ರೇವಾ(ಮಧ್ಯಪ್ರದೇಶ) : ಹಿಂದಿನ ಸರಕಾರಗಳು ಗ್ರಾಮಗಳನ್ನು ವೋಟ್ ಬ್ಯಾಂಕ್ ಆಗಿರಲಿಲ್ಲ ಎಂದು ಕಡೆಗಣಿಸಿದ್ದವು ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.
ರಾಷ್ಟ್ರೀಯ ಪಂಚಾಯತ್ ರಾಜ್ ದಿನದಂದು ರೇವಾದಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಬಿಜೆಪಿ ನೇತೃತ್ವದ ಸರಕಾರವು ಪರಿಸ್ಥಿತಿಯನ್ನು ಬದಲಾಯಿಸಿದೆ ಮತ್ತು ಪಂಚಾಯತ್‌ಗಳಿಗೆ ಹೆಚ್ಚಿನ ಅನುದಾನವನ್ನು ನೀಡಿದೆ ಎಂದರು.
“ಹಿಂದಿನ ಸರಕಾರಗಳು ಹಳ್ಳಿಗಳು ತಮ್ಮಲ್ಲಿ ಮತಬ್ಯಾಂಕ್ ಆಗಿಲ್ಲದ ಕಾರಣಕ್ಕಾಗಿ ಹಣವನ್ನು ಖರ್ಚು ಮಾಡಲು ಹಿಂದೇಟು ಹಾಕಿದ್ದವು, ಕಡೆಗಣಿಸಲಾಗಿತ್ತು.ಹಲವು ರಾಜಕೀಯ ಪಕ್ಷಗಳು ಹಳ್ಳಿಗಳ ಜನರನ್ನು ವಿಭಜಿಸಿ ತಮ್ಮ ಅಂಗಡಿಗಳನ್ನು ನಡೆಸುತ್ತಿದ್ದವು” ಎಂದರು.
ಹಳ್ಳಿಗಳಿಗೆ ಆಗುತ್ತಿರುವ ಈ ಅನ್ಯಾಯವನ್ನು ಬಿಜೆಪಿ ಕೊನೆಗೊಳಿಸಿ ಅವರ ಅಭಿವೃದ್ಧಿಗಾಗಿ ನಮ್ಮ ಖಜಾನೆಯನ್ನು ತೆರೆದಿದೆ. ನಮ್ಮ ಸರಕಾರವು ಜನ್ ಧನ್ ಯೋಜನೆಯಡಿ ಹಳ್ಳಿಗಳಲ್ಲಿ 40 ಕೋಟಿಗೂ ಹೆಚ್ಚು ಜನರ ಬ್ಯಾಂಕ್ ಖಾತೆಗಳನ್ನು ತೆರೆದಿದೆ ಎಂದರು.
ಸಮಾರಂಭದಲ್ಲಿ ಮೋದಿ ಅವರು ಮಧ್ಯಪ್ರದೇಶದ ವಿವಿಧ ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು.