Advertisement

ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಿ

04:57 PM May 30, 2022 | Team Udayavani |

ಚಿಕ್ಕಮಗಳೂರು: ಮಹಿಳೆಯರು ಅಗಾಧವಾದ ಶಕ್ತಿ ಹೊಂದಿದ್ದು, ಮಹಿಳೆ ಮನಸ್ಸು ಮಾಡಿದರೇ ಏನು ಬೇಕಾದರೂ ಸಾಧಿಸುತ್ತಾಳೆ ಎಂದು ಮಾಜಿ ಸಚಿವೆ ಉಮಾಶ್ರೀ ತಿಳಿಸಿದರು.

Advertisement

ಭಾನುವಾರ ನಗರದ ಕುವೆಂಪು ಕಲಾ ಮಂದಿರದಲ್ಲಿ ಜಿಲ್ಲಾ ಕುರುಹಿನ ಶೆಟ್ಟಿ ಮಹಿಳಾ ಸಂಘದಿಂದ ಆಯೋಜಿಸಿದ್ದ 5ನೇ ವರ್ಷದ ವಾರ್ಷಿಕೋತ್ಸವ ಮತ್ತು ಗ್ರಾಪಂ, ಪಪಂ, ನಗರಸಭೆ ಚುನಾವಣೆಯಲ್ಲಿ ಜಯಶೀಲರಾದವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹೆಣ್ಣುಮಕ್ಕಳ ಜೀವ ಮತ್ತು ಜೀವನ ಅಮೂಲ್ಯವಾದದ್ದು. ಇದನ್ನು ಎಲ್ಲಿಯವರೆಗೂ ಸಮಾಜ ಅರಿಯುವುದಿಲ್ಲವೋ ಅಲ್ಲಿಯವರೆಗೂ ಹೆಣ್ಣಿನ ಮೇಲಿನ ದೌರ್ಜನ್ಯ ನಡೆಯುತ್ತಿರುತ್ತದೆ. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು ಸಂಘ-ಸಂಸ್ಥೆಗಳು ಎಚ್ಚರ ವಹಿಸಬೇಕು ಹಾಗೂ ಜನಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಕುರುಹಿನ ಶೆಟ್ಟಿ ಸಮಾಜ ರಾಜಕೀಯವಾಗಿ, ಆರ್ಥಿಕವಾಗಿ ಹಿಂದುಳಿದಿದೆ. ಸಮುದಾಯದ ಆರ್ಥಿಕ, ಸಾಮಾಜಿಕವಾಗಿ ಪ್ರಗತಿಗೆ ಇಡೀ ಸಮಾಜ ಒಗ್ಗಟ್ಟು ಪ್ರದರ್ಶಿಸಬೇಕು ಎಂದ ಅವರು, ಕುರುಹಿನ ಶೆಟ್ಟಿ ಸಮುದಾಯ ಕುಲಕಸುಬು ಇಂದು ಅತ್ಯಂತ ಸಂಕಷ್ಟದಲ್ಲಿದ್ದು ಸರ್ಕಾರ ಅವರ ನೆರವಿಗೆ ಬರಬೇಕು ಎಂದು ಮನವಿ ಮಾಡಿದರು. ಪಲ್ಲವಿ ಸಿ.ಟಿ. ರವಿ ಮಾತನಾಡಿ, ಸಂಘ-ಸಂಸ್ಥೆಗಳ ಏಳಿಗೆಗೆ ಮಹಿಳೆಯರ ಪಾತ್ರ ಬಹು ಮುಖ್ಯವಾಗಿದ್ದು, ಕುರುಹಿನ ಶೆಟ್ಟಿ ಸಮಾಜ ಜಿಲ್ಲೆಯಲ್ಲಿ ಸದೃಢವಾಗಿ ಬೆಳೆದಿದೆ. ಸಮುದಾಯ ರಾಜಕೀಯವಾಗಿ ಬೆಳೆಯಲು ಒಗ್ಗಟ್ಟು ಪ್ರದರ್ಶಿಸಬೇಕು. ಗಟ್ಟಿಯಾಗಿ ನಿಲ್ಲಬೇಕು ಎಂದು ಹೇಳಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಹೆಣ್ಣು ಸಮಾಜದ ಕಣ್ಣು. ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಕುರುಹಿನ ಶೆಟ್ಟಿ ಮಹಿಳಾ ಸಂಘ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಶ್ಲಾಘನೀಯವಾಗಿದೆ ಎಂದ ಅವರು ಕುರುಹಿನ ಶೆಟ್ಟಿ ಸಮಾಜ ರಾಜಕೀಯ ಮತ್ತು ಶೈಕ್ಷಣಿಕ, ಆರ್ಥಿಕವಾಗಿ ಸದೃಢರಾಗಿ ಸಬಲ ರಾಗಬೇಕು ಎಂದು ತಿಳಿಸಿದರು.

ಕುರುಹಿನ ಶೆಟ್ಟಿ ಮಹಿಳಾ ಸಂಘದ ಜಿಲ್ಲಾಧ್ಯಕ್ಷೆ ಪುಷ್ಪಾ ರಾಜೇಂದ್ರ ಮಾತನಾಡಿ, ಮಹಿಳಾ ಸಂಘ ಅನೇಕ ಸಮಾಜಮುಖೀ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖೀ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.

Advertisement

ಹುಬ್ಬಳ್ಳಿ ವೀರಭೀಕ್ಷಾವರ್ತಿ ನೀಲಕಂಠ ಮಠದ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಕಾರ್ಯ ಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀವಚನ ನೀಡಿದರು. ಚಲನಚಿತ್ರ ಕಲಾವಿದ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುರುರಾಜ್‌ ಹೊಸಕೋಟೆ ಮಾತನಾಡಿದರು.

ಸಮಾರಂಭದಲ್ಲಿ ಗ್ರಾಪಂ, ಪಪಂ, ನಗರಸಭೆ ಚುನಾವಣೆಯಲ್ಲಿ ಗೆದ್ದ ಕುರುಹಿನ ಶೆಟ್ಟಿ ಸಮಾಜದವರನ್ನು ಸನ್ಮಾನಿಸಲಾಯಿತು. ಕುರುಹಿನ ಶೆಟ್ಟಿ ಸಂಘದ ರಾಜ್ಯಾಧ್ಯಕ್ಷೆ ಅಂಭಾದಾಸ್‌ ಕಾಮೂರ್ತಿ, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್‌, ರಾಜ್ಯ ನೇಕಾರರ ಸಮುದಾಯಗಳ ಮಹಿಳಾ ಒಕ್ಕೂಟದ ಉಮಾ ಜಗದೀಶ್‌, ಡಾ| ಜಯಲಕ್ಷಿ, ಜಿ.ಟಿ.ಸೋಮಶೇಖರ್, ಇಂದುಕುಮಾರ್‌ ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next