ಕೊರಟಗೆರೆ: ಗ್ರಾಮೀಣ ಪ್ರದೇಶದ ಬಡ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಬೇಕಾಗಿದೆ. ಆ್ಯಂಬುಲೆನ್ಸ್, ಕುಡಿಯುವ ನೀರು, ಶೌಚಗೃಹ, ಸ್ವಚ್ಛತೆ ಮರೀಚಿಕೆಯಾಗಿದ್ದು, ಆರೋಗ್ಯ ಇಲಾಖೆ ನಿರ್ಲಕ್ಷ್ಯದಿಂದ ಸಾರ್ವಜನಿಕರು ಆಸ್ಪತ್ರೆಗೆ ಬರಲು 10 ಬಾರಿ ಯೋಚಿಸುವಂತಾಗಿದೆ.
ತುಮಕೂರು ನಗರಕ್ಕೆ ಸಮೀಪವಿರುವ ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ತೋವಿನಕೆರೆ ಗ್ರಾಪಂ ಕೇಂದ್ರಸ್ಥಾನದಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತುಮಕೂರು, ಮಧುಗಿರಿ, ಶಿರಾ ಮತ್ತು ಕೊರಟಗೆರೆ ವ್ಯಾಪ್ತಿಯ 50ಕ್ಕೂ ಹೆಚ್ಚು ಗ್ರಾಮದ 20 ಸಾವಿರಕ್ಕೂ ಅಧಿಕ ಜನ ಚಿಕಿತ್ಸೆಗೆ ಈ ಆಸ್ಪತ್ರೆಯನ್ನು ಅವಲಂಭಿಸಿದ್ದರೂ ಮೌಲಸೌಲಭ್ಯ ಮರೀಚಿಕೆಯಾಗಿದೆ.
ಕಟ್ಟಡವೂ ಶಿಥಿಲಾಸ್ಥೆ: ಬಡಜನರ ಚಿಕಿತ್ಸೆಗೆ 20 ವರ್ಷದ ಹಿಂದೆ ನಿರ್ಮಾಣವಾದ ಆಸ್ಪತ್ರೆಗೆ ಸುಣ್ಣಬಣ್ಣ ಬಳಿದು ಈಗಾಗಲೇ ಐದಾರು ವರ್ಷ ಕಳೆದಿದೆ. ಕಟ್ಟಡವೂ ಶಿಥಿಲಾಸ್ಥೆಗೆ ತಲುಪಿದೆ. ನೀರಿನ ಪೈಪ್‌ಗ್ಳು ಒಡೆದಿವೆ. ಶೌಚಗೃಹ ಸಂಪೂರ್ಣ ಹಾಳಾಗಿದೆ. ಗಂಟೆಗೊಮ್ಮೆ ಆ್ಯಂಬುಲೆನ್ಸ್ ಕೆಡುವುದರಿಂದ ರೋಗಿಗಳನ್ನು ಕರೆತರುವುದು ಸವಾಲಿನ ಕೆಲಸ. ಆಸ್ಪತ್ರೆ ಆವರಣದಲ್ಲಿ ಸೂಚನಾ ಫಲಕವೂ ಇಲ್ಲ. ಆಸ್ಪತ್ರೆ ಮುಂಭಾಗ 20ಕ್ಕೂ ಹೆಚ್ಚು ಚಿಲ್ಲರೆ ಅಂಗಡಿಗಳು ನಾಯಿ ಕೊಡೆಗಳಂತೆ ತಲೆ ಎತ್ತಿರುವುದು.
ಸ್ವಚ್ಛತೆಗೆ ತೊಡಕಾಗಿದೆ. ಚರಂಡಿಯು ದುರ್ವಾಸನೆ ಬೀರುತ್ತಿದೆ. ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ವಸತಿಗೃಹ ಶಿಥಿಲವಾಗಿ ವೈದ್ಯರ ಗೋಳು ಹೇಳತೀರದ್ದಾಗಿದೆ. ಅಲ್ಲದೇ ತುಮಕೂರು ಮತ್ತು ಕೊರಟಗೆರೆಗೆ ಕೆಲಸಕ್ಕೆ ತೆರಳುವವರ ವಾಹನ ಪಾರ್ಕಿಂಗ್ ಸ್ಥಳವಾಗಿ ಆಸ್ಪತ್ರೆ ಆವರಣ ಮಾರ್ಪಟ್ಟಿದೆ. ತೋವಿನಕೆರೆ ಹೃದಯ ಭಾಗದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಮೂಲಸೌಲಭ್ಯ ಕಲ್ಪಿಸಿ ಆಸ್ಪತ್ರೆ ಮುಂಭಾಗದ ಅಂಗಡಿ ತೆರವುಗೊಳಿಸುವ ಕೆಲಸ ಆರೋಗ್ಯ ಇಲಾಖೆ ತುರ್ತಾಗಿ ಮಾಡಬೇಕಿದೆ.
ಸ್ವಚ್ಛತೆ ಯಾರು ಮಾಡ್ತಾರೆ?: ಗ್ರಾಪಂ ಪರವಾನಗಿ ಪಡೆಯದೆ ರಾಜಕೀಯ ಧುರೀಣರ ಸಹಕಾರ ಮತ್ತು ಬೆಂಬಲದಿಂದ 20ಕ್ಕೂ ಹೆಚ್ಚು ಪೆಟ್ಟಿಗೆ ಅಂಗಡಿ ಆಸ್ಪತ್ರೆಗೆ ಮುಂಭಾಗ ತಲೆ ಎತ್ತಿವೆ. ಕಸಕಡ್ಡಿಯಿಂದ ಮುಚ್ಚಿರುವ ಚರಂಡಿ ಸ್ವಚ್ಛ ಮಾಡೋರು ಯಾರು ಎಂಬುದೇ ಯಕ್ಷಪ್ರಶ್ನೆಯಾಗಿದೆ. ಪಿಡಬ್ಲ್ಯುಡಿಯವರು ಸ್ವಚ್ಛತೆ ಮಾಡಿಲ್ಲ. ಗ್ರಾಪಂ ವ್ಯಾಪ್ತಿಗೆ ರಸ್ತೆ ಬರಲ್ಲ. ಹಾಗಾದರೆ ಸ್ವಚ್ಛತೆ ಯಾರು ಮಾಡುತ್ತಾರೆ ಎಂಬುದು ಗೊತ್ತಾಗದಾಗಿದೆ.
ಆರೋಗ್ಯ ಕೇಂದ್ರದ ಕಟ್ಟಡ ಶಿಥಿಲವಾಗಿ ವರ್ಷಗಳೇ ಕಳೆದಿದೆ. ಕುಡಿಯುವ ನೀರು, ಶೌಚಗೃಹ, ತುರ್ತುವಾಹನ ಇಲ್ಲ. ಪರವಾನಗಿ ಪಡೆಯದ ಅನಧಿಕೃತ ಅಂಗಡಿಗಳಿಂದ ಆಸ್ಪತ್ರೆ ಕಾಣೆಯಾಗಿ ರೋಗಿಗಳಿಗೆ ಸಮಸ್ಯೆ ಎದುರಾಗಿದೆ. ಇದಕ್ಕೆಲ್ಲ ಆರೋಗ್ಯ ಇಲಾಖೆ ನಿರ್ಲಕ್ಷ್ಯ ಕಾರಣವಾಗಿದೆ.
-ಆನಂದ್, ಸ್ಥಳೀಯ, ಕೊರಟಗೆರೆ
ಗ್ರಾಪಂನಿಂದ ಅನುಮತಿ ಪಡೆಯದೆ ಅನಧಿಕೃತವಾಗಿ ಆಸ್ಪತ್ರೆ ಮುಂಭಾಗ ಪೆಟ್ಟಿಗೆ ಅಂಗಡಿ ಇಡಲಾಗಿದೆ. ಕುಡಿಯುವ ನೀರು ಮತ್ತು ಚರಂಡಿ ಸ್ವಚ್ಛತೆಗೆ ತಕ್ಷಣ ಕ್ರಮ ಕೈಗೊಳ್ಳುತ್ತೇವೆ. ಆರೋಗ್ಯ ಇಲಾಖೆಯಿಂದ ಶೌಚಗೃಹ ನಿರ್ಮಿಸಲು ಅವಕಾಶವಿದೆ.
-ಸುನೀಲ್ ಕುಮಾರ್, ಪ್ರಭಾರ ಪಿಡಿಒ, ತೋವಿನಕೆರೆ
ತೋವಿನಕೆರೆ ಆಸ್ಪತ್ರೆ ಸಮಸ್ಯೆ ಬಗ್ಗೆ ತುಮಕೂರು ಪೊಲೀಸ್ ಇಲಾಖೆ ಮತ್ತು ಜಿಪಂಗೆ ದೂರು ನೀಡಿ ಪರವಾನಗಿ ಇಲ್ಲದ ಅಂಗಡಿ ಹಾಗೂ ಖಾಸಗಿ ವಾಹನಗಳ ಪಾರ್ಕಿಂಗ್ ತೆರವಿಗೆ ಕ್ರಮ ಕೈಗೊಳ್ಳುತ್ತೇನೆ. ಕುಡಿಯುವ ನೀರು, ಶೌಚಗೃಹ, ತುರ್ತುವಾಹನ ಮತ್ತು ಸ್ವಚ್ಛತೆ ಬಗ್ಗೆ ಖುದ್ದು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆ ಬಗೆಹರಿಸುತ್ತೇನೆ.
-ಡಾ.ಚಂದ್ರಿಕಾ, ಡಿಎಚ್‌ಒ, ತುಮಕೂರು