Advertisement

ಜನನೀ ಜನ್ಮಭೂಮಿಶ್ಚ … ಆ ರಾಮನಿಂದ ಈ ರಾಮನ ವರೆಗೆ

07:31 PM Jul 17, 2022 | Team Udayavani |

ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ- ಇದು ಸಂಸ್ಕೃತ ಗೊತ್ತಿಲ್ಲದವರಿಗೂ ತಿಳಿವಳಿಕೆ ಇರುವ ಜನಪ್ರಿಯ ಶ್ಲೋಕಗಳಲ್ಲಿ ಒಂದು. ನೇಪಾಳ ಸರಕಾರದ ಲಾಂಛನದಲ್ಲಿ ರಾರಾಜಿಸುತ್ತಿರುವುದು ಶ್ಲೋಕದ ಹೆಗ್ಗಳಿಕೆ. ಜನ್ಮಭೂಮಿಯ ಸುಖ ಸ್ವರ್ಗವನ್ನೂ ಮೀರಿಸುತ್ತದೆ ಎಂದು ಶ್ಲೋಕಾರ್ಥ. ಇದು ಕಂಡುಬರುವುದು ರಾಮಾಯಣದಲ್ಲಿ. ಲಂಕೆಯ ಸುಖವೈಭವವನ್ನು ಕಂಡು ಲಕ್ಷ್ಮಣ ಹೇಳುವ ಮಾತಿಗೆ ಮರಳಿ ಅಯೋಧ್ಯೆಗೇ ಹೋಗಬೇಕು, ಜನ್ಮಭೂಮಿ ಸ್ವರ್ಗಕ್ಕಿಂತಲೂ ಮಿಗಿಲಾದುದು ಎನ್ನುತ್ತಾನೆ ಶ್ರೀರಾಮ.

Advertisement

ಇನ್ನೇನು ರಾಷ್ಟ್ರಪತಿ ಭವನಕ್ಕೆ ಹೊಸ ರಾಷ್ಟ್ರಪತಿಯವರು ಬರುತ್ತಿದ್ದಾರೆ. ನಿರ್ಗಮನ ರಾಷ್ಟ್ರಪತಿ ಹೆಸರು ಪ್ರಭು ರಾಮಚಂದ್ರನ ಹೆಸರೇ, ರಾಮನಾಥ ಕೋವಿಂದ್‌. ಇವರು ಜನ್ಮಭೂಮಿಗೆ ಹೋದಾಗ ನಡೆದುಕೊಂಡ ರೀತಿಯೂ ಆಗ ರಾಮ ಹೇಳಿದಂತೆಯೇ ಇತ್ತು ಎನ್ನುವುದು, ರಾಮ ನಾಯಿಗೂ ನ್ಯಾಯಕೊಟ್ಟ ಎನ್ನುವುದಕ್ಕೂ ಜನ್ಮಭೂಮಿಗೆ ರಾಷ್ಟ್ರಪತಿಯವರು ಹೋದಾಗ ನಡೆದ ಒಂದು ದುರ್ಘ‌ಟನೆಗೆ ದೇಶವೇ ಕ್ಷಮೆ ಕೇಳಿದಂತೆ (ರಾಷ್ಟ್ರಪತಿಯವರು ಬಹಿರಂಗವಾಗಿ ಕ್ಷಮೆ ಕೇಳಿದರು) ಕ್ಷಮೆ ಕೇಳಿದ್ದಕ್ಕೂ, ಮರಳಿ ಅಯೋಧ್ಯೆಗೆ ತೆರಳಬೇಕೆಂದ ಆ ರಾಮನಿಗೆ ಯಥೋಚಿತ ಭವನ ಈ ರಾಮನ ಕಾಲದಲ್ಲಿ ಆಗುತ್ತಿರುವುದಕ್ಕೂ ಎಲ್ಲೋ ಒಂದು ಸಾಮ್ಯವನ್ನು ನೇಯ್ದರೆ ತಪ್ಪಾಗದು.

 ಹುಟ್ಟೂರ ಭೇಟಿ

ರಾಷ್ಟ್ರಪತಿಯವರು ಕಳೆದ ಜೂ. 25ರಿಂದ 28ರ ವರೆಗೆ ಹುಟ್ಟೂರು ಉತ್ತರ ಪ್ರದೇಶದ ಪರೌಂಖ್‌ಗೆ ಮೂರು ದಿನಗಳ ಭೇಟಿ ನೀಡಿದ್ದರು. ಇದು ರೈಲ್ವೇ ಯಾನ.  ಹಳೆಯ ಮಿತ್ರರು, ಶಿಕ್ಷಕರ ಜತೆ ಸಂವಾದ ನಡೆಸಿ ಗೌರವಿಸಲು ದಿಲ್ಲಿಯಿಂದ ಕಾನ್ಪುರದ ನಡುವೆ ಎರಡು ವಿಶೇಷ ನಿಲುಗಡೆ ಇತ್ತು. 15 ವರ್ಷಗಳ ಬಳಿಕ ರಾಷ್ಟ್ರಪತಿಯವರು ಇದೇ ಮೊದಲ ಬಾರಿ ರೈಲಿನಲ್ಲಿ ಪ್ರಯಾಸಿದ್ದು. ಹಿಂದೆ 2006ರಲ್ಲಿ ಡಾ|ಎ.ಪಿ.ಜೆ.ಅಬ್ದುಲ್‌ ಕಲಾಂ ಅವರು ಭಾರತೀಯ ಸೇನಾ ಅಕಾಡೆಮಿಯ ಕೆಡೆಟ್‌ಗಳ ಪಥಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದಿಲ್ಲಿಯಿಂದ ಡೆಹ್ರಾಡೂನ್‌ಗೆ ರೈಲಿನಲ್ಲಿ ಪ್ರಯಾಸಿದ್ದರು.

ಹುಟ್ಟೂರಿನ ಋಣ

Advertisement

ಪರೌಂಖ್‌ನಲ್ಲಿಳಿದಾಗಲೇ ರಾಮನಾಥರು ಭೂಮಿಯನ್ನು ಸ್ಪರ್ಶಿಸಿ ನಮಿಸಿದರು. ಹಳೆಯ ಮಿತ್ರರ ಜತೆ ಹರಟೆ ಹೊಡೆದರು. ಸ್ಥಳೀಯ ಪಾತ್ರೀ(ಪಾರ್ವತಿ)ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. “ಜನ್ಮಭೂಮಿಯ ಸ್ಫೂರ್ತಿಯೇ ನನ್ನನ್ನು ಹೈಕೋರ್ಟ್‌ಗೆ, ಹೈಕೋರ್ಟ್‌ನಿಂದ ಸುಪ್ರೀಂ ಕೋರ್ಟ್‌ಗೆ, ಸುಪ್ರೀಂ ಕೋರ್ಟ್‌ನಿಂದ ರಾಜ್ಯಸಭೆಗೆ, ರಾಜ್ಯಸಭೆಯಿಂದ ರಾಜಭವನಕ್ಕೆ, ರಾಜಭವನದಿಂದ ರಾಷ್ಟ್ರಪತಿ ಭವನಕ್ಕೆ ಕೊಂಡೊಯ್ಯಿತು’ ಎಂದು ಭಾವುಕರಾದ ರಾಮನಾಥರು ಹೇಳಿದಾಗ ಜನ್ಮಭೂಮಿಯ ಸೆಳೆತ ಅರ್ಥವಾಗದೆ ಇರದು.

ಶಿಷ್ಟಾಚಾರ ಬದಿಗೆ-ಭಾವ ಮುಂಬದಿಗೆ

ಹೋದ ವರ್ಷ ಕಾನ್ಪುರದ ಬಿಎನ್‌ಎಸ್‌ಡಿ ಇಂಟರ್‌ ಕಾಲೇಜ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ ರಾಷ್ಟ್ರಪತಿ ಶಿಷ್ಟಾಚಾರಗಳನ್ನು ಬದಿಗೊತ್ತಿ ತನಗೆ ಕಲಿಸಿದ ಶಿಕ್ಷಕರ (ಹರಿರಾಮ ಕಪೂರ್‌ 92, ಟಿ.ಎನ್‌.ಟಂಡನ್‌ 86, ಪ್ಯಾರೇಲಾಲ್‌ 90) ಕಾಲು ಮುಟ್ಟಿ ನಮಿಸಿದ್ದು ಎಲ್ಲರನ್ನೂ ಅಚ್ಚರಿಗೆ ದೂಡಿತ್ತು. ಕಾನ್ಪುರಕ್ಕೆ ಬಂದ ಸಂದರ್ಭ ರಾಷ್ಟ್ರಪತಿಗಳು ಸಂಚರಿಸುವಾಗ ಶೂನ್ಯ ಸಂಚಾರ ಏರ್ಪಟ್ಟಿತು. ಆಗಲೇ ಕೋವಿಡ್‌ ಬಳಿಕದ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸುವಾಗ ತಡೆಯಾಗಿ ಆಕೆ ಮರಣವನ್ನಪ್ಪಿದಳು. ಇದು ತಿಳಿದಾಗ ರಾಮನಾಥ ಕೋವಿಂದರು ಆ ಮನೆಯ ಸದಸ್ಯರಲ್ಲಿ ಬಹಿರಂಗ ಕ್ಷಮೆ ಯಾಚಿಸಿದ್ದು ರಾಷ್ಟ್ರವೇ ಜನಸಾಮಾನ್ಯರ ಪರವಿದೆ ಎಂಬುದನ್ನು ಸಾರುವಂತಿತ್ತು.

ಆ.ಪಕ್ಷ-ವಿಪಕ್ಷ-ನಿಷ್ಪಕ್ಷ

ಆಡಳಿತ ಪಕ್ಷದ ಪ್ರಧಾನಿ ನರೇಂದ್ರ ಮೋದಿಯವರ ಜತೆ ಉತ್ತಮ ಸಂಬಂಧವಿರುವಂತೆ ವಿಪಕ್ಷದ ನಾಯಕರಿಗೂ ರಾಷ್ಟ್ರಪತಿ ಭವನದ ಬಾಗಿಲು ಸದಾ ತೆರೆದುಕೊಂಡಿತ್ತು. ಸಂಸತ್ತು ಮಂಜೂರು ಮಾಡಿದ ಕಾಯಿದೆಗಳಿಗೆ ತಡಮಾಡದೆ ಸಹಿ ಮಾಡುತ್ತಿದ್ದ ಕೋವಿಂದರು, ವಿಪಕ್ಷದ ನಾಯಕರು ಭೇಟಿಗೆ ಬಂದರೆ ಸುಲಭದಲ್ಲಿ ಸಿಗುತ್ತಿದ್ದರು. ರಾಷ್ಟ್ರಪತಿ ಭವನವು ವಿವಾದದ ಕೇಂದ್ರ ಬಿಂದುವಾಗದಂತೆ ನೋಡಿಕೊಂಡದ್ದು ಕೋವಿಂದರ ಕಾರ್ಯಶೈಲಿಯನ್ನು ಸೂಚಿಸುತ್ತದೆ. ಗಾಂಧೀಜಿಯವರಿಗೂ ಅಂಬೇಡ್ಕರರಿಗೂ ನಡುವೆ ಗೋಡೆ ಕಟ್ಟುವವರು ಅನೇಕರಿದ್ದ ನಡುವೆಯೂ ತನ್ನ  ಭಾಷಣಗಳಲ್ಲಿ ಇಬ್ಬರನ್ನು ಉಲ್ಲೇಖೀಸುವುದು ಕೋವಿಂದರ ವೈಶಿಷ್ಟ್ಯ.

ಸರ್ವಧರ್ಮ…

ರಾಷ್ಟ್ರಪತಿಯಾಗಿರುವಾಗ ದೇವಸ್ಥಾನಗಳು, ಗುರುದ್ವಾರ, ಚರ್ಚ್‌ಗಳಿಗೆ ಭೇಟಿ ಕೊಟ್ಟಿದ್ದ ಕೋವಿಂದ್‌, ಅಯೋಧ್ಯೆ ರಾಮಮಂದಿರಕ್ಕೆ 5 ಲ.ರೂ. ವೈಯಕ್ತಿಕ ದೇಗೆ ನೀಡಿದ್ದರು. 2020ರ ಈದ್‌ ಮಿಲಾದ್‌ ಸಮಯ ದಿಲ್ಲಿಯ 9ನೆಯ ತರಗತಿ ಮುಸ್ಲಿಂ ಸೈಕ್ಲಿಸ್ಟ್‌ ವಿದ್ಯಾರ್ಥಿಯನ್ನು ರಾಷ್ಟ್ರಪತಿ ಭವನಕ್ಕೆ ಕರೆದು ರೇಸಿಂಗ್‌ ಸೈಕಲ್‌ನ್ನು ಉಡುಗೊರೆಯಾಗಿ ನೀಡಿದ್ದರು. ರಾಷ್ಟ್ರಪತಿ ಭವನಕ್ಕೆ ಸಾರ್ವಜನಿಕರು ಭೇಟಿ ಕೊಡುವುದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿ ರಾಷ್ಟ್ರಪತಿ ಭವನದ ಬಗ್ಗೆ ಜನರಿಗೆ ಇರುವ ಕುತೂಹಲವನ್ನು ತಸಿದರು.

ರಾಷ್ಟ್ರಪತಿ ಭವನದ ಹೆಗ್ಗಳಿಕೆ

ಭಾರತದ ರಾಷ್ಟ್ರಪತಿ ಹುದ್ದೆಗೆ ಹಲವು ಮಹತ್ವಗಳಿವೆ. ದಿಲ್ಲಿಯ ರಾಷ್ಟ್ರಪತಿ ಭವನ ಜಗತ್ತಿನ ಅತಿ ದೊಡ್ಡ ರಾಷ್ಟ್ರಾಧ್ಯಕ್ಷರ ಕಚೇರಿ ಮತ್ತು ನಿವಾಸ ಹೊಂದಿದ ಸಂಕೀರ್ಣ. ದೇಶದ ಆಡಳಿತದಲ್ಲಿ ನೇರ ಅಧಿಕಾರವಿಲ್ಲದಿದ್ದರೂ ಪ್ರಜಾಪ್ರಭುತ್ವದ ಮೌಲ್ಯಗಳ ಸಂರಕ್ಷಕ ಸ್ಥಾನವನ್ನು ರಾಷ್ಟ್ರಪತಿ ಹೊಂದಿರುತ್ತಾರೆ. ಈ ಸ್ಥಾನದಲ್ಲಿರುವವರು ನಿಷ್ಪಕ್ಷಪಾತಿಗಳಾಗಿರಬೇಕೆಂದು ಸಂವಿಧಾನ ಮತ್ತು ಜನರ ಆಶಯ. ಒಂದು ನಿರ್ದಿಷ್ಟ ಪಕ್ಷದಿಂದ ಆಯ್ಕೆಯಾಗುವ ಮತ್ತು ಈ ಹಿಂದೆ ನಿರ್ದಿಷ್ಟ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ವ್ಯಕ್ತಿಗಳು ರಾಷ್ಟ್ರಪತಿಗಳಾದ ಬಳಿಕ ನಿಷ್ಪಕ್ಷಪಾತದಿಂದ ಕೂಡಿರಬೇಕು ಎಂಬ ಆಶಯವೂ ವಿಚಿತ್ರವೆನಿಸಬಹುದು. ಸರಕಾರದ ವಿರುದ್ಧ ವಿಪಕ್ಷದವರಿಗೆ ದೂರು ಸಲ್ಲಿಸುವ ಕೊನೆಯ ಅವಕಾಶವೂ ಇಲ್ಲಿಯೇ ಇರುವುದು. ಜನಸಾಮಾನ್ಯರಿಗೆ ದೂರು ಸಲ್ಲಿಸುವ ಅತಿ ದೊಡ್ಡ ಸ್ಥಾನವೂ ಇದೇ. ಸಂಬಂಧಪಟ್ಟ ಸಚಿವರನ್ನು ಕರೆಸಿ ಸರಕಾರಕ್ಕೆ ಎಚ್ಚರಿಕೆ ಚಾಟಿ ಬೀಸುವ ಕೊನೆಯ ಅಸ್ತ್ರದ ಸ್ಥಾನ. ಇದಕ್ಕೆ ಉದಾಹರಣೆ ನಿರ್ಭಯಾ ಪ್ರಕರಣ ಉದಾಹರಿಸಬಹುದು. ಮಹಿಳೆಯರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ರಾಷ್ಟ್ರಪತಿಯವರು ಜನರ ಅಭಿಪ್ರಾಯವನ್ನು ಕಂಡು ಪ್ರಧಾನಿ ಮತ್ತು ಗೃಹ ಸಚಿವರಿಗೆ ಎಚ್ಚರಿಕೆ ನೀಡಿದ್ದು ತಾನು ರಬ್ಬರ್‌ಸ್ಟಾಂಪ್‌ ಅಲ್ಲ ಎನ್ನುವುದನ್ನು ಸೂಚಿಸುತ್ತದೆ.  ರಾಜಕೀಯದಲ್ಲಿ ಸಕ್ರಿಯರಾಗಿದ್ದ ಮೊದಲ ರಾಷ್ಟ್ರಪತಿ ಡಾ| ರಾಜೇಂದ್ರಪ್ರಸಾದ್‌, ಇತ್ತೀಚಿನ ಪ್ರಣವ್‌ ಮುಖರ್ಜಿ, ರಾಜಕೀಯೇತರ ಡಾ|ಅಬ್ದುಲ್‌ ಕಲಾಂ ಅವರು ಸರಕಾರದ ಬಾಲಂಗೋಚಿಯಾಗಿರಲಿಲ್ಲ ಎನ್ನುವುದನ್ನು ಸ್ಮರಿಸಬೇಕಾಗುತ್ತದೆ.

*

ಲಂಕೆಯನ್ನು ಸ್ವರ್ಣಲಂಕೆ ಎಂದು ರಾಮಾಯಣದಲ್ಲಿ ಉಲ್ಲೇಖೀಸಲಾಗಿದೆ. ಈಗ ಶ್ರೀಲಂಕೆಯಲ್ಲಿ ನಡೆಯುತ್ತಿರುವ ವಿದ್ಯಮಾನವನ್ನು ಗಮನಿಸಿದರೆ ಎಲ್ಲರ/ ಎಲ್ಲ ದೇಶಗಳ ಗತಿಯನ್ನು ಕಾಲವೇ ನಿರ್ಧರಿಸುತ್ತದೆ ಎಂದೆನಿಸದೆ ಇರದು. ರಾಮಾಯಣ ಉಲ್ಲೇಖದ ಲಂಕೆ ಈ ಲಂಕೆಯಲ್ಲ ಎಂಬ ವಾದವೂ ಇದೆ… ಈಗಿನದು ಸಿಂಹಳ ದ್ವೀಪ.

– ಮಟಪಾಡಿ ಕುಮಾರಸ್ವಾಮಿ 

Advertisement

Udayavani is now on Telegram. Click here to join our channel and stay updated with the latest news.

Next