Advertisement

ರಾಮನಾಥ್‌ಗೆ ಮೀರಾ ಸವಾಲು: ಪ್ರತಿಪಕ್ಷಗಳಿಂದಲೂ ದಲಿತ ಅಭ್ಯರ್ಥಿ ಕಣಕ್ಕೆ

03:45 AM Jun 23, 2017 | |

ನವದೆಹಲಿ: ರಾಷ್ಟ್ರಪತಿ ಚುನಾವಣಾ ಕಣ ಈಗ ನಿಚ್ಚಳವಾಗಿದೆ. ಜು.17 ರಂದು ನಡೆಯಲಿರುವ ಚುನಾವಣೆ ದಲಿತ v ದಲಿತ ನಾಯಕರ ನಡುವಿನ ಹೋರಾಟವೆಂದೇ ಬಿಂಬಿತವಾಗಿದೆ. ಬಿಜೆಪಿ ಅಭ್ಯರ್ಥಿ ರಾಮನಾಥ್‌ ಕೋವಿಂದ್‌ ಅವರ ಎದುರಾಳಿಯಾಗಿ ಕಾಂಗ್ರೆಸ್‌, ಮಾಜಿ ಸ್ಪೀಕರ್‌ ಮೀರಾ ಕುಮಾರ್‌ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಬಿಹಾರ ಮೂಲದ ಇವರನ್ನು ಆಯ್ಕೆ ಮಾಡಿಕೊಳ್ಳುವುದರ ಹಿಂದೆ, ನಿತೀಶ್‌ಕುಮಾರ್‌ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರವಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

Advertisement

ನವದೆಹಲಿಯಲ್ಲಿ ಗುರುವಾರ ನಡೆದ 17 ಪಕ್ಷಗಳ ನಾಯಕರ ಸಭೆಯಲ್ಲಿ ಮೀರಾ ಕುಮಾರ್‌ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಬಿಜೆಪಿ ಕೂಡ ದಲಿತ ನಾಯಕರೊಬ್ಬರನ್ನು ಉಮೇದುವಾರರನ್ನಾಗಿ ಮಾಡಿರುವುದರಿಂದ ಅದೇ ಸಮುದಾಯದ ಮೀರಾ ಕುಮಾರ್‌ ಅವರನ್ನು ಪ್ರತಿಸ್ಪರ್ಧಿಯನ್ನಾಗಿ ಮಾಡಿದರೆ, ಈಗಾಗಲೇ ಎನ್‌ಡಿಎ ಕಡೆ ಹೋಗಿರುವ ಪಕ್ಷಗಳು ವಾಪಸ್‌ ಬರಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್‌ ನೇತೃತ್ವದ ವಿಪಕ್ಷಗಳ ಗುಂಪಿನದ್ದು.

ಎರಡು ತಿಂಗಳಿಂದಲೇ ಪ್ರತಿಪಕ್ಷಗಳು ರಾಷ್ಟ್ರಪತಿ ಚುನಾವಣೆಗಾಗಿ ತಯಾರಿ ನಡೆಸಿದ್ದರೂ, ಮಧ್ಯಂತರದಲ್ಲಿ ಇದಕ್ಕೆ ತಡೆ ನೀಡಿದ್ದು ಬಿಹಾರ ಸಿಎಂ ನಿತೀಶ್‌ಕುಮಾರ್‌. ಆಡಳಿತ ಪಕ್ಷ, ಪ್ರತಿಪಕ್ಷದ ನಾಯಕರ ಜತೆ ಮಾತನಾಡಿ, ಸರ್ವಸಮ್ಮತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಬಗ್ಗೆ ಚಿಂತಿಸಬೇಕು. ಇದಕ್ಕೂ ಮುನ್ನವೇ ಪ್ರತಿಪಕ್ಷಗಳೇ ಹೆಚ್ಚು ಸಕ್ರಿಯರಾಗುವುದು ಸರಿಯಲ್ಲ ಎಂದಿದ್ದರು. ಇದಾದ ಮೇಲೆ ಬಿಜೆಪಿ ನಾಯಕರು ಪ್ರತಿಪಕ್ಷಗಳ ನಾಯಕರ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದರು. ಈ ವೇಳೆ ಅವರು ಇಂಥವರೇ ಅಭ್ಯರ್ಥಿ ಎಂದು ಹೇಳದಿದ್ದರೂ, ಎನ್‌ಡಿಎ ಅಭ್ಯರ್ಥಿಗೆ ಬೆಂಬಲ ನೀಡಿ ಎಂದಷ್ಟೇ ಮನವಿ ಮಾಡಿದ್ದರು. ಕಡೆಗೆ ಬಿಜೆಪಿ ರಾಮನಾಥ್‌ ಕೋವಿಂದ್‌ ಅವರನ್ನು ಆರಿಸಿ ಎಲ್ಲರಲ್ಲೂ ಅಚ್ಚರಿ ಮೂಡಲು ಕಾರಣವಾಗಿತ್ತು. ಜತೆಗೆ ನಿತೀಶ್‌ಕುಮಾರ್‌ ಅವರ ಬೆಂಬಲ ಪಡೆಯುವಲ್ಲಿಯೂ ಯಶಸ್ವಿಯಾಗಿತ್ತು.

ಪ್ರಕಾಶ್‌ ಅಂಬೇಡ್ಕರ್‌ ಹೆಸರೂ ಇತ್ತು
ಮೀರಾಕುಮಾರ್‌ ಮತ್ತು ಸುಶೀಲ್‌ಕುಮಾರ್‌ ಶಿಂಧೆ ಅವರ ಹೆಸರನ್ನು ಮೊದಲಿಗೆ ಪ್ರಸ್ತಾಪಿಸಿದ್ದು ಎಡಪಕ್ಷಗಳೇ. ಆದರೆ, ಈ ಬಗ್ಗೆ ಕಾಂಗ್ರೆಸ್‌ ಆಗ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದಾದ ಬಳಿಕ ಎಡಪಕ್ಷಗಳು ಪ್ರಕಾಶ್‌ ಅಂಬೇಡ್ಕರ್‌ ಅವರ ಹೆಸರಿನ ಬಗ್ಗೆ ಚಿಂತನೆ ನಡೆಸಿದ್ದವು. ಗುರುವಾರದ ಸಭೆಯಲ್ಲಿ ಈ ಬಗ್ಗೆಯೂ ಎಡಪಕ್ಷಗಳು ಪ್ರಸ್ತಾಪಿಸಿದವು. ಆದರೆ ಎಲ್ಲರೂ ಒಪ್ಪಿಕೊಳ್ಳಲಿಲ್ಲ. ಜತೆಗೆ ಮಹಾತ್ಮಾ ಗಾಂಧಿ ಅವರ ಮರಿಮಗ ಗೋಪಾಲಕೃಷ್ಣ ಗಾಂಧಿ ಅವರ ಹೆಸರಿನ ಬಗ್ಗೆಯೂ ಎಡಪಕ್ಷಗಳು ಪ್ರಸ್ತಾಪಿಸಿವೆ ಎಂದು ಹೇಳಲಾಗಿದ್ದು, ಇದಕ್ಕೂ ಸರ್ವ ಸಮ್ಮತ ಒಪ್ಪಿಗೆ ಸಿಗಲಿಲ್ಲ ಎಂದು ಹೇಳಲಾಗಿದೆ.

ಮೀರಾಕುಮಾರ್‌ ಹೆಸರೇ ಅಂತಿಮ
ಬಿಜೆಪಿಯ ದಲಿತ ಕಾರ್ಡ್‌ಗೆ ಬದಲಾಗಿ ತಾವೂ ದಲಿತ ಕಾರ್ಡನ್ನೇ ಪ್ರಯೋಗಿಸಬೇಕು ಎಂಬುದು ಪ್ರತಿಪಕ್ಷಗಳ ಚಿಂತನೆಯಾಗಿತ್ತು. ಒಂದು ವೇಳೆ ದಲಿತರನ್ನು ಬಿಟ್ಟು ಬೇರೊಬ್ಬರನ್ನು ಆಯ್ಕೆ ಮಾಡಿದರೆ, ಅದು ರಾಜಕೀಯವಾಗಿ ತಪ್ಪು ಸಂದೇಶ ಹೋದಂತಾಗುತ್ತದೆ. ಜತೆಗೆ ಕಾಂಗ್ರೆಸ್‌ನ ವೋಟ್‌ಬ್ಯಾಂಕ್‌ಗೂ ಹೊಡೆತ ಬೀಳಬಹುದು ಎಂಬ ಆತಂಕವೂ ಇತ್ತು. ಹೀಗಾಗಿ, ಬಾಬು ಜಗಜೀವನ್‌ ರಾಂ ಅವರ ಪುತ್ರಿ, ಮಾಜಿ ಸ್ಪೀಕರ್‌ ಮತ್ತು ಮಾಜಿ ರಾಜತಾಂತ್ರಿಕ ಅಧಿಕಾರಿಯೂ ಆಗಿರುವ ಮೀರಾಕುಮಾರ್‌ ಅವರನ್ನು ಆಯ್ಕೆ ಮಾಡಿದರೆ, ದಲಿತ ನಾಯಕರೊಬ್ಬರಿಗೆ ಅಡ್ಡಿ ಮಾಡಿದ ಆಪಾದನೆ ಹೊತ್ತಂತೆ ಆಗುವುದಿಲ್ಲ ಎಂಬುದು ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳ ಆಲೋಚನೆಯಾಗಿತ್ತು. ಹೀಗಾಗಿ ಗುರುವಾರದ ಸಭೆಯಲ್ಲಿ ಮೀರಾಕುಮಾರ್‌ ಅವರ ಹೆಸರನ್ನೇ ಅಂತಿಮ ಮಾಡಲಾಗಿದೆ. ಅಲ್ಲದೆ ಬುಧವಾರ ಸಂಜೆ ಮೀರಾಕುಮಾರ್‌ ಅವರು, ಸೋನಿಯಾ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದಾಗಲೇ ಈ ಬಗ್ಗೆ ಒಂದು ಮಟ್ಟಿನ ಮುನ್ಸೂಚನೆ ಸಿಕ್ಕಿತ್ತು.

Advertisement

ನಿತೀಶ್‌ಗೆ  ಇಕ್ಕಟ್ಟು?
ಮೀರಾಕುಮಾರ್‌ ಅವರ ಹೆಸರು ಬಿಹಾರ ಸಿಎಂ ನಿತೀಶ್‌ಕುಮಾರ್‌ಗೆ ಇಕ್ಕಟ್ಟಿನ ಸ್ಥಿತಿ ತಂದೊಡ್ಡಲಿದೆ ಎಂಬುದು ಪ್ರತಿಪಕ್ಷಗಳ ಅಂಬೋಣ. ಮೀರಾಕುಮಾರ್‌ ಬಿಹಾರದವರೇ ಆಗಿದ್ದು, ದಲಿತ ಸಮುದಾಯಕ್ಕೆ ಸೇರಿದ ನಾಯಕಿ. ಹೀಗಾಗಿ, ಇವರಿಗೆ ಬೆಂಬಲ ಕೊಡದೇ ಹೋದರೆ, ನಿತೀಶ್‌ಗೆ ಮುಂದೆ ಸಂಕಷ್ಟವಾಗಬಹುದು. ಇದರಿಂದಾಗಿಯೇ ಅವರು ಮತ್ತೆ ಪ್ರತಿಪಕ್ಷಗಳ ಗುಂಪಿಗೇ ಸೇರಬಹುದು ಎಂಬ ಚಿಂತನೆ ಇವರದ್ದು. ಆದರೆ ನಿತೀಶ್‌ ಪಕ್ಷ ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದು, ಯಾವುದೇ ಕಾರಣಕ್ಕೂ ಇಟ್ಟ ಹೆಜ್ಜೆ ವಾಪಸ್‌ ತೆಗೆದುಕೊಳ್ಳುವುದಿಲ್ಲ ಎಂದಿದೆ.

ಲಾಲು-ನಿತೀಶ್‌ ಮುನಿಸು
ಎನ್‌ಡಿಎನತ್ತ ವಾಲಿದ ನಿತೀಶ್‌ಕುಮಾರ್‌ ಅವರ ಬಗ್ಗೆ ಮಿತ್ರ ಪಕ್ಷ ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಯಾದವ್‌ ತೀರಾ ಸಿಟ್ಟಾಗಿದ್ದಾರೆ. ನಾವು ವಿರೋಧಿಸುವವರತ್ತಲೇ ನಿತೀಶ್‌ ಹೋಗಿದ್ದಾರೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವೇ ಎಂದು ಲಾಲು ಪ್ರಶ್ನಿಸಿದ್ದಾರೆ. ನಿತೀಶ್‌ ಅವರೇ ಮೊದಲಿಗೆ ಬಿಜೆಪಿ ವಿರುದ್ಧ ಸೆಣಸಬೇಕು ಎಂದು ಹೇಳಿ, ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದ್ದೇ ಅವರು. ಈಗ ಅತ್ತ ಕಡೆ ಹೋಗುವ ಮೂಲಕ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ, ಈಗಲೂ ಕಾಲ ಮಿಂಚಿಲ್ಲ. ಬಿಹಾರದ ಮಗಳು ಮೀರಾಕುಮಾರ್‌ ಅವರಿಗೆ ನಿತೀಶ್‌ ಬೆಂಬಲ ನೀಡಲಿ ಎಂದು ಅವರು ಕರೆ ನೀಡಿದ್ದಾರೆ. ಅಲ್ಲದೆ ನಿತೀಶ್‌ ಭೇಟಿ ಮಾಡಿ ಈ ಬಗ್ಗೆ ಚರ್ಚಿಸುವುದಾಗಿ ಹೇಳಿದ್ದಾರೆ.

ಎನ್‌ಸಿಸಿಯಿಂದಲೂ ಎನ್‌ಡಿಎಗೆ ಬೆಂಬಲ
ಇನ್ನು ಮಹಾರಾಷ್ಟ್ರದ ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ ಕೂಡ ಬಿಜೆಪಿ ಅಭ್ಯರ್ಥಿ ರಾಮನಾಥ್‌ ಕೋವಿಂದ್‌ ಅವರಿಗೆ ಬೆಂಬಲ ನೀಡಲು ನಿರ್ಧರಿಸಿದೆ ಎಂದು ಹೇಳಲಾಗಿದೆ. ಗುರುವಾರ ನಡೆದ ಪಕ್ಷದ ಕೋರ್‌ ಕಮಿಟಿ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ ಎನ್ನಲಾಗಿದೆ. ಈ ಸುದ್ದಿ ಅರಿತ ವಿಪಕ್ಷಗಳು ಪವಾರ್‌ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ಎನ್‌ಡಿಎಗೆ ಬೆಂಬಲ ನೀಡಬೇಡಿ, ಪ್ರತಿಪಕ್ಷಗಳನ್ನೇ ಬೆಂಬಲಿಸಿ ಎಂದು ಮನವಿ ಮಾಡಿದ್ದಾರೆ. ಇದೇ ವೇಳೆ, ಎಐಎಡಿಎಂಕೆ ಎರಡೂ ಬಣಗಳು ಎನ್‌ಡಿಎ ಅಭ್ಯರ್ಥಿ ಪರ ನಿಂತಿವೆ. ಇನ್ನೊಂದೆಡೆ, ತಮ್ಮನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ ಪ್ರತಿಪಕ್ಷಗಳ ವಿರುದ್ಧ ಕೆಂಡವಾಗಿರುವ ಆಮ್‌ ಆದ್ಮಿ ಪಕ್ಷವು, ಮೀರಾಕುಮಾರ್‌ರನ್ನು ಬೆಂಬಲಿಸದೇ ಇರಲು ನಿರ್ಧರಿಸಿದೆ.

ಇಂದು ಕೋವಿಂದ್‌ ನಾಮಪತ್ರ
ಶುಕ್ರವಾರ ಬಿಜೆಪಿ ಅಭ್ಯರ್ಥಿ ರಾಮನಾಥ್‌ ಕೋವಿಂದ್‌ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ, ಬಿಜೆಪಿ ರಾಜ್ಯಗಳ ಎಲ್ಲ ಮುಖ್ಯಮಂತ್ರಿಗಳು, ಎನ್‌ಡಿಎ ಒಕ್ಕೂಟದ ಚಂದ್ರಬಾಬು ನಾಯ್ಡು, ಮೆಹಬೂಬ ಮುಫ್ತಿ ಸೇರಿದಂತೆ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳ ಎಲ್ಲ ಸಿಎಂಗಳು, ತೆಲಂಗಾಣ, ತಮಿಳುನಾಡು ಮುಖ್ಯಮಂತ್ರಿಗಳು, ಕೇಂದ್ರದ ಎಲ್ಲ ಪ್ರಮುಖ ಸಚಿವರು, ಬಿಜೆಪಿ ನಾಯಕರು, ಸಂಸದರು ಉಪಸ್ಥಿತರಿರಲಿದ್ದಾರೆ.

ವಾಜಪೇಯಿ ಭೇಟಿ
ಈ ನಡುವೆ ಕೋವಿಂದ್‌ ಅವರು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ನಿವಾಸಕ್ಕೆ ತೆರಳಿ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಬುಧವಾರವಷ್ಟೇ ಪಕ್ಷದ ಹಿರಿಯ ನಾಯಕರಾದ ಎಲ್‌.ಕೆ. ಆಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಅವರನ್ನು ಕೋವಿಂದ್‌ ಭೇಟಿ ಮಾಡಿದ್ದರು. ಇದೇ ವೇಳೆ, ಕೋವಿಂದ್‌ ಅವರಿಗೆ ಚುನಾವಣೆ ಮುಗಿಯುವ ವರೆಗೆ ಸದ್ಯ ಕೇಂದ್ರ ಸಚಿವ ಮಹೇಶ್‌ ಶರ್ಮಾ ಅವರಿದ್ದ ನಿವಾಸವನ್ನು ನೀಡಲಾಗಿದೆ. ಈ ಹಿಂದೆಯೇ ಮಹೇಶ್‌ ಶರ್ಮಾ ಅವರಿಗೆ ಮನೆ ಖಾಲಿ ಮಾಡಿ ಬೇರೆಡೆ ಹೋಗುವಂತೆ ಸೂಚಿಸಲಾಗಿತ್ತು.

ಮೀರಾಕುಮಾರ್‌ ಹರಕೆಯ ಕುರಿ
ಪ್ರತಿಪಕ್ಷಗಳು ಮೀರಾಕುಮಾರ್‌ ಅವರ ಹೆಸರನ್ನು ಪ್ರಸ್ತಾಪಿಸಿರುವ ಬಗ್ಗೆ ವ್ಯಂಗ್ಯವಾಡಿರುವ ಬಿಜೆಪಿ, ಅವರನ್ನು ಹರಕೆಯ ಕುರಿ ಮಾಡಲು ಕಾಂಗ್ರೆಸ್‌ ಹೊರಟಿದೆ ಎಂದಿದೆ. ಅಲ್ಲದೆ ಈ ಹಿಂದೆ ರಾಷ್ಟ್ರಪತಿ ಹುದ್ದೆಗೆ ಆರಿಸುವ ಸಂದರ್ಭ ಇದ್ದರೂ, ಏಕೆ ಅವರ ಹೆಸರನ್ನು ಕಾಂಗ್ರೆಸ್‌ ಪರಿಗಣಿಸಿರಲಿಲ್ಲ ಎಂದು ಪ್ರಶ್ನಿಸಿದ್ದು, ಈಗ ಕೋವಿಂದ್‌ ಅವರಿಗೆ ಪ್ರತಿಯಾಗಿ ದಲಿತ ಅಭ್ಯರ್ಥಿ ಹಾಕಬೇಕು ಎಂಬ ಉದ್ದೇಶದಿಂದ ಮೀರಾಕುಮಾರ್‌ ಅವರನ್ನು ಆರಿಸಿದೆ ಎಂದಿದೆ.

ರಾಮನಾಥ್‌ ಕೋವಿಂದ್‌ ಮತ್ತು ಮೀರಾ ಕುಮಾರ್‌
ರಾಷ್ಟ್ರಪತಿ ಸ್ಥಾನ ಚುನಾವಣೆಗಾಗಿ ಎನ್‌ಡಿಎ ಬಿಹಾರದ ಮಾಜಿ ರಾಜ್ಯಪಾಲ ರಾಮನಾಥ್‌ ಕೋವಿಂದ್‌ರನ್ನು ಕಣಕ್ಕೆ ಇಳಿಸಿದೆ. ಅದಕ್ಕೆ ಪ್ರತಿಯಾಗಿ ಯುಪಿಎ ಮಾಜಿ ಸ್ಪೀಕರ್‌ ಮೀರಾ ಕುಮಾರ್‌ರನ್ನು ಸಜ್ಜುಗೊಳಿಸಿದೆ. ಅವರಿಬ್ಬರ ನಡುವಿನ ಹೋಲಿಕೆ ಇಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next