Advertisement

ಪ್ರಥಮ ಪ್ರಜೆ ರಾಷ್ಟ್ರಪತಿ ತಿಂಗಳ ಸಂಬಳ ಎಷ್ಟು, ನಿವೃತ್ತಿ ನಂತರ ದೊರೆಯುವ ಸೌಲಭ್ಯಗಳೇನು?

04:13 PM Jul 19, 2022 | ನಾಗೇಂದ್ರ ತ್ರಾಸಿ |

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರಾವಧಿ ಜುಲೈ 24ರಂದು ಮುಕ್ತಾಯಗೊಳ್ಳಲಿದ್ದು, ನೂತನ ರಾಷ್ಟ್ರಪತಿ ಆಯ್ಕೆಗಾಗಿ ಜು.18ರಂದು ಚುನಾವಣೆ ನಡೆದಿದ್ದು, ಜುಲೈ 21ರಂದು ಫಲಿತಾಂಶ ಪ್ರಕಟವಾಗಲಿದೆ. ಎನ್ ಡಿಎ ಅಭ್ಯರ್ಥಿಯಾಗಿ ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು ಹಾಗೂ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಜುಲೈ 21ರಂದು ಫಲಿತಾಂಶ ಬಹಿರಂಗವಾಗಲಿದೆ. ನಿರೀಕ್ಷೆಯಂತೆ ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾಗಲಿದ್ದಾರೆ.

Advertisement

ಇದನ್ನೂ ಓದಿ:ಕರುಣೆ ಬಾರದೇ ವರುಣ! ಜೂನ್‌ನಲ್ಲಿ ಮಳೆಗಾಗಿ ಪೂಜೆ ;ಈಗ ಮಳೆ ಬಿಡುವಿಗಾಗಿ ಪ್ರಾರ್ಥನೆ

ರಾಷ್ಟ್ರಪತಿ ಎಂಬುದು ದೇಶದ ಅತ್ಯುನ್ನತ ಗೌರವದ ಹುದ್ದೆಯಾಗಿದೆ. ದೇಶದ ಪ್ರಥಮ ಪ್ರಜೆಯಾಗಿರುವ ಇವರು ಮೂರು ಸೇನೆಗಳ ಪರಮೋಚ್ಛ ಕಮಾಂಡರ್ ಕೂಡಾ ಆಗಿರುತ್ತಾರೆ. ದೇಶದ ಸಂವಿಧಾನವನ್ನು ರಕ್ಷಿಸುವುದು ಇವರ ಪ್ರಮುಖ ಕರ್ತವ್ಯಗಳಲ್ಲಿ ಒಂದಾಗಿದೆ. ಸುಪ್ರೀಂಕೋರ್ಟ್ ಸಿಜೆಐಯನ್ನು ನೇಮಕ ಮಾಡುವುದು ಕೂಡಾ ರಾಷ್ಟ್ರಪತಿ. ಮರಣದಂಡನೆ ಶಿಕ್ಷೆಗೊಳಗಾದವರಿಗೆ ಕ್ಷಮಾದಾನ ನೀಡುವುದು ಹೀಗೆ ಹಲವು ಪ್ರಮುಖ ಕರ್ತವ್ಯಗಳು ರಾಷ್ಟ್ರಪತಿಯದ್ದಾಗಿದೆ. ಇವರ ತಿಂಗಳ ಸಂಬಳ ಎಷ್ಟು, ಯಾವೆಲ್ಲ ಸೌಲಭ್ಯಗಳಿವೆ, ಈ ಹಿಂದೆ ರಾಷ್ಟ್ರಪತಿಗೆ ಇದ್ದ ಸಂಬಳ ಎಷ್ಟು ಎಂಬಿತ್ಯಾದಿ ಮಾಹಿತಿ ಇಲ್ಲಿದೆ…

ಇದು ಜಗತ್ತಿನ ಅತೀ ದೊಡ್ಡ ಭವನ…

ರಾಷ್ಟ್ರಪತಿ ವಾಸ್ತವ್ಯ ಹೂಡಲಿರುವ ರಾಷ್ಟ್ರಪತಿ ಭವನ ಇಡೀ ಜಗತ್ತಿನಲ್ಲಿಯೇ ಅತೀ ದೊಡ್ಡ ಅರಮನೆಯಾಗಿದೆ. ವಿಸ್ತಾರವಾದ ನಾಲ್ಕು ಅಂತಸ್ತಿನ ಪಾರಂಪರಿಕ ಕಟ್ಟಡದಲ್ಲಿ ಒಟ್ಟು 340 ಕೋಣೆಗಳಿವೆ. 2.5 ಕಿಲೋ ಮೀಟರ್ ನಷ್ಟು ಕಾರಿಡಾರ್ ಗಳು ಮತ್ತು 190 ಎಕರೆ ವಿಸ್ತೀರ್ಣದ ಉದ್ಯಾನವನ ಹೊಂದಿದೆ.

Advertisement

ಈ ಪಾರಂಪರಿಕ ಕಟ್ಟಡದಲ್ಲಿ ರಾಷ್ಟ್ರಪತಿಯ ಅಧಿಕೃತ ನಿವಾಸವನ್ನು ಒಳಗೊಂಡಿದೆ. ಇದರಲ್ಲಿ ರಿಸೆಪ್ಶನ್ ಹಾಲ್ ಗಳು, ಅತಿಥಿಗಳ ಕೋಣೆಗಳು ಮತ್ತು ಕಚೇರಿಗಳನ್ನು ಹೊಂದಿದೆ. ರಾಷ್ಟ್ರಪತಿ ಐದು ಜನ ಕಾರ್ಯದರ್ಶಿ ಸಿಬ್ಬಂದಿಯನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ ರಾಷ್ಟ್ರಪತಿ ಭವನದ ನಿರ್ವಹಣೆಗಾಗಿ 200 ಜನರನ್ನು ನೇಮಕ ಮಾಡಲಾಗುತ್ತದೆ.

ರಾಷ್ಟ್ರಪತಿ ತಿಂಗಳ ಸಂಬಳ ಎಷ್ಟು?

ರಾಷ್ಟ್ರಪತಿ ತಿಂಗಳ ಸಂಬಳ 5 ಲಕ್ಷ ರೂಪಾಯಿ. 2017ರವರೆಗೂ ರಾಷ್ಟ್ರಪತಿಯಾದವರು ತಿಂಗಳಿಗೆ ಪಡೆಯುತ್ತಿದ್ದ ಸಂಬಳ 1.5 ಲಕ್ಷ ರೂಪಾಯಿ. ದೇಶದ ಪ್ರಥಮ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ತಿಂಗಳಿಗೆ ಪಡೆಯುತ್ತಿದ್ದ ಸಂಬಳ ಹತ್ತು ಸಾವಿರ ರೂಪಾಯಿ.

ಉಚಿತ ವೈದ್ಯಕೀಯ ಸೇವೆ, ಮನೆ, ಜೀವನ ಪರ್ಯಂತ ಉಚಿತ ಚಿಕಿತ್ಸೆ ಸೇರಿದಂತೆ ಹಲವು ಸೌಲಭ್ಯಗಳು ರಾಷ್ಟ್ರಪತಿಗಿದೆ. ಭಾರತ ಸರ್ಕಾರ ಪ್ರತಿ ವರ್ಷ ರಾಷ್ಟ್ರಪತಿ ನಿವಾಸ, ಸಿಬ್ಬಂದಿ, ಊಟೋಪಚಾರ ಮತ್ತು ಅತಿಥಿ ಸತ್ಕಾರಕ್ಕಾಗಿ 2 ಕೋಟಿ 25 ಲಕ್ಷ ರೂಪಾಯಿ ವ್ಯಯಿಸುತ್ತದೆ.

ರಾಷ್ಟ್ರಪತಿ ಕಪ್ಪು ಬಣ್ಣದ ಮರ್ಸಿಡಿಸ್ ಬೆಂಜ್ ಎಸ್ 600 (ಡಬ್ಲ್ಯು221) ಕಾರನ್ನು ಬಳಸುತ್ತಾರೆ. ಅದೇ ರೀತಿ ಅಧಿಕೃತ ಭೇಟಿಯ ಸಂದರ್ಭದಲ್ಲಿ ಅತ್ಯಾಧುನಿಕ ಲಿಮೊಸಿನ್ ಕಾರನ್ನು ಬಳಸುತ್ತಾರೆ. ರಾಷ್ಟ್ರಪತಿ ಭವನ ಹೊರತುಪಡಿಸಿಯೂ ರಾಷ್ಟ್ರಪತಿಯಾದವರು ಹೈದರಾಬಾದ್ ನಲ್ಲಿರುವ ರಾಷ್ಟ್ರಪತಿ ನಿಲಯಂ ಮತ್ತು ಶಿಮ್ಲಾದಲ್ಲಿ ಹಾಲಿಡೇಯನ್ನು ಕಳೆಯಬಹುದಾಗಿದೆ. ರಾಷ್ಟ್ರಪತಿ ಮತ್ತು ಪತ್ನಿ ಜಗತ್ತಿನ ಯಾವ ಸ್ಥಳಕ್ಕಾದರೂ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

ನಿವೃತ್ತಿ ನಂತರ ರಾಷ್ಟ್ರಪತಿಗೆ ಸಿಗುವ ಸೌಲಭ್ಯಗಳೇನು?

ರಾಷ್ಟ್ರಪತಿಯಾದವರು ನಿವೃತ್ತಿಯಾದ ಮೇಲೂ ಸರಿ ಸುಮಾರು ಅದೇ ರೀತಿಯ ಸೌಲಭ್ಯ, ಗೌರವಗಳು ದೊರೆಯುತ್ತದೆ. ಮಾಜಿ ರಾಷ್ಟ್ರಪತಿಗೆ ಸರ್ಕಾರಿ ಬಂಗಲೆಯಲ್ಲಿ ವಾಸ್ತವ್ಯ. ಪ್ರತಿ ತಿಂಗಳು 1.5 ಲಕ್ಷ ಪಿಂಚಣಿ ಪಡೆಯಲಿದ್ದು, ಪತ್ನಿ ಕೂಡಾ ಪ್ರತಿ ತಿಂಗಳು 30,000 ಪಿಂಚಣಿ ಪಡೆಯುತ್ತಾರೆ. ಇದರ ಹೊರತಾಗಿಯೂ ನಿವೃತ್ತಿಯ ನಂತರ ರಾಷ್ಟ್ರಪತಿಗೆ ಪೀಠೋಪಕರಣ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನೊಳಗೊಂಡ ಬಾಡಿಗೆ ರಹಿತ ಬಂಗಲೆಯಲ್ಲಿ ವಾಸಿಸಬಹುದಾಗಿದೆ. ಎರಡು ಉಚಿತ ಲ್ಯಾಂಡ್ ಲೈನ್, ಮೊಬೈಲ್ ಫೋನ್, ಐವರು ಸಿಬ್ಬಂದಿಗಳು ಮತ್ತು ಸಿಬ್ಬಂದಿಗಳಿಗೆ ವಾರ್ಷಿಕ 60,000 ರೂಪಾಯಿ ವೆಚ್ಚ ಹಾಗೂ ರೈಲು, ವಿಮಾನದಲ್ಲಿ ಉಚಿತ ಪ್ರಯಾಣ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next