Advertisement

ಟೆಂಪೋಗಳಲ್ಲಿ ಪ್ರಯಾಣಿಕರ ಸಾಗಾಟ ತಡೆಗಟ್ಟಿ

04:08 PM May 04, 2019 | Team Udayavani |

ತುಮಕೂರು: ಜಿಲ್ಲೆಯಲ್ಲಿ ಪ್ರಯಾಣಿಕರನ್ನು ಸಾಗಾಟ ಮಾಡುವ ಟ್ರ್ಯಾಕ್ಟರ್‌, ಟೆಂಪೋ, ಲಗೇಜು ಆಟೋ ಗಳು ಸೇರಿದಂತೆ ಸರಕು ವಾಹನಗಳನ್ನು ವಶಕ್ಕೆ ಪಡೆದು ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ ಕುಮಾರ್‌ ಪೊಲೀಸ್‌ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸೂಚನೆ: ಸರಕು ಹೊತ್ತೂಯ್ಯಬೇಕಾಗಿರುವ ಟೆಂಪೋ, ಲಗೇಜು ಆಟೋ, ಟ್ರ್ಯಾಕ್ಟರ್‌ಗಳು ಜನರನ್ನು ಸಾಗಾಟ ಮಾಡುತ್ತಿವೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ. ಜಿಲ್ಲೆಯಲ್ಲಿರುವ ಆಯಾ ಠಾಣಾ ವ್ಯಾಪ್ತಿಯಲ್ಲಿ ಜನರನ್ನು ಸಾಗಾಟ ಮಾಡುವ ಸರಕು ವಾಹನಗಳನ್ನು ವಶಕ್ಕೆ ಪಡೆದು ಸಾರಿಗೆ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಲು ಸಾರಿಗೆ ಇಲಾಖೆಗೆ ಶಿಫಾರಸು ಮಾಡುವಂತೆ ಸಭೆಯಲ್ಲಿ ಹಾಜರಿದ್ದ ವಿವಿಧ ಪೊಲೀಸ್‌ ಠಾಣೆಗಳ ಇನ್ಸ್‌ಪೆಕ್ಟರ್‌ಗಳಿಗೆ ಸೂಚಿಸಿದರು.

ಮಕ್ಕಳ ಸುರಕ್ಷತೆ ಗಮನಿಸಿ: ಶಾಲಾ ಮಕ್ಕಳನ್ನು ವಾಹನ ಗಳಲ್ಲಿ ಕುರಿಗಳ ರೀತಿ ತುಂಬಿಕೊಂಡು ಸಾಗುವ ದೃಶ್ಯಗಳು ಕಂಡುಬರುತ್ತಿವೆ. ಇಂತಹ ವಾಹನಗಳ ವಿರುದ್ಧ ಕ್ರಮಕೈಗೊಂಡು ವಾಹನಗಳ ಪರವಾನಗಿ ರದ್ದು ಮಾಡಬೇಕು. ಈ ಬಗ್ಗೆ ಜಿಲ್ಲೆಯಲ್ಲಿರುವ ಶಾಲೆಗಳ ಆಡಳಿತ ಮಂಡಳಿಗೆ ಪತ್ರ ಬರೆದು ಮಕ್ಕಳ ಸುರಕ್ಷತೆ ಕುರಿತು ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಎಂ.ಆರ್‌.ಕಾಮಾಕ್ಷಿಗೆ ತಿಳಿಸಿದರು.

ನಿರ್ದೇಶನ ನೀಡಿ: ಅಗತ್ಯ ಸ್ಥಳಗಳಲ್ಲಿ ಕೆಎಸ್‌ಆರ್‌ಟಿಸಿ ವತಿಯಿಂದ ಬಸ್‌ಗಳನ್ನು ಓಡಿಸುವಂತೆ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗೆ ಸೂಚಿಸಿದ ಜಿಲ್ಲಾಧಿಕಾರಿ, ಗಾರ್ಮೆಂಟ್ಸ್‌, ಕಂಪನಿಗಳಿಗೆ ಹಾಗೂ ಕಟ್ಟಡ ನಿರ್ಮಾಣ ಕಂಟ್ರ್ಯಾಕ್ಟರ್‌ಗಳಿಗೆ ಸೂಕ್ತ ನಿರ್ದೇಶನ ನೀಡಿ ಸರಕು ವಾಹನಗಳಲ್ಲಿ ಕಾರ್ಮಿ ಕರನ್ನು ಉದ್ಯೋಗಸ್ಥರು ಪ್ರಯಾಣಿಸದಂತೆ ಸೂಚಿಸು ವಂತೆ ಜಂಟಿ ನಿರ್ದೇಶಕರು, ಕೈಗಾರಿಕಾ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಕಲ್ಯಾಣಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

Advertisement

ವಾಹನ ಚಲಾಯಿಸುವ ಅಪ್ರಾಪ್ತ ಸವಾರರನ್ನು ಪತ್ತೆ ಹಚ್ಚಿ ಆ ವಾಹನದ ಮಾಲಿಕರ ವಿರುದ್ಧ ಕೇಸು ದಾಖಲಿಸಿ. ಅಲ್ಲದೆ ವಾಹನದ ಆರ್‌.ಸಿ.ರದ್ದುಪಡಿಸಿ, ಮೊಬೈಲ್ ಬಳಸುವ ಸವಾರರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚನೆ ನೀಡಿದರು.

65 ಪರವಾನಗಿ ರದ್ದು: ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ 121 ಪ್ರಕರಣಗಳ ಪೈಕಿ 65 ಪ್ರಕರಣಗಳಲ್ಲಿ ಪರವಾನಗಿಯನ್ನು ರದ್ದುಗೊಳಿಸ ಲಾಗಿದೆ. ಮದ್ಯಪಾನ ಮಾಡಿ ವಾಹನ ಚಲಾಯಿ ಸುವವರು ಸೇರಿದಂತೆ ಬಾರ್‌ಗಳ ಮೇಲೂ ನಿಗಾವಹಿಸಿ ಈ ಬಗ್ಗೆ ವರದಿಯನ್ನು ಪೊಲೀಸ್‌ ಇಲಾಖೆಯೊಂದಿಗೆ ಹಂಚಿಕೊಳ್ಳುವಂತೆ ಅಬಕಾರಿ ಇಲಾಖೆ ಡೀಸಿಗೆ ಸೂಚನೆ ನೀಡಿದರು.

ವರದಿ ಸಲ್ಲಿಸಿ: ರಸ್ತೆ ನಿಯಮ, ಸುರಕ್ಷತೆ, ರಸ್ತೆ ಗುಂಡಿ, ಸ್ಪೀಡ್‌ ಬ್ರೇಕ್‌ ಅಳವಡಿಕೆ, ಸೈನ್‌ಬೋರ್ಡ್‌, ರಸ್ತೆ ರಿಪೇರಿ ಸೇರಿ ರಸ್ತೆಯ ಸುರಕ್ಷತೆ ಸುಧಾರಣೆಗೆ ದೀರ್ಘ‌ಕಾಲೀನ ಹಾಗೂ ಅಲ್ಪಕಾಲೀನ ಕ್ರಿಯಾ ಯೋಜನೆ ರೂಪಿಸಿ ಮೇ 15ರೊಳಗೆ ಸಲ್ಲಿಸುವಂತೆ ಪೊಲೀಸ್‌, ಶಿಕ್ಷಣ ಇಲಾಖೆ, ಮಹಾ ನಗರಪಾಲಿಕೆ, ಲೋಕೋಪಯೋಗಿ, ಕೇಶಿಪ್‌, ಪಿಆರ್‌ಇಡಿ ಸೇರಿ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಇಲಾಖೆಗಳು ವರದಿ ಸಲ್ಲಿಸಬೇಕು ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಮಾತನಾಡಿ, ಕೇರಳ ಮಾದರಿಯಲ್ಲಿ ಪಿಎಸ್‌ಸಿ ವಿದ್ಯಾರ್ಥಿ ಮತ್ತು ಪೊಲೀಸರನ್ನು ಒಳಗೊಂಡ ತಂಡಗಳನ್ನು ರಚಿಸಿ ಸಾರಿಗೆ ನಿಯಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುವುದು. ಸಾರಿಗೆ ನಿಯಮ ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ವಿಶೇಷ ಅಭಿಯಾನ ಆರಂಭಿಸಿ ಎಂದು ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ತುಮಕೂರು ನಗರ ವಿಭಾಗದ ಡಿವೈಎಸ್‌ಪಿ ತಿಪ್ಪೇಸ್ವಾಮಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜು, ಪೊಲೀಸ್‌, ಶಿಕ್ಷಣ ಇಲಾಖೆ, ಪಾಲಿಕೆ, ರೈಲ್ವೆ ಇಲಾಖೆಯ ಹಲವು ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next