Advertisement

ಅಗತ್ಯ ವಸ್ತುಗಳ ತೆರಿಗೆ ಇಳಿಕೆಗೆ ಜಿಎಸ್‌ಟಿ ಮಂಡಳಿ ಮುಂದಾಗಲಿ

01:30 AM Jun 16, 2022 | Team Udayavani |

ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ಹಣದುಬ್ಬರ ಕುರಿತಾಗಿಯೇ ದೊಡ್ಡ ಚರ್ಚೆಯಾಗುತ್ತಿದೆ. ಕೊರೊನಾ ಮಹಾಮಾರಿಯ ಆತಂಕದಿಂದ ಹಿಡಿದು, ಇತ್ತೀಚಿನ ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣದಿಂದಾಗಿ ಜಗತ್ತಿನಾದ್ಯಂತ ತೈಲೋತ್ಪನ್ನಗಳು, ಆಹಾರ ಧಾನ್ಯಗಳ ದರ ಹೆಚ್ಚುತ್ತಲೇ ಇದೆ. ಹಾಗೆಯೇ ಭಾರತದ ನೆರೆಯಲ್ಲಿರುವ ದೇಶಗಳಾದ ಪಾಕಿಸ್ಥಾನ, ಶ್ರೀಲಂಕಾ, ನೇಪಾಲದಲ್ಲಿ ಆರ್ಥಿಕತೆ ತೀರಾ ಕೆಳಹಂತಕ್ಕೆ ತಲುಪಿದೆ. ಈ ಸಮಸ್ಯೆ ಸದ್ಯಕ್ಕಂತೂ ನಿವಾರಣೆಯಾಗುವ ಸಾಧ್ಯತೆಗಳಿಲ್ಲ.

Advertisement

ಇದರ ನಡುವೆಯೇ ಕೇಂದ್ರ ಸರಕಾರವೂ ಹಣದುಬ್ಬರ ಇಳಿಕೆಗಾಗಿ ಸರ್ವ ಪ್ರಯತ್ನಗಳನ್ನೂ ನಡೆಸಿದೆ. ಮೊದಲಿಗೆ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಆಮದು ಸುಂಕ ಇಳಿಕೆ ಮಾಡಿದ್ದ ಸರಕಾರ, ಅನಂತರ ಅಡುಗೆ ಎಣ್ಣೆ ಮೇಲಿನ ಆಮದು ಸುಂಕವನ್ನೂ ಇಳಿಕೆ ಮಾಡಿದೆ. ಜತೆಗೆ ಆರ್‌ಬಿಐ ಕೂಡ ರೆಪೋ ದರವನ್ನು ಏರಿಕೆ ಮಾಡಿ, ನಾಗರಿಕರಲ್ಲಿ ಉಳಿತಾಯಕ್ಕೆ ಹೆಚ್ಚಿನ ಪ್ರೋತ್ಸಾಹ ಮಾಡುವ ಪ್ರಯತ್ನ ನಡೆಸಿದೆ.

ಇಷ್ಟೆಲ್ಲ ಆದರೂ ದೇಶದ ಹಣದುಬ್ಬರ ದರ ಅತ್ಯಲ್ಪ ಕಡಿಮೆಯಾಗಿದೆ. ಅಂದರೆ ಎಪ್ರಿಲ್‌ನಲ್ಲಿ ಶೇ.7.79ರಷ್ಟಿದ್ದ ಗ್ರಾಹಕರ ಬೆಲೆ ಸೂಚ್ಯಂಕ, ಮೇ ತಿಂಗಳಲ್ಲಿ ಶೇ. 7.1ಕ್ಕೆ ಇಳಿಕೆಯಾಗಿದೆ. ಆದರೆ ಸಗಟು ಹಣದುಬ್ಬರ ಪ್ರಮಾಣದಲ್ಲಿ ಕೊಂಚ ಏರಿಕೆಯಾಗಿದೆ. ಎಪ್ರಿಲ್‌ನಲ್ಲಿ ಶೇ.15.08ರಷ್ಟಿದ್ದ ಸಗಟು ಹಣದುಬ್ಬರ ಮೇ ತಿಂಗಳಿನಲ್ಲಿ ಶೇ. 15.88ಕ್ಕೆ ಏರಿದೆ. ಇಂಥ ಕಷ್ಟಕರ ಸಮಯದಲ್ಲಿ ಜಿಎಸ್‌ಟಿ ಮಂಡಳಿಯಾದರೂ ಜನರಿಗೆ ನೆಮ್ಮದಿ ನೀಡುವ ಕೆಲಸ ಮಾಡಬೇಕು. ಸದ್ಯ ಬಹುತೇಕ ವಸ್ತುಗಳ ದರದ ಬೆಲೆ ನಿಯಂತ್ರಣ ಜಿಎಸ್‌ಟಿ ಮಂಡಳಿ ಕೈಯಲ್ಲೇ ಇದೆ. ಇಲ್ಲಿ ಕೇಂದ್ರ ಸರಕಾರದ ಪಾತ್ರ ಕಡಿಮೆ. ಹೀಗಾಗಿ ರಾಜ್ಯಗಳ ಪ್ರಾತಿನಿಧ್ಯವಿರುವ ಮತ್ತು ಇದೇ 17ಕ್ಕೆ ನಡೆಯಲಿರುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ದರ ಇಳಿಕೆಗೆ ಮುಂದಾಗಬೇಕು.

ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಕೆಲವು ಸ್ಲಾಬ್‌ಗಳ ತೆರಿಗೆ ಹೆಚ್ಚಳ ಮಾಡುವ ಸಾಧ್ಯತೆಗಳಿವೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಮೊದಲೇ ದರ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಇದೊಂದು ಆಘಾತಕಾರಿ ಅಂಶವೇ ಸರಿ. ಏಕೆಂದರೆ ಶೇ.5ರ ತೆರಿಗೆ ಸ್ಲಾéಬ್‌ ಅನ್ನು ಶೇ.7ರಿಂದ ಶೇ.8ಕ್ಕೆ ಮತ್ತು ಶೇ.18ರ ಸ್ಲಾಬ್‌ ಅನ್ನು ಶೇ.20ಕ್ಕೆ ಏರಿಕೆ ಮಾಡುವ ಸಾಧ್ಯತೆ ಇದೆ.

ಸದ್ಯ ಜಿಎಸ್‌ಟಿ ತೆರಿಗೆ ಪದ್ಧತಿಯಲ್ಲಿ ಶೇ.5, ಶೇ.12, ಶೇ.18, ಶೇ.28 ಸ್ಲಾಬ್‌ಗಳಿವೆ. ಅಗತ್ಯ ವಸ್ತುಗಳು ಶೇ.5ರಷ್ಟು ತೆರಿಗೆ ವ್ಯಾಪ್ತಿಗೆ ಬರುತ್ತವೆ. ಇದರಲ್ಲಿ ಕಡೇ ಪಕ್ಷ ಶೇ.2ರಿಂದ ಶೇ.3ರಷ್ಟು ಹೆಚ್ಚಾದರೂ ದೊಡ್ಡ ಹೊಡೆತ ಬೀಳುತ್ತದೆ. ಅಲ್ಲದೆ ಇತ್ತೀಚಿನ ತಿಂಗಳುಗಳಿಂದ ಜಿಎಸ್‌ಟಿ ಸಂಗ್ರಹವೂ ಹೆಚ್ಚಾಗುತ್ತಿದೆ. ಸರಾಸರಿ ಪ್ರತೀ ತಿಂಗಳೂ 1.40 ಲಕ್ಷ ಕೋಟಿ ರೂ. ಸಂಗ್ರಹವಾಗುತ್ತಿದೆ. ಹೀಗಾಗಿ ಸರಕಾರದ ಬೊಕ್ಕಸಕ್ಕೆ ನಷ್ಟವೇನೂ ಆಗುತ್ತಿಲ್ಲ. ಆದರೂ ಸ್ಲಾéಬ್‌ ಏರಿಸಲು ಹೊರಟಿರುವುದು ಸರಿಯಾದ ಕ್ರಮವಲ್ಲ ಎಂದೇ ಹೇಳಬಹುದು.

Advertisement

ಆದರೆ ಅತ್ತ ಆರ್‌ಬಿಐ ಹಣದುಬ್ಬರ ನಿಯಂತ್ರಣಕ್ಕಾಗಿ ಒಂದೊಂದೇ ಕ್ರಮ ತೆಗೆದುಕೊಳ್ಳುತ್ತಿರುವಂತೆ, ಜಿಎಸ್‌ಟಿ ಮಂಡಳಿ ಸಭೆಯಲ್ಲಿ ವಸ್ತುಗಳ ದರ ಏರಿಕೆಗೆ ಮುಂದಾಗಿರುವುದು ಸಮರ್ಥನೀಯ ಅನ್ನಿಸುವುದಿಲ್ಲ. ಈಗಿನ ಸ್ಥಿತಿ ಪ್ರಕಾರ, ಜನಸಾಮಾನ್ಯರು ಬಳಕೆ ಮಾಡುವ ಬಹುತೇಕ ವಸ್ತುಗಳ ದರ ಗಗನಮುಖೀಯಾಗಿದೆ. ಇದರ ಜತೆಗೆ ಮತ್ತೆ ತೆರಿಗೆ ಸ್ಲಾéಬ್‌ ಏರಿಕೆ ಮಾಡಿದರೆ ಜನರ ಸ್ಥಿತಿ ಅಯೋಮಯವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next