ಮುಳಬಾಗಿಲು: ಸರ್ಕಾರಿ ಸ್ವತ್ತನ್ನು ಹಾಳು ಮಾಡಬಾರದು ಎಂದು ಸಮಾಜಕ್ಕೆ ಪಾಠ ಮಾಡುವ ಗುರುಗಳೇ, 13 ವರ್ಷಗಳ ಹಿಂದೆ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ಗುರುಭವನ ಅಥವಾ ಶಿಕ್ಷಕರ ವಸತಿ ಗೃಹ ಉದ್ಘಾಟನೆಯಾಗದೇ ಶಿಥಿಲಾವಸ್ತೆ ತಲುಪುತ್ತಿವೆ!.
ಅನೈತಿಕ ಚಟುವಟಿಕೆ: ತಾಲೂಕಿನ ಸರ್ಕಾರಿ ಪ್ರಾಥಮಿಕ-ಪ್ರೌಢ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ದೂರದ ಊರುಗಳಿಂದ ಓಡಾಡುವ ಸಮಸ್ಯೆ ತಪ್ಪಿಸಲು 2009-10ನೇ ಸಾಲಿನಲ್ಲಿ ಎನ್.ವಡ್ಡಹಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ವಸತಿ ಗೃಹ ಅಥವಾ ಗುರುಭವನವನ್ನು ನಿರ್ಮಿಸಲಾಗಿದೆ. ಆದರೆ, ಇದುವರೆಗೂ ಯಾವೊಬ್ಬ ಶಿಕ್ಷಕರೂ ವಾಸವಾಗದ್ದರಿಂದ ಪುಂಡ ಪೋಕರಿಗಳ ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದೆ.
ಮೂತ್ರ ವಿಸರ್ಜನೆ: ವಾಸಕ್ಕೆ ಬೇಕಾಗುವ ಎಲ್ಲಾ ಸೌಲಭ್ಯ ಕಟ್ಟಡದಲ್ಲಿದ್ದರೂ ಕಟ್ಟಡ ನಿರ್ಮಾಣವಾದ ಕಾಲದಿಂದ ಕನಿಷ್ಠ ಬಾಗಿಲನ್ನೇ ತೆರೆದಿಲ್ಲ. ಸುಮಾರು 13 ವರ್ಷದಿಂದ ಭೂತ ಬಂಗಲೆಯಂತೆ ಕಟ್ಟಡ ನಿಂತಿದೆ. ಕಟ್ಟಡದ ಎಲ್ಲಾ ಕಿಟಕಿಗಳ ಗಾಜುಗಳನ್ನು ಕಿಡಿಗೇಡಿಗಳು ಚೂರು ಮಾಡಿದ್ದಾರೆ.
ಸಂಪಿನ ಮುಚ್ಚಳ ಕದ್ದೊಯ್ದಿದ್ದಾರೆ: ಕಟ್ಟಡದ ಸುತ್ತ ಸ್ಥಳೀಯರು ಕಸ ಹಾಕಿದ್ದಾರೆ. ನೀರಿನ ಸಂಪಿನ ಮುಚ್ಚಳವನ್ನು ಕಳ್ಳರು ಕದ್ದೊಯ್ದಿದ್ದಾರೆ. ಕಟ್ಟಡದ ಪಕ್ಕದಲ್ಲೇ ಟೊಮೆಟೋ ಮಾರುಕಟ್ಟೆ ಇದ್ದು ಕಸವನ್ನು ಕಾಂಪೌಂಡ್‌ನ ಒಳಗೆ ಸುರಿದಿದ್ದಾರೆ. ಜನರ ಮೂತ್ರ ವಿಸರ್ಜನೆ ತಾಣವಾಗಿ ದುರ್ವಾಸನೆ ಬೀರುತ್ತಿದೆ.
Related Articles
ಕಟ್ಟಡದ 3 ಕಡೆ ಗಿಡ-ಗಂಟಿ: ಪ್ರೌಢ ಶಾಲೆಗೆ ಹೊಂದಿಕೊಂಡ ಭಾಗದಲ್ಲಿ ಮಾತ್ರ ಕಟ್ಟಡ ಸುಂದರವಾಗಿ ಕಾಣಲಿದ್ದು ಉಳಿದ 3ಕಡೆ ಗಿಡ-ಗಂಟಿ ಬೆಳೆದಿವೆ. ಕಬೋರ್ಡು, ಫ್ಯಾನ್‌ಗಳಲ್ಲಿ ಜೇಡರ ಹುಳು ಗೂಡುಗಳನ್ನು ಕಟ್ಟಿಕೊಂಡಿವೆ. ಈ ಕುರಿತು ಕಟ್ಟಡವನ್ನು ಸುಸ್ಥಿತಿಯಲ್ಲಿಡಲು ಇಲಾಖೆ ಮುಂದಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.
ವಾಸಿಸಲು ಶಿಕ್ಷಕರು ಬರುತ್ತಿಲ್ಲ: ಬಿಇಒ : ಈ ಕಟ್ಟಡಕ್ಕೆ ಸಂಬಂಧಿಸಿದ ಯಾವುದೇ ಕಡತ ನಮ್ಮ ಇಲಾಖೆಯಲ್ಲಿ ಇಲ್ಲ. ಆದರೆ, ಎನ್. ವಡ್ಡಹಳ್ಳಿಯಿಂದ ಕೇವಲ 6 ಕಿ.ಮೀ. ಅಂತರದಲ್ಲಿ ಮುಳಬಾಗಲು ನಗರ ಕೇಂದ್ರವಿದೆ. ಹೀಗಾಗಿ ವಡ್ಡಹಳ್ಳಿಯಲ್ಲಿರುವ ವಸತಿ ಗೃಹಗಳಲ್ಲಿ ವಾಸಿಸಲು ಶಿಕ್ಷಕರು ಯಾರೂ ಮುಂದೆ ಬರುತ್ತಿಲ್ಲ. ಅಲ್ಲದೇ, ಬೇರೆ ಜಿಲ್ಲೆಗಳಿಂದ ನೇಮಕವಾಗಿ ಬಂದಿರುವ ಶಿಕ್ಷಕರಾದರೂ ವಸತಿ ಗೃಹಗಳಲ್ಲಿ ವಾಸಿಸುವಂತೆ ಹೇಳಿದರೂ ಅವರೂ ವಾಸ ಮಾಡಲು ಮುಂದಾಗುತ್ತಿಲ್ಲ. ಆದ್ದರಿಂದ ಕಟ್ಟಡ ಖಾಲಿಯಾಗಿ ಉಳಿದುಕೊಂಡಿದ್ದು ಉದ್ಘಾಟನೆ ಭಾಗ್ಯವಿಲ್ಲದೇ, ಸರಿಯಾಗಿ ನಿರ್ವಹಣೆ ಇಲ್ಲದೇ ಶಿಥಿಲಾವಸ್ಥೆ ತಲುಪುತ್ತಿದೆ ಎಂದು ಬಿಇಒ ಗಂಗರಾಮಯ್ಯ ತಿಳಿಸಿದ್ದಾರೆ.
ಸರ್ಕಾರ ಶಿಕ್ಷಕರಿಗಾಗಿ ಉತ್ತಮ ಕಟ್ಟಡ ನಿರ್ಮಿಸಿದ್ದರೂ ಯಾರೂ ವಾಸ ಮಾಡುತ್ತಿಲ್ಲ. ಕೂಡಲೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಬಿಇಒ ಗಂಗರಾಮಯ್ಯ ಅವರು ಇತ್ತ ಕಡೆ ಗಮನಹರಿಸಬೇಕು. ● ಚಂದ್ರಶೇಖರ್, ಎನ್.ವಡ್ಡಹಳ್ಳಿ ಗ್ರಾಮಸ್ಥರು
-ಎಂ.ನಾಗರಾಜಯ್ಯ