Advertisement

ಕುಡಿಯದಿದ್ದರೂ, ಕುಡುಕನಂತೆ ನಟಿಸಿ…

08:35 PM Oct 21, 2019 | Lakshmi GovindaRaju |

ಹಾಸ್ಟೆಲ್‌ ಹುಡುಗರು ನನ್ನ ಬಳಿ ಓಡಿ ಬಂದು- “ಹನುಮೇಶ್‌ಗೆ ಏನಾಯ್ತೋ, ಇದುವರೆಗೂ ಅವನು ಕುಡಿದಿರೋದನ್ನೇ ನೋಡಿಲ್ಲ. ಇದು ನಿಜಾನೇನ್ರೊ’ ಎಂದೆಲ್ಲಾ ಅವರವರೇ ಮಾತನಾಡಿಕೊಳ್ಳುತ್ತಿದ್ದರು. ಇನ್ನು ಕೆಲವರು, “ಹೇ ಅವ್ನು ಅಂಥವನಲ್ಲ. ನಂಬಲಿಕ್ಕೆ ಅಸಾಧ್ಯ’ ಅನ್ನುತ್ತಿದ್ದರು. ಎಷ್ಟೋ ಹುಡುಗರು ನನ್ನ ಬಾಯಿ ಹತ್ತಿರ ತಮ್ಮ ಬಾಯಿ ತಂದು ವಾಸನೆ ನೋಡುತ್ತಿದ್ದರು…

Advertisement

ಉನ್ನತ ವಿದ್ಯಾಭ್ಯಾಸಕ್ಕೆಂದು ಹೊರಟ ವಿದ್ಯಾರ್ಥಿಗಳು, ಮನೆ, ಊರು ಬಿಟ್ಟು ಇನ್ನೊಂದು ಊರಲ್ಲಿ ಬದುಕು ಕಟ್ಟಿಕೊಳ್ಳುವುದು ಸಾಮಾನ್ಯ. ಹೀಗೆ ಬಂದ, ನಮ್ಮಂಥ ಸಾವಿರಾರು ವಿದ್ಯಾರ್ಥಿಗಳನ್ನು ವಸತಿನಿಲಯಗಳು ಕೈಬೀಸಿ ಕರೆಯುತ್ತವೆ. ಅದೇ ನಮ್ಮೆಲ್ಲ ತರ್ಲೆ, ತುಂಟಾಟಗಳ ಕೇಂದ್ರ. ಅಲ್ಲಿ ನಾವೇ ಮಾಲೀಕರು. ಇನ್ನೊಬ್ಬರ ಕಾಲೆಳೆಯೋದು, ಮತ್ತೂಬ್ಬರನ್ನು ಗೋಳಾಡಿಸೋದು, ನಮ್ಮ ಮೋಜು ಮಸ್ತಿಗಾಗಿ ಬೇರೆಯವರನ್ನು ಬಕ್ರ ಮಾಡಿ ಅತೀವ ಆನಂದ ಪಡೆಯುವುದು… ಇಂಥದೆಲ್ಲ ನಡೆಯುತ್ತಲೇ ಇರುತ್ತದೆ.

ನಾನೂ, ನಮ್ಮೂರು ಬಿಟ್ಟು, ಪಕ್ಕದ ಜಿಲ್ಲೆ ದಾವಣಗೆರೆಗೆ ಸ್ನಾತಕೋತ್ತರ ಪದವಿಗಾಗಿ ಪ್ರಯಾಣ ಬೆಳೆಸಿದೆ. ಅಲ್ಲಿ ನನಗ್ಯಾರೂ ಪರಿಚಯವಿರಲಿಲ್ಲ. ಹೇಗೋ ದಾವಣಗೆರೆ ವಿವಿಯಲ್ಲಿ ಪ್ರವೇಶ ಪಡೆದು, ಬಾಡ ಕ್ರಾಸ್‌ ಪುರುಷರ ಹಾಸ್ಟೆಲ್‌ನಲ್ಲಿ ಸೇರಿಕೊಂಡೆ. ದಿನ ಕಳೆದಂತೆ ಸ್ನೇಹಿತರು ಪರಿಚಿತರಾಗಿ ಉತ್ತಮ ಬಾಂಧವ್ಯ ಬೆಳೆಸಿಕೊಂಡು, ದ್ವಿತೀಯ ವರ್ಷದ ಸ್ನಾತಕೋತ್ತರ ಪದವಿಗೆ ಬರುವ ಹೊತ್ತಿಗೆ ಹಾಸ್ಟೆಲ್‌ ಬದಲಾವಣೆ ಗೊಂಡಿತು.

ಹೊಸ ಹಾಸ್ಟೆಲ್‌ ಆಗಿದ್ದರಿಂದ ನಮ್‌ ಡಿಪಾರ್ಟ್‌ ಮೆಂಟ್‌ ಹುಡುಗರ ಅಕ್ಕ ಪಕ್ಕದಲ್ಲಿದ್ದರೆ ಚೆಂದವೆಂದು ಮಧು, ಸಂದೀ, ತಿಪ್ಪೇಶ್‌, ಮಂಜು ಇವರಿದ್ದ ಎದುರು ರೂಮನ್ನೇ ಆಯ್ಕೆ ಮಾಡಿಕೊಂಡೆ. ಇವರೆಲ್ಲಾ ತುಂಬಾ ಆತ್ಮೀಯರಾಗಿದ್ದರು. ದಿನಕಳೆದಂತೆ ನಮ್ಮ ಆತ್ಮೀಯತೆ ಸಲುಗೆಗೆ ತಿರುಗಿದ್ದರಿಂದ ನಮ್ಮ ಹಾಸ್ಯಕ್ಕೆ ಇನ್ನೊಬ್ಬರು ಗುರಿಯಾಗುತ್ತಿದ್ದರು. ವಸತಿನಿಲಯದಲ್ಲಿ ನಡೆದ ಮಸ್ತಿಯ ವಿಚಾರ ನಿಮಗೆ ಹೇಳುತ್ತೇನೆ.

ನಮ್ಮದು ಜರ್ನಲಿಸಮ್‌ ಆಗಿದ್ದರಿಂದ, ರಿಪೋರ್ಟಿಂಗ್‌, ಅಸೈನ್ಮೆಂಟ್‌, ಕ್ಲಾಸ್‌ವರ್ಕ್‌ಗಳು ಅಂತ ರಾತ್ರಿ ಹಾಸ್ಟೆಲ್‌ಗೆ ಬರುವ ಹೊತ್ತಿಗೆ ತುಂಬಾ ಸುಸ್ತಾದಂತೆ ಅನ್ನಿಸುತ್ತಿತ್ತು. ನನ್ನ ಸಹಪಾಠಿಗಳು ಕೂಡ ಸಪ್ಪೆಮುಖದಿಂದ ಕುಳಿತಿರುತ್ತಿದ್ದರು. ಹೀಗೇ ಒಂದು ದಿನ, ಕಾಲೇಜಿಂದ ಬಂದವನೇ ಮಧು ಜೊತೆ ಐಡಿಯಾ ಮಾಡಿ,ಯಾರಿಗೂ ಅನುಮಾನ ಬಾರದಂತೆ ಕುಡುಕನಂತೆ ನಟನೆ ಮಾಡಲು ಶುರು ಮಾಡಿದೆ. ಬಾಗಿಲ ಮುಂದೆ ಬಿದ್ದೆ,

Advertisement

ನಂತರ ಎದ್ದೆ. ನಿಂತಲ್ಲಿ ನಿಲ್ಲಲಾಗುತ್ತಿಲ್ಲ, ತೊದಲು ನುಡಿಗಳು, ಇದನ್ನೆಲ್ಲಾ ಗಮನಿಸಿದ ಹಾಸ್ಟೆಲ್‌ ಹುಡುಗರು ನನ್ನ ಬಳಿ ಓಡಿ ಬಂದು- “ಹನುಮೇಶ್‌ಗೆ ಏನಾಯ್ತೋ, ಇದುವರೆಗೂ ಅವನು ಕುಡಿದಿರೋದನ್ನೇ ನೋಡಿಲ್ಲ. ಇದು ನಿಜನೇನ್ರೊ’ ಎಂದೆಲ್ಲಾ ಅವರವರೇ ಮಾತನಾಡಿಕೊಳ್ಳುತ್ತಿದ್ದರು. ಇನ್ನೂ ಕೆಲವರು, “ಹೇ ಅವ್ನು ಅಂಥವನಲ್ಲ. ನಂಬಲಿಕ್ಕೆ ಅಸಾಧ್ಯ’ ಅನ್ನುತ್ತಿದ್ದರು. ಎಷ್ಟೋ ಹುಡುಗರು ನನ್ನ ಬಾಯಿ ಹತ್ತಿರ ಬಾಯಿ ತಂದು ವಾಸನೆ ನೋಡುತ್ತಿದ್ದರು.

ಹಾಸ್ಟೆಲ್‌ ತುಂಬಾ ನನ್ನದೇ ಮಾತು. ಹೀಗೆ ಬಣ್ಣ ಹಚ್ಚಿದ ಈ ದೃಶ್ಯವನ್ನು ಕಂಡವರೆಲ್ಲಾ ದಿಗ್ಬ್ರಾಂತರಾದರು. ನಂತರ ಈ ತೇಪೆ ಮುಚ್ಚುವ ಸಲುವಾಗಿ ಈ ನಾಟಕವನ್ನೇ ಮುಂದುವರಿಸುವಂತೆ ಮಧು ನನಗೆ ಕಣ್ಸನ್ನೆ ಮಾಡಿದ. ಸಂದೀಪನಿಗೆ ನನ್ನದು ನಾಟಕವೆಂಬುದು ಗೊತ್ತಾಯ್ತು. ಮೂವರೂ ಯಾರಿಗೂ ಗೊತ್ತಾಗದಂತೆ ಮೆಲ್ಲಗೆ ನಮ್ಮ ರೂಮಿನ ಒಳಗೆ ಹೋಗಿ, ಬಾಗಿಲು ಹಾಕಿಕೊಂಡು, ಹೊಟ್ಟೆ ಹುಣ್ಣಾಗದುವಂತೆ ಸಖತ್ತಾಗಿ ನಕ್ಕೆವು. “ಎಲ್ಲರೂ ನಂಬಿದ್ದಾರೆ. ನೀನೇನಾದರೂ ಸುಳ್ಳು ಅಂತ ಹೇಳಿದರೆ ಕಷ್ಟವಾಗುತ್ತೆ’ ಎಂದು ಗೆಳೆಯರು ಎಚ್ಚರಿಸಿದರು. ನನಗೂ ಸ್ವಲ್ಪ ಗಾಬರಿಯಾಯಿತು.

ಹೊರಗೆ ಬಂದರೆ… ಎಲ್ಲರೂ, ನನ್ನ ಕುರಿತು ಚರ್ಚೆಯಲ್ಲಿ ಮುಳುಗಿದ್ದಾರೆ. ಅವರ ಮುಗªತೆ ಕಂಡು ನಗು ಬಂತು. ಹಾಗೆಯೇ, ಎಂತಹ ಒಳ್ಳೆಯ ಗೆಳೆಯರು ಸಿಕ್ಕಿದ್ದಾರಲ್ಲ ಅಂತ ಹೆಮ್ಮೆಯಾಯಿತು. ಇದಾದ ಮೇಲೆ, ಯಾವತ್ತೂ ಡ್ರಿಂಕ್ಸ್‌ ರುಚಿಯನ್ನೇ ಕಾಣದ ನನಗೆ ಹಾಸ್ಟೆಲ್‌, ಯುನಿವರ್ಸಿಟಿ ತುಂಬೆಲ್ಲಾ ಕುಡುಕ ಹನುಮೇಶ್‌ ಎಂದು ಕರೆಯುವ ಪದ್ಧತಿ ಜಾರಿಯಾಯಿತು. ಈ ರೀತಿ ಆನಂದಿಸಿದ ನಾವು ಇಂದು ಈ ಯಾಂತ್ರಿಕ ಜೀವನಕ್ಕೆ ಹೊಂದಿಕೊಂಡು ಬದುಕನ್ನು ಎಂಜಾಯ್‌ ಮಾಡುವುದನ್ನೇ ಮರೆತು ಹೋಗಿದ್ದೇವೆ ಅನಿಸುತ್ತಿದೆ.

* ಹನುಮೇಶ್‌ ಭೀಮನಕೆರೆ

Advertisement

Udayavani is now on Telegram. Click here to join our channel and stay updated with the latest news.

Next