ನಾಗಮಂಗಲ: ಪದವಿ ವಿದ್ಯಾರ್ಹತೆ ಮತ್ತು ಸೇವಾನುಭವ ಪಡೆದಿರುವ ಸೇವಾನಿರತ ಪ್ರಾಥಮಿಕ ಶಾಲಾ ಸಹ ಶಿಕ್ಷಕರನ್ನು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದಕ್ಕೆ ಪರಿಗಣಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ತಾಲೂಕು ಘಟಕದ ವತಿಯಿಂದ ಶನಿವಾರ ಬಿಇಒ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ತಾಲೂಕು ಘಟಕದ ಅಧ್ಯಕ್ಷ ಎನ್.ಜಿ.ಶ್ರೀನಿವಾಸಗೌಡ ಮಾತನಾಡಿ, 1ನೇ ತರಗತಿಯಿಂದ 7ನೇ ತರಗತಿವರೆಗೆ ನೇಮಕವಾದ ನಾವು 2005ರಲ್ಲಿ 8ನೇ ತರಗತಿ ಪ್ರಾರಂಭಿಸಿದಾಗಿನಿಂದಲೂ 6ರಿಂದ 8ನೇ ತರಗತಿಗಳ ಸೇವೆಯಲ್ಲಿರುವ ಪದವೀಧರ ಶಿಕ್ಷಕರು ಬೋಧಿಸುತ್ತಿದ್ದೇವೆ.
ರಾಜ್ಯದಲ್ಲಿ 82 ಸಾವಿರಕ್ಕಿಂತಲೂ ಅಧಿಕ ಪದವಿ ಪಡೆದ ಅಂದರೆ ಬಿ.ಎ, ಬಿ.ಎಸ್ಸಿ, ಎಂ.ಎ, ಎಂಎಸ್ಸಿ, ಬಿ ಇಡಿ, ಎಂ.ಇಡಿ ಪಡೆದ ಅನುಭವಿ ಶಿಕ್ಷಕರು 6ರಿಂದ 8ನೇ ತರಗತಿಗಳಿಗೆ ಕಳೆದ 14 ವರ್ಷಗಳಿಂದ ಬೋಧಿಸುತ್ತಿದ್ದಾರೆ. ಆದರೂ ಕೂಡ ಅವರನ್ನು ಮುಂಬಡ್ತಿಗೆ ಪರಿಗಣಿಸದೇ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಹುದ್ದೆಗಳನ್ನು 2 ಬಾರಿ ನೇಮಕ ಮಾಡಿ ಮತ್ತೆ 3ನೇ ಬಾರಿಗೆ ನೇಮಕಾತಿ ನಡೆಯುತ್ತಿದೆ. ಈ ಬಗ್ಗೆ ಇಲಾಖೆ ಮುಖ್ಯಸ್ಥರು ಮತ್ತು ಸಚಿವರಿಗೆ ಮನವರಿಕೆಯೂ ಮಾಡಲಾಗಿದೆ.
5ನೇ ಫೆಬ್ರವರಿ 2018ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ 25 ಸಾವಿರ ಸೇವಾನಿರತ ಪದವೀಧರ ಶಿಕ್ಷಕರು ಉಪವಾಸ ಸತ್ಯಾಗ್ರಹ ಮಾಡಿ ಸರ್ಕಾರವನ್ನು ವಿನಂತಿಸುವ ಮೂಲಕ ನ್ಯಾಯಕ್ಕಾಗಿ ಒತ್ತಾಯಿಸಿದ್ದೇವೆ. ಆದರೆ ಈವರೆಗೂ ನ್ಯಾಯ ಸಿಕ್ಕಿಲ್ಲ. ಆದ್ದರಿಂದ ನಾವು ಈ ಸಾಂಕೇತಿಕ ಧರಣಿ ಹಮ್ಮಿಕೊಂಡಿದ್ದೇವೆ ಎಂದರು.
ಒಟ್ಟಾರೆಸೇವೆಯಲ್ಲಿರುವ ಅರ್ಹ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಪ್ರಾಥಮಿಕ ಶಿಕ್ಷಕರು ಎಂದು ಪರಿಗಣಿಸಬೇಕು. ಇಲ್ಲವಾದಲ್ಲಿ ನಾವು ನಮ್ಮ ಹೊಸ ವೃಂದ ನಿಯಮಗಳಂತೆ 1-7-2019ರಿಂದ 1 ರಿಂದ 5 ನೇ ತರಗತಿಗಳಿಗೆ ಮಾತ್ರ ಬೋಧಿಸುತ್ತೇವೆ. 6ರಿಂದ 8ನೇ ತರಗತಿಗಳ ಬೋಧನೆ ಬಷ್ಕರಿಸುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಬಿ.ಎನ್.ರಮೇಶ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಅನೇಕ ಶಿಕ್ಷಕರು ಉಪಸ್ಥಿತರಿದ್ದರು.