ಬೆಂಗಳೂರು: “ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುವ ವಿಚಾರದಲ್ಲಿ ಇಲ್ಲಿಯವರೆಗೆ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಹೇಳುತ್ತಿದ್ದ ಸಿದ್ದರಾಮಯ್ಯ ಅವರು ಇದೀಗ ಪತ್ನಿ ಹಾಗೂ ಪುತ್ರನನ್ನು ಕೇಳಿ ಹೇಳುತ್ತೇನೆ’ ಎಂದು ಮತ್ತೆ ಅಡ್ಡಗೋಡೆ ಮೇಲೆ ದೀಪವಿಟ್ಟಿದ್ದಾರೆ.
ಕೋಲಾರದಿಂದಲೇ ಸ್ಪರ್ಧಿಸಬೇಕೆಂದು ಒತ್ತಾಯಿಸಿ ತಮ್ಮ ನಿವಾಸದ ಮುಂದೆ ಧರಣಿ ಕುಳಿತಿದ್ದ ಮುಖಂಡರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಹೈಕಮಾಂಡ್ ನನಗೆ ಕೋಲಾರದಿಂದ ಸ್ಪರ್ಧಿಸುವುದು ಬೇಡ ಎಂದೂ ಹೇಳಿಲ್ಲ.
ನಾನೂ ಕೋಲಾರದಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದೂ ಹೇಳಿಲ್ಲ. ಆದರೆ, ಶೇ.1 ರಷ್ಟೂ ರಿಸ್ಕ್ ತೆಗೆದುಕೊಳ್ಳುವುದು ಬೇಡ. ನೀವು ಕ್ಷೇತ್ರದಲ್ಲಿ ಹೆಚ್ಚು ದಿನ ಪ್ರಚಾರ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಯೋಚಿಸಿ ಎಂದು ಹೇಳಿದ್ದಾರೆ. ಅದು ಬಿಟ್ಟರೆ ಬೇರೇನೂ ಇಲ್ಲ. ಮೈಸೂರಿಗೆ ಹೋಗುತ್ತಿದ್ದೇನೆ, ಪತ್ನಿ ಹಾಗೂ ಪುತ್ರನನ್ನು ಕೇಳುತ್ತೇನೆ ಎಂದು ಹೇಳಿದರು.
ಮತ್ತೊಂದೆಡೆ ಮೈಸೂರಿನಲ್ಲಿ ಹೈಕಮಾಂಡ್ ಹೇಳಿದ ಕಡೆ ಸ್ಪರ್ಧೆ ಮಾಡುತ್ತೇನೆ. ರಾಜಕಾರಣದಲ್ಲಿ ಏನಾದರೂ ಆಗಬಹುದು. ನಾಳೆಯೇ ಹೈಕಮಾಂಡ್ ಗೊಂದಲಕ್ಕೆ ತೆರೆ ಎಳೆಯಲೂಬಹುದು ಎಂದೂ ತಿಳಿಸಿದರು.
Related Articles
ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ, ಈ ಬಾರಿ ವರುಣಾದಲ್ಲೇ ಸ್ಪರ್ಧೆ ಮಾಡಲಿದ್ದಾರೆ ಎಂದೂ ಹೇಳಿದ್ದು, ಒಟ್ಟಾರೆ, ಸಿದ್ದರಾಮಯ್ಯ ಸ್ಪರ್ಧೆ ಕುತೂಹಲ ಮೂಡಿಸಿದೆ. ಈ ನಡುವೆ, ಕಡೂರು, ಕುಷ್ಟಗಿ, ಕೊಪ್ಪಳದಿಂದ ಸ್ಪರ್ಧೆ ಮಾಡಲಿದ್ದಾರೆಂಬ ಮಾತುಗಳೂ ಕೇಳಿಬರುತ್ತಿವೆ.
ಧರಣಿ: ಬೆಳಗ್ಗೆಯೇ ಕೋಲಾರದಿಂದ ದ್ವಿಚಕ್ರ ವಾಹನ, ಕಾರು, ಟೆಂಪೋಗಳಲ್ಲಿ ಆಗಮಿಸಿದ್ದ ಸಾವಿರಾರು ಕಾರ್ಯಕರ್ತರು ಕುಮಾರಪಾರ್ಕ್ ಬಳಿಯ ಸಿದ್ದರಾಮಯ್ಯ ನಿವಾಸದ ಮುಂದೆ ಧರಣಿ ಕುಳಿತರು. ನಂತರ ನಿವಾಸದ ಒಳಗೆ ಹೋಗಿ ಆವರಣದಲ್ಲಿ ಧರಣಿ ನಡೆಸಿ ಬೇಕೇ ಬೇಕು ಸಿದ್ದರಾಮಯ್ಯ ಬೇಕು ಎಂದು ಘೋಷಣೆ ಕೂಗಿದರು.
ಕೆಪಿಸಿಸಿ ಕಚೇರಿಯ ಸಭೆಗೆ ಹೋಗಬೇಕಾಗಿದ್ದ ಸಿದ್ದರಾಮಯ್ಯ ಧರಣಿ ಸ್ಥಳಕ್ಕೆ ಬಂದು, ಸಮಾಧಾನಪಡಿಸಲು ಯತ್ನಿಸಿದರು. ಆದರೆ, ಕಾರ್ಯಕರ್ತರು ಕೇಳದೆ ಪದೇ ಪದೇ ನೀವು ಬರಬೇಕು. ಕೊಟ್ಟ ಮಾತು ತಪ್ಪಬೇಡಿ ಎಂದು ಆಗ್ರಹಿಸಿದರು.
ಹೈಡ್ರಾಮಾ: ಈ ನಡುವೆ, ಸಿದ್ದರಾಮಯ್ಯ ನಿವಾಸದ ಮುಂದೆ ಮಂಗಳವಾರ ಹೈ ಡ್ರಾಮಾ ನಡೆಯಿತು. ಕೋಲಾರದಿಂದ ಆಗಮಿಸಿದ್ದ ಕಾರ್ಯಕರ್ತರು ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದರು. ಅಲ್ಲಿದ್ದ ನಾಯಕರು ತಡೆದರು. ಸಿದ್ದರಾಮಯ್ಯ ಅವರು ಬರಲೇಬೇಕು, ಅವರು ಒಪ್ಪಿಗೆ ಕೊಡುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಹಿಂದೆ ಸರಿಯುತ್ತಿಲ್ಲ. ಅವರು ಬಯಸಿದ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿದ್ದಾರೆ. ವರುಣಾ, ಕೋಲಾರ, ಬಾದಾಮಿ ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ಅನುಕೂಲ ನೋಡಿಕೊಂಡು ಸ್ಪರ್ಧೆ ಮಾಡಲಿದ್ದಾರೆ, ಅಂತಿಮ ತೀರ್ಮಾನ ಅವರದ್ದೇ.
– ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ