Advertisement

Price hike; ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಸರಕಾರದ ಕಸರತ್ತು

12:32 AM Oct 31, 2023 | Team Udayavani |

ನವರಾತ್ರಿ ಹಬ್ಬ ಮುಕ್ತಾಯಗೊಳ್ಳುತ್ತಿದ್ದಂತೆಯೇ ದೇಶದೆಲ್ಲೆಡೆ ಈರುಳ್ಳಿ ಬೆಲೆ ಗಗನಮುಖಿಯಾಗಿದೆ. ವಾರದ ಹಿಂದೆ ಕೆ.ಜಿ. ಈರುಳ್ಳಿಗೆ 30-40 ರೂ. ಬೆಲೆ ಇದ್ದರೆ ಈಗ 80-90ರೂ.ಗಳಲ್ಲಿ ಬಿಕರಿಯಾಗುತ್ತಿದೆ. ಕರ್ನಾಟಕದಲ್ಲೂ ಇದೇ ಪರಿಸ್ಥಿತಿ ಇದ್ದು ರಾಜ್ಯದೆಲ್ಲೆಡೆ ಈರುಳ್ಳಿ ಬೆಲೆ ಕೆ.ಜಿ.ಗೆ 80-85 ರೂ. ಇದೆ. ಸದ್ಯ ಮಾರುಕಟ್ಟೆಗೆ ಬೇಡಿಕೆಗೆ ತಕ್ಕಷ್ಟು ಈರುಳ್ಳಿ ಪೂರೈಕೆ­ಯಾಗದಿರುವುದ­ರಿಂದ ಬೆಲೆಯಲ್ಲಿ ಈ ಹೆಚ್ಚಳ ಕಂಡು­ಬಂದಿದೆ. ಹೊಸ ಋತುವಿನ ಬೆಳೆ ಇನ್ನಷ್ಟೇ ಮಾರುಕಟ್ಟೆ ಪ್ರವೇಶಿಸ­ಬೇಕಿರುವು­ದರಿಂದ ಬೆಲೆ ಏರಿಕೆಯ ಈ ಪ್ರಕ್ರಿಯೆ ಮುಂದುವರಿಯಲಿದ್ದು ಮುಂದಿನ ಒಂದೆರಡು ದಿನಗಳಲ್ಲೇ ಶತಕದ ಗಡಿ ದಾಟುವುದು ಬಹುತೇಕ ಖಚಿತವಾಗಿದೆ.

Advertisement

ದೀಪಾವಳಿ ಹಬ್ಬಕ್ಕೆ ಹತ್ತು ದಿನಗಳಷ್ಟೇ ಉಳಿದಿದ್ದು ಈರುಳ್ಳಿಗೆ ಬೇಡಿಕೆ ಮತ್ತಷ್ಟು ಹೆಚ್ಚಲಿದೆ. ಮುಂಗಾರು ವಿಳಂಬ, ಮಳೆ ಕೊರತೆ, ರೋಗಬಾಧೆ ಮತ್ತಿತರ ಕಾರಣ ಗಳಿಂದಾಗಿ ಹಾಲಿ ಋತುವಿನ ಬೆಳೆ ಇನ್ನೂ ಮಾರುಕಟ್ಟೆ ಪ್ರವೇಶಿಸಿಲ್ಲ. ಈರುಳ್ಳಿ ಉತ್ಪಾದನೆಯ ಪ್ರಮುಖ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ, ಮಧ್ಯ ಪ್ರದೇಶದಲ್ಲಿ ಈ ಬಾರಿ ಈರುಳ್ಳಿ ಬಿತ್ತನೆ ಕಾರ್ಯ ತಡವಾಗಿದ್ದರಿಂದ ಇನ್ನಷ್ಟೇ ಕೊಯ್ಲು ನಡೆಯಬೇಕಿದೆ. ಅಷ್ಟು ಮಾತ್ರವಲ್ಲದೆ ಈ ಬಾರಿ ನಿರೀಕ್ಷಿತ ಪ್ರಮಾಣ ದಲ್ಲಿ ಇಳುವರಿ ಲಭಿಸುವ ಸಾಧ್ಯತೆ ತೀರಾ ಕಡಿಮೆ ಇದೆ. ಆಗಸ್ಟ್‌ ಮಧ್ಯ ಭಾಗದಿಂದಲೇ ಗೋದಾಮುಗಳಿಂದ ಈರುಳ್ಳಿ ದಾಸ್ತಾನನ್ನು ಮಾರುಕಟ್ಟೆಗೆ ಪೂರೈಸಲಾರಂಭಿಸಿದ್ದರಿಂದ ಗೋದಾಮುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಕೂಡ ಇಲ್ಲ. ಹೀಗಾಗಿ ದೇಶಾದ್ಯಂತ ಬೇಡಿಕೆಗೆ ತಕ್ಕಷ್ಟು ಪ್ರಮಾಣದಲ್ಲಿ ಈರುಳ್ಳಿ ಮಾರುಕಟ್ಟೆಗೆ ಪೂರೈಕೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ವಾರದ ಅಂತರದಲ್ಲಿ ದುಪ್ಪಟ್ಟಾಗಿದೆ.

ಈರುಳ್ಳಿ ಬೆಲೆ ಹೆಚ್ಚಳವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರ ಈರುಳ್ಳಿಯ ರಫ್ತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೆಲವೊಂದು ಕಠಿನ ಕ್ರಮಗಳನ್ನು ಕೈಗೊಂಡಿದೆ. ಅದರಂತೆ ಈ ವರ್ಷದ ಅಂತ್ಯದವರೆಗೆ ಕನಿಷ್ಠ ರಫ್ತು ಬೆಲೆಯನ್ನು ನಿಗದಿಪಡಿಸಿದೆ. ಸರಕಾರದ ಈ ಎಲ್ಲ ಕ್ರಮಗಳ ಹೊರತಾಗಿಯೂ ಈರುಳ್ಳಿ ಧಾರಣೆ ಒಂದೇ ಸಮನೆ ಹೆಚ್ಚುತ್ತಲೇ ಸಾಗಿದ್ದು ಗ್ರಾಹಕರು ಈರುಳ್ಳಿ ಖರೀದಿ ಸಂದರ್ಭದಲ್ಲಿಯೇ ಕಣ್ಣೀರು ಸುರಿಸುವಂತಾಗಿದೆ. ಮುಂದಿನ ತಿಂಗಳು ದೇಶದ ಐದು ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈರುಳ್ಳಿ ಸಹಿತ ತರಕಾರಿ ಮತ್ತು ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಕೇಂದ್ರ ಸರಕಾರದ ಪಾಲಿಗೆ ಬಲು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಒಟ್ಟಾರೆ ಈರುಳ್ಳಿ ಬೆಲೆ ಏರಿಕೆಯ ಬಿಸಿ ಕೇವಲ ಜನಸಾಮಾನ್ಯರನ್ನು ಮಾತ್ರವಲ್ಲದೆ ಸರಕಾರಕ್ಕೂ ತಟ್ಟತೊಡಗಿರು­ವುದಂತೂ ಸುಳ್ಳಲ್ಲ.

ಸದ್ಯ ಲಭ್ಯವಿರುವ ಈರುಳ್ಳಿಯನ್ನು ವ್ಯವಸ್ಥಿತವಾಗಿ ಮಾರುಕಟ್ಟೆಗೆ ಪೂರೈಸಲು ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅಕ್ರಮವಾಗಿ ದಾಸ್ತಾನಿಡಲಾಗಿರುವ ಗೋದಾಮುಗಳ ಮೇಲೆ ದಾಳಿ ನಡೆಸಿ ಈರುಳ್ಳಿಯನ್ನು ವಶಪಡಿಸಿಕೊಂಡು ಅದನ್ನು ಮಾರುಕಟ್ಟೆಗೆ ಪೂರೈಸಬೇಕು. ಇಂಥ ಬಿಗಿ ಕ್ರಮಗಳಿಂದ ಗ್ರಾಹಕರಿಗೆ ಒಂದಿಷ್ಟು ಕಡಿಮೆ ಬೆಲೆಯಲ್ಲಿ ಈರುಳ್ಳಿಯನ್ನು ಪೂರೈಸಲು ಸರಕಾರ ಮುಂದಾಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next