Advertisement

ಗಣೇಶೋತ್ಸವಕ್ಕೆ ಬೆಲೆ ಏರಿಕೆ ಬರೆ

11:56 AM Sep 10, 2021 | Team Udayavani |

ವರದಿ: ಬಸವರಾಜ ಹೂಗಾರ

Advertisement

ಹುಬ್ಬಳ್ಳಿ: ಹು-ಧಾ ಮಹಾನಗರದಲ್ಲಿ ಕಳೆಗಟ್ಟದ ಹಬ್ಬದ ಆಚರಣೆ, ಮಾರುಕಟ್ಟೆಗೆ ಬಾರದ ಜನ, ಎಲ್ಲಿ ನೋಡಿದರೂ ಬೆಲೆ ಏರಿಕೆ ಬರೆ… ಗಣೇಶೋತ್ಸವ ಎಂದರೆ ಎಲ್ಲರಿಗೂ ಎಲ್ಲಿಲ್ಲದ ಸಂಭ್ರಮ.ಆದರೆ ಕಳೆದವರ್ಷದಿಂದ ಎಲ್ಲ ಹಬ್ಬಗಳಿಗೂ ಗರ ಬಡೆದಿದ್ದು, ಅದರಲ್ಲಿ ಗಣೇಶೋತ್ಸವಕ್ಕೂ ಕೊರೊನಾ ಎಫೆಕ್ಟ್ ತಟ್ಟಿದೆ ಎಂದರೆ ತಪ್ಪಾಗಲಾರದು.

ಕೋವಿಡ್‌-19ರ ಮೊದಲು ಪ್ರತಿವರ್ಷ ಗಣೇಶೋತ್ಸವ ಆಚರಣೆಯ ಮುನ್ನಾ ದಿನ ಎಲ್ಲ ಮಾರುಕಟ್ಟೆಗಳಲ್ಲಿ ಜನ ಕಾಲಿಡಲು ಜಾಗವಿಲ್ಲದಷ್ಟು ಭರ್ತಿ ಆಗಿರುತ್ತಿತ್ತು. ಆದರೆ ಈ ವರ್ಷ ಅಂತಹ ಯಾವ ಲಕ್ಷಣಗಳು ಕಂಡು ಬರುತ್ತಿಲ್ಲ. ಇದು ವ್ಯಾಪಾರಿಗಳನ್ನು ನಿದ್ದೆಗೆಡುವಂತೆ ಮಾಡಿದೆ. ಲಕ್ಷಾಂತರ ರೂ.ಗಳ ಬಂಡವಾಳ ಹಾಕಿರುವ ವ್ಯಾಪಾರಿಗಳು ಚಿಂತಾಕ್ರಾಂತರಾಗಿದ್ದಾರೆ. ಗಣೇಶ ಹಬ್ಬದ ಮುನ್ನಾ ದಿನವಾದ ಗುರುವಾರ ನಗರದ ದುರ್ಗದ ಬಯಲು, ಎಂ.ಜಿ. ಮಾರುಕಟ್ಟೆ, ಜನತಾ ಬಜಾರ, ಹಳೇಹುಬ್ಬಳ್ಳಿ ದುರ್ಗದ ಬಯಲು, ಧಾರವಾಡದ ಸೂಪರ್‌ ಮಾರುಕಟ್ಟೆ, ಸುಭಾಸ ರಸ್ತೆ ಸೇರಿದಂತೆ ನಗರದೆಲ್ಲೆಡೆ ಮಾರುಕಟ್ಟೆಗಳಲ್ಲಿ ಅಷ್ಟಾಗಿ ಜನ ಕಾಣ ಸಿಗಲಿಲ್ಲ.

ದರ ದುಬಾರಿ: ಒಂದೆಡೆ ಕೋವಿಡ್‌ ಬರೆ, ಮತ್ತೂಂದೆಡೆ ಬೆಲೆ ಏರಿಕೆ ಬರೆ ಬಿದ್ದಿದ್ದು, ಹೀಗಾಗಿ ಜನರು ಏನು ಮಾಡುವುದೆಂದು ತಿಳಿಯದಾಗಿ ಹಬ್ಬ ಆಚರಿಸುವಂತಾಗಿದೆ. 5 ತರಹದ ಹಣ್ಣುಗಳು (ಎರಡಕ್ಕೆ) 120-300 ರೂ., ಬಾಳೆ ಕಂಬ 50 ರೂ. (ಜೋಡಿ), ಬಾಳೆ ಹಣ್ಣು 30ರಿಂದ 60 ಡಜನ್‌, ಒಂದು ಮಾರ ಸೇವಂತಿಗೆ ಹೂ 30ರೂ., ಮಲ್ಲಿಗೆ 40 ರೂ., ಚಂಡ ಹೂ 30 ರೂ. ಇದ್ದು, ಜನ ಖರೀದಿಸಲು ಚಿಂತೆ ಮಾಡುವಂತಾಗಿದೆ.

ವ್ಯಾಪಾರಿಗಳ ಅಳಲು: ಗಣೇಶ ಹಬ್ಬದ ಸಲುವಾಗಿ ಲಕ್ಷಾಂತರ ರೂ. ಬಂಡವಾಳ ಹಾಕಿ ಹಣ್ಣು ಖರೀದಿಸಿದ್ದೇವೆ. ಆದರೆ ವ್ಯಾಪಾರ ಮಾಡಲು ಬೆಳಿಗ್ಗೆಯಿಂದ ಮಾರುಕಟ್ಟೆಯಲ್ಲಿ ಜನರೇ ಇಲ್ಲ. ಹಣ್ಣು ಕೇಳುವವರು ಇಲ್ಲದಂತಾಗಿದೆ. ಕಳೆದ ವರ್ಷ ಬೆಳಿಗ್ಗೆಯಿಂದ ಸಂಜೆವರೆಗೆ ಸುಮಾರು 1ಲಕ್ಷ ರೂ.ಗಳ ವ್ಯಾಪಾರ ವಹಿವಾಟು ಆಗಿತ್ತು. ಈ ವರ್ಷ ಸಂಜೆವರೆಗೆ ಕುಳಿತರೂ 25 ಸಾವಿರ ರೂ.ಗಳ ವ್ಯಾಪಾರ ಸಹ ಆಗಿಲ್ಲ. ಹೀಗಾದರೆ ಹೇಗೆಂಬುದು ತಿಳಿಯದಾಗಿದೆ ಎಂದು ಹಣ್ಣಿನ ವ್ಯಾಪಾರಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ. ಇತ್ತ ಜನರು ಕೋವಿಡ್‌-19ರ ಹಿನ್ನೆಲೆಯಲ್ಲಿ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದು, ಯಾಕಾದರೂ ಹಬ್ಬಗಳು ಬರುತ್ತವೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next