ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಗುರುವಾರ 36ನೇ ರಾಷ್ಟ್ರೀಯ ಕ್ರೀಡಾ ಕೂಟವನ್ನು ಉದ್ಘಾಟಿಸಿದರು. ಅಹ್ಮದಾಬಾದ್‌ನ “ನರೇಂದ್ರ ಮೋದಿ ಸ್ಟೇಡಿಯಂ’ನಲ್ಲಿ ಈ ಭವ್ಯ ಸಮಾರಂಭ ನೆರವೇರಿತು.
ನಾನು ಎಲ್ಲಾ ಆಟಗಾರರಿಗೆ ಒಂದು ಮಂತ್ರವನ್ನು ನೀಡಲು ಬಯಸುತ್ತೇನೆ. ನೀವು ಸ್ಪರ್ಧೆಯಲ್ಲಿ ಗೆಲ್ಲಲು ಬಯಸಿದರೆ, ನೀವು ಬದ್ಧತೆ ಮತ್ತು ನಿರಂತರತೆಯಿಂದ ಬದುಕಲು ಕಲಿಯಬೇಕು. ಕ್ರೀಡೆಯಲ್ಲಿ ಸೋಲು ಮತ್ತು ಗೆಲುವನ್ನು ಕೊನೆಯದಾಗಿ ಪರಿಗಣಿಸಬಾರದು.ಈ ಕ್ರೀಡಾ ಮನೋಭಾವ ನಿಮ್ಮ ಜೀವನದ ಭಾಗವಾಗಬೇಕು ಎಂದು ಪ್ರಧಾನಿ ಹೇಳಿದರು.
ಇಂದು ನಮ್ಮ ಯುವಕರು ಪ್ರತಿಯೊಂದು ಕ್ರೀಡೆಯಲ್ಲಿ ಹೊಸ ದಾಖಲೆಗಳನ್ನು ಮಾಡುತ್ತಿದ್ದಾರೆ ಮತ್ತು ತಮ್ಮದೇ ಆದ ದಾಖಲೆಗಳನ್ನು ಸಹ ಮುರಿಯುತ್ತಿದ್ದಾರೆ. ಟೋಕ್ಯೊದ ಒಲಿಂಪಿಕ್ಸ್‌ನಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಿದೆ ಎಂದರು.
8 ವರ್ಷಗಳ ಹಿಂದೆ ಭಾರತದ ಆಟಗಾರರು 100ಕ್ಕೂ ಕಡಿಮೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸುತ್ತಿದ್ದರು.ಈಗ ಭಾರತದ ಆಟಗಾರರು 300ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.
ಅಹ್ಮದಾಬಾದ್ ಜತೆಗೆ ಸೂರತ್, ವಡೋದರ, ಗಾಂಧಿನಗರ, ರಾಜ್‌ಕೋಟ್, ಭಾವನಗರದಲ್ಲಿ ಸ್ಪರ್ಧೆಗಳು ನಡೆಯಲಿವೆ. ಸೈಕ್ಲಿಂಗ್ ಸ್ಪರ್ಧೆ ಹೊಸದಿಲ್ಲಿಯಲ್ಲಿ ನಡೆಯುತ್ತದೆ. 7 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು 36 ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.
7 ವರ್ಷಗಳ ಬಳಿಕ ಈ ಕ್ರೀಡಾಕೂಟ ನಡೆಯುತ್ತಿದೆ. 2015ರಲ್ಲಿ ಕೊನೆಯ ಸಲ ಕೇರಳದಲ್ಲಿ ಏರ್ಪಟ್ಟಿತ್ತು. ಕೋವಿಡ್ ಕಾರಣ 2020ರ ಗೋವಾ ಕ್ರೀಡಾಕೂಟವನ್ನು ರದ್ದುಗೊಳಿಸಲಾಗಿತ್ತು.
ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಒಲಿಂಪಿಯನ್ಸ್ ನೀರಜ್ ಚೋಪ್ರಾ, ಪಿ.ವಿ. ಸಿಂಧು, ರವಿ ಕುಮಾರ್ ದಹಿಯಾ ಮೊದಲಾದವರು ಪಾಲ್ಗೊಂಡರು.