ಹೊಸದಿಲ್ಲಿ: ರಾಷ್ಟ್ರಪತಿ ಚುನಾವಣೆಯ ದಿನಾಂಕ ಪ್ರಕಟವಾಗುತ್ತಲೇ ದೇಶದ ಹಲವಾರು ರಾಷ್ಟ್ರೀಯ ಪಕ್ಷಗಳಲ್ಲಿ ಮುಂದಿನ ರಾಷ್ಟ್ರಪತಿ ಅಭ್ಯರ್ಥಿ ಯಾರಾಗಬಹುದೆಂಬ ಚರ್ಚೆಗಳು ಗರಿಗೆದರಿವೆ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಅಭ್ಯರ್ಥಿಯನ್ನಾಗಿಸಲು ಬಿಜೆಪಿ ನೇತೃತ್ವದ ಎನ್‌ಡಿಎ ನಿರ್ಧರಿಸಿದೆ ಎಂಬ ವದಂತಿಗಳು ಹರಿದಾಡುತ್ತಿವೆ.
ಈ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜೆಡಿಯು ಪಕ್ಷದ ಸಂಸದ ಅಲೋಕ್ ಸುಮಾನ್, ನಿತೀಶ್ ಅವರನ್ನು ರಾಷ್ಟ್ರಪತಿಯನ್ನಾಗಿಸಿದರೆ, ಅವರು ದೇಶವನ್ನು ಅತ್ಯುತ್ತಮ ಮಾರ್ಗದಲ್ಲಿ ಮುನ್ನಡೆಸಲಿದ್ದಾರೆ ಎಂದು ಹೇಳಿದ್ದಾರೆ.
ಈ ಬಗ್ಗೆ ಊಹಾಪೋಹಗಳು ಮುಂದುವರಿದಿವೆ. ಈ ಬಾರಿ, ಮಹಿಳೆಯೊಬ್ಬರನ್ನು ಅಥವಾ ಬುಡಕಟ್ಟು ಜನಾಂಗಕ್ಕೆ ಸೇರಿದ ವ್ಯಕ್ತಿಯೊಬ್ಬರನ್ನು ಅಥವಾ ಅಲ್ಪಸಂಖ್ಯಾಕ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರನ್ನು ಉನ್ನತ ಹುದ್ದೆಗೆ ಅಭ್ಯರ್ಥಿಯನ್ನಾಗಿಸಲು ಬಿಜೆಪಿ ನಿರ್ಧರಿಸಿದೆ ಎಂದು ಹೇಳಲಾಗಿದೆ. ಆ ಹಿನ್ನೆಲೆ ಯಲ್ಲಿ, ಒಡಿಶಾದ ಬುಡಕಟ್ಟು ಜನಾಂಗದ ಬಿಜೆಪಿ ನಾಯಕಿಯಾದ ದ್ರೌಪದಿ ಮರ್ಮು ಹಾಗೂ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಜುವಾಲ್ ಓರಂ ಅವರ ಹೆಸರುಗಳೂ ಅಭ್ಯರ್ಥಿ ಸ್ಥಾನಕ್ಕೆ ಕೇಳಿಬಂದಿವೆ.