Advertisement

ಬೆಲೆ ಏರಿಕೆ: ಗೌರಿ ಹಬ್ಬಕ್ಕೆ ಖರೀದಿ ಜೋರು

11:42 AM Sep 12, 2018 | |

ಮೈಸೂರು: ದೇಶದೆಲ್ಲೆಡೆ ವೈಭವದಿಂದ ಆಚರಿಸಲ್ಪಡುವ ಗೌರಿ-ಗಣೇಶ ಹಬ್ಬಕ್ಕಾಗಿ ಸಾಂಸ್ಕೃತಿಕ ನಗರಿಯಲ್ಲಿ ಸಂಭ್ರಮದ ತಯಾರಿ ಆರಂಭವಾಗಿದೆ. ಹಬ್ಬದ ಮುನ್ನಾದಿನವಾದ ಮಂಗಳವಾರ ನಗರದೆಲ್ಲೆಡೆ ಭರ್ಜರಿ ವ್ಯಾಪಾರ-ವಹಿವಾಟು ನಡೆಸುವ ಮೂಲಕ ವಿಘ್ನ ನಿವಾರಕನ ಆರಾಧನೆಗೆ ನಗರ ನಾಗರಿಕರು ಭರ್ಜರಿ ತಯಾರಿ ಮಾಡಿಕೊಂಡರು. 

Advertisement

ಹಬ್ಬದ ಮುನ್ನಾದಿನದಂದು ನಗರದ ದೇವರಾಜ ಮಾರುಕಟ್ಟೆ ಸೇರಿದಂತೆ ನಗರದ ಪ್ರಮುಖ ವೃತ್ತಗಳು, ರಸ್ತೆಗಳಲ್ಲಿ ಹಬ್ಬಕ್ಕೆ ಅಗತ್ಯವಿರುವ ವಸ್ತುಗಳ ಖರೀದಿ ಭರಾಟೆ ಜೋರಾಗಿತ್ತು. ಹಬ್ಬಕ್ಕಾಗಿ ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿರುವ ಜನರು ಮಾರುಕಟ್ಟೆಯಲ್ಲಿ ಹಬ್ಬದ ಆಚರಣೆಗೆ ಬೇಕಾಗಿರುವ ವಸ್ತುಗಳನ್ನು ಖರೀದಿಸಿದರು. ಪ್ರತಿ ಹಬ್ಬದಂತೆ ಅಗತ್ಯ ವಸ್ತುಗಳ ಬೆಲೆ ದುಪ್ಪಟ್ಟಾಗಿದ್ದರೂ, ಲೆಕ್ಕಿಸದ ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನರು ಸಂಭ್ರಮದೊಂದಿಗೆ ಹಬ್ಬವನ್ನು ಆಚರಿಸಲು ಮುಂದಾದರು. 

ಭಾರೀ ಜನಜಂಗುಳಿ: ಹಬ್ಬದ ಹಿನ್ನೆಲೆಯಲ್ಲಿ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಭಾರೀ ಜನಜಂಗುಳಿ ಕಂಡು ಬಂತು. ಬೆಳಗ್ಗಿನಿಂದಲೇ ಮಾರುಕಟ್ಟೆಗೆ ಲಗ್ಗೆಯಿಟ್ಟ ಜನರು ಹಬ್ಬದ ಆಚರಣೆಗೆ ಬೇಕಾಗಿರುವ ಪ್ರಮುಖ ವಸ್ತುಗಳನ್ನು ಖರೀದಿಸಿದರು. ಪ್ರಮುಖವಾಗಿ ದೇವರಾಜ ಮಾರುಕಟ್ಟೆ, ಶಿವರಾಂಪೇಟೆ, ಚಿಕ್ಕ ಗಡಿಯಾರ ವೃತ್ತ, ಧನ್ವಂತ್ರಿ ರಸ್ತೆ, ಅಗ್ರಹಾರ ವೃತ್ತ, ವಿವಿ ಮಾರುಕಟ್ಟೆ ಸೇರಿದಂತೆ ಹಲವು ಕಡೆಗಳಲ್ಲಿ ವ್ಯಾಪಾರ ಜೋರಾಗಿತ್ತು. ಕೇವಲ ಮಾರುಕಟ್ಟೆಗಳು ಮಾತ್ರವಲ್ಲದೆ ಬಹುತೇಕ ಬಟ್ಟೆ ಅಂಗಡಿಗಳಲ್ಲೂ ಗ್ರಾಹಕರ ಸಂಖ್ಯೆ ಸಾಮಾನ್ಯ ದಿನಕ್ಕಿಂತಲೂ ಹೆಚ್ಚಾಗಿತ್ತು. 

ಗೌರಿ-ಗಣೇಶ ಖರೀದಿ: ಪ್ರತಿ ವರ್ಷದಂತೆ ಈ ಬಾರಿಯೂ ಮಾರುಕಟ್ಟೆಗಳಲ್ಲಿ ಗೌರಿ-ಗಣೇಶ ವಿಗ್ರಹಗಳ ಖರೀದಿ ಜೋರಾಗಿತ್ತು. ಎಂದಿನಂತೆ ಮಾರುಕಟ್ಟೆಗಳಲ್ಲಿ ವಿವಿಧ ಗಾತ್ರ ಹಾಗೂ ವಿನ್ಯಾಸದ ಹಲವು ಬಗೆಯ ಗಣೇಶ ವಿಗ್ರಹ ನೋಡುಗರನ್ನು ಸೆಳೆಯಲಿವೆ. ಹಬ್ಬದ ಸಿದ್ಧತೆಯಲ್ಲಿ ಮಾರುಕಟ್ಟೆಗಳಿಗೆ ತೆರಳಿದ ಸಾರ್ವಜನಿಕರು ತಮ್ಮ ಶಕ್ತಿಗೆ ಅನುಸಾರವಾಗಿ ಗೌರಿ-ಗಣೇಶ ವಿಗ್ರಹಗಳನ್ನು ಖರೀದಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ಮನೆಯಲ್ಲಿ ಪೂಜೆ ಮಾಡುವವರು ಸಣ್ಣಗಾತ್ರದ ಗೌರಿ-ಗಣೇಶ ಮೂರ್ತಿಗಳನ್ನು ಖರೀದಿಸಿದರರೆ. ಬಡಾವಣೆಗಳಲ್ಲಿ ಸಾಮೂಹಿಕವಾಗಿ ಗಣಪತಿ ಪೂಜೆ ಮಾಡುವವರು ದೊಡ್ಡದಾದ ಮತ್ತು ಆಕರ್ಷಕ ವಿನ್ಯಾಸದ ಗಣೇಶ ಮೂರ್ತಿಗಳನ್ನು ಖರೀದಿ ಮಾಡಿದರು. 

ಬಡಾವಣೆಗಳಲ್ಲೂ ಸಿದ್ಧತೆ: ಗೌರಿ-ಗಣೇಶ ಹಬ್ಬವನ್ನು ಕೇವಲ ಮನೆಗಳಲ್ಲಿ ಮಾತ್ರವಲ್ಲದೆ ಪ್ರತಿಯೊಂದು ಬಡಾವಣೆಗಳು, ವೃತ್ತಗಳಲ್ಲೂ ಆಚರಿಸಲಾಗುತ್ತದೆ. ಹಬ್ಬಕ್ಕೂ ಮೊದಲೇ ಗಣಪತಿ ಪ್ರತಿಷ್ಠಾಪನೆಗೆ ಸಿದ್ಧತೆ ಮಾಡಿಕೊಳ್ಳುವ ಬಡಾವಣೆಯ ಯುವಕರು, ಸಾರ್ವಜನಿಕರು, ಹಬ್ಬದ ಮುನ್ನಾದಿನದಂದು ಹಸಿರು ಚಪ್ಪರ ಹಾಕಿ ತಳಿರು ತೋರಣಗಳಿಂದ ಸಿಂಗರಿಸಿರುತ್ತಾರೆ. ಹೀಗಾಗಿ ನಗರದ ಬಹುತೇಕ ಕಡೆಗಳಲ್ಲಿ ಗಣಪತಿ ಪ್ರತಿಷ್ಠಾಪನೆಗೆ ತಮ್ಮ ಬಡಾವಣೆ, ಬೀದಿ ಬೀದಿಗಳನ್ನು ಅಲಂಕಾರ ಮಾಡಿಕೊಂಡಿರುವ ದೃಶ್ಯಗಳು ಕಂಡುಬಂತು. 

Advertisement

ಗಗನಕ್ಕೇರಿದ ಬೆಲೆ: ಹಬ್ಬದ ಹಿನ್ನೆಲೆಯಲ್ಲಿ ನಗರದ ಮಾರುಕಟ್ಟೆಯಲ್ಲಿ ಹಲವು ಪದಾರ್ಥಗಳ ಬೆಲೆ ಗಗನಕ್ಕೇರಿತ್ತು. ಮುಖ್ಯವಾಗಿ ಮಲ್ಲಿಗೆ, ಕಾಕಡ ಕೆ.ಜಿಗೆ 650 ರೂ. ಹಾಗೂ ಒಂದು ಮಾರಿಗೆ 80ರೂ., ವಿವಿಧ ಬಗೆಯ ಗುಲಾಬಿ ಹೂವು ಕಾಲು ಕೆ.ಜಿ.ಗೆ 70 ರೂ., ಹಳದಿ ಸೇವಂತಿಗೆ 1 ಮಾರಿಗೆ 60 ರೂ., ಬಿಳಿ ಸೇವಂತಿಗೆ 80ರೂ., ಮಲ್ಲಿಗೆ ಹಾರ 150 ರೂ., ಗುಲಾಬಿ ಹೂವಿನ ಹಾರ 250 ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಉಳಿದಂತೆ ಹಣ್ಣುಗಳು ಹಾಗೂ ಕೆಲವು ತರಕಾರಿಗಳ ಬೆಲೆಯೂ ದುಬಾರಿಯಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next