ಹೊಸದಿಲ್ಲಿ: ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) ಕಣಕ್ಕಿಳಿಸಲಿರುವ ಅಭ್ಯರ್ಥಿಯನ್ನು ತಾನು ಬೆಂಬಲಿಸುವುದಾಗಿ ಆಂಧ್ರಪ್ರದೇಶದ ಸಿಎಂ ಜಗನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಪಕ್ಷ ನಿರ್ಧರಿಸಿದೆ. ಅಲ್ಲದೆ, ತನ್ನೀ ನಿರ್ಧಾರವನ್ನು ಎನ್‌ಡಿಎಗೂ ರವಾನಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ನಿರ್ಧಾರ ಅನುಷ್ಠಾನಕ್ಕೆ ಬಂದಲ್ಲಿ, ರಾಷ್ಟ್ರಪತಿ ಆಯ್ಕೆಯಲ್ಲಿ ಎನ್‌ಡಿಎ ಅಭ್ಯರ್ಥಿಯು ಗೆಲುವು ಸಾಧಿಸುವುದು ಸುಲಭವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ವೈಎಸ್‌ಆರ್ ಪಕ್ಷದ ಸಂಸದರು ಹಾಗೂ ಶಾಸ ಕರ ಒಟ್ಟಾರೆ ಮತ ಮೌಲ್ಯ 80 ಸಾವಿರ ಇದೆ. ಅತ್ತ, ಎನ್‌ಡಿಎ ಒಕ್ಕೂಟದ ಎಲ್ಲ ಸಂಸದರು, ಶಾಸಕರ ಮತ ಮೌಲ್ಯದ ಹೊರತಾಗಿಯೂ ಎನ್‌ಡಿಎ ಅಭ್ಯರ್ಥಿಯು ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆಯಾಗಲು ಇನ್ನೂ 2 ಸಾವಿರ ಮತಮೌಲ್ಯ ಬೇಕಿದೆ.
ವಿಪಕ್ಷಗಳಿಂದ ಶರದ್ ಪವಾರ್ ಕಣಕ್ಕೆ? : ಪ್ರಮುಖ ವಿಪಕ್ಷಗಳಾದ ಕಾಂಗ್ರೆಸ್, ಟಿಎಂಸಿ, ಆಮ್ ಆದ್ಮಿ ಪಾರ್ಟಿ ಸೇರಿದಂತೆ ಕೆಲವು ಪಕ್ಷಗಳು ಎನ್‌ಸಿಪಿ ಧುರೀಣ ಶರದ್ ಪವಾರ್‌ರನ್ನು ವಿಪಕ್ಷಗಳ ಒಮ್ಮತದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಚಿಂತನೆ ನಡೆಸಿವೆ ಎಂದು ಹೇಳಲಾಗಿದೆ.
Related Articles
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಯವರ ಸೂಚನೆಯ ಮೇರೆಗೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಜೂ. 9ರಂದು ಮುಂಬಯಿಯಲ್ಲಿ ಶರದ್ ಪವಾರ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಇದಕ್ಕೆ ಪುಷ್ಟಿ ನೀಡಿವೆ.