Advertisement

ಪ್ರಾಥಮಿಕ ಶಾಲೆಯ ಎನ್‌ಇಪಿ ಪಠ್ಯ ಡಿಸೆಂಬರ್‌ಗೆ ಸಿದ್ಧ

12:32 AM Nov 20, 2022 | Team Udayavani |

ಮಂಗಳೂರು: ಪ್ರಾಥಮಿಕ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಸಂಬಂಧಿಸಿ ಎಲ್ಲ ಸಿದ್ಧತೆ ಕೈಗೊಳ್ಳಲಾಗುತ್ತಿದ್ದು, ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್‌ಸಿಎಫ್‌) ಆಧರಿಸಿ ರಾಜ್ಯದಲ್ಲಿಯೂ ಪಠ್ಯಕ್ರಮ ಚೌಕಟ್ಟು (ಕೆಸಿಎಫ್‌) ರಚಿಸಲಾಗಿದೆ. ಪಠ್ಯಕ್ರಮ ಹಾಗೂ ಪಠ್ಯಪುಸ್ತಕಗಳು ಡಿಸೆಂಬರ್‌ ವೇಳೆಗೆ ಸಿದ್ಧವಾಗಲಿವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಖಾತೆ ಸಚಿವ ಬಿ.ಸಿ. ನಾಗೇಶ್‌ ಹೇಳಿದರು.

Advertisement

ಕೇಶವ ಸ್ಮತಿ ಸಂವರ್ಧನ ಸಮಿತಿ ವತಿಯಿಂದ ನಗರದ ಸಂಘ ನಿಕೇತನ ದಲ್ಲಿ ಆಯೋಜಿಸಿರುವ ಎರಡು ದಿನಗಳ “ಕನ್ನಡ ಶಾಲಾ ಮಕ್ಕಳ ಹಬ್ಬ’ವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಎನ್‌ಇಪಿಯಲ್ಲಿ ಮಾತೃಭಾಷೆ ಯಲ್ಲಿಯೇ ಶಿಕ್ಷಣ ನೀಡುವ ಸಂಬಂಧ ಅಂತಿಮ ತೀರ್ಮಾನವಾಗಿದೆ. ಆಯಾಯ ಭಾಗದ ಸಂಸ್ಕೃತಿ, ವಿಚಾರ ಆಧಾರಿತವಾಗಿ ಕಲಿಕೆಗೆ ಪ್ರೋತ್ಸಾಹ ಸಿಗಲಿದೆ. ಮಂಗಳೂರು ಭಾಗದ ವಿದ್ಯಾರ್ಥಿಗಳಿಗೆ ಇಲ್ಲಿನ ಕನ್ನಡ, ಸಮುದ್ರ, ಪರಿಸರ ಸಂಬಂಧಿತ ವಿಚಾರದಲ್ಲಿ ಅಧ್ಯಯನಕ್ಕೆ ಎನ್‌ಇಪಿಯಲ್ಲಿ ಆದ್ಯತೆ ನೀಡಲಾಗುವುದು ಎಂದರು.

ಐಎಎಸ್‌/ಐಪಿಎಸ್‌ಗೆ
ಭಾಷೆ ಅಡ್ಡಿಯಿಲ್ಲ
ಯುಪಿಎಸ್‌ಸಿಯಲ್ಲಿ ದೇಶಕ್ಕೆ ಪ್ರಥಮ ರ್‍ಯಾಂಕ್‌ ವಿಜೇತೆ ಐಎಎಸ್‌ ಅಧಿಕಾರಿ ನಂದಿನಿ ಕೆ.ಆರ್‌. ಮಾತನಾಡಿ, ಮೊದಲು ನಮಗೆ ನಮ್ಮ ಭಾಷೆಯ ಮೇಲೆ ಅಭಿಮಾನ ಇರಬೇಕು. ಐಎಎಸ್‌ ಅಥವಾ ಐಪಿಎಸ್‌ಗೆ ಭಾಷೆ ಅಥವಾ ನಾವು ಕಲಿಯುವ ಮಾಧ್ಯಮ ಎಂದೂ ಅಡ್ಡಿಯಾಗದು. ನಮ್ಮಲ್ಲಿರುವ ಶಕ್ತಿ ಏನೆಂಬುದನ್ನು ಮೊದಲು ಅರಿತು ಕೀಳರಿಮೆ ತೊಡೆದುಹಾಕಬೇಕು ಎಂದರು.

ಕಸಾಪ ಅಧ್ಯಕ್ಷ ಮಹೇಶ್‌ ಜೋಶಿ ಮಾತನಾಡಿ, ಸರಕಾರಿ ಶಾಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ಸರಕಾರ ನೀಡ ಬೇಕು. ಕನ್ನಡ ಮಾಧ್ಯಮದಲ್ಲಿ ಕಲಿಯುವವರು ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು ಎಂದರು.
ಕೇಶವ ಸ್ಮೃತಿ ಸಂವರ್ಧನ ಸಮಿತಿ ಅಧ್ಯಕ್ಷ ಡಾ| ವಾಮನ ಶೆಣೈ, ಕನ್ನಡ ಶಾಲಾ ಮಕ್ಕಳ ಹಬ್ಬ ಸ್ವಾಗತ ಸಮಿತಿ ಉಪಾಧ್ಯಕ್ಷ ಡಾ| ಕೆ.ಸಿ. ನಾೖಕ್‌ ಉಪಸ್ಥಿತರಿದ್ದರು.

Advertisement

ಮಂಗಳೂರು ವಿ.ವಿ. ಅಧ್ಯಯನ ವಿಭಾಗ ಸಹಾಯಕ ಪ್ರಾಧ್ಯಾಪಕ ಡಾ| ಧನಂಜಯ ಕುಂಬ್ಳೆ ಆಶಯ ಭಾಷಣ ಮಾಡಿದರು. ಸ್ವಾಗತ ಸಮಿತಿ ಕಾರ್ಯದರ್ಶಿ ದೇವಿಪ್ರಸಾದ್‌ ಶೆಟ್ಟಿ ಸ್ವಾಗತಿಸಿದರು. ಸಹ ಕಾರ್ಯದರ್ಶಿ ರಮೇಶ್‌ ಕೆ. ವಂದಿಸಿದರು.

ಖಾಸಗಿಯವರಿಂದ ಕನ್ನಡ ಶಾಲೆ ಆಗಲಿ
ಅಧ್ಯಕ್ಷತೆ ವಹಿಸಿದ್ದ ಕನ್ನಡ ಶಾಲಾ ಮಕ್ಕಳ ಹಬ್ಬ ಸ್ವಾಗತ ಸಮಿತಿ ಅಧ್ಯಕ್ಷರು ಹಾಗೂ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ| ಎಂ. ಮೋಹನ ಆಳ್ವ ಮಾತನಾಡಿ, ಬೇಕಾದಷ್ಟು ಕನ್ನಡ ಶಾಲೆಗಳು ಹುಟ್ಟಿದ್ದರೂ ಅವುಗಳನ್ನು ಮೇಲ್ದರ್ಜೆಗೇರಿಸುವಲ್ಲಿ ನಾವು ಸೋತಿದ್ದೇವೆ. ಎಲ್ಲವನ್ನೂ ಸರಕಾರ ಮಾಡಲಿ ಎಂದು ಯೋಚಿಸುವ ಬದಲು ಸಿಬಿಎಸ್‌ಸಿ/ಆಂಗ್ಲಮಾಧ್ಯಮದ ಸ್ವರೂಪದಲ್ಲಿ ಆದರ್ಶಯುತ ಕನ್ನಡ ಶಾಲೆಗಳನ್ನು ಕಟ್ಟಲು ಖಾಸಗಿ ಪ್ರಮುಖರು ಮನಸ್ಸು ಮಾಡಬೇಕು. ಸರಕಾರ ಇದಕ್ಕೆ ಪ್ರೋತ್ಸಾಹ ನೀಡಬೇಕು. ಕನ್ನಡ ಶಾಲೆಗೆ ಸೋಲು ಆದರೆ ಅದು ನಮ್ಮ ಭಾಷೆ, ಸಂಸ್ಕೃತಿ, ಹಳ್ಳಿಯ ಸೋಲು ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಹಾಗಾಗಿ ಕನ್ನಡ ಶಾಲೆಗಳು ಎಂದೂ ಸೋಲದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next