ಮಡಿಕೇರಿ: ಅತ್ಯಂತ ದಕ್ಷತೆ ಮತ್ತು ಪ್ರಾಮಾಣಿಕ ಸೇವೆಗಾಗಿ ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬಂದಿಗೆ ನೀಡಲಾಗುವ ಪ್ರತಿಷ್ಠಿತ ರಾಷ್ಟ್ರಪತಿ ಪದಕಕ್ಕೆ ಕೊಡಗು ಜಿಲ್ಲಾ ಮಹಿಳಾ ಪೊಲೀಸ್ ಹೆಡ್‌ಕಾನ್‌ಸ್ಟೇಬಲ್ ಎಂ.ಬಿ. ಸುಮತಿ ಅವರು ಭಾಜನರಾಗಿದ್ದಾರೆ.
ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ರಾಷ್ಟ್ರಪತಿ ಪದಕ ದೊರೆಯುತ್ತಿರುವುದು ಮತ್ತೂಂದು ವಿಶೇಷವಾಗಿದೆ. 1999ರಲ್ಲಿ ಎಎಸ್‌ಐ ಆಗಿ ನಿವೃತ್ತರಾದ ಅಚ್ಚುತ್ತ ನಾಯರ್ ಅವರಿಗೆ ರಾಷ್ಟ್ರಪತಿ ಪದಕ ದೊರೆತಿತ್ತು. ಸುದೀರ್ಘ ವರ್ಷಗಳ ಬಳಿಕ ಕೊಡಗು ಜಿಲ್ಲಾ ಪೊಲೀಸ್ ಇಲಾಖೆಗೆ ರಾಷ್ಟ್ರಪತಿ ಪದಕ ದೊರೆತ್ತಿರುವುದು ಕೊಡಗು ಜಿಲ್ಲೆಗೆ ಹೆಮ್ಮೆ ಮೂಡಿಸಿದೆ.
ಜ.7ರಂದು ಬೆಂಗಳೂರಿನ ಬ್ಯಾಂಕ್ವೆಟ್ ಹಾಲ್‌ನಲ್ಲಿ ರಾಜ್ಯಪಾಲರಾದ ವಾಜುಬಾಯಿ ವಾಲ ಅವರು ಮಡಿಕೇರಿ ಮಹಿಳಾ ಮತ್ತು ಮಕ್ಕಳ ಪೊಲೀಸ್ ಠಾಣೆಯ ಸಿಬ್ಬಂದಿ ಎಂ.ಬಿ ಸುಮತಿ ಅವರಿಗೆ ರಾಷ್ಟ್ರಪತಿ ಪದಕ ಪ್ರದಾನ ಮಾಡಿ ಗೌರವಿಸಿದರು. ಈ ಪ್ರತಿಷ್ಟಿತ ಪ್ರಶಸ್ತಿಯನ್ನು ರಾಷ್ಟ್ರಪತಿ ಭವನದಲ್ಲಿ ನೀಡಬೇಕಿತ್ತಾದರೂ ಕೋವಿಡ್ ಹಿನ್ನಲೆಯಲ್ಲಿ ಬೆಂಗಳೂರಿನ ರಾಜ ಭವನದಲ್ಲಿ ನೀಡಲಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಸುಮತಿ ಸೇವೆ :
ಕೊಡಗು ಜಿಲ್ಲಾ ಮಹಿಳಾ ಪೊಲೀಸ್ ಘಟಕದಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಎಂ.ಬಿ.ಸುಮತಿ 1996ರ ಜುಲೈ 1ರಂದು ಕೊಡಗು ಜಿಲ್ಲಾ ಪೊಲೀಸ್ ಇಲಾಖೆಗೆ ಭರ್ತಿಯಾಗಿದ್ದರು. ಬಳಿಕ ಧಾರವಾಡದಲ್ಲಿ ಪೊಲೀಸ್ ತರಬೇತಿ ಪೂರೈಸಿ ಮೊಟ್ಟ ಮೊದಲ ಬಾರಿಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ನಿಯೋಜನೆಯಾಗಿದ್ದರು. ಬಳಿಕ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ, ಲಾಟರಿ ಮತ್ತು ಅಬಕಾರಿ ಪೊಲೀಸ್ ಘಟಕ, ಮಹಿಳಾ ಠಾಣೆ, ಮತ್ತು ಜಿಲ್ಲಾ ಅಪರಾಧ ಪತ್ತೆ ದಳದಲ್ಲೂ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಎಂ.ಬಿ ಸುನಿತ ಮಕ್ಕಳ ಮತ್ತು ಮಹಿಳಾ ಪೊಲೀಸ್ ಠಾಣೆಯಲ್ಲಿ ಕಳೆದ 3 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಮಹಿಳಾ ದೌರ್ಜನ್ಯ, ಅತ್ಯಾಚಾರ ಪ್ರಕರಣ, ಅಪ್ರಾಪ್ತ ಬಾಲಕಿಯರ ಮೇಲಿನ ದೌರ್ಜನ್ಯ ಪ್ರಕರಣ ಮತ್ತು ಅದಕ್ಕೆ ಸಂಬಂಧಿಸಿದ ತನಿಖೆ ಹಾಗೂ ಕಾನೂನುಗಳ ಬಗ್ಗೆ ಎಂ.ಬಿ ಸುಮಿತ ಅವರು ವಿಶೇಷ ಪರಿಣಿತಿಯನ್ನೂ ಹೊಂದಿದ್ದಾರೆ. ಎಂ.ಬಿ. ಸುಮಿತ ಅವರ ಸಹೋದರ ಎಂ.ಬಿ ಗಣೇಶ್ ಕೂಡ 25 ವರ್ಷಗಳಿಂದ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಸಿಬ್ಬಂದಿಯಾಗಿದ್ದು, ಪ್ರಸ್ತುತ ವಿರಾಜಪೇಟೆ ಅರಣ್ಯ ಸಿಐಡಿ ಸಂಚಾರಿ ಪೊಲೀಸ್ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.