Advertisement

ಚುನಾವಣಾ ಕೇಂದ್ರಿತ ಲೆಕ್ಕಾಚಾರಗಳಿಂದ ಅಭಿವೃದ್ಧಿಗೆ ಹಿನ್ನಡೆ: ಪ್ರಧಾನಿ ಮೋದಿ

10:17 PM Sep 20, 2022 | Team Udayavani |

ಗಾಂಧಿನಗರ: ಕೇವಲ ಚುನಾವಣೆ ಗೆಲ್ಲುವುದನ್ನು ಆದ್ಯತೆಯಾಗಿಟ್ಟುಕೊಳ್ಳಬೇಡಿ, ಚುನಾವಣಾ ಕೇಂದ್ರಿತ ಲೆಕ್ಕಾಚಾರಗಳಿಂದ ಅಭಿವೃದ್ಧಿ ಕುಂಠಿತವಾಗುತ್ತದೆ…ಇದು ಪ್ರಧಾನಿ ನರೇಂದ್ರ ಮೋದಿ ಆಡಿರುವ ಮಾತುಗಳು.

Advertisement

ಬಿಜೆಪಿ ವತಿಯಿಂದ ಗುಜರಾತ್‌ನ ಗಾಂಧಿನಗರದಲ್ಲಿ ಸೆ. 20-21ರಂದು ಆಯೋಜಿಸಲಾದ ಬಿಜೆಪಿ ಆಡಳಿತದ ಮಹಾನಗರ ಪಾಲಿಕೆಯ ಮೇಯರ್‌, ಉಪ ಮೇಯರ್‌ ಸಮ್ಮೇಳನವನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ. ಇದರಲ್ಲಿ ಒಟ್ಟು 18 ರಾಜ್ಯಗಳು-ಕೇಂದ್ರಾಡಳಿತ ಪ್ರದೇಶಗಳ 118 ಮೇಯರ್‌ಗಳು, ಉಪಮೇಯರ್‌ಗಳು ಪಾಲ್ಗೊಂಡಿದ್ದರು.

ಕೆಲವೊಂದು ನಿರ್ಧಾರದಿಂದ ನಗರಗಳನ್ನು ಚೆನ್ನಾಗಿ ಮಾಡಲು ಸಾಧ್ಯವಾಗುತ್ತದೆ. ಆದರೂ ಚುನಾವಣೆಯಲ್ಲಿ ಸೋಲಬಹುದೆನ್ನುವ ಭೀತಿಯಿಂದ ಆ ನಿರ್ಧಾರ ಕೈಗೊಳ್ಳದೇ ಹಿಂದೆ ಸರಿಯಲಾಗುತ್ತದೆ. ಇಂತಹ ಲೆಕ್ಕಾಚಾರಗಳನ್ನು ನಾವು ಬಿಡಬೇಕು. ಕೇವಲ ಪತ್ರಿಕೆಗಳಲ್ಲಿ ಸುದ್ದಿಯಾದ ತಕ್ಷಣ ಯಾವುದೇ ಸಾಧನೆಯಾಗುವುದಿಲ್ಲ, ನೇರವಾಗಿ ಜನರೊಂದಿಗೆ ಕುಳಿತು ನಿಮಗೆ ಯೋಜನೆಗಳ ಫ‌ಲ ಸಿಕ್ಕಿದೆಯಾ ಎಂದು ಪರಿಶೀಲಿಸಬೇಕು ಎಂದು ಮೋದಿ ಹೇಳಿದರು.

ಬೀದಿಬದಿ ವ್ಯಾಪಾರಿಗಳಿಗೆ ತರಬೇತಿ ನೀಡಿ ಪ್ರಧಾನಿ ಸ್ವನಿಧಿ ಯೋಜನೆಯಡಿ ಸಾಲ ಪಡೆಯಲು ನೆರವಾಗಬೇಕು. ಉಪಗ್ರಹ ಆಧಾರಿತ ನಗರಗಳು, 2, 3ನೇ ಹಂತದ ನಗರಗಳನ್ನು ಬೆಳೆಸಿ, ಬೃಹತ್‌ ನಗರಗಳ ಮೇಲಿನ ಒತ್ತಡ ಕಡಿಮೆ ಮಾಡಲು ಯತ್ನಿಸಿ ಎಂದೂ ಮೇಯರ್‌ಗಳಿಗೆ ಕಿವಿಮಾತು ಹೇಳಿದರು. ಪ್ರಸ್ತುತ ಕೇಂದ್ರ ಸರ್ಕಾರದ ನೆರವಿನಿಂದ 100 ಸ್ಮಾರ್ಟ್‌ ಸಿಟಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈಗಾಗಲೇ 75,000 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ನಗರ ಭಾಗಗಳಲ್ಲಿ ಬಡವರಿಗಾಗಿ ಕೇಂದ್ರದಿಂದ 1.25 ಕೋಟಿ ಮನೆಗಳನ್ನು ನೀಡಲಾಗಿದೆ. ಗೃಹ ಯೋಜನೆಗಳಿಗೆ 2014ಕ್ಕೂ ಮೊದಲು 20 ಸಾವಿರ ಕೋಟಿ ರೂ. ನೀಡಲಾಗುತ್ತಿತ್ತು. ಈಗದು 2 ಲಕ್ಷ ಕೋಟಿ ರೂ.ಗೇರಿದೆ ಎಂದು ಮೋದಿ ಹೇಳಿದ್ದಾರೆ.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next