Advertisement

ಅಪಘಾತ ಹೆಚ್ಚಳ ತಡೆಗೆ ರಾತ್ರಿ ವಾಹನ ತಪಾಸಣಿ

11:30 AM Oct 10, 2021 | Team Udayavani |

ಬೆಂಗಳೂರು: ಇತ್ತೀಚೆಗೆ ತಡರಾತ್ರಿ ಮತ್ತು ನಸುಕಿನಲ್ಲಿಯೇ ಅಪಘಾತಗಳು ಹೆಚ್ಚಾಗುತ್ತಿವೆ. ಹೀಗಾಗಿ ರಾತ್ರಿ 9 ಗಂಟೆಯಿಂದ ತಡರಾತ್ರಿ 1 ಗಂಟೆವರೆಗೂ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಹೇಳಿದರು.

Advertisement

ಸಂಚಾರ ಸಂಪರ್ಕ ದಿವಸ ಸಂಬಂಧ ಶನಿವಾರ ಹುಳಿಮಾವು ಸಂಚಾರ ಪೊಲೀಸ್‌ ಠಾಣೆ ಆವರಣದಲ್ಲಿ ಆಯೋಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು. ಸಾರ್ವಜನಿಕರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮದ್ಯ ಸೇವನೆ ಮಾಡಿರುವವರಿಗೆ ಭಾರಿ ಮೊತ್ತದೆ ದಂಡ ವಿಧಿಸುವುದರ ಜತೆ ಚಾಲನ ಪರವಾನಿಗೆ ರದ್ದು ಮಾಡಲು ಸೂಚಿಸಲಾಗುವುದು.

ಜಾಲಿ ರೈಡ್‌ ಮಾಡುವವರು ಹಾಗೂ ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ಪೊಲೀಸರು ನಿಗಾವಹಿಸಿದ್ದಾರೆ ಎಂದರು. ಸಭೆಯಲ್ಲಿ ಭಾಗಿಯಾಗಿದ್ದ ನೂರಾರು ಮಂದಿ ಹುಳಿಮಾವು ನಿವಾಸಿಗಳು, ರಸ್ತೆ ದುರಸ್ತಿಗೊಂಡು ಭಾರಿ ಗುಂಡಿಗಳು ಬಿದ್ದಿವೆ. ಮಳೆ ಬಂದು ನೀರು ತುಂಬಿದರೆ ಗುಂಡಿ ಇರುವುದೇ ತಿಳಿಯದೇ ದ್ವಿಚಕ್ರವಾಹನ ಸವಾರರು ಗುಂಡಿಯಲ್ಲಿ ಬಿದ್ದು ಮೃತಪಡುತ್ತಿದ್ದಾರೆ. ಈ ಬಗ್ಗೆ ಕ್ರಮವಹಿಸಬೇಕು ಎಂದು ದೂರಿದರು.

ಇದನ್ನೂ ಓದಿ;- ಒಳ ರಸ್ತೆ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ

ಅದಕ್ಕೆ ಪ್ರತಿಕ್ರಿಯೆಸಿದ ಆಯುಕ್ತರು, ರಸ್ತೆ ದುರಸ್ತಿ ಹಾಗೂ ಗುಂಡಿ ಮುಚ್ಚುವುದು ಬಿಬಿಎಂಪಿ ಕೆಲಸ. ಸಾರ್ವಜನಿಕರ ಪರವಾಗಿ ಪೊಲೀಸ್‌ ಇಲಾಖೆ ಬಿಬಿಎಂಪಿ ಆಯುಕ್ತರ ಗಮನಕ್ಕೆ ತರುತ್ತದೆ ಎಂದರು. ಪಾರ್ಕಿಂಗ್‌ ಸಮಸ್ಯೆ ಪ್ರಶ್ನೆಗೆ ಉತ್ತರಿಸಿದ ಆಯುಕ್ತರು, ಎಲ್ಲೆಡೆ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲು ಸಾಧ್ಯವಿಲ್ಲ. ಅದರಿಂದ ಸಂಚಾರಕ್ಕೆ ತೊಂದರೆಯಾಗುತ್ತದೆ.

Advertisement

ಹೀಗಾಗಿ ಸ್ಥಳ ನೋಡಿಕೊಂಡು ಪಾರ್ಕಿಂಗ್‌ಗೆ ಅಧಿ ಸೂಚನೆ ಹೊರಡಿಸುತ್ತೇವೆ. ವಿನಃಕಾರಣ ಜನರಿಗೆ ತೊಂದರೆ ನೀಡುವುದು ಸಂಚಾರಕ್ಕೆ ತೊಂದರೆಯಾಗದಂತೆ ಕೆಲವು ನಿಯಮಗಳನ್ನು ಪಾಲಿಸುವುದು ಅನಿವಾರ್ಯ ಎಂದು ಹೇಳಿದರು.

ಸಮೀಪದ ಆರ್‌ಟಿಓ ಕಚೇರಿಗೆ ಬರುವ ವಾಹನಗಳಿಂದ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಎಂಬ ಸ್ಥಳೀಯರ ದೂರಿಗೆ ಉತ್ತರಿಸಿದ ಅವರು, ವಾಹನ ನೋಂದಣಿಗೆ ಬರುವುದನ್ನು ನಿಯಂತ್ರಿಸುವುದು ಕಷ್ಟ. ಆದರೆ, ರಸ್ತೆಗಳಲ್ಲಿ ಬೇಕಾಬಿಟ್ಟಿ ನಿಲ್ಲಿಸಿದರೆ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದರು.

ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಡಾ ಬಿ.ಆರ್‌.ರವಿಕಾಂತೇಗೌಡ, ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್‌ ಮಹದೇವ್‌ ಜೋಶಿ, ಪೂರ್ವ ಸಂಚಾರ ವಿಭಾಗದ ಡಿಸಿಪಿ ಕೆ.ಎಂ.ಶಾಂತರಾಜು, ಆಗ್ನೇಯ ಉಪವಿಭಾಗ ಎಸಿಪಿ ಶಿವಶಂಕರ್‌ ರೆಡ್ಡಿ, ಹುಳಿಮಾವು ಸಂಚಾರ ಠಾಣೆ ಇನ್‌ಸ್ಪೆಕ್ಟರ್‌ ಕೆ.ಆರ್‌.ರವಿಕುಮಾರ್‌ ಇದ್ದರು.

ಟೋಯಿಂಗ್‌ ಸಿಬ್ಬಂದಿ ವಿರುದ್ಧ ಮತ್ತೆ ಆರೋಪ-

ಟೋಯಿಂಗ್‌ ಸಿಬ್ಬಂದಿ ವಿರುದ್ಧ ಆರೋಪಿಸಿದ ಸಾರ್ವಜನಿಕರಿಗೆ ಉತ್ತರಿಸಿದ ಆಯುಕ್ತರು, ನೋ ಪಾರ್ಕಿಂಗ್‌ ಸ್ಥಳಗಳಲ್ಲಿ ನಿಲ್ಲಿಸಿದ ವಾಹನಗಳನ್ನು ನಿಯಮ ಪಾಲನೆ ಮೂಲಕ ಟೋಯಿಂಗ್‌ ಮಾಡಲಾಗುತ್ತಿದೆ. ಇನ್ನು ವಾಹನಗಳನ್ನು ಟೋಯಿಂಗ್‌ ಮಾಡುವಾಗ ಕೆಲವು ನಿಯಮಗಳ ಪಾಲಿಸುವಂತೆ ಎಲ್ಲ ಸಂಚಾರ ಪೊಲೀಸರು ಹಾಗೂ ಟೋಯಿಂಗ್‌ ಸಿಬ್ಬಂದಿಗೆ ಸೂಚಿಸಲಾಗಿದೆ. ಅದನ್ನು ಮೀರಿ ವಾಹನ ಟೋಯಿಂಗ್‌ ಮಾಡಿದರೆ, ಸಮೀಪದ ಪೊಲೀಸ್‌ ಠಾಣೆಯಲ್ಲಿ ದೂರು ನೀಡಬಹುದು ಎಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next