Advertisement

ಘನತೆ ಹೆಚ್ಚಿಸಿದ ರಾಷ್ಟ್ರಪತಿ : ರಾಷ್ಟ್ರಪತಿ ಭವನದ ದಿನಗಳ ಬಗ್ಗೆ ರಾಮನಾಥ ಕೋವಿಂದ್‌ ಭಾವನೋಟ

12:45 PM Jul 21, 2022 | Team Udayavani |

ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರ ಅಧಿಕಾರದ ಅವಧಿ ಜು.24ಕ್ಕೆ ಮುಕ್ತಾಯವಾಗಲಿದೆ. ಅವರು 2017ರ ಜು.25ರಂದು ಪ್ರಮಾಣ ವಚನ ಸ್ವೀಕರಿಸಿದ್ದರು. ದಲಿತ ಸಮುದಾಯದ ಎರಡನೇ ವ್ಯಕ್ತಿ ದೇಶದ ಅತ್ಯುನ್ನತ ಹುದ್ದೆಗೆ ಏರಿದ ಹೆಗ್ಗಳಿಕೆಯೂ ಅವರದ್ದು. ಇಂಥ ಖ್ಯಾತಿಗೆ ಮೊದಲು ಪಾತ್ರರಾದದ್ದು 1997ರಿಂದ 2002ರ ವರೆಗೆ ರಾಷ್ಟ್ರಪತಿಯಾಗಿದ್ದ ಕೆ.ಆರ್‌.ನಾರಾಯಣನ್‌. ಕೋವಿಂದ್‌ ರಾಷ್ಟ್ರಪತಿ ಭವನದಲ್ಲಿ ಕಳೆದ ದಿನಗಳು ಮತ್ತು ಕೈಗೊಂಡಿದ್ದ ಪ್ರವಾಸಗಳ ಬಗ್ಗೆ ಮಾಹಿತಿ ಇಲ್ಲಿದೆ.

Advertisement

ರಾಷ್ಟ್ರಭವನದಲ್ಲಿನ ಮೊದಲ ದಿನಗಳು
ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ತೀರಾ ಇತ್ತೀಚಿನ ವರೆಗೂ ರಾಮನಾಥ ಕೋವಿಂದ್‌ ರಾಷ್ಟ್ರಪತಿ ಭವನದಲ್ಲಿ ಕಳೆದ ದಿನಗಳ ಬಗ್ಗೆ “ದ ಇಂಡಿಯನ್‌ ಎಕ್ಸ್‌ಪ್ರೆಸ್‌’ ಪತ್ರಿಕೆಗೆ ಬರೆದಿರುವ ಲೇಖನದಲ್ಲಿ ಮುಕ್ತವಾಗಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. “ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಬೆಳೆದು ನಿಂತ ನಾನು ಇಂಥ ಒಂದು ಐತಿಹಾಸಿಕ ಕಟ್ಟಡವನ್ನು ಐದು ವರ್ಷಗಳ ಹಿಂದೆ ಪ್ರವೇಶ ಮಾಡಿದ್ದೆ. ಇದು ಕೇವಲ ರಾಷ್ಟ್ರಪತಿ ಭವನ ಆಗಿರಲಿಲ್ಲ. ಅದು ದೇಶದ ಗಣತಂತ್ರ ವ್ಯವಸ್ಥೆಯ ಒಂದು ಪ್ರಧಾನ ಕೇಂದ್ರ ಎನ್ನುವುದು ನನ್ನ ಭಾವನೆ. ನಾನು ಅನಿಸಿಕೊಂಡದ್ದು ಈ ಕಟ್ಟಡದ ಪ್ರತಿ ಕಲ್ಲುಗಳಲ್ಲಿಯೂ ಇದೆ ಎಂದರೆ ತಪ್ಪಾಗಲಾರದು. ಇಂಥ ಒಂದು ಅದ್ಭುತ ಕಟ್ಟಡದಲ್ಲಿ ರಾಷ್ಟ್ರಪತಿ ವಾಸಿಸಲು ಇರುವ ಸ್ಥಳ ಒಂದು ಭಾಗ ಮಾತ್ರ. 1947ರ ಆ.15ರಂದು ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಬಳಿಕ ಈ ಕಟ್ಟಡ ಬಲು ಪ್ರಾಮುಖ್ಯತೆಯನ್ನೂ ಪಡೆಯಿತು’ ಎಂದು ಹೇಳಿಕೊಂಡಿದ್ದಾರೆ.

ಸಿ.ರಾಜಗೋಪಾಲಾಚಾರಿ ಅವರಿಂದ ಶುರು
ರಾಷ್ಟ್ರಪತಿ ಭವನದಲ್ಲಿ ಕುಳಿತು ದೇಶದಲ್ಲಿ ಅಭಿವೃದ್ಧಿಯುಕ್ತ ಬದಲಾವಣೆಯ ಬಗ್ಗೆ ಚಿಂತನೆ ಶುರು ಮಾಡಿದ್ದು ಗವರ್ನರ್‌ ಜನರಲ್‌ ಆಗಿದ್ದ ಸಿ.ರಾಜಗೋಪಾಲಾಚರಿ ಎಂದು ಕೋವಿಂದ್‌ ಪ್ರತಿಪಾದಿಸುತ್ತಾರೆ. 340 ಕೊಠಡಿಗಳು ಇರುವ ರಾಷ್ಟ್ರಪತಿ ಭವನದಲ್ಲಿ ರಾಜಗೋಪಾಲಾಚಾರಿ ಬಳಕೆ ಮಾಡಿದ್ದು ಕೇವಲ ಒಂದು ಕೊಠಡಿಯನ್ನು ಮಾತ್ರ. ಇದಾದ ಬಳಿಕ ದೇಶದ ಮೊದಲ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್‌ ಅವರು ಗಾಂಧಿ ತತ್ವಗಳು ಮತ್ತು ಈ ಐತಿಹಾಸಿಕ ಭವನಕ್ಕೆ ಕೊಂಡಿಯ ರೂಪವನ್ನು ಕಲ್ಪಿಸಿದರು.

ಭವನದ ಸಿರಿವಂತಿಕೆ ನಿರಾಕರಿಸಲಾಗದು
ರಾಷ್ಟ್ರಪತಿ ಭವನ ಎಂದರೆ ಪೂರ್ಣ ದೇಶವನ್ನೇ ಪ್ರತಿನಿಧಿಸುತ್ತದೆ. ಅದು ಹೊಂದಿರುವ ವಿನ್ಯಾಸದ ಐಸಿರಿಯನ್ನು ಯಾರೂ ನಿರಾಕರಿಸುವಂತೆ ಇಲ್ಲ. ಅದನ್ನು ನಿರ್ಮಿಸಿದ ಶಿಲ್ಪಿ ಎಡ್ವಿನ್‌ ಲ್ಯೂಟೆನ್ಸ್‌ . ನಮ್ಮ ದೇಶದ ಶಿಲ್ಪಕಲೆಯ ಅಂಶಗಳನ್ನು ಈ ಭವನದ ನಿರ್ಮಾಣದ ಅವಧಿಯಲ್ಲಿ ಸೇರ್ಪಡೆಗೊಳಿಸಿದ್ದರು. ಅತ್ಯುತ್ತಮ ಇತಿಹಾಸವನ್ನು ಹೊಂದಿರುವ ಈ ಭವನ ಸ್ವಾತಂತ್ರ್ಯ ಪಡೆದ ದೇಶದ ಇತಿಹಾಸವನ್ನು ಸಾರುತ್ತದೆ ಎನ್ನುವುದು ಅಷ್ಟೇ ಹೆಮ್ಮೆಯ ವಿಚಾರ.

ನನ್ನ ಗ್ರಾಮಕ್ಕೆ ಧನ್ಯವಾದ
ನನಗೆ ನೀಡಲಾಗಿದ್ದ ಹೊಣೆ ಏನು ಎಂಬ ಅಂಶ ಸ್ಪಷ್ಟವಾಗಿ ಅರಿವಾಯಿತು. ರಾಷ್ಟ್ರಪತಿಯಾಗಿ ನಾನು ಈ ದೇಶದ ಜನರನ್ನು ಪ್ರತಿನಿಧಿಸುವ ಹೊಣೆ ಸಿಕ್ಕಿದ್ದಕ್ಕೆ ನಾನು ಜನಿಸಿದ್ದ ಗ್ರಾಮ ಕಾರಣ. ಅದಕ್ಕೆ ನಾನು ಧನ್ಯವಾದ ಸಮರ್ಪಿಸುತ್ತೇನೆ. ರಾಷ್ಟ್ರಪತಿ ಚುನಾವಣೆಯಲ್ಲಿ ಗೆದ್ದು ಸಮಾರಂಭವೊಂದರಲ್ಲಿ ಮಾತನಾಡುತ್ತಿರಬೇಕಾದರೆ ಧಾರಾಕಾರ ಮಳೆಯಾಗುತ್ತಿತ್ತು. ಆಗ ನನ್ನ ಬಾಲ್ಯದ ದಿನಗಳತ್ತ ನೆನಪು ಹಿಂದಕ್ಕೆ ಓಡಿತು. ನಮ್ಮ ಮನೆಯ ಸ್ಥಿತಿ ಚೆನ್ನಾಗಿರಲಿಲ್ಲ ಮತ್ತು ಚಾವಣಿಯಿಂದ ನೀರು ಸೋರುತ್ತಿತ್ತು. ಆಗ ಮನೆಯಲ್ಲಿದ್ದವರೆಲ್ಲ ಒಂದು ಮೂಲೆಯಲ್ಲಿ ನಿಂತುಕೊಂಡು ಮಳೆ ಪೂರ್ತಿಯಾಗಿ ನಿಲ್ಲುವವರೆಗೆ ಕಾಯು ತ್ತಿದ್ದೆವು. ಆ ಅಂಶ ನೆನಪಿಗೆ ಬಂದು ಅದನ್ನು ನಾನು ಅಲ್ಲಿ ಹೇಳಿಕೊಂಡೆ. ಎಷ್ಟು ಮಂದಿ ರಾಮನಾಥ ಕೋವಿಂದರು ಈ ಮಳೆಯಲ್ಲಿ ಒದ್ದೆಯಾಗುತ್ತಿದ್ದಾರೋ ಏನೋ? ದೇಶವನ್ನು ಪ್ರತಿನಿಧಿಸುವ ವ್ಯಕ್ತಿ ರಾಷ್ಟ್ರಪತಿ ಎಂದು ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಯಾವ ಕಾರಣಕ್ಕೆ ಹೇಳಿದ್ದರು ಎಂಬುದು ನನಗೆ ಆಗ ಅರ್ಥವಾಗಿತ್ತು. ರಾಷ್ಟ್ರಪತಿ ಭವನದಲ್ಲಿ ಪ್ರತಿದಿನ ಬೆಳಗ್ಗೆ ನಡೆಯುವಾಗಲೂ ಅದೇ ಮಾತುಗಳು ನನ್ನ ಕಿವಿಯಲ್ಲಿ ಪ್ರತಿಧ್ವನಿಸಿದಂತೆ ಆಗುತ್ತಿತ್ತು.

Advertisement

33 ದೇಶಗಳಿಗೆ ಪ್ರವಾಸ
ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ 2017ರ ಅ.3 ಮತ್ತು 4ಕ್ಕೆ ಡಿಜಿಬೋತಿ ಮತ್ತು ಇಥಿಯೋಪಿಯಾಕ್ಕೆ ಅಧಿಕೃತ ಪ್ರವಾಸ ಕೈಗೊಂಡಿದ್ದರು. ಇದು ಅವರ ಮೊದಲ ವಿದೇಶ ಪ್ರವಾಸವಾಗಿತ್ತು. ಅವರ ಅಧಿಕಾರದ ಅವಧಿಯಲ್ಲಿ 33 ರಾಷ್ಟ್ರಗಳಿಗೆ ಅವರು ಪ್ರವಾಸ ಕೈಗೊಂಡಿದ್ದರು. ಈ ವರ್ಷದ ಮೇ ನಲ್ಲಿ ಅವರು ಜಮೈಕಾ ಮತ್ತು ಸೈಂಟ್‌ ವಿನ್ಸೆಂಟ್‌ ಮತ್ತು ಗ್ರೆನೆಡಿನ್ಸ್‌ಗೆ ಭೇಟಿ ನೀಡಿದ್ದು ಕೊನೇಯ ಅಧಿಕೃತ ವಿದೇಶ ಪ್ರವಾಸ. ದೇಶದ 36 ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಲವು ಬಾರಿ ಭೇಟಿ ನೀಡಿದ್ದರು. ಈ ಪೈಕಿ ಅವರ ತವರು ರಾಜ್ಯ ಉತ್ತರ ಪ್ರದೇಶಕ್ಕೆ 23, ಮಹಾರಾಷ್ಟ್ರ ಮತ್ತು ಗುಜರಾತ್‌ಗೆ ತಲಾ 11 ಬಾರಿ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಜನರ ಭೇಟಿಗೆ ಸಿಕ್ಕಿದ ಅವಕಾಶ…
ರಾಷ್ಟ್ರಪತಿ ಹುದ್ದೆಗೆ ಬಂದ ಬಳಿಕ ನಮ್ಮ ದೇಶದ ಒಳಗೆ ಮತ್ತು ವಿದೇಶಗಳಿಗೆ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ನೂರಾರು ಮಂದಿಯನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದೆ. ಅವರೆಲ್ಲರೂ ನಮ್ಮ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ಮತ್ತು ಈ ದೇಶಕ್ಕೆ ಉತ್ತಮ ಭವಿಷ್ಯ ಇದೆ ಎಂಬ ಭಾವನೆಯನ್ನೂ ಹೊಂದಿದ್ದಾರೆ. ಮುಂದೆ ಉತ್ತಮ ದಿನಗಳು ಬರಲಿವೆ ಎಂಬ ಧನಾತ್ಮಕ ನಿರೀಕ್ಷೆಯಿಂದ ಅವರ ಅವಿಶ್ರಾಂತ ದುಡಿಮೆ- ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ನನಗೆ ಅಚ್ಚರಿ ತಂದಿದೆ ಮತ್ತು ಮೂಕ ವಿಸ್ಮಿತನನ್ನಾಗಿ ಮಾಡಿದೆ.ನಾನು ರಾಷ್ಟ್ರಪತಿಯಾಗದೇ ಇರುತ್ತಿದ್ದರೆ ಅಂಥ ಅವಕಾಶಗಳು ಸಿಗುತ್ತಿರಲಿಲ್ಲವೇನೋ? ನಮ್ಮ ದೇಶದ ವಿವಿಧ ರಾಜ್ಯಗಳ ನಗರಗಳಿಗೆ ಪ್ರವಾಸ ಕೈಗೊಂಡಿದ್ದಾಗ ಜೀವನದ ಹಲವು ವರ್ಗಗಳ ಜನರನ್ನು ಭೇಟಿಯಾಗಿದ್ದೇನೆ. ನಮ್ಮ ರಕ್ಷಣಾ ಪಡೆಯ ಮೂರು ವಿಭಾಗಗಳ ಯೋಧರೂ ಕೂಡ ನಿಸ್ಪೃಹೆಯಿಂದ ದೇಶಕ್ಕಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂಥ ಒಂದು ಅದ್ಭುತ ದೇಶದ ರಾಷ್ಟ್ರಪತಿಯಾಗಿ ಐದು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸುವ ಅವಕಾಶ ಸಿಕ್ಕಿದ್ದು ನನಗೆ ಸಿಕ್ಕ ಗೌರವವೇ ಹೌದು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳನ್ನು ಪೂರೈಸುತ್ತಿರುವ ಈ ಶುಭ ಸಂದರ್ಭದಲ್ಲಿ ನಮಗೆ ಅತ್ಯುತ್ತಮವಾಗಿರುವ ಅಮೃತ ಕಾಲ ಬರಲಿ ಎನ್ನುವುದೇ ಹಾರೈಕೆ.

ದೇಶದ ಪ್ರತೀಕ
ದೇಶಕ್ಕೆ ಅತ್ಯುತ್ತಮ ಸಂವಿಧಾನ ನೀಡಿದ ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಸಂವಿಧಾನ ರಚನಾ ಸಭೆಯಲ್ಲಿ ರಾಷ್ಟ್ರಪತಿ ಹುದ್ದೆಯನ್ನು “ದೇಶದ ಪ್ರತೀಕ’ ಎಂದು ಹೇಳಿದ್ದರು. ಅವರು ಆ ರೀತಿ ಹೇಳಿದ್ದು ನನಗೆ ನೆನಪಾಗುತ್ತಿದೆ. 2017ರ ಜುಲೈನಲ್ಲಿ ಈ ಭವನಕ್ಕೆ ಬಂದ ಬಳಿಕ ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಮಾತುಗಳನ್ನೇ ನೆನಪಿಸಿಕೊಳ್ಳುತ್ತಾ ಇದ್ದೆ ಮತ್ತು ತಬ್ಬಿಬ್ಟಾದದ್ದು ಇದೆ. ಏಕೆಂದರೆ ನನಗೆ ನೀಡಲಾಗಿದ್ದ ಹೊಣೆಯೇ ಅಂಥದ್ದು- ರಾಷ್ಟ್ರಪತಿ- ಒಂದು ದೇಶದ ಪ್ರತಿನಿಧಿ.

ಕೋವಿಂದ್‌ ಮತ್ತು ಕರ್ನಾಟಕ
ರಾಮನಾಥ ಕೋವಿಂದ್‌ ಅವರು ರಾಷ್ಟ್ರಪತಿಯಾಗಿ ಮೊದಲ ಬಾರಿಗೆ ಕರ್ನಾಟಕ ಪ್ರವಾಸ ಕೈಗೊಂಡದ್ದು 2017ರ ಅ.24 ಮತ್ತು ಅ.25. ಆ ಸಂದರ್ಭದಲ್ಲಿ ಅವರು ಬೆಂಗಳೂರು ಸಂಸ್ಥಾಪಕ ಕೆಂಪೇಗೌಡರಿಗೆ ಗೌರವ ಅರ್ಪಿಸಿದ್ದರು. 25ರಂದು ವಿಧಾನಸೌಧದ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 2018ರ ಸೆಪ್ಟಂಬರ್‌ನಲ್ಲಿ ಅವರು ಬೆಳಗಾವಿಗೆ ಆಗಮಿಸಿದ್ದರು. ಡಿಸೆಂಬರ್‌ನಲ್ಲಿ ಉಡುಪಿಗೆ ಭೇಟಿ ನೀಡಿದ್ದರು. 2019ರ ಅ.10ರಿಂದ 12 ವರೆಗೆ ಬೆಂಗಳೂರು, ಮೈಸೂರು, ನಂಜನಗೂಡುಗಳಲ್ಲಿ ಆಯೋಜಿಸಲಾಗಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. 2021ರ ಅ.6ರಿಂದ 4 ದಿನಗಳ ಕಾಲ ಪ್ರವಾಸ ಕೈಗೊಂಡಿ ದ್ದರು. ಆ ಸಂದರ್ಭದಲ್ಲಿ ಚಾಮರಾಜ ನಗರ ಜಿಲ್ಲೆ, ಶೃಂಗೇರಿಗೆ ಭೇಟಿ ನೀಡಿದ್ದರು. ಈ ವರ್ಷದ ಜೂ. 13 ಮತ್ತು 14ರಂದು ಬೆಂಗಳೂರಿನಲ್ಲಿ ಇರುವ ರಾಷ್ಟ್ರೀಯ ಮಿಲಿಟರಿ ಶಾಲೆ ಮತ್ತು ಶ್ರೀ ರಾಜಾಧಿರಾಜ ಗೋವಿಂದ ದೇಗುಲ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು 2011 ಮತ್ತು 2012ರಲ್ಲಿ ಅವರು ಹಂಪಿಗೆ ಭೇಟಿ ನೀಡಿ ಅಲ್ಲಿನ ಶಿಲ್ಪಕಲೆಗಳ ವೈಭವಕ್ಕೆ ಮಾರು ಹೋಗಿದ್ದರು. 2012ರಲ್ಲಿ ಭೇಟಿ ನೀಡಿದ್ದ ವೇಳೆ 3 ದಿನ ಅಲ್ಲಿ ಇದ್ದು ಸಮಗ್ರವಾಗಿ ಅಲ್ಲಿನ ಶಿಲ್ಪಕಲೆ ಮತ್ತು ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿ, ಅಧ್ಯಯನ ನಡೆಸಿದ್ದರು.

ಸೋನಿಯಾ ನಿವಾಸದ ಪಕ್ಕದಲ್ಲೇ ವಾಸ್ತವ್ಯ
ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರ ಅಧಿಕಾರದ ಅವಧಿ ಜು.24ಕ್ಕೆ ಮುಕ್ತಾಯ ವಾಗಲಿದೆ. ಕೋವಿಂದ್‌ ಅವರಿಗೆ ನಂಬರ್‌ 12, ಜನಪಥದಲ್ಲಿ ಇರುವ ಬಂಗಲೆಯನ್ನು ನಿವೃತ್ತಿಯ ಬಳಿಕ ಕೋವಿಂದ್‌ ಅವರಿಗೆ ನೀಡಲಾಗಿದೆ. ಅಂದ ಹಾಗೆ ಜನಪಥ ರಸ್ತೆಯಲ್ಲಿ ಇರುವ ಹತ್ತನೇ ಸಂಖ್ಯೆಯ ಮನೆಯಲ್ಲಿ ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ವಾಸಿಸುತ್ತಿದ್ದಾರೆ. ಹೀಗಾಗಿ, ಕೋವಿಂದ್‌ ಅವರು ಸೋನಿಯಾ ಅವರ ಹೊಸ ನೆರೆಮನೆಯವರಾಗಲಿದ್ದಾರೆ. ಈ ನಿವಾಸದಲ್ಲಿ ಲೋಕಜನಶಕ್ತಿ ಪಕ್ಷದ ಸಂಸ್ಥಾಪಕ ದಿ.ರಾಮ್‌ ವಿಲಾಸ್‌ ಪಾಸ್ವಾನ್‌ ಅವರು 20 ವರ್ಷಗಳಿಗೂ ಅಧಿಕ ಕಾಲ ಇದ್ದರು. ಕೋವಿಂದ್‌ ಪುತ್ರಿ ಸ್ವಾತಿ ಕೋವಿಂದ್‌ ಉಸ್ತುವಾರಿಯಲ್ಲಿ ಬಂಗಲೆಯನ್ನು ಪೂರ್ಣ ಪ್ರಮಾಣದಲ್ಲಿ ನವೀಕರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next