ಹೊಸದಿಲ್ಲಿ : “ಇದು ಸಾಮಾನ್ಯ ಭದ್ರತಾ ಲೋಪ ಅಥವಾ ಉಲ್ಲಂಘನೆ ಅಲ್ಲ; ಗಂಭೀರ ಪ್ರಕರಣ.’ ಬುಧವಾರ ಪಂಜಾಬ್‌ನಲ್ಲಿ ರ್‍ಯಾಲಿಗೆಂದು ತೆರಳುತ್ತಿದ್ದ ವೇಳೆ ರೈತರ ಪ್ರತಿಭಟನೆಯಿಂದಾಗಿ ಭಟಿಂಡಾದ ಫ್ಲೈಓವರ್‌ನಲ್ಲಿ ಪ್ರಧಾನಿ ಮೋದಿ 20 ನಿಮಿಷಗಳ ಕಾಲ ಕಾಯಬೇಕಾಗಿ ಬಂದ ಘಟನೆ ಬಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರತಿಕ್ರಿಯಿಸಿದ್ದು ಹೀಗೆ.
ಘಟನೆ ಹಿನ್ನೆಲೆಯಲ್ಲಿ ಗುರುವಾರ ರಾಷ್ಟ್ರಪತಿ ಕೋವಿಂದ್ ಅವರು ಪ್ರಧಾನಿ ಮೋದಿಯವರನ್ನು ರಾಷ್ಟ್ರಪತಿ ಭವನಕ್ಕೆ ಆಹ್ವಾನಿಸಿ, ಕುಶಲೋಪರಿ ವಿಚಾರಿಸಿದರು. ಬುಧವಾರದ ಭದ್ರತಾ ಲೋಪ ಘಟನೆ ಬಗ್ಗೆ ಸುಮಾರು 30 ನಿಮಿಷಗಳ ಕಾಲ ಚರ್ಚಿಸಿದ್ದಲ್ಲದೆ, ಗಂಭೀರ ಲೋಪದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದರು. ಪ್ರಧಾನಮಂತ್ರಿಗೆ ಸಾಂವಿಧಾನಿಕವಾಗಿ ಕಡ್ಡಾಯವಾದ ಭದ್ರತೆಯಿರುತ್ತದೆ ಮತ್ತು ಅದೊಂದು ಸೂಕ್ಷ್ಮ ವಿಚಾರವಾಗಿದ್ದು, ಪ್ರತಿಯೊಂದು ಅಂಶಕ್ಕೂ ಸಿದ್ಧತೆ ನಡೆದಿರುತ್ತದೆ. ಹೀಗಿರುವಾಗ ಬುಧವಾರ ಆದ ಘಟನೆ ಸಾಮಾನ್ಯದ್ದಲ್ಲ, ಅದೊಂದು ಗಂಭೀರ ಲೋಪ ಎಂದು ಕೋವಿಂದ್ ಅಭಿಪ್ರಾಯಪಟ್ಟಿದ್ದಾರೆ.
ಇಂದು ಸುಪ್ರೀಂನಲ್ಲಿ ವಿಚಾರಣೆ
ಪಂಜಾಬ್‌ನಲ್ಲಿ ನಡೆದಂತೆ ಮುಂದೆಂದೂ ಪ್ರಧಾನಿಯವರ ಭದ್ರತೆಯಲ್ಲಿ ಲೋಪ ಆಗದಂತೆ ನೋಡಿಕೊಳ್ಳಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿಯೊಂದು ಸಲ್ಲಿಕೆಯಾಗಿದೆ. ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ನ್ಯಾಯಪೀಠದಲ್ಲಿ ಶುಕ್ರವಾರ ಅರ್ಜಿಯ ವಿಚಾರಣೆ ನಡೆಯಲಿದೆ.
ಬಿಜೆಪಿ ರಾಷ್ಟ್ರವ್ಯಾಪಿ ಅಭಿಯಾನ
ಪ್ರಧಾನಿ ಭದ್ರತಾ ಲೋಪ ಪ್ರಕರಣವನ್ನಿಟ್ಟುಕೊಂಡು ಕಾಂಗ್ರೆಸನ್ನು ಗುರಿ ಮಾಡಲು ಬಿಜೆಪಿ 13 ಅಂಶಗಳ ಯೋಜನೆಯನ್ನು ಸಿದ್ಧಪಡಿಸಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಸಾರ್ವಜನಿಕರಿಂದಲೇ ಪತ್ರ ಬರೆಸುವುದು, ರಾಜ್‌ಘಾಟ್ ಹೊರಗೆ ಮೌನ ಪ್ರತಿಭಟನೆ, ಆಯಾ ರಾಜ್ಯಗಳ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಕೆ, ಮಹಾತ್ಮಾ ಗಾಂಧಿ ಹಾಗೂ ಬಾಬಾಸಾಹೇಬ್ ಪ್ರತಿಮೆಗಳ ಮುಂದೆ ಬಿಜೆಪಿ ಸಂಸದ, ಶಾಸಕರ ಧರಣಿ ಸೇರಿದಂತೆ ವಿವಿಧ ರೀತಿಯಲ್ಲಿ ಪ್ರತಿಭಟಿಸಲು ಸಿದ್ಧತೆ ನಡೆದಿದೆ.