Advertisement

ಪ್ರಮುಖ ಕಣಗಳಲ್ಲಿ ಪ್ರತಿಷ್ಠೆ ಪಣಕ್ಕೆ

11:43 AM Apr 19, 2018 | |

ಮಾಜಿ ಪ್ರಧಾನಿ ನಿವಾಸವಿರುವ ಪದ್ಮನಾಭನಗರ ರಾಜಕೀಯವಾಗಿ ಹೆಚ್ಚು ಮಹತ್ವ ಪಡೆದಿದ್ದು, ಇಲ್ಲಿ ಬಿಜೆಪಿ ಪ್ರಭಾವವಿದ್ದರೂ ಭಾರೀ ಪೈಪೋಟಿ ನಿರೀಕ್ಷಿಸಲಾಗುತ್ತಿದೆ. ಇನ್ನು ಡಿಕೆಶಿ ಶಿಷ್ಯನ ಸ್ಪರ್ಧೆಯಿಂದಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದ ಕಣ ಕೂಡ ರಂಗೇರಿದೆ. ಇನ್ನು ಚಿಕ್ಕಪೇಟೆಯಲ್ಲಿ ಪಕ್ಷಾಂತರದ ಗಾಳಿಯಿದ್ದು, ತ್ರಿಕೋನ ಸ್ಪರ್ಧೆಯ ಸುಳಿವಿದೆ. ಹಾಗೇ ಗೃಹ ಸಚಿವರು ಹಾಗೂ ಅವರ ಮಗಳು ಸ್ಪರ್ಧಿಸುತ್ತಿರುವ ಅಕ್ಕಪಕ್ಕದ ಬಿಟಿಎಂ ಮತ್ತು ಜಯನಗರ ಕ್ಷೇತ್ರಗಳ ಚುನಾವಣೆ ಕೂಡ ಕುತೂಹಲ ಕೆರಳಿಸಿದೆ.

Advertisement

ಪದ್ಮನಾಭ ನಗರ ಬಿಜೆಪಿ ಬಿಗಿ ಪಟ್ಟು ಪದ್ಮನಾಭ ನಗರ ಕ್ಷೇತ್ರ ಎಂದಾಕ್ಷಣ ನೆನಪಾಗುವುದು ಮಾಜಿ ಪ್ರಧಾನಿ ದೇವೇಗೌಡರ ನಿವಾಸ. ಹಾಗೇ ರಾಜಕೀಯವಾಗಿ ಭಾರೀ ಮಹತ್ವ ಪಡೆದಿರುವ ಈ ಕ್ಷೇತ್ರದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌ ಅವರ ಪ್ರಾಬಲ್ಯವಿರುವುದೂ ಹೌದು. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಆರ್‌.ಅಶೋಕ್‌, ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗುರಪ್ಪನಾಯ್ಡು ಹಾಗೂ ಜೆಡಿಎಸ್‌ನಿಂದ ವಿ.ಕೆ. ಗೋಪಾಲ್‌ ಮುಖಾಮುಖೀಯಾಗಲಿದ್ದಾರೆ. ಚುನಾವಣೆ ವೇಳಾಪಟ್ಟಿ ಪ್ರಕಟಕ್ಕೆ ಮುನ್ನವೇ ಅಭ್ಯರ್ಥಿ ಅಖೈರುಗೊಂಡಿದ್ದರಿಂದ ಜೆಡಿಎಸ್‌ನ ಗೋಪಾಲ್‌ ಹಾಗೂ ಬಿಜೆಪಿಯ ಆರ್‌.ಅಶೋಕ್‌ ಮೊದಲೇ ಪ್ರಚಾರ ಆರಂಭಿಸಿದ್ದರು. ಕಾಂಗ್ರೆಸ್‌ ಅಭ್ಯರ್ಥಿ ಈಗಷ್ಟೇ ಪ್ರಚಾರ ಶುರು ಮಾಡಿದ್ದಾರೆ.

ಬೆಂ.ದಕ್ಷಿಣದಲ್ಲಿ ಸಮಬಲ ಸಮರ ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ಹುಟ್ಟಿದ ಈ ಕ್ಷೇತ್ರ, ನಗರ ಮತ್ತು ಗ್ರಾಮಾಂತರ
ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ರಾಜಕೀಯ ಜಿದ್ದಾಜಿದ್ದಿನ ಕಣ. ಎರಡು ಬಾರಿ ಕ್ಷೇತ್ರದಿಂದ ಆಯ್ಕೆಯಾಗಿರುವ ಬಿಜೆಪಿಯ ಎಂ.ಕೃಷ್ಣಪ್ಪ ಹ್ಯಾಟ್ರಿಕ್‌ ಗೆಲುವಿಗೆ ಹವಣಿಸುತ್ತಿದ್ದಾರೆ. ಕಾಂಗ್ರೆಸ್‌ನಿಂದ ಸಚಿವ ಡಿಕೆಶಿ ಶಿಷ್ಯ ಆರ್‌.ಕೆ.ರಮೇಶ್‌ ಕಣಕ್ಕಿಳಿದಿರುವ ಕಾರಣ ಕಣ ರಂಗೇರಿದೆ. ಜೆಡಿಎಸ್‌ ಅಭ್ಯರ್ಥಿಯಾಗಿ ಪ್ರಭಾಕರರೆಡ್ಡಿ ಕಣದಲ್ಲಿದ್ದಾರೆ. ಬಿಬಿಎಂಪಿ ವ್ಯಾಪ್ತಿಯ ಏಳೂವರೆ ವಾರ್ಡ್‌ಗಳು ಮಾತ್ರವಲ್ಲದೆ, ಜಿಗಣಿ ಪುರಸಭೆಯ 14, ಹೆಬ್ಬಗೋಡಿ ನಗರಸಭೆಯ 6 ವಾರ್ಡ್‌ಗಳು, 8 ಜಿ.ಪಂ ಕ್ಷೇತ್ರಗಳು, 9 ಗ್ರಾ.ಪಂ.ಗಳನ್ನೊಳಗೊಂಡ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಲಕ್ಷಣಗಳಿವೆ.

ಚಿಕ್ಕಪೇಟೆಯಲ್ಲಿ ವ್ಯಕ್ತಿ ಪ್ರಭಾವ ಹೆಸರಿಗೆ ಚಿಕ್ಕಪೇಟೆಯಾದರೂ ರಾಜಕೀಯವಾಗಿ ದೊಡ್ಡಪೇಟೆಯೇ ಆಗಿರುವ ಇಲ್ಲಿ, ತಿಂಗಳ ಹಿಂದಿದ್ದ ಚಿತ್ರಣ ಈಗ ಬದಲಾಗಿದೆ. ಹಿಂದೊಮ್ಮೆ ಇಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದ ಹೇಮಚಂದ್ರ ಸಾಗರ್‌ ಇದೀಗ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದಾರೆ. ಇವರಿಗೆ ಹಾಲಿ ಶಾಸಕ, ಕಾಂಗ್ರೆಸ್‌ನ ಆರ್‌.ವಿ.ದೇವರಾಜ್‌ ಹಾಗೂ ಕಳೆದ ಬಾರಿ ಬಿಜೆಪಿಯ ಉದಯ ಗರುಡಾಚಾರ್‌ ಮುಖಾಮುಖೀ ಯಾಗಲಿದ್ದಾರೆ. ಕಾಂಗ್ರೆಸ್‌ನ ಆರ್‌.ವಿ.ದೇವರಾಜ್‌ ಇಲ್ಲಿ ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಬಿಜೆಪಿ ಹಾಗೂ ಜೆಡಿಎಸ್‌ ಅಭ್ಯರ್ಥಿಗಳಿಂದ ಕಠಿಣ ಸವಾಲು ಎದುರಿಸಬೇಕಿದೆ. ಬಿಬಿಎಂಪಿಯ ಏಳು ವಾರ್ಡ್‌ಗಳನ್ನು ಹೊಂದಿರುವ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ತಲಾ ಮೂವರು ಸದಸ್ಯರನ್ನು ಹೊಂದಿದ್ದು, ಒಬ್ಬ ಪಕ್ಷೇತರ ಸದಸ್ಯರಿದ್ದಾರೆ. ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರಕ್ಕಿಂತ ವ್ಯಕ್ತಿ ಪ್ರಭಾವವೇ ಹೆಚ್ಚು.

ಸಚಿವರ ಕೋಟೆ ಬಿಟಿಎಂ ಲೇಔಟ್‌ ಗೃಹ ಸಚಿವ ರಾಮಲಿಂಗಾರೆಡ್ಡಿ ಬಿಟಿಎಂ ಲೇಔಟ್‌ ಕ್ಷೇತ್ರ ಪ್ರತಿನಿಧಿಸಿದರೆ, ಅವರ ಪುತ್ರಿ ಸೌಮ್ಯ ರೆಡ್ಡಿಗೆ ಪಕ್ಕದ ಜಯನಗರದ ಟಿಕೆಟ್‌ ದೊರೆತಿದೆ. ಹೀಗಾಗಿ ಅಕ್ಕ-ಪಕ್ಕದ ಕ್ಷೇತ್ರಗಳಲ್ಲಿ ಗೆಲುವಿಗಾಗಿ ತಂದೆ-ಮಗಳ ಹೋರಾಟ ನಡೆದಿದೆ. ಬಿಟಿಎಂ ಲೇಔಟ್‌ನಲ್ಲಿ ಪಾಲಿಕೆ ಸದಸ್ಯ ದೇವದಾಸ್‌ಗೆ ಜೆಡಿಎಸ್‌ ಟಿಕೆಟ್‌ ನೀಡಿದ್ದು, ಬಿಜೆಪಿ ಟಿಕೆಟ್‌ ಘೋಷಣೆಯಾಗಿಲ್ಲ. 2008ರಲ್ಲಿ ರಾಮಲಿಂಗಾರೆಡ್ಡಿ ವಿರುದ್ಧ ಸೋತಿದ್ದ ಪ್ರಸಾದ್‌ ರೆಡ್ಡಿ, ಜಯದೇವ, ವಿವೇಕ್‌ ಸುಬ್ಟಾರೆಡ್ಡಿ, ಲಲ್ಲೇಶ್‌ ರೆಡ್ಡಿ ಹೆಸರುಗಳು ಕೇಳಿಬರುತ್ತಿವೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಾಮಲಿಂಗಾರೆಡ್ಡಿ ಗೆದ್ದರೂ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಅನಂತಕುಮಾರ್‌ಗೆ ಹೆಚ್ಚು ಮತ ಬರುತ್ತದೆ. ಹೀಗಾಗಿ ಬಿಟಿಎಂ ಲೇಔಟ್‌ ಕ್ಷೇತ್ರ ಹೊಂದಾಣಿಕೆ ರಾಜಕಾರಣಕ್ಕೆ ಖ್ಯಾತಿ ಪಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next