Advertisement

ವೈದ್ಯರ ಕೊರತೆ ನೀಗಿಸಿ ಸಾಂಕ್ರಾಮಿಕ ರೋಗ ತಡೆಯಿರಿ: ಶೋಭಾ

05:15 AM Jul 20, 2017 | Team Udayavani |

ಮಡಿಕೇರಿ: ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಎದುರಾಗಿದ್ದು, ಬಡ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತತ್‌ಕ್ಷಣ ವೈದ್ಯರ ನೇಮಕಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್‌ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.  

Advertisement

ಮಡಿಕೇರಿ ತಾಲೂಕು ಪಂಚಾಯತ್‌ನ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವೈದ್ಯರಿಲ್ಲದ ಆಸ್ಪತ್ರೆಯಿಂದ ರೋಗಿಗಳಿಗೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು. ಪ್ರತಿದಿನ ನೂರಾರು ರೋಗಿಗಳು ಚಿಕಿತ್ಸೆಗೆಂದು ಆಸ್ಪತ್ರೆಗೆ ಬರುತ್ತಾರೆ. ಆದರೆ ವೈದ್ಯರಿಲ್ಲದೆ ತುರ್ತು ಚಿಕಿತ್ಸೆಗಾಗಿ ಮಡಿಕೇರಿ, ಇನ್ನಿತರೆಡೆಯ ಆಸ್ಪತ್ರೆ ಗಳನ್ನು ಅವಲಂಬಿಸಬೇಕಾಗಿದೆ ಎಂದರು.ಬಡರೋಗಿಗಳು ಸಾಕಷ್ಟು ಕಷ್ಟನಷ್ಟಗಳನ್ನು ಅನುಭವಿಸುವಂತಾಗಿದೆ ಎಂದು ಉಪಾಧ್ಯಕ್ಷರಾದ ಬೊಳಿಯಾಡಿರ ಸಂತು ಸುಬ್ರಮಣಿ ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ| ಮಂಜುಳಾ ಮಾತನಾಡಿ, ವೈದ್ಯರನ್ನು ನೇಮಿಸಲು ಈಗಾಗಲೇ ಆನ್‌ಲೈನ್‌ ಮೂಲಕ ಅರ್ಜಿ ಕರೆಯಲಾಗಿದೆ. ಆರೋಗ್ಯಇಲಾಖೆಯ ಜಿಲ್ಲಾ ಅಧಿಕಾರಿ ಜತೆ ಚರ್ಚಿಸಿ ಸಮಸ್ಯೆಗೆ ಪರಿ ಹಾರ ಕಂಡುಕೊಳ್ಳಲಾಗುವುದು ಎಂದರು. 

ವಿವಿಧೆಡೆ ಡೆಂಗ್ಯೂ ಹಾಗೂ ಜಾಂಡೀಸ್‌ ಪತ್ತೆಯಾ ಗುತ್ತಿರುವ ಬಗ್ಗೆ ಮಾಹಿತಿ ನೀಡಿದ ಡಾ| ಮಂಜುಳಾ, ಮಡಿಕೇರಿಯಲ್ಲಿ 18, ಸೋಮವಾರಪೇಟೆಯಲ್ಲಿ 48 ಹಾಗೂ ವಿರಾಜಪೇಟೆಯಲ್ಲಿ 35 ಪ್ರಕರಣ ಕಂಡು ಬಂದಿದೆ. ಕುಶಾಲನಗರ ವ್ಯಾಪ್ತಿಯಲ್ಲಿ ಮಳೆ ಕಡಿಮೆ ಇರುವ ಕಾರಣ ಹೆಚ್ಚು ಪ್ರಕರಣ ಕಂಡು ಬರುತ್ತಿರುವು ದಾಗಿ ತಿಳಿಸಿದರು.
 
ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್‌. ಗಾಯತ್ರಿ ಮಾತನಾಡಿ, ಮಡಿಕೇರಿ ತಾಲೂಕಿಗೆ ಈ ಬಾರಿ 42 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಈ ಬಾರಿ ಶಿಕ್ಷಕರ ಕೊರತೆ ಉಂಟಾ ಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದರು.

ಕೊಯನಾಡುಶಾಲೆ ಹಾಗೂ ದೇವಸ್ತೂರು ಮತ್ತು ಕುಂಜಿಲ ಕಕ್ಕಬ್ಬೆ ಶಾಲೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಈ ಕಟ್ಟಡವನ್ನು ನೆಲಸಮಗೊಳಿಸಲು ಉಪನಿರ್ದೇಶಕ ರಿಂದ ಅನುಮೋದನೆ ದೊರಕಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಅಧ್ಯಕ್ಷರಾದ ಶೋಭಾ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ರಾಯ್‌ ತಮ್ಮಯ್ಯ ಅಸಮಾಧಾನ ವ್ಯಕ್ತಪಡಿಸಿದರು. 

Advertisement

ತೋಟಗಾರಿಕೆ ಇಲಾಖೆಯ ವಿವಿಧ ಕಾರ್ಯಕ್ರಮ ದಡಿಯಲ್ಲಿ ರೈತರಿಗೆ ತೆಂಗಿನ ಗಿಡಗಳನ್ನು ವಿತರಿಸುವ ಯೋಜನೆ ಇದೆ ಎಂದು ಇಲಾಖೆಯ ಅಧಿಕಾರಿ ಸಭೆಗೆ ತಿಳಿಸಿದರು. 

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಉಪಾಧ್ಯಕ್ಷ ಸಂತು ಸುಬ್ರಮಣಿ, ತಾಲೂಕಿನ ವಿವಿಧೆಡೆ ಆನೆ ಹಾವಳಿ ಇರುವುದರಿಂದ ರೈತರು ತೆಂಗಿನ ಗಿಡಗಳು ಬೇಡ ಎನ್ನುತ್ತಿದ್ದಾರೆ. ಆದ್ದರಿಂದ ತೆಂಗಿನ ಗಿಡಗಳಿಗೆ ಬದಲಾಗಿ ಬೇರೆ ಗಿಡಗಳನ್ನು ವಿತರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಹಮ್ಮಿಯಾಲ ಹಾಗೂ ಮುಟ್ಲುವಿನಲ್ಲಿ ಒಂದು ತಿಂಗಳಿನಿಂದ ಆರು ಮನೆಗಳಿಗೆ ವಿದ್ಯುತ್‌ ಇಲ್ಲ.ಚೆಸ್ಕಾಂ ಇಲಾಖೆ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರಾಯ್‌ ತಮ್ಮಯ್ಯ ಆರೋಪಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ಈ ಭಾಗದ ನಿವಾಸಿಗಳು ಸಮಸ್ಯೆಗಳ ಬಗ್ಗೆ ದೂರು ನೀಡಲು ಹಿಂದೇಟು ಹಾಕುತ್ತಾರೆ. ಇದರಿಂದ ಸಮಸ್ಯೆ ಬಗೆ ಹರಿಯುತ್ತಿಲ್ಲವೆಂದರು.
 
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಯ್‌ ತಮ್ಮಯ್ಯ ಸಮಜಾಯಿಷಿ ನೀಡುವುದನ್ನು ಬಿಟ್ಟು ಸಕಾಲದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಸೂಚಿಸಿದರು. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಜೀವನ್‌ ಕುಮಾರ್‌ ಹಾಗೂ ವಿವಿಧ ಇಲಾಖಾಧಿ ಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next