3%ಗೆ ಕುಸಿದಿದೆ. 1.04% ಕಡಿಮೆಯಾಗಿದೆ ಎಂದಿದ್ದಾರೆ.

ಮನಮೋಹನಸಿಂಗರ ಕಾಲದಲ್ಲಿ 100ರೂ ತೆರಿಗೆಯಲ್ಲಿ ಜನತೆ 27ರೂ ಕಟ್ಟುತ್ತಿದ್ದರು. ಬಂಡವಾಳಿಗರು 73ರೂ ವರೆಗೆ ತೆರಿಗೆ ಪಾವತಿಸುತ್ತಿದ್ದರು. ಮೋದಿಯವರ ಕಾಲದಲ್ಲಿ ಜನತೆ 51ರೂ ಕಟ್ಟುತ್ತಿದ್ದಾರೆ. ಕಾರ್ಪೊರೇಟ್ ಬಂಡವಾಳಿಗರು 49 ರೂಪಾಯಿ ಕಟ್ಟುತ್ತಿದ್ದಾರೆ.

ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ
2013-14ರಲ್ಲಿ ಮನಮೋಹನಸಿಂಗರ ಸರ್ಕಾರ ವರ್ಷಕ್ಕೆ 5245 ಕೋಟಿ ರೂಗಳಷ್ಟು ಟೋಲ್ ಸಂಗ್ರಹಿಸುತ್ತಿತ್ತು. ಈ ವರ್ಷ 2022 ರಲ್ಲಿ ಮೋದಿ ಸರ್ಕಾರ ವಸೂಲಿ ಮಾಡಿರುವುದು 40000 ಕೋಟಿ.

ರೈಲ್ವೆ ಪ್ಲಾಟ್‌ಫಾರಂ ಟಿಕೆಟ್ ಬೆಲೆ
ಜನರ ಸುಲಿಗೆಯನ್ನೇ ಮಂತ್ರ ಮಾಡಿಕೊಂಡಿರುವ ಕೇಂದ್ರ ಸರ್ಕಾರ ರೈಲ್ವೇ ಪ್ಲಾಟ್ ಫಾರಂ ಟಿಕೆಟ್ ಬೆಲೆಯನ್ನು 5 ರೂನಿಂದ ಈಗ 20 ರೂನಿಂದ 50ರೂವರೆಗೂ ಹೆಚ್ಚಿಸಿದ್ದಾರೆ. ಪ್ರಯಾಣಿಕರ ಟಿಕೆಟ್ ದರ ದುಬಾರಿ ಆಗುತ್ತಲೇ ಇದೆ.

ಚೀನ ವಶವಾದ ಭಾರತದ ಮಾರುಕಟ್ಟೆ
ಮೋದಿಯವರು ಚೀನಾಕ್ಕೆ ಮಣ್ಣು ಮುಕ್ಕಿಸಿದರು ಎಂದು ಭಕ್ತಮಹಾ ಮಂಡಳಿ ಸುಳ್ಳು ಹಂಚುತ್ತಿದೆ. 2022 ರಲ್ಲಿ ಚೀನ ಜೊತೆಗೆ ಭಾರತ 135.98 ಬಿಲಿಯನ್ ಡಾಲರುಗಳಷ್ಟು ಪ್ರಮಾಣದ ವ್ಯಾಪಾರ ಮಾಡಿದೆ [11.16 ಲಕ್ಷ ಕೋಟಿಗಳಷ್ಟು] ಇದರಲ್ಲಿ ಆಮದು 100 ಬಿಲಿಯನ್ ಡಾಲರುಗಳಿಗೂ ಹೆಚ್ಚು.ದೆ. ರಫ್ತು ಪ್ರಮಾಣ ಕೇವಲ 35 ಬಿಲಿಯನ್ ಡಾಲರುಗಳಿಗೂ ಕಡಿಮೆ. ದೂರದೃಷ್ಟಿ ಇಲ್ಲದ ಮೋದಿ ಸರ್ಕಾರ ಭಾರತೀಯರ ದುಡಿಮೆಯ ಬಹುಭಾಗವನ್ನು ಚೀನಾಗೆ ಕೊಟ್ಟು ಆಮದು ಮಾಡಿಕೊಂಡರೆ ದೇಶ ಅಭಿವೃದ್ಧಿಯಾಗಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.

ದೇಶದ ಪರಿಸ್ಥಿತಿ ಕೆಟ್ಟಿರುವುದು ಇದಕ್ಕೇ! ; ಸಿದ್ದರಾಮಯ್ಯ ವಿವರ

1. ದೇಶ ಸಾಲದ ಸುಳಿಯಲ್ಲಿ ಸಿಲುಕಿ ಜನರ ಮೇಲೆ ವಿಪರೀತ ತೆರಿಗೆ ವಿಧಿಸಲಾಗುತ್ತಿದೆ. ಪೆಟ್ರೋಲ್–ಡೀಸೆಲ್ ಬೆಲೆಗಳು ಗಗನ ಮುಟ್ಟಿವೆ. ಇಷ್ಟಾದರೂ ದೇಶದ ಆದಾಯ ಹೆಚ್ಚುತ್ತಿಲ್ಲ.
2. 1960ರಲ್ಲಿ ದೇಶದ ತಲಾವಾರು ಜಿಡಿಪಿ 82 ಡಾಲರ್‌ಗಳಷ್ಟಿತ್ತು. 2014ರ ವೇಳೆಗೆ ಇದು 1574 ಡಾಲರ್‌ಗೆ ಏರಿಕೆಯಾಯಿತು. ವಿಶ್ವಬ್ಯಾಂಕಿನ ಅಂಕಿ ಅಂಶಗಳ ಪ್ರಕಾರ 2014ರಲ್ಲಿ ಭಾರತದ ತಲಾವಾರು ಜಿಡಿಪಿಯು [ಒಟ್ಟು ರಾಷ್ಟಿçÃಯ ಉತ್ಪನ್ನ ಮೌಲ್ಯ] 1560 ಡಾಲರುಗಳಿಷ್ಟಿತ್ತು. ಬಾಂಗ್ಲಾದೇಶದ ಜನರ ತಲಾವಾರು ಜಿಡಿಪಿಯು 1119 ಡಾಲರುಗಳಷ್ಟಿತ್ತು. ಭಾರತೀಯರ ತಲಾವಾರು ರಾಷ್ಟಿçÃಯ ಉತ್ಪನ್ನದ ಮೌಲ್ಯವು 441 ಡಾಲರುಗಳಷ್ಟು ಮುಂದೆ ಇತ್ತು.

3. 2021 ರಲ್ಲಿ ಭಾರತದ ತಲಾವಾರು ಜಿಡಿಪಿಯು 2277 ಡಾಲರುಗಷ್ಟಿದ್ದರೆ ಬಾಂಗ್ಲಾದೇಶಿಯರದ್ದು 2503 ಡಾಲರುಗಳಿಗೆ ಏರಿಕೆಯಾಗಿದೆ. ಮನಮೋಹನಸಿಂಗರ ಸರ್ಕಾರ ಇದ್ದಾಗ ನಮಗಿಂತ 441 ಡಾಲರುಗಳಷ್ಟು ಕಡಿಮೆ ಇದ್ದ ಬಾಂಗ್ಲಾದೇಶಿಯರ ಆದಾಯವು 2021ರ ವೇಳೆಗೆ ನಮಗಿಂತ 226 ಡಾಲರುಗಳಷ್ಟು ಮುಂದಕ್ಕೆ ಹೋಗಿದೆ.

4. 2014ರಲ್ಲಿ 7636 ಡಾಲರುಗಳಷ್ಟಿದ್ದ ಚೀನೀಯರ ಆದಾಯ 2021ರ ವೇಳೆಗೆ 12556 ಡಾಲರುಗಳಿಗೆ ತಲುಪಿ ಸುಮಾರು 5000 ಡಾಲರುಗಷ್ಟು ಏರಿಕೆಯಾಗಿತ್ತು. ಭಾರತೀಯರ ತಲಾವಾರು ಜಿಡಿಪಿ 7 ವರ್ಷಗಳಲ್ಲಿ ಹೆಚ್ಚಾಗಿದ್ದು ಕೇವಲ 717 ಡಾಲರು ಮಾತ್ರ. ಬಾಂಗ್ಲಾದವರದ್ದು 1384 ಡಾಲರುಗಳಷ್ಟು ಹೆಚ್ಚಾಗಿದೆ.

ಅಡುಗೆ ಗ್ಯಾಸ್ ಕತೆ
ಮನಮೋಹನಸಿಂಗ್ ಅವರು ಅಧಿಕಾರದಿಂದ ಇಳಿದಾಗ 14.2 ಕೆಜಿ ಅಡುಗೆ ಗ್ಯಾಸಿನ ಬೆಲೆ 414 ರೂಪಾಯಿ ಇದ್ದದ್ದು ಈಗ 1150 ರೂವರೆಗೆ ಮುಟ್ಟಿದೆ. ಬಡವರಿಗೆ ಉಚಿತ ಸಂಪರ್ಕಗಳನ್ನು ಕೊಟ್ಟಿದ್ದೇವೆಂದು ಹೇಳುತ್ತಾರೆ. ಸಂಪರ್ಕ ಪಡೆದವರು ರೀಫಿಲ್ ಮಾಡಿಸಲು ಹಣವಿಲ್ಲದೆ ಮತ್ತೆ ಸೌದೆ ಬಳಸಲು ಪ್ರಾರಂಭಿಸಿದ್ದಾರೆ.

ರಕ್ಷಣಾ ಇಲಾಖೆಯ ಬಜೆಟ್
ಮನಮೋಹನಸಿಂಗರು ಪ್ರಧಾನಿಯಾಗಿದ್ದಾಗ ನಮ್ಮ ಜಿಡಿಪಿಯ ಶೇ.3.3ರವರೆಗೆ ಮಿಲಿಟರಿಗೆ ಅನುದಾನ ಒದಗಿಸುತ್ತಿದ್ದರು. 10 ವರ್ಷಗಳ ಯುಪಿಎ ಆಡಳಿತದಲ್ಲಿ ಜಿಡಿಪಿಯಲ್ಲಿ ಸರಾಸರಿ ಶೇ2.7 ರಷ್ಟು ಅನುದಾನವನ್ನು ಮಿಲಿಟರಿಗೆಂದು ನೀಡುತ್ತಿದ್ದರು. ಮೋದಿಯವರು 2022-23 ರಲ್ಲಿ ಕೇವಲ ಶೇ.2 ರಷ್ಟು ಅನುದಾನವನ್ನು ಮಾತ್ರ ಮೀಸಲಿರಿಸಿದ್ದಾರೆ. ಮೋದಿಯವರ ಸಾಧನೆ ಏನೆಂದರೆ ಸೈನ್ಯದಲ್ಲೂ ಅಗ್ನಿಫಥ್ ಹೆಸರಿನಲ್ಲಿ ಗುತ್ತಿಗೆ ಕಾರ್ಮಿಕ ಪದ್ಧತಿ ಜಾರಿಗೆ ತಂದಿದ್ದು ಮಾತ್ರ.

ಮಾರಿದ್ದಷ್ಟೆ ಮೋದಿಯವರ ಸಾಧನೆ
ನೆಹರೂ ಅವರಿಂದ ಹಿಡಿದು ಪಿ.ವಿ ನರಸಿಂಹರಾವ್‌ವರೆಗೆ 145 ಬೃಹತ್ ಸರ್ಕಾರಿ ಕಂಪೆನಿ, ಉದ್ದಿಮೆಗಳನ್ನು ಸ್ಥಾಪಿಸಲಾಗಿತ್ತು. ಈ ಪ್ರಧಾನ ಮಂತ್ರಿಗಳು ಯಾರೂ ಸಹ ಒಂದೆ ಒಂದು ಕಂಪೆನಿಯನ್ನೂ ಮಾರಾಟ ಮಾಡಿರಲಿಲ್ಲ. ವಾಜಪೇಯಿಯವರು 17 ಕಂಪೆನಿಗಳನ್ನು ಸ್ಥಾಪಿಸಿ 7 ಕಂಪೆನಿಗಳನ್ನು ಮಾರಾಟ ಮಾಡಿದ್ದರು. ಯುಪಿಎ ಸರ್ಕಾರ 23 ಕಂಪೆನಿಗಳನ್ನು ಸ್ಥಾಪಿಸಿ 03 ಕಂಪೆನಿಗಳನ್ನು ಮಾರಾಟ ಮಾಡಿತ್ತು ಎಂದು ಹೇಳಿದ್ದಾರೆ.

ಮೋದಿಯವರು ಮಾತ್ರ ಒಂದೇ ಒಂದು ಕಂಪೆನಿಯನ್ನೂ ಸ್ಥಾಪಿಸದೆ, ಹಿಂದಿನವರು ಆರಂಭಿಸಿದ್ದ 23 ಕಂಪೆನಿಗಳನ್ನು ಮಾರಾಟ ಮಾಡಿದ್ದಾರೆ. ರಸ್ತೆ, ಬಂದರು, ವಿಮಾನ ನಿಲ್ದಾಣ, ಗ್ಯಾಸ್ ಪೈಪ್‌ಲೈನ್, ವಿದ್ಯುತ್ ಮುಂತಾದ ಎಲ್ಲವನ್ನೂ ಮಾರಾಟ ಮಾಡುತ್ತಿದ್ದಾರೆ.
ಜನರನ್ನು ಇನ್ನಿಲ್ಲದಂತೆ ದೋಚಿದ ಸಂಪನ್ಮೂಲಗಳೆಲ್ಲಿ? ಎಂದು ಪ್ರಶ್ನಿಸಿದ್ದಾರೆ.

ಮೋದಿಯವರ ಸರ್ಕಾರ 8 ವರ್ಷಗಳಲ್ಲಿ 14.5ಲಕ್ಷ ಕೋಟಿ ರೂಪಾಯಿಗಳಷ್ಟು ಕಾರ್ಪೊರೇಟ್‌ಗಳ ಸಾಲ ಮನ್ನಾ ಮಾಡಿದೆ. 2014-15 ರಿಂದ 2021-22ರವರೆಗೆ 66.5 ಲಕ್ಷ ಕೋಟಿಗಳಷ್ಟು ಎನ್‌ಪಿಎ ಆಗಿದೆ. ಬ್ಯಾಂಕುಗಳಿಗೆ ಟೋಪಿ ಹಾಕಿ ಓಡಿ ಹೋದವರಲ್ಲಿ ಗುಜರಾತಿಗಳೆ ಬಹಳ ಜನ ಇದ್ದಾರೆ. ಇತ್ತೀಚೆಗೆ ತಾನೆ ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ 34615 ಕೋಟಿ ರೂಗಳಷ್ಟು ಹಣವನ್ನು ಮುಳುಗಿಸಿತು. ಅದಾನಿಯ 72000 ಕೋಟಿಗೂ ಹೆಚ್ಚು ಸಾಲವನ್ನು ಮನ್ನಾ ಮಾಡಿದ್ದಾರೆಂದು ಬಿಜೆಪಿಯ ಸುಬ್ರಮಣಿಯನ್ ಸ್ವಾಮಿಯವರೆ ಹೇಳುತ್ತಿದ್ದಾರೆ.
ಶ್ರೀಮಂತರ ಸಂಪತ್ತನ್ನು ಹೆಚ್ಚಿಸಲು ಬಡವರ ರಕ್ತ ಹೀರುತ್ತಿದ್ದಾರೆ ಎಂದು ಹಲವು ವಿಚಾರಗಳನ್ನು ಪತ್ರಿಕಾ ಹೇಳಿಕೆಯಲ್ಲಿ ಸಿದ್ದರಾಮಯ್ಯ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next